ಶ್ರೀಮಂತಿಕೆಯ ತಿಮಿರು, ಹೆಂಡದ ಅಮಲು, ಸಿನಿಮಾ ಹೀರೋಯಿನ್ನೆನ್ನುವ ದೌಲತ್ತುಗಳೆಲ್ಲಾ ಒಟ್ಟೊಟ್ಟಿಗೆ ಸೇರಿದರೆ ಏನಾಗುತ್ತದೆ ಅನ್ನೋದಕ್ಕೆ ನಟಿ ಶರ್ಮಿಳಾ ಮಾಂಡ್ರೆ ಉದಾಹರಣೆಯಂತೆ ನಿಂತಿದ್ದಾಳೆ.
ಕರೋನಾ ವೈರಸ್ಸು ಸೃಷ್ಟಿಸಿರುವ ಭಯಾನಕ ವಾತಾವರಣದಿಂದ ಪ್ರಪಂಚಕ್ಕೆ ಪ್ರಪಂಚವೇ ಪತರಗುಟ್ಟಿಹೋಗಿದೆ. ಅನ್ನಾಹಾರಕ್ಕಾಗಿ ಹೊರಬಂದವರನ್ನೂ ಪೊಲೀಸರು ಬಡಿದು ಬಿಸಾಡಿದ್ದಾರೆ. ಇದರ ನಡುವೆಯೇ ನಟಿ ಶರ್ಮಿಳಾ ಮಾಂಡ್ರೆ ಎಣ್ಣೆ ಅಮಲಲ್ಲಿ ಕಾರು ಅಪಘಾತ ಮಾಡಿಕೊಂಡಿದ್ದಾಳೆ. ಶರ್ಮಿಳಾಳ ಈ ನೀಚತನಕ್ಕೆ ಯಾವ ಶಿಕ್ಷೆ ಸಿಗುತ್ತದೋ ಗೊತ್ತಿಲ್ಲ ಸದ್ಯಕ್ಕೆ ಈಕೆ ಯಾರ ಕೈಗೂ ಸಿಗದೇ ಎಸ್ಕೇಪ್ ಆಗಿದ್ದಾಳೆ!
ಸರ್ಕಾರದ ನಿಯಮಗಳಿಗೆ ಕ್ಯಾರೇ ಅನ್ನದೇ ನೆನ್ನೆ ರಾತ್ರಿ ಶರ್ಮಿಳಾ ಮಾಂಡ್ರೆ ತನ್ನ ಸ್ನೇಹಿತ ಲೋಕೇಶ್ ಎಂಬಾತನ ಜೊತೆ ನಡುರಾತ್ರಿ ಜಾಗ್ವಾರ್ ಕಾರಿನಲ್ಲಿ ಜಾಲಿ ರೈಡ್ ಹೋಗುತ್ತಿದ್ದಳಂತೆ. ವಸಂತನಗರ ಅಂಡರ್ ಪಾಸ್ ಬಳಿಯ ಪಿಲ್ಲರ್ರಿಗೆ ಡಿಕ್ಕಿ ಹೊಡೆದ ಸಂಪೂರ್ಣ ಜಖಂಗೊಂಡಿದೆ. ಇದು ದುಬಾರಿ ಬೆಲೆಯ ಜಾಗ್ವಾರ್ ಕಾರ್ ಆಗಿರುವುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ವಸಂತನಗರದಲ್ಲಿ ಕಾರು ಅಪಘಾತಕ್ಕೀಡಾದ ನಂತರ ಶರ್ಮಿಳಾ ಮತ್ತು ಆಕೆಯ ಸ್ನೇಹಿತ ಅಲ್ಲೇ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಈ ಅಪಘಾತ ಹೇಗೆ ಸಂಭವಿಸಿತು ಎಂದು ವೈದ್ಯರು ಕೇಳಿದಾಗ, ಜೆಪಿ ನಗರದಲ್ಲಿ, ಜಯನಗರದಲ್ಲಿ ಅಂತಾ ಏನೇನೋ ಸುಳ್ಳು ಹೇಳಿದರಂತೆ. ಆಸ್ಪತ್ರೆಯಲ್ಲೇ ಉಳಿದರೆ, ಇದು ಪೊಲೀಸು, ಕೇಸು, ನ್ಯೂಸು ಅಂತೆಲ್ಲಾ ಶುರುವಾಗುತ್ತದೆ ಎನ್ನುವುದನ್ನು ಅರಿತ ಶರ್ಮಿಳಾ, ತಮ್ಮ ಕುಟುಂಬಕ್ಕೆ ಆಪ್ತರಾಗಿರುವ ಅಡ್ವೈಸರ್ ಒಬ್ಬರ ಮಾರ್ಗದರ್ಶನದಂತೆ ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಾಳೆ. ಸದ್ಯ ಶರ್ಮಿಳಾ ಎಲ್ಲಿದ್ದಾಳೆ ಅನ್ನೋದರ ಮಾಹಿತಿಯೂ ಇಲ್ಲ. ಹೈಗ್ರೌಂಡ್ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರಂತೆ.
ಶರ್ಮಿಳಾಗೆ ದೇವನಹಳ್ಳಿಯಲ್ಲೊಂದು ಮನೆ, ಅಶೋಕ ಹೊಟೇಲ್ ರಸ್ತೆಯಲ್ಲೇ ಒಂದು ಫ್ಲಾಟ್ ಇದೆ. ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ತೀರಾ ನಡುರಾತ್ರಿಯಲ್ಲಿ ಶರ್ಮಿಳಾ ಎಲ್ಲಿ ಹೋಗಿದ್ದಳು? ಈ ಸಂರ್ಭದಲ್ಲಿ ಪ್ರಯಾಣಿಸುವ ಅನಿವಾರ್ಯತೆ ಏನಿತ್ತು? ಹಣವಂತ ಶೋಕಿ ಮಂದಿ ಒಂದಷ್ಟು ಜನ ಗುಪ್ತ ಸ್ಥಳದಲ್ಲಿ ಪಾರ್ಟಿ ಮಾಡಿದ್ದರಾ? ಅಲ್ಲಿಗೆ ಶರ್ಮಿಳಾ ಕೂಡಾ ಹೋಗಿದ್ದಳಾ? ಆಸ್ಪತ್ರೆಯಿಂದ ಎಸ್ಕೇಪ್ ಆಗಲು ಶರ್ಮಿಳಾಗೆ ಐಡಿಯಾ ಕೊಟ್ಟವರು ಯಾರು? ಪೊಲೀಸ್ ಇಲಾಖೆಯಿಂದ ನೀಡಿರುವ ಪಾಸ್ ಇದ್ದ ಮಾತ್ರಕ್ಕೆ ನೂರು ಕಿಲೋಮೀಟರ್ ಸ್ಪೀಡಲ್ಲಿ ಕಾರ್ ಚಲಾಯಿಸಬಹುದೇ? ಅನಿವಾರ್ಯ ಸಂದರ್ಭದಲ್ಲಿ ಬಳಸುವ ಪಾಸ್ ಪಡೆದು ಜಾಲಿ ರೈಡ್ ಮಾಡೋದು ಸರಿಯಾ? ಈ ಕಾರು ಥಾಮಸ್ ಎಂಬಾತನ ಹೆಸರಿನಲ್ಲದೆಯಲ್ಲಾ… ಆತ ಯಾರು? ಹೀಗೆ ಶರ್ಮಿಳಾ ಕಾರು ಅಪಘಾತ ಪ್ರಕರಣದ ಸುತ್ತ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಶರ್ಮಿಳಾ ಆಗರ್ಭ ಶ್ರೀಮಂತೆ. ದುಡ್ಡಿನಿಂದಲೇ ಎಲ್ಲರ ಬಾಯನ್ನೂ ಮುಚ್ಚಿಸುವ ತಾಕತ್ತು ಈಕೆಯ ಕುಟುಂಬಕ್ಕಿದೆ. ಆದರೆ ಆಮಿಷಗಳಿಗೆ ಬಲಿಯಾಗದೇ ತನಿಖೆ ಮಾಡುವ ಮನಸ್ಸು ಹೈಗ್ರೌಂಡ್ಸ್ ಪೊಲೀಸರು ತೋರಬೇಕು. ಇಷ್ಟು ದಿನದ ಬೆಂಗಳೂರು ಪೊಲೀಸ್ ಕಮಿಷನರುಗಳಲ್ಲೇ ಅತಿ ಹೆಚ್ಚು ಜನರ ಪ್ರೀತಿಗಳಿಸಿರುವ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್. ಎಂತೆಂಥದ್ದೋ ಪ್ರಕರಣಗಳನ್ನೆಲ್ಲಾ ಸಲೀಸಾಗಿ ಬೇಧಿಸಿದ ಹಿನ್ನೆಲೆಯಿರುವ ಸಾಹೇಬರು ನಟಿಯ ಪ್ರಭಾವಳಿಗಳನ್ನೆಲ್ಲಾ ಕಳಚಿಸಿದರೆ ಮಾತ್ರ ಅಸಲೀಕಾರಣ ಹೊರಬರಲು ಸಾಧ್ಯ.
ಒಳ್ಳೇ ಹುಡುಗಿ ಅಂತಾರೆ! : ಶರ್ಮಿಳಾ ಮಾಂಡ್ರೆಯ ಕುರಿತಾಗಿ ಕನ್ನಡ ಚಿತ್ರರಂಗದಲ್ಲಿ ಯಾವುದೇ ಬಗೆಯ ತಕರಾರುಗಳೂ ಕೇಳಿಬಂದಿದ್ದಿಲ್ಲ. ಈಕೆ ನಟಿಸಿದ ಸಿನಿಮಾಗಳ ಸಂಖ್ಯೆ ಕಡಿಮೆಯಾದರೂ ಯಾವತ್ತೂ ಯಾರೊಂದಿಗೂ ಕಿರಿಕ್ಕು ಮಾಡಿಕೊಂಡ ಉದಾಹರಣೆಗಳಿಲ್ಲ. ಸಮಯದ ವಿಚಾರದಲ್ಲಾಗಲಿ, ಹಣದ ವಿಷಯದಲ್ಲಾಗಲಿ ನಕರಾಗಳಿರಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಅಂತಾ ಇದ್ದ ಹುಡುಗಿ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆನ್ನುವುದು ಈಕೆಯ ಕನಸು. ಆದರೆ ಅಂದುಕೊಂಡ ಮಟ್ಟಿಗೆ ಅದು ನೆರವೇರಲೇ ಇಲ್ಲ. ಕನ್ನಡದಲ್ಲಿ ಸಾಧ್ಯವಾಗದೇ ಇದ್ದಾಗ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತೇನೆ ಅಂತಾ ಹೋದಳು. ಸಣ್ಣ ಪುಟ್ಟ ತಮಿಳು ಸಿನಿಮಾಗಳಲ್ಲೂ ನಟಿಸಿದರಳು. ಆದರೆ ಯಾವುದೂ ಈಕೆಯ ವರ್ಚಸ್ಸನ್ನು ಹೆಚ್ಚಿಸಲೇ ಇಲ್ಲ. ಸಿನಿಮಾದ ಹೊರತಾಗಿ ಈಕೆ ಚಿತ್ರರಂಗದ ಜನರೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಈಕೆಯ ಫ್ರೆಂಡ್ಶಿಪ್ಪು, ನೆಟ್ವರ್ಕುಗಳೇ ಬೇರೆ ಲೆವೆಲ್ಲಿನದ್ದು ಅನ್ನೋ ಮಾತಿದೆ. ಅದು ಯಾವ ಥರದ್ದು? ಈಗ ಯಾಕೆ ಯಡವಟ್ಟಾಯಿತು ಅನ್ನೋದೆಲ್ಲಾ ಇನ್ನಷ್ಟೇ ಹೊರಬರಬೇಕು!
No Comment! Be the first one.