ಒಂಟಿ ಬದುಕಿಗೆ ನಂಬಿಕೆಯೇ ಸಂಗಾತಿ!

ನ್ಯೂಸ್ ಆಂಕರ್ ಆಗಿ ನಾಡಿನಾದಂತ ಮನೆ ಮಾತಾಗಿರುವ ಶೀತಲ್ ಶೆಟ್ಟಿ ಈಗ ಬಹುಬೇಡಿಕೆಯ ನಟಿ. ಪತಿಬೇಕು ಡಾಟ್ ಕಾಮ್ ಚಿತ್ರದ ನಂತರ ಅವರು ನಾಯಕಿಯಾಗಿ ನೆಲೆ ನಿಲ್ಲುತ್ತಾರೆಂದುಕೊಂಡಿದ್ದವರಿಗೆ ಶೀತಲ್ ಬೇರೆಯದ್ದೇ ಸೂಚನೆ ನೀಡಿದ್ದಾರೆ. ಯಾಕೆಂದರೀಗ ಅವರು ನಿರ್ದೇಶಕಿಯಾಗಿದ್ದಾರೆ!

ಶೀತಲ್ ಶೆಟ್ಟಿ ನಿರ್ದೇಶನದ ಸಂಗಾತಿ ಎಂಬ ಕಿರುಚಿತ್ರ ಬಿಡುಗಡೆಯಾಗಿದೆ. ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ವೀಕ್ಷಣೆ ಮತ್ತು ಅಪಾರ ಮೆಚ್ಚುಗೆ ಗಳಿಸಿಕೊಂಡಿರೋ ಈ ಚಿತ್ರ ಶೀತಲ್ ನಿರ್ದೇಶಕಿಯಾಗಿ ನೆಲೆ ನಿಲ್ಲುವ ಮೊದಲ ಮೆಟ್ಟಿಲಿನಂತೆಯೂ ಭಾಸವಾಗುತ್ತದೆ. ಸೀಮಿತಾವಧಿಯಲ್ಲಿ ಮಹತ್ವವಾದುದೇನನ್ನೋ ಹೇಳುವ ಕಿರು ಚಿತ್ರದ ಮೂಲಕ ಗಹನವಾದ, ನೋಡಿಯಾದ ಮೇಲೂ ಮನಸಲ್ಲೇ ವಿಸ್ತಾರವಾಗಿ ಕಾಡುವಂಥಾ ಕಥೆಯೊಂದರ ದೃಷ್ಯ ರೂಪಕ ಸಂಗಾತಿ.

ಹೆಣ್ಣನ್ನು ತಾಳ್ಮೆಯೆಂಬೋ ದಿವ್ಯಾಸ್ತ್ರದಿಂದ ಬಂಧಿಸಿ ಸಂಸಾರದ ಚೌಕಟ್ಟಿನಲ್ಲಿ ಸೀಮಿತವಾಗಿಸುವ, ಸಂಬಂಧಗಳ ಹೆಸರಿನಲ್ಲಿಯೇ ಅಧಿಕಾರ ಚಲಾಯಿಸುವ ಪರಿಪಾಠ ಈವತ್ತಿನದ್ದಲ್ಲ. ಹೆಣ್ಣು ಉಸಿರಾಡಬೇಕೆಂದರೆ ಗಂಡಿನ ನೆರಳು ಇದ್ದೇ ಇರಬೇಕೆಂಬ ನಂಬಿಕೆಯೂ ಪುರುಷಾಧಿಪಥ್ಯ ಮನಸ್ಥಿತಿಯ ನಂಬಿಕೆ. ಇಂಥಾದ್ದರ ನಡುವೆ ಹೆಣ್ಣಿನ ನಿಜವಾದ ಹಂಬಲಗಳೇನು, ಆಕೆಗೆ ನಿಜವಾಗಿಯೂ ಬೇಕಿರೋದೇನೆಂಬ ಸೂಕ್ಷ್ಮತೆಯೇ ಮಾಯವಾಗಿದೆ.

ಇಂಥಾ ಚೌಕಟ್ಟು ಮೀರಿ ಎಲ್ಲ ಸಂಬಂಧಗಳನ್ನು ಕಳಚಿಕೊಂಡು ಒಂಟಿತನವನ್ನೇ ಪ್ರೀತಿಸುತ್ತಾ ಬದುಕುವ ಡ್ರಾಮಾ ಟೀಚರ್ ಒಬ್ಬಳ ಕಥೆಯನ್ನು ಹೊಂದಿರೋ ಕಿರು ಚಿತ್ರ ಸಂಗಾತಿ. ತಾಳಿ ಕಟ್ಟಿದವನ ಅಭಿಲಾಶೆ, ಸಮಾಜದ ವಕ್ರದೃಷ್ಟಿಯನ್ನೆಲ್ಲ ದಾಟಿಕೊಂಡು ಕಡೆಗೂ ಬೀದಿಯಲ್ಲಿ ಹಾದಿ ತಪ್ಪಿ ಬಂದ ನಾಯಿಮರಿಯನ್ನೇ ಆತ್ಮ ಸಂಗಾತಿಯಂತೆ ಬದುಕಿಗೆ ಸೇರಿಸಿಕೊಳ್ಳೋ ಸೂಕ್ಷ್ಮ ಕಥಾ ಹಂದರವನ್ನ ಈ ಕಿರು ಚಿತ್ರ ಹೊಂದಿದೆ. ರೂಪಾ ರವೀಂದ್ರನ್ ಅವರ ನಟನೆ ನೋಡಿದರೆ ಶೀತಲ್ ಶೆಟ್ಟಿ ಸೃಷ್ಟಿಸಿದ ಪಾತ್ರದಲ್ಲಿ ಲೀನವಾದಂತೆ ಕಾಣುತ್ತದೆ.

ಇಲ್ಲಿ ಹೆಣ್ಣಿಗೆ ಬೇಕಿರೋದು ಒಂದು ನಂಬಿಕೆ ಮತ್ತು ನಿಷ್ಕಾರಣ ಪ್ರೀತಿಯಷ್ಟೇ ಎಂಬುದನ್ನು ಕಲಾತ್ಮಕವಾಗಿಯೇ ಹೇಳಲಾಗಿದೆ. ಈ ಸೀಮಿತ ಅವಧಿಯಲ್ಲಿಯೇ ಶೀತಲ್ ಶೆಟ್ಟಿ ಬಳಸಿಕೊಂಡಿರೋ ರೂಪಕಗಳು, ಕುತೂಹಲ ಕಾಯ್ದುಕೊಳ್ಳೋ ಜಾಣ್ಮೆ ಮತ್ತು ಹೇಳಬೇಕಾದುದನ್ನು ಹೇಳುವ ಕಸುಬುದಾರಿಕೆ ಮನ ಸೆಳೆಯುತ್ತದೆ. ಈ ಮೂಲಕ ಕನ್ನಡದಲ್ಲಿ ವಿರಳವಾಗಿರೋ ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ಶೀತಲ್ ಶೆಟ್ಟಿಯೂ ಸೇರ್ಪಡೆಗೊಳ್ಳುವ ಲಕ್ಷಣಗಳೂ ಸ್ಪಷ್ಟವಾಗಿಯೇ ಕಾಣಿಸಿಸುತ್ತಿವೆ.

https://www.youtube.com/watch?v=ptDJvmxZPn4 #


Posted

in

by

Tags:

Comments

Leave a Reply