ಜನ ತುಂಬಿದ ಒಂದು ಊರು. ಅಲ್ಲಿ ಕಿಸೆಗಳ್ಳತನ, ಮನೆ ರಾಬರಿ ಮಾಡಿಕೊಂಡು ಬದುಕುವ ಒಬ್ಬ ಅರೆಗಿವುಡ. ಸೇರು ಸೈಜಿನ ಕಳ್ಳನಿಗೆ ಕಿವಿಯಾಗಿ ನಿಲ್ಲುವ ಪಾವು ಗಾತ್ರದ ಹುಡುಗ. ಮಾವನಿಂದ ಕಿರುಕುಳಕ್ಕೊಳಗಾದ ಹುಡುಗಿ ಕಳ್ಳನ ಹೃದಯವನ್ನೇ ಕದಿಯುತ್ತಾಳೆ. ಪ್ರೀತಿಯ ಸುತ್ತಾಟ ಶುರುವಾಗುತ್ತದೆ. ಮಾವನ ಸಾಲ ತೀರಿಸಲು ಹುಡುಗಿ ಉದ್ಯೋಗವನ್ನರಸಿ ಮಲೇಷಿಯಾಕ್ಕೆ ಹೊರಟು ನಿಲ್ಲುತ್ತಾಳೆ. ಹೊರಟವಳ ಕೊರಳಿಗೆ ಕಳ್ಳ ಕಟ್ಟಿದ ತಾಳಿಯೂ ಜೊತೆಯಾಗುತ್ತದೆ. ಅಲ್ಲಿಂದ ಶುರುವಾಗುತ್ತದೆ ಅಸಲೀ ಕತೆ…

 

ಮಲೇಶಿಯಾದ ರಬ್ಬರ್ ತೋಟಗಳಲ್ಲಿ ಜೀತಗಾರರಾಗಿ ದುಡಿಯುವ ಜಗತ್ತಿನ ಬಡವರು. ಅದರಲ್ಲಿ ಭಾರತೀಯ ಹೆಣ್ಣುಮಕ್ಕಳೇ ಹೆಚ್ಚು. ಆಗಾಗ್ಗೆ ಅವರ ರಕ್ತ ಮತ್ತು ಚರ್ಮದ ಪರೀಕ್ಷೆಯಾಗುತ್ತದೆ. `ಬಡವರು ಮತ್ತು ವೇಶ್ಯೆಯರನ್ನು ಮುಟ್ಟಿದರೆ ಯಾರೂ ಸೊಲ್ಲೆತ್ತೋದಿಲ್ಲ’ ಅನ್ನೋ ಕಾರಣಕ್ಕೆ ಆ ಮಾಫಿಯಾದವರಿಗೆ ಇವರೇ ಟಾರ್ಗೆಟ್. ರಬ್ಬರ್ ತೋಟದಲ್ಲಿ ಕೂಲಿಗೆ ನಿಂತ ಹೆಣ್ಣುಮಕ್ಕಳಿಗೂ ಚರ್ಮ ಪರೀಕ್ಷೆಗೂ ಏನು ಸಂಭಂದ ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹೆಣ್ಣು ಮಕ್ಕಳ ಬಣ್ಣ ಮತ್ತು ಗುಣಮಟ್ಟದ ಮೇಲೆ ಅಳತೆಗಿಷ್ಟು ಲಕ್ಷಕ್ಕೆ ಚರ್ಮ ಬಿಕರಿಯಾಗುತ್ತಿರುತ್ತದೆ. ಸೌತೆಕಾಯಿಯ ಸಿಪ್ಪೆ ಸುಲಿದಷ್ಟು ಸಲೀಸಾಗಿ ಹುಡುಗಿಯರ ಚರ್ಮ ಕಿತ್ತು ರಫ್ತು ಮಾಡುತ್ತಿರುತ್ತಾರೆ. ಕಿತ್ತ ಚರ್ಮ ಬೆಳೆಯುತ್ತಿದ್ದಂತೇ ಮತ್ತೆ ಮತ್ತೆ ಕಿತ್ತು ಹೆಣ್ಣುಜೀವಗಳನ್ನು ಹೈರಾಣು ಮಾಡುವ ದುಷ್ಟ ಕೂಟವದು. ಇಂಥ ವರ್ತುಲದಲ್ಲಿ ನಾಯಕಿ ಕೂಡಾ ಸಿಕ್ಕಿಕೊಂಡಿರುತ್ತಾಳೆ. ಏರಿಯಾದಲ್ಲಿ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ ತಿರುಗಾಡುವ ನಾಯಕ ಮತ್ತು ಆತನ ಪುಟಾಣಿ ಗೇಣೆಕ್ಕಾರ ಥಾಯ್ಲೆಂಡ್, ಮಲೇಶಿಯಾದಂಥಾ ಮಾಫಿಯಾ ನೆಲಕ್ಕೆ ಹೇಗೆ ಕಾಲಿಡುತ್ತಾರೆ? ಅಲ್ಲಿ ಏನೆಲ್ಲಾ ನಡೆಯುತ್ತದೆ. ತನ್ನ ಹುಡುಗಿ ಮತ್ತು ಇತರೆ ಹೆಣ್ಣು ಮಕ್ಕಳನ್ನು ಹೀರೋ ನರರಾಕ್ಷಸರಿಂದ ಕಾಪಾಡುತ್ತಾನಾ? ಅನ್ನೋದು ಇವತ್ತಷ್ಟೇ ತೆರೆಗೆ ಬಂದಿರುವ `ಸಿಂಧೂಬಾಧ್’ ಸಿನಿಮಾದ ಒಟ್ಟಾರೆ ತಿರುಳು.

ಸಿನಿಮಾದಿಂದ ಸಿನಿಮಾಗೆ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವ, ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದುತ್ತಾ ತನ್ನದೇ ಆತ ಪ್ರೇಕ್ಷಕರನ್ನು ಪಡೆಯುತ್ತಿರುವ ನಟ ವಿಜಯ್ ಸೇದುಪತಿ. ಪಾತ್ರ ಯಾವುದಾದರೂ ಸರಿ ಅದಕ್ಕೆ ಒಗ್ಗಿಕೊಂಡು ನಟಿಸುವುದನ್ನೇ ಧ್ಯಾನವಾಗಿಸಿಕೊಂಡಿರುವ ವಿಜಯ್ ಸೇದುಪತಿಯ ಗೆಲುವಿನ ಕಿರೀಟಕ್ಕೆ ಸಿಂಧೂಬಾದ್ ಕೂಡಾ ಮತ್ತೊಂದು ಗರಿಯಾಗಿದೆ.ಲೋಕಲ್ ಕತೆಯಿಂದ ಆರಂಭಿಸಿ ಗ್ಲೋಬಲ್ ಲೆವೆಲ್ಲಿಗೆ ಮುಟ್ಟಿಸಿರುವುದು ನಿರ್ದೇಶಕ ಅರುಣ್ ಕುಮಾರ್ ಸಾಧನೆ. ಕಾಸ್ಮೆಟಿಕ್, ಪ್ಲಾಸ್ಟಿಕ್ ಸರ್ಜರಿಗಳ ಹೆಸರಲ್ಲಿ ನಡೆಯುತ್ತಿರುವ ದಂಧೆಯ ಹಿಂದೆ ಪಾಪದ ಹೆಣ್ಣು ಮಕ್ಕಳ ಚರ್ಮ ಸುಲಿದು ಅವರ ಬದುಕನ್ನೇ ಸುಕ್ಕುಗಟ್ಟಿಸುತ್ತಿರುವ ಕರಾಳ ಮುಖವನ್ನು ಸಿಂಧೂಬಾಧ್ ಸಿನಿಮಾದ ಮೂಲಕ ಅನಾವರಣಗೊಳಿಸಲಾಗಿದೆ. ಅಂಜಲಿ ಮತ್ತು ವಿಜಯ್ ಸೇದುಪತಿ ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಬ್ಯಾಂಡ್ಮಿಂಟನ್ ಕೋರ್ಟ್ ನಲ್ಲಿ ಪರಿಣಿತ ಮಿಂಚಿಂಗು!

Previous article

ರಕ್ಕಸರನ್ನು ನೆಲಕ್ಕುರುಳಿಸೋ ರುಸ್ತುಂ!

Next article

You may also like

Comments

Leave a reply

Your email address will not be published. Required fields are marked *