ಗೆಳೆಯನೊಬ್ಬನ ಆಸೆ, ಕನಸಿಗೆ ಬೆಲೆಕೊಟ್ಟು ಆಟೋ ಸ್ನೇಹಿತರಾದ ಚೆನ್ನೀರ, ಹರೀಶ್ ಜೋಗಿ, ಅರುಣ್ ಕುಮಾರ್, ಭೈರವ, ಲಕ್ಷ್ಮೀ, ಮತ್ತು ಪ್ರಭು ನಿರ್ಮಾಣ ಮಾಡಿರುವ ಕನ್ನಡಿಗರ ಸಿನಿಮಾ ಸ್ಟಾರ್ ಕನ್ನಡಿಗ. ಈ ಚಿತ್ರವನ್ನು ವಿ. ಆರ್. ಮಂಜುನಾಥ್ ನಿರ್ದೇಶನ ಮಾಡುತ್ತಿದ್ದು, ನಾಯಕ ಕೂಡಾ ಅವರೇ ಆಗಿರುವುದು ವಿಶೇಷ. ಎರಡು ದೋಣಿಯ ಪ್ರಯಾಣದಲ್ಲಿಯೇ ದಡ ತಲುಪಿರುವ ಮಂಜುನಾಥ್ ಸ್ಟಾರ್ ಕನ್ನಡಿಗ ಚಿತ್ರದ ಮೂಲಕ ಹೊಸದೊಂದು ಮಾದರಿಯ ಲವ್ ಸ್ಟೋರಿಯನ್ನು ಹೇಳ ಹೊರಟಿದ್ದಾರೆ.
ಲವ್ವು, ಡವ್ವು ಸಾಮಾನ್ಯವಾಗಿ ಏನಾದರೂ ಕಿಸಿಯಬೇಕೆನ್ನುವಾಗಲೇ ಮೈಗತ್ತುವ ಕೆಂಪು ಇರುವೆ. ಶೀಘ್ರವಾಗಿ ಇರುವೆಗಳನ್ನು ಓಡಿಸುವ ಚಾಣಾಕ್ಷತೆ ಹತ್ತಿಸಿಕೊಂಡವರಿಗೆ ಇರಲೇಬೇಕು. ಆ ಇರುವೆಯಿಂದ ಅನಾಹುತ ತಪ್ಪಿದ್ದಲ್ಲ. ಎಚ್ಚರಿಕೆಯಿಂದ ನಡೆದುಕೊಂಡರೆ ದಾರಿ ಸುಗಮವಾಗುತ್ತದೆ ಇಲ್ಲವಾದರೆ ಏನಾಗಬಹುದು ಎಂಬುದನ್ನು ಮಂಜುನಾಥ್ ಮನರಂಜನಾತ್ಮಕವಾಗಿ ತೋರಿಸುವ ಪ್ರಯತ್ನವನ್ನು ಸ್ಟಾರ್ ಕನ್ನಡಿಗ ಚಿತ್ರದಲ್ಲಿ ಮಾಡಿದ್ದಾರೆ. ಸಿನಿಮಾದಲ್ಲಿ 5 ಹಾಡುಗಳಿದ್ದು, ಸಾಕಷ್ಟು ಅರ್ಥಗರ್ಭಿತ ಮತ್ತು ಲವ್ ಕಮ್ ಮೆಸೇಜ್ ಕೂಡ ಇದೆ. ಅದು ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯೂ ಆಗಬಲ್ಲದು ಎಂಬ ಭರವಸೆಯಲ್ಲಿರುವ ಮಂಜುನಾಥ್ ಇದೇ ಆಗಸ್ಟ್ 15ನೇ ತಾರೀಖಿನಿಂದ ಚಿತ್ರದ ಹಾಡುಗಳನ್ನು ಒಂದೊಂದಾಗಿಯೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರಂತೆ. ಇನ್ನು ಪೋಸ್ಟರ್ ವಿಚಾರಕ್ಕೆ ಸಂಬಂಧಿಸಿದಂತೆ ನೋಡುಗರಲ್ಲಿ ಉಂಟು ಮಾಡಿರುವ ಗೊಂದಲಕ್ಕೆ ಉತ್ತರವನ್ನು ಸಿನಿಮಾದಲ್ಲಿಯೇ ನೀಡಲಿದ್ದಾರಂತೆ.