ಒಬ್ಬರ ವೀಕ್ ನೆಸ್ಸು ಮತ್ಯಾವನದ್ದೋ ಸ್ವಾರ್ಥಕ್ಕೆ ಬಂಡವಾಳವಾಗಬಾರದು. ಒಬ್ಬ ವ್ಯಕ್ತಿ ಬಲಹೀನ ಅಂತಾ ಅನ್ನಿಸಿಬಿಟ್ಟರೆ ತಕ್ಷಣವೇ ಅವರ ಬದುಕನ್ನು ಆಟದ ಬಯಲಾಗಿಸಿಕೊಂಡು ಗೇಮು ಆಡಲು ಕಾದು ಕುಂತವರಿರುತ್ತಾರೆ. ಕೆಲವೇ ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಪ್ರವೀಣ್ ತೇಜ್ ನಟನೆಯ, ಪವನ್ ತ್ರಿವಿಕ್ರಮ್ ನಿರ್ದೇಶನದ ಸಿನಿಮಾ ಸ್ಟ್ರೈಕರ್ ಈ ಥರದ ಒಂದಿಷ್ಟು ವಿಚಾರಗಳನ್ನು ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ. ಸದ್ಯ ಸ್ಟ್ರೈಕರ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸಾಗಿದೆ.
ಕೌಟುಂಬಿಕ ಕಲಹದಿಂದ ಅದೊಂದು ದಿನ ಆ ಹೆಣ್ಣು ಮನೆಯ ರೂಮಿನ ಕದವಿಕ್ಕಿಕೊಂಡು ನೇಣು ಬಿಗಿದುಕೊಳ್ಳಲು ಮುಂದಾಗುತ್ತಾಳೆ. ಆತ್ಮಹತ್ಯೆಗೆ ಯತ್ನಿಸುತ್ತಿರುವ ಅಮ್ಮನ ಗಮನ ಬೇರೆಡೆ ಸೆಳೆಯಲು ಆ ಪುಟ್ಟ ಹುಡುಗನ ಮನಸು ಅನಾಹುತಕಾರಿ ಕೆಲಸಕ್ಕೆ ಮುಂದಾಗುತ್ತದೆ. ದಡ್ಡಂತಾ ಎದ್ದುಹೋಗಿ ಮಹಡಿಯಿಂದ ಧುಮುಕಿಬಿಡುತ್ತಾನೆ. ಅಪ್ಪನ ಕೂಗಾಟ ಕೇಳಿಸಿಕೊಂಡ ತಾಯಿ ಕುಣಿಕೆಯನ್ನು ಸಡಿಲಿಸಿ ಇಳಿದುಬರುತ್ತಾಳೆ. ಮಗ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾನೆ. ಅದೃಷ್ಟವಷಾತ್ ಹುಡುಗನ ಜೀವವೇನೋ ಉಳಿಯುತ್ತದೆ. ಆದರೆ ವಾಸ್ತವ ಮತ್ತು ಕನಸಿನ ನಡುವಿನ ವ್ಯತ್ಯಾಸ ಕಂಡುಹಿಡಿಯಲಾರದಂಥಾ ಮಾನಸಿಕ ರೋಗ ಅವನನ್ನು ಆವರಿಸಿಕೊಂಡಿರುತ್ತದೆ.
ಹೀಗೆ ಕನಸನ್ನೇ ನಿಜವೆಂದುಕೊಂಡು ಬದುಕುವ, ನಿಜವಾಗಿ ನಡೆದದ್ದನ್ನೂ ಕನಸಿರಬಹುದಾ ಅಂತಾ ಗೊಂದಲಗೊಳ್ಳುವ ಹುಡುಗ ಬೆಳೆದು ದೊಡ್ಡವನಾಗಿರುತ್ತಾನೆ. ಇಂಥಾ ಕಾಯಿಲೆಯ ಕಾರಣಕ್ಕೋ ಏನೋ ವಿಪರೀತ ಕೋಪ ಕೂಡಾ ಇವನ ಜೊತೆಯಾಗಿರುತ್ತದೆ. ಈತ ತನ್ನದೇ ಕಾರ್ ಗ್ಯಾರೇಜು ನಡೆಸಿಕೊಂಡಿರುತ್ತಾನೆ. ವಾಸಕ್ಕೆ ಸಣ್ಣದೊಂದು ಫ್ಲಾಟು, ಬೇಸರ ಕಳೆಯಲು ಇಬ್ಬರು ಗೆಳೆಯರೂ ಇರುತ್ತಾರೆ. ಅದೊಂದು ದಿನ ಇದ್ದ ಇಬ್ಬರು ಸ್ನೇಹಿತರಲ್ಲಿ ಒಬ್ಬನ ಕೊಲೆಯಾಗಿರುತ್ತದೆ. ಅದೇ ಸಮಯದಲ್ಲಿ ಹೀರೋಗೆ ತಾನೇ ತನ್ನ ಸ್ನೇಹಿತನನ್ನು ಕೊಲೆಗೈಯುವ ಕನಸೂ ಬಿದ್ದಿರುತ್ತದೆ. ಹಾಗಾದರೆ ಈತ ಕಂಡ ಕನಸು ನಿಜವಾ? ವಾಸ್ತವ ಮತ್ತು ಭ್ರಮೆಗಳ ನಡುವೆ ಹೀರೋ ದ್ವಂದ್ವಕ್ಕೊಳಗಾಗುತ್ತಾನೆ. ಪೊಲೀಸ್ ಅಧಿಕಾರಿಯ ಎಂಟ್ರಿಯಾಗುತ್ತದೆ. ಒಂದು ವೇಳೆ ಹೀರೋ ಈ ಕೊಲೆ ಮಾಡದಿದ್ದರೆ ಮತ್ಯಾರು ಮಾಡಿರಲು ಸಾಧ್ಯ ಅನ್ನೋ ಪ್ರಶ್ನೆ ಅಲ್ಲಿರುವ ಪಾತ್ರಗಳಂತೇ ನೋಡುಗರಿಗೂ ಕಾಡಲು ಶುರುವಾಗುತ್ತದೆ. ಯಾವುದು ತನ್ನ ನ್ಯೂನ್ನತೆಯೋ ಅದನ್ನೇ ಸಾಧನವಾಗಿಸಿಕೊಂಡು ಅಸಲೀ ಕಾರಣವನ್ನು ಹುಡುಕಲು ನಾಯಕ ಮುಂದಾಗುತ್ತಾನೆ.
ಇಂಥ ಸಸ್ಪೆನ್ಸ್, ಸೈಕಲಾಜಿಕಲ್ ಥ್ರಿಲ್ಲರ್ ಜಾನರಿನ ಸಿನಿಮಾವನ್ನು ನಿರ್ದೇಶಕ ಪವನ್ ತ್ರಿವಿಕ್ರಮ್ ಕ್ಷಣಕ್ಷಣಕ್ಕೂ ರೋಚಕವಾಗಿ ಕಟ್ಟಿಕೊಟ್ಟಿದ್ದಾರೆ. ನಟ ಪ್ರವೀಣ ತೇಜ್ ಪ್ರತಿಭಾವಂತ ಅನ್ನೋದು ಈಗಾಗಲೇ ಸಾಬೀತಾಗಿದೆ. ಸ್ಟ್ರೈಕರ್ ಚಿತ್ರದಲ್ಲಿ ಪ್ರವೀಣ್ ಅದ್ಭುತ ನಟಯ ಜೊತೆ ಟಕ್ಕರ್ ಕೊಟ್ಟಿರೋದು ಖಳನಟ ಭಜರಂಗಿ ಲೋಕಿ. ಧರ್ಮಣ್ಣ ಮತ್ತು ಅಶೋಕ್ ಕೂಡಾ ಪಾತ್ರಕ್ಕೆಷ್ಟು ಬೇಕೋ ಅಷ್ಟು ನಟನೆ ನೀಡಿದ್ದಾರೆ. ನಾಯಕಿ ಶಿಲ್ಪಾ ಮಂಜುನಾಥ್ ಲುಕ್ಕು, ನಟನೆ ಮಾತ್ರವಲ್ಲ, ದನಿಯಲ್ಲೂ ಒಂಥರಾ ಸೆಳೆತವಿದೆ. ಗರುಡಾದ್ರಿ ಫಿಲಮ್ಸ್ ನಿರ್ಮಾಣದ ಈ ಸಿನಿಮಾ ಈಗ ಅಮೆಜಾ಼ನ್ ಪ್ರೈಮ್ನಲ್ಲಿ ಲಭ್ಯವಿದೆ. ಯಾವುದೇ ಅತಿರಂಜಕತೆಯಿಲ್ಲದ, ಅಚ್ಚುಕಟ್ಟಾದ ಸಿನಿಮಾವಿದು. ಒಮ್ಮೆ ನೋಡಿ. ನಿಮಗಿಷ್ಟವಾಗಲಿದೆ.