ಇವರಿಗಿಲ್ಲ ಯಾರ ಹಂಗು, ಲಾಂಗಿಗಂತೂ ಇವರೇ ಕಿಂಗು, ಕೇಳಿ ಒಂದ್ಸಲ ಜೋಗಿ ಸಾಂಗು, ಇನ್ನೂ ಇಳಿದಿಲ್ಲ ಓಂನ ಗುಂಗು… ಎಂಬಿತ್ಯಾದಿ ಸಾಲುಗಳು ಶಿವಣ್ಣನಿಗಿರುವ ಜನಪ್ರಿಯತೆಯನ್ನು ಇಂಚಿಂಚಾಗಿ ಎತ್ತಿ ಹಿಡಿದಿದೆ.
ಇದೀಗ ತಾನೇ ಚಿತ್ರರಂಗಕ್ಕೆ ಬಂದ ಯುವ ನಟರೇ ಅಚ್ಚರಿಯಾಗುವಂತೆ ಆ್ಯಕ್ಟೀವ್ ಆಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ವಯಸ್ಸು ಅರವತ್ತಕ್ಕೆ ಹತ್ತಿರಾದರೂ ಇಂದಿಗೂ ಲವರ್ ಬಾಯ್ ಆಗಿ, ಆ್ಯಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುವ ಶಿವರಾಜ್ ಕುಮಾರ್ ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಪಾಲಿಗೆ ಅಕ್ಷರಶಃ ಎವರ್ ಗ್ರೀನ್ ಹೀರೋ. ಎಂಥದ್ದೇ ಸಂಗೀತವಿರಲಿ ಅದರ ರಿದಮ್ಮಿಗೆ ತಕ್ಕತೆ ಮೈ ಕುಣಿಸುವ ಶಿವಣ್ಣನ ವಯಸ್ಸು ಯಾರೂ ಅಂದಾಜಿಸಲು ಸಾಧ್ಯವಿಲ್ಲ. ಶಿವಣ್ಣ ತನ್ನ ದೇಹ ಮತ್ತು ಮುಖಕಾಂತಿಯನ್ನು ಇವತ್ತಿಗೂ ಒಂದೇ ರೀತಿ ಮೇಂಟೇನ್ ಮಾಡಿಕೊಂಡು ಬಂದಿದ್ದಾರೆ.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ. ಚಿತ್ರರಂಗದಲ್ಲೇ ಸಾಕಷ್ಟು ಜನ ಯುವ ನಟರು ಶಿವಣ್ಣನನ್ನು ಆರಾಧಿಸುವವರಿದ್ದಾರೆ. ಇಂಥ ಶಿವಣ್ಣನಿಗೆ ಈಗ ಐವತ್ತೆಂಟನೇ ಹುಟ್ಟಿದ ದಿನ. ಈ ಸಂದರ್ಭದಲ್ಲಿ ಶಿವಣ್ಣನ ಅಭಿಮಾನಿಗಳಿಗಾಗಿಯೇ ರೂಪುಗೊಂಡು ಚೆಂದದ ಹಾಡೊಂದು ರಿಲೀಸಾಗಿದೆ. ʻಶಿವ@58ʼ ಹೆಸರಿನ `Still Young Maa’ ಎನ್ನುವ ಅಡಿಬರಹವಿರುವ ಈ ಹಾಡನ್ನು ಸ್ವತಃ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ.
ಲಕ್ ಲಕ್ ಲಕ್ ಲಕ್ ಲಕ್ ಪತಿ ಕರುನಾಡಿಗೆ ಇವರೇ ಅಧಿಪತಿ, ಅಂತಾ ಶುರುವಾಗಿ, ಇವರಿಗಿಲ್ಲ ಯಾರ ಹಂಗು, ಲಾಂಗಿಗಂತೂ ಇವರೇ ಕಿಂಗು, ಕೇಳಿ ಒಂದ್ಸಲ ಜೋಗಿ ಸಾಂಗು, ಇನ್ನೂ ಇಳಿದಿಲ್ಲ ಓಂನ ಗುಂಗು… ಎಂಬಿತ್ಯಾದಿ ಸಾಲುಗಳು ಶಿವಣ್ಣನಿಗಿರುವ ಜನಪ್ರಿಯತೆಯನ್ನು ಇಂಚಿಂಚಾಗಿ ಎತ್ತಿ ಹಿಡಿದಿದೆ. ವರುಣ್ ಕುಮಾರ್ ಗೌಡ ಮತ್ತು ಕಿರಿಕ್ ಕೀರ್ತಿ ನಿರ್ಮಿಸಿರುವ ಈ ಲಿರಿಕಲ್ ಹಾಡು ವರುಣ್ ಸ್ಟುಡಿಯೋಸ್ ಯೂ ಟ್ಯೂಬ್ ಚಾನೆಲ್ಲಿನಲ್ಲಿ ಬಿಡುಗಡೆಗೊಂಡಿದೆ. ಭಜರಂಗಿ ಮೋಹನ್ ಶಿವಣ್ಣನ ಇಡೀ ವ್ಯಕ್ತಿತ್ವ, ಸಿನಿಮಾ ಯಾನವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗುಮಿನೇನಿ ವಿಜಯ್ ಸಂಗೀತ ಸಂಯೋಜನೆಯ ಹಾಡನ್ನು ಅನಿರುದ್ಧ್ ಶಾಸ್ತ್ರಿ ಅಷ್ಟೇ ಪವರ್ ಫುಲ್ ಆಗಿ ಹಾಡಿದ್ದಾರೆ. ಲಿರಿಕಲ್ ವಿಡಿಯೋ ರೂಪಿಸುವಲ್ಲಿ ಕೀರ್ತಿ ಗೌಡ, ಪ್ರಜ್ವಲ್ ಅವರ ಕ್ರಿಯಾಶೀಲತೆ ಗಮನ ಸೆಳೆದಿದೆ. ಕೃಷ್ಣ ಸಂಕಲನ ಅಚ್ಚುಕಟ್ಟಾಗಿದೆ. ಫಿಲ್ಮಿ ಕಲ್ಟ್ ಅವರ ಪೋಸ್ಟರ್ ವಿನ್ಯಾಸವೇ ಈ ಹಾಡಿನ ಕುರಿತಾಗಿ ಕುತೂಹಲ ಮೂಡಿಸುವಂತಿದೆ.
ಇನ್ನು ಈ ಹಾಡು ರೂಪುಗೊಂಡಿದ್ದರ ಹಿಂದೆಯೂ ಕೌತುಕದ ವಿಚಾರವೊಂದಿದೆ. ವಾರಕ್ಕೆ ಮುನ್ನವಷ್ಟೇ ವರುಣ್ ಗೌಡ, ಕಿರಿಕ್ ಕೀರ್ತಿ, ಮೋಹನ್ ಎಲ್ಲರೂ ಒಂದೆಡೆ ಸೇರಿದ್ದಾಗ ಶಿವಣ್ಣನ ಬಗ್ಗೆ ಚರ್ಚೆಯಾಗುತ್ತಿತ್ತಂತೆ. ತಕ್ಷಣ ಗೀತಸಾಹಿತಿ ಮೋಹನ್ ಒಂದು ಸಾಲು ಬರೆದಿದ್ದಾರೆ. ʻಇದೇ ಸಾಲನ್ನು ಮುಂದುವರೆಸಿ ಹಾಡಿನ ರೂಪಕ್ಕೆ ತಂದು ಬರಲಿರುವ ಶಿವಣ್ಣನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಏಕೆ ಕೊಡಬಾರದು?ʼ ಅನ್ನೋ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಗಿದೆ. ಯುವ ಸಂಗೀತ ನಿರ್ದೇಶಕ ವಿಜಯ್ ಅವರಿಗೆ ಈ ವಿಚಾರ ತಿಳಿಸಿದಾಗ ಕೆಲವೇ ನಿಮಿಷಗಳಲ್ಲಿ ಅವರೊಂದು ಟ್ಯೂನು ರೆಡಿ ಮಾಡಿ ಕಳಿಸಿಬಿಟ್ಟರಂತೆ. ಹತ್ತು ಹದಿನೈದು ನಿಮಿಷದ ಒಳಗೆ ಮೋಹನ್ ಹಾಡಿನ ಸಾಲುಗಳನ್ನು ಬರೆದು ಮುಗಿಸಿದ್ದಾರೆ. ಸಿದ್ದಗೊಂಡಿದ್ದ ಟ್ಯೂನು, ಲಿರಿಕ್ಸಿಗೆ ಅನಿರುದ್ಧರ ದನಿಯೂ ಸೇರಿಕೊಂಡಿದೆ. ಹೀಗೆ ತೀರಾ ಕಡಿಮೆ ಅವಧಿಯಲ್ಲಿ, ರಾತ್ರಿ ಕಳೆದು ಹಗಲಾಗೋ ಹೊತ್ತಿಗೆ ಅದ್ಭುತವಾದ ಅಭಿಮಾನದ ಹಾಡು ಜನ್ಮತಳೆದಿತ್ತು. ಲಿರಿಕಲ್ ವಿಡಿಯೋ ಆಗಿಯೂ ಅಷ್ಟೇ ಗಮನ ಸೆಳೆಯುವಂತಿರುವ ಈ ಹಾಡನ್ನು ನೀವೊಮ್ಮೆ ನೋಡಿ. ಶಿವಣ್ಣನ ಬರ್ತಡೇ ಪ್ರಯುಕ್ತ ಶೇರ್ ಮಾಡಿ.