‘ಹೇಗೂ ನೂರಿಪ್ಪತೈದು ಸಿನಿಮಾಗಳಿಗೆ ಸಬ್ಸಿಡಿ ಕೊಟ್ಟೇಕೊಡ್ತಾರೆ’ ಅಂತಾ ಸಂತೆ ಹೊತ್ತಿಗೆ ಮೊಳ ನೇದು, ಸರ್ಕಾರದ ಸಹಾಯಧನವನ್ನು ಕಬಳಿಸುವ ಉದ್ದೇಶದಿಂದಲೇ ಸಿನಿಮಾ ಮಾಡಿದವರು, ಲಂಚ ಪಡೆದು ಸಿನಿಮಾಗಳನ್ನು ಸಬ್ಸಿಡಿ ಲಿಸ್ಟಿಗೆ ಸೇರಿಸಿದ ವಾರ್ತಾ ಇಲಾಖೆಯ ಅಧಿಕಾರಿಗಳು, ಸೆಲೆಕ್ಷನ್ ಕಮಿಟಿಯಲ್ಲಿ ನುಸುಳಿಕೊಂಡು ವ್ಯವಹಾರ ಕುದುರಿಸಿದ ಕಮಿಷನ್ ಏಜೆಂಟುಗಳು – ಇವರೆಲ್ಲಾ ಒಟ್ಟೊಟ್ಟಿಗೇ ಅಂಡು ಬಡಿದುಕೊಳ್ಳುವಂತಾ ಸ್ಥಿತಿ ನಿರ್ಮಾಣವಾಗಿದೆ.
ಎರಡರಿಂದ ಮೂರು ಲಕ್ಷ ಕಮಿಷನ್ ಕೊಟ್ಟರೆ ಎಂಥದ್ದೇ ಸಿನಿಮಾವಾದರೂ ಅದಕ್ಕೆ ಸಬ್ಸಿಡಿ ಸಂದಾಯವಾಗುತ್ತದೆ ಅನ್ನೋ ಕೆಟ್ಟ ನಂಬಿಕೆ ಚಿತ್ರರಂಗದಲ್ಲಿ ಮನೆಮಾಡಿತ್ತು. ಬಂದ ಕಮಿಟಿಗಳು, ಸರ್ಕಾರಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಹಣ ಗೆಬರುವ ಕಾಯಕ ನಡೆಸುತ್ತಿದ್ದರು. ಎಷ್ಟೋ ಜನ ಕಷ್ಟ ಪಟ್ಟು ಸಿನಿಮಾ ಮಾಡಿರುತ್ತಾರೆ. ಹಾಕಿದ ಬಂಡವಾಳ ಕೂಡಾ ವಾಪಾಸು ಬರದೇ ಕಡೇ ಪಕ್ಷ ಸಬ್ಸಿಡಿ ಮೊತ್ತವಾದರೂ ಕೈಸೇರುತ್ತದೆ ಎನ್ನುವ ಬಯಕೆಯಲ್ಲಿ ಕಾದು ಕುಂತಿರುತ್ತಾರೆ. ಕಮಿಷನ್ ದುಡ್ಡು ಹೋದರೆ ಹೋಗಲಿ ಮಿಕ್ಕ ಹಣವಾದರೂ ಬಂದು ತಲುಪಿದರೆ ಸಾಕು ಅನ್ನೋದು ಸಾಕಷ್ಟು ಜನ ನಿರ್ಮಾಪಕರ ಮನಸ್ಥಿತಿಯಾಗಿರುತ್ತದೆ. ಇನ್ನು ಥೇಟರಿನಲ್ಲಿ ನೆಟ್ಟಗೆ ಒಂದು ಶೋ ಕೂಡಾ ಪ್ರದರ್ಶನವಾಗದ ಚಿತ್ರಗಳನ್ನು ನಾಲ್ಕೈದು ಲಕ್ಷ ರುಪಾಯಿಗಳಲ್ಲಿ ರೀಲು ಸುತ್ತಿದ ಸಾಕಷ್ಟು ಜನರಿರುತ್ತಾರೆ. ಇವರು ಸಬ್ಸಿಸಿ ಹಣದಿಂದಲೇ ಬದುಕು ನಡೆಸುವಂಥವರು. ಇಂಥವರಿಂದ ಕಷ್ಟ ಪಟ್ಟು, ಕನಸಿಟ್ಟು ಸಿನಿಮಾ ಮಾಡಿದವರಿಗೂ ಬರೆ ಬಿದ್ದಂತಾಗಿದೆ.
ವಾರ್ತಾ ಇಲಾಖೆ ಮತ್ತು ಆಯ್ಕೆ ಕಮಿಟಿಯಲ್ಲಿನ ಕೆಲವರು ಸೇರಿ ಅವ್ಯವಹಾರ ನಡೆಸುತ್ತಿರುವುದು ಚಿತ್ರರಂಗದ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವೇ. ಹೀಗೆ ಅನ್ಯಾಯ ನಡೆಯುತ್ತಿದೆ ಅನ್ನೋದಕ್ಕೆ ಯಾವುದೇ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದುದು ಮತ್ತು ನೇರವಾಗಿ ಬಂದು ಕಂಪ್ಲೇಂಟು ಮಾಡುವವರು ಇಲ್ಲದಿದ್ದರಿಂದ ಇಷ್ಟು ದಿನ ಯಾರೂ ಕೇಳದಂತಾಗಿತ್ತು. ೨೦೧೭ರ ಸಾಲಿನ ಸಬ್ಸಿಡಿ ಪಟ್ಟಿ ಬಹುತೇಕ ಅಂತಿಮವಾಗಿತ್ತು. ಅದೇ ಹೊತ್ತಿಗೆ ಸ್ಟೂಡೆಂಟ್ಸ್ ಎನ್ನುವ ಸಿನಿಮಾದ ನಿರ್ದೇಶಕ ಸಂತೋಷ್ ಎಂಬಾತ ನೇರವಾಗಿ ವಾರ್ತಾ ಇರ್ಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಸಾಹೇಬರ ಮುಂದೆಯೇ ಬಂದು, ಫೋನು ಮಾಡಿ, ಲೌಡ್ ಸ್ಪೀಕರ್ ಹಾಕಿ ಡೀಲ್ ವಿಚಾರ ಮಾತಾಡಿದ್ದಾನೆ. ಮಣಿವಣ್ಣನ್ ಅವರು ಸಂಬಳವನ್ನೇ ನಂಬಿ ಬದುಕುತ್ತಿರುವ ನಿಷ್ಠಾವಂತ ಅಧಿಕಾರಿ. ಈ ಹಿಂದೆ ಅವರು ಕಾರ್ಯ ನಿರ್ವಹಿಸಿದ ಇಲಾಖೆಗಳಲ್ಲಿ ನಯಾಪೈಸೆಯ ಅವ್ಯವಹಾರವಾಗದಂತೆ ನೋಡಿಕೊಂಡವರು. ಮಣಿವಣ್ಣನ್ ಅವರ ಬಗ್ಗೆ ಜನರಲ್ಲಿ ಬೇರೆಯದ್ದೇ ಲೆವೆಲ್ಲಿನ ನಂಬಿಕೆ ಇದೆ. ಇಂಥ ಅಧಿಕಾರಿಗಳ ನೆರಳಲ್ಲಿ ನಡೆಯಬಾರದ್ದು ನಡೆದು, ಅವರ ಕೈಗೇ ಸಿಗೇಬಿದ್ದರೆ ಸುಮ್ಮನೇ ಬಿಡುತ್ತಾರಾ?
ಸಬ್ಸಿಡಿಗಾಗಿ ಚಿತ್ರಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎ, ಬಿ ಮತ್ತು ಸಿ ಗುಂಪುಗಳಾಗಿ ವಿಂಗಡಿಸಿರುತ್ತಾರೆ. ಅವರುಗಳಲ್ಲಿ ಎ ಗುಂಪಿನ ಸಿನಿಮಾಗಳನ್ನು ಅತ್ಯುತ್ತಮ ಚಿತ್ರಗಳೆಂದು ಪರಿಗಣಿಸಲಾಗಿರುತ್ತದೆ. ಇವುಗಳ ಜೊತೆಗೆ ಪ್ರಶಸ್ತಿ ಪಡೆದ ಸಿನಿಮಾಗಳೂ ಸೇರಿಕೊಳ್ಳುತ್ತವೆ. ಸದ್ಯ ಅವ್ಯವಹಾರಗಳ ವಿಚಾರ ಮಣಿವಣ್ಣನ್ ಸಾಹೇಬರ ಗಮನಕ್ಕೆ ಬಂದಿದ್ದೇ ತಡ ಸೆಲೆಕ್ಷನ್ ಆಗಿದ್ದ ೧೨೫ ಸಿನಿಮಾಗಳ ಪೈಕಿ ಎ ಕೆಟಗರಿಯಲ್ಲಿ ಆಯ್ಕೆಯಾಗಿದ್ದ ೪೭ ಚಿತ್ರಗಳನ್ನು ಮಾತ್ರ ಅಂತಿಮಗೊಳಿಸಿ, ಅದನ್ನು ಮುಖ್ಯಮಂತ್ರಿಗಳ ಕಛೇರಿಗೆ ರವಾನಿಸಿದ್ದಾರೆ.
ಇನ್ನು ಸಬ್ಸಿಡಿ ದುಡ್ಡಿನ ಆಸೆಗೆ ಕಳಪೆ ಚಿತ್ರ ಮಾಡಿ, ಅಧಿಕಾರಿ ಮತ್ತು ಆಯ್ಕೆ ಸಮಿತಿಯ ಖದೀಮರಿಗೆ ಲಂಚ ಕೊಟ್ಟು ವ್ಯವಹಾರ ಕುದುರಿಸಲು ಹೋದ ನಿರ್ಮಾಪಕರಿಗೆ ಸರಿಯಾಗಿ ಗುನ್ನ ಬಿದ್ದಂತಾಗಿದೆ. ಇನ್ನೇನಿದ್ದರೂ ಲಂಚ ಕೊಟ್ಟವರು ಪಡೆದವರ ಕೊರಳ ಪಟ್ಟಿ ಹಿಡಿದು ಕಿತ್ತಾಡೋದೊಂದೇ ಬಾಕಿ. ಹೇಳಿ ಕೇಳಿ ಖಾಸಗೀ ಡೀಲಿಂಗ್ ವಿಚಾರವಾಗಿದ್ದರಿಂದ ದೂರು ದಾಖಲಿಸಲೂ ಸಾಧ್ಯವಿಲ್ಲ. ಯಾಕೆಂದರೆ, ಪಡೆದವನಷ್ಟೇ ಕೊಟ್ಟವನದ್ದೂ ತಪ್ಪಿರುತ್ತದೆ. ಇಂಥ ಖದೀಮರ ಬುಡಕ್ಕೆ ಬರೆಯಿಟ್ಟ ಅಧಿಕಾರಿ ಮಣಿವಣ್ಣನ್ ಅವರನ್ನು ಅಭಿನಂದಿಸಬೇಕು. ಇನ್ನಾದರೂ ಇಲಾಖೆ, ಸಮಿತಿಗಳು ಪ್ರಾಮಾಣಿಕ ಕೆಲಸ ಮಾಡುವಂತಾಗಬೇಕು.