ಹಿಂದೆ ಡಾ. ರಾಜ್ ಕುಮಾರ್ ನಂದಿನಿ ಹಾಲಿನ ಪ್ರಪ್ರಥಮ ಮಾಡೆಲ್ ಆಗಿದ್ದರು. ರಾಜ್ ಆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು  ಸಂಭಾವನೆಯನ್ನೂ ಪಡೆದಿರಲಿಲ್ಲ. ಆನಂತರ ಅಣ್ಣಾವ್ರು ಬೇರಾವುದೇ ಖಾಸಗಿ ಕಂಪೆನಿಗಳ ಮಾರಾಟದ ಸರಕಾಗಲಿಲ್ಲ. ಅದು ಅವರ ಇಚ್ಛೆ, ನಿರ್ಧಾರವಾಗಿತ್ತು. ಹಾಗಂತ ಎಲ್ಲರನ್ನೂ ಹಾಗೇ ಇರಲಿ ಅಂಥಾ ಬಯಸಲು ಸಾಧ್ಯವಾ?

ಇಂಡಿಯಾದ ಅತಿದೊಡ್ಡ ಸ್ಕಿಲ್ ಗೇಮ್ ಪ್ಲಾಟ್’ಫಾರಂ ರಮ್ಮಿ ಸರ್ಕಲ್.ಕಾಮ್ ಪ್ರಚಾರ ರಾಯಭಾರಿಯಾಗಿದ್ದು ಸರಿನಾ ತಪ್ಪಾ ಅನ್ನೋದರ ಬಗ್ಗೆ ಚರ್ಚೆಗಳೇರ್ಪಟ್ಟಿವೆ. ಕೆಲವು ಸಂಘಟನೆಗಳು ಸುದೀಪ್ ಅವರನ್ನೇ ಬ್ಯಾನ್ ಮಾಡಬೇಕು ಅಂತಾ ಹೇಳಿಕೆಗಳನ್ನು ನೀಡಿರೋದು ವಿವಾದಕ್ಕೆ ಕಾರಣವಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿಚ್ಚ ಈ ಜಾಹೀರಾತಲ್ಲಿ ಕಾಣಿಸಿಕೊಂಡರೆ ಅವರ ಅಭಿಮಾನಿಗಳೆಲ್ಲಾ ರಮ್ಮಿ ಆಡಿ ಕೆಟ್ಟುಹೋಗ್ತಾರೆ ಅನ್ನೋದು ಕೆಲವರ ವಾದ. ಕನ್ನಡಪರ ಹೋರಾಟಗಾರರ ಈ ಮಾತು ಕೇಳಿ ಕಿಚ್ಚನ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಹಾಗಾದರೆ ಸುದೀಪ್ ರಮ್ಮಿ ಪ್ರಚಾರ ರಾಯಭಾರಿಯಾಗಲು ಒಪ್ಪಬೇಕಿತ್ತಾ ಬೇಡವಾ? ಭಾರತೀಯ ಚಿತ್ರರಂಗವನ್ನು ಮೀರಿದ ನಟ ಸುದೀಪ್. ನಟನೆ ಇವರ ಉದ್ಯೋಗ. ಕನ್ನಡವನ್ನು ಹೊರತುಪಡಿಸಿ ಮಿಕ್ಕ ಭಾಷೆಯಲ್ಲಿ ಕಿಚ್ಚ ಈಗ ಸ್ಟಾರ್ ವಿಲನ್. ಹಾಗಂತಾ ಅವರ ಅಭಿಮಾನಿಗಳೆಲ್ಲಾ ವಿಲನ್ನುಗಳಾಗಿ ಬದಲಾಗಿದ್ದಾರಾ? ಹಿಂದೆ ಸುದೀಪ್ ರಾಮರಾಜ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರ ಅಭಿಮಾನಿಗಳೆಲ್ಲಾ ಶರ್ಟು ಪ್ಯಾಂಟು ಕಳಚಿಟ್ಟು ಪಂಚೆ ಸುತ್ತಿಕೊಂಡು ತಿರುಗಾಡಿದರಾ? ಸುದೀಪ್ ಭಾರತೀಯ ಚಿತ್ರರಂಗದ ಜನಪ್ರಿಯ ನಟ. ಅವರು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ ಉತ್ತಮ ಪ್ರಚಾರವಾಗಿ ಎಲ್ಲರಿಗೂ ತಲುಪುತ್ತದೆ ಅಷ್ಟೇ. ಬಳಕೆ ಅನ್ನೋದು ಆಯಾ ವ್ಯಕ್ತಿಯ ವಿವೇಚನೆ, ನಿರ್ಧಾರಗಳಿಗೆ ಬಿಟ್ಟಿದ್ದು.

ಹಾಗೆ ನೋಡಿದರೆ, ಬೇರೆ ಹೀರೋಗಳಿಗಿಂತಾ ಸುದೀಪ್ ಕಾಣಿಸಿಕೊಂಡ ಜಾಹೀರಾತುಗಳು ಕಡಿಮೆಯೇ. ಒಂದು ಕಾಲದಲ್ಲಿ ಉಪೇಂದ್ರ ಬೆಳಿಗ್ಗೆ ಹಾಲಿನ ಜಾಹೀರಾತಲ್ಲಿ ಕಾಣಿಸಿಕೊಂಡರೆ, ಸಂಜೆ ಹೊತ್ತಿಗೆ ಆಲ್ಕೊಹಾಲಿನ ಪ್ರಚಾರ ನೀಡುತ್ತಿದ್ದರು. ಅದರ ಜೊತೆ ಜಪ್ಪಲಿ ಜಾಹೀರಾತೂ ಬರುತ್ತಿತ್ತು. ಶಿವರಾಜ್ ಕುಮಾರ್ ಕಲ್ಯಾಣ್ ಜ್ಯುವೆಲರ್ಸಿನ  ಬ್ರಾಂಡ್ ಅಂಬಾಸಡರ್ ಆಗಿ ಚಿನ್ನ ಖರೀದಿಸಿ ಅಂದರೆ, ಪುನೀತ್ ರಾಜ್ ಪಣಪ್ಪುರಂ ಜಾಹೀರಾತಿನಲ್ಲಿ ಬಂದು  ನಿಮ್ಮ ಚಿನ್ನವನ್ನು ಅಡ ಇಡಿ ಎನ್ನುತ್ತಿದ್ದರು. ಹಾಗಾದರೆ ಅಭಿಮಾನಿಗಳು ಯಾರನ್ನು ಒಪ್ಪಬೇಕು? ಯಾವುದನ್ನು ಸ್ವೀಕರಿಸಬೇಕು..? ಕಲಾವಿದರ ವಿಚಾರದಲ್ಲಿ ತಪ್ಪು ಹುಡುಕಲು ಹೋದರೆ ಯಾವುದು ತಪ್ಪು? ಯಾವುದು ಸರಿ ಅನ್ನೋ ತೀರ್ಮಾನಕ್ಕೆ ಬರಲು ಸಾಧ್ಯವೇ ಇಲ್ಲ. ಸಂಭಾವನೆ ಪಡೆದು ಹೇಗೆ ಸಿನಿಮಾಗಳಲ್ಲಿ ನಟಿಸುತ್ತಾರೋ ಹಾಗೇ ಜಾಹೀರಾತಿನಲ್ಲೂ ನಟಿಸುತ್ತಾರೆ. ಸಿನಿಮಾದ ಪಾತ್ರಗಳಂತೇ ಇಲ್ಲೂ ನೆಗೆಟೀವು, ಪಾಸಿಟೀವುಗಳೆಲ್ಲಾ ಇದ್ದಿದ್ದೇ. ಹೀರೋಗಳು ಇಂಥದ್ದೇ ಪಾತ್ರ ಮಾಡಬೇಕು, ಇಲ್ಲವಾದಲ್ಲಿ ಅವರನ್ನು ಬ್ಯಾನು ಮಾಡಬೇಕು ಅಂತಾ ಫತ್ವಾ ಹೊರಡಿಸಿಬಿಟ್ಟರೆ, ಎಲ್ಲ ಹೀರೋಗಳೂ ಸಾಧು ಸಂತರ ರೋಲುಗಳನ್ನಷ್ಟೇ ನಿಭಾಯಿಸಲು ಸಾಧ್ಯ.

ಪಾತ್ರಕ್ಕೊಪ್ಪುವ, ಕಾಸ್ಟೂಮು, ಮೇಕಪ್ಪು ಹಾಕಿಕೊಂಡು ತಾವಲ್ಲದ ಪಾತ್ರಗಳಲ್ಲಿ ನಟಿಸುವ ಹೀರೋಗಳನ್ನು ಸಿನಿಮಾದಲ್ಲಿ ನೋಡಿ ಹೇಗೆ ಎಂಜಾಯ್ ಮಾಡುತ್ತೇವೋ? ಜಾಹೀರಾತುಗಳಲ್ಲಿ ನೋಡಿ ಸುಮ್ಮನಾಗುತ್ತಾರೆ. ಯಾರಿಗೆ ಯಾವುದರ ಅವಶ್ಯಕತೆ ಇದೆಯೋ ಅದನ್ನು ಬಳಸುತ್ತಾರೆ. ಹಾಗೆಂದು ಎಲ್ಲ ಒಳಿತು, ಕೆಡುಕುಗಳಿಗೆ ಸಿನಿಮಾ ಹೀರೋಗಳನ್ನು ಹೊಣೆ ಮಾಡಿದರೆ ಹೇಗೆ?

ಹಿಂದೆ ಡಾ. ರಾಜ್ ಕುಮಾರ್ ನಂದಿನಿ ಹಾಲಿನ ಪ್ರಪ್ರಥಮ ಮಾಡೆಲ್ ಆಗಿದ್ದರು. ರಾಜ್ ಆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಸಂಭಾವನೆಯನ್ನೂ ಪಡೆದಿರಲಿಲ್ಲ. ಆನಂತರ ಅಣ್ಣಾವ್ರು ಬೇರಾವುದೇ ಖಾಸಗಿ ಕಂಪೆನಿಗಳ ಮಾರಾಟದ ಸರಕಾಗಲಿಲ್ಲ. ಅದು ಅವರ ಇಚ್ಛೆ, ನಿರ್ಧಾರವಾಗಿತ್ತು. ಹಾಗಂತ ಎಲ್ಲರನ್ನೂ ಹಾಗೇ ಇರಿ ಅಂಥಾ ಬಯಸಲು ಸಾಧ್ಯವಾ?

ಕ್ಯಾತೆ ತೆಗೆದವರ ಮೇಲೆ ಕಿಚ್ಚ ಅಭಿಮಾನಿಗಳ ಕಿಡಿ : ನಿಮಗೆ ತಾಕತ್ತಿದ್ದರೆ ಮೊದಲು ಸರ್ಕಾರಕ್ಕೆ ಇದರ ಬಗ್ಗೆ ತಿಳಿಸಿ. ಸುಮ್ಮನೆ ಒಬ್ಬ  ಕಾವಿದನ ತೇಜೋವಧೆ ಮಾಡೋದಕ್ಕೆ ಮೊಂಡು ಕಾರಣವನ್ನು ಹುಡುಕಬೇಡಿ. ತೆಲಂಗಾಣ ನೆಲದ ಹೋರಾಟಗಾರು ತಮ್ಮ ದನಿಯ ಮೂಲಕ ಅಲ್ಲಿ ರಮ್ಮಿ ಸರ್ಕಲ್ಲನ್ನೇ ಬ್ಯಾನ್ ಮಾಡಿಸಿದ್ದಾರೆ. ಅಷ್ಟೊಂದು ಕಾಳಜಿ ಇದ್ದರೆ ಅರೆಜಾಗೃತ ಭಾಷಾಭಿಮಾನಿಗಳೆ, ಮೊದಲು ಕರ್ನಾಟಕ ಸರ್ಕಾರಕ್ಕೆ ಈ ಆಪ್’ನ ಬಗ್ಗೆ ತಿಳಿಸಿ, ಅದನ್ನು ನಿಷೇಧ ಮಾಡಿಸಿ. ಸುದೀಪ್ ರಂಥ ಕನ್ನಡ ಹಾಗೂ ಕರ್ನಾಟಕದ ಹೆಸರನ್ನು ಜಗತ್ತಿನಾದ್ಯಂತ ಪಸರಿಸಿರುವ ಹೆಮ್ಮೆಯ ನಟನ ಬಗ್ಗೆ ಮಾತಾಡಬೇಡಿ – ಹೀಗೆ ಕಿಚ್ಚ ಸುದೀಪ್ ಅಭಿಮಾನಿಗಳು ಕಿಚ್ಚನ ವಿರುದ್ದ ಕ್ಯಾತೆ ತೆಗೆದವರ ಕುರಿತಾಗಿ ಕಿಡಿ ಕಾರಿದ್ದಾರೆ.

CG ARUN

ಮಂಡ್ಯ, ಮುದ್ದೆ ಮತ್ತು ಆನೆ ಬಲ

Previous article

ಮಾರ್ಚ್ 7-8ರಂದು ಬೃಹತ್ ಶನೈಶ್ಚರ ಮಹಾಯಾಗ

Next article

You may also like

Comments

Leave a reply

Your email address will not be published. Required fields are marked *