ಈ ಬಾರಿಯ ವಿಧಾನಸಭಾ ಚುನಾವಣೆಗೆ ಸುದೀಪ್ ಅವರನ್ನು ರಾಜ್ಯಾದ್ಯಂತ ಸ್ಟಾರ್ ಪ್ರಾಚಾರಕನನ್ನಾಗಿಸುವ ಪ್ಲಾನ್ ಬಿಜೆಪಿಯದ್ದು. ಎಲ್ಲವೂ ನಾಳೆ ಮಧ್ಯಾಹ್ನ1.30ಕ್ಕೆ ನಡೆಯಲಿರುವ ಪ್ರೆಸ್ ಮೀಟ್ ನಲ್ಲಿ ಬಯಲಾಗಲಿದೆ
ಕಿಚ್ಚ ಸುದೀಪ ರಾಜಕಾರಣಕ್ಕೆ ಬರ್ತಾರಂತೆ… ಕಳೆದ ಹದಿನೈದು ವರ್ಷಗಳಲ್ಲಿ ಪ್ರತೀ ಸಲ ಚುನಾವಣೆ ಬಂದಾಗಲೂ ಇಂಥದ್ದೊಂದು ಸುದ್ದಿ ಸರಸರನೆ ಹರಿದಾಡುತ್ತದೆ. ಅದು ಹಾಗೇ ತಣ್ಣಗಾಗುತ್ತದೆ. ಸುದೀಪ್ ಅವರನ್ನು ರಾಜಕೀಯದ ಪಡಸಾಲೆಗೆ ಎಳೆದುತರಲು ಎಲ್ಲ ಪ್ರಮುಖ ಪಕ್ಷಗಳೂ ಕರಸತ್ತು ನಡೆಸಿವೆ ಅನ್ನೋದಂತೂ ನಿಜ. ಆದರೆ ಸುದೀಪ್ ಯಾವತ್ತೂ ಅಧಿಕೃತವಾಗಿ ಈ ಬಗ್ಗೆ ಮಾತಾಡಿಲ್ಲ. ಹಿಂದೆ ಕಾಗ್ರೆಸ್ ಪಕ್ಷದಿಂದ ಸುದೀಪ್ ಚಿತ್ರದುರ್ಗಕ್ಕೆ ಸ್ಪರ್ಧಿಸುತ್ತಾರೆ ಅಂತಾ ಪುಕಾರೆದ್ದಿತ್ತು. ಆ ನಂತರ ಬಾದ್ ಷಾ ಜೆ.ಡಿ.ಎಸ್. ಸೇರೋದು ಖಚಿತ ಅಂತಲೂ ಜನ ಮಾತಾಡಿಕೊಂಡಿದ್ದರು. ಈಗ ಅಂತಿಮವಾಗಿ ಕಿಚ್ಚ ಕಮಲ ಹಿಡಿಯೋದು ಖಚಿತವಾಗಿದೆ.
ಈ ಸಲದ ವಿಧಾನಸಭಾ ಚುನಾವಣೆಗೆ ಚಿಕ್ಕಪೇಟೆ ಕ್ಷೇತ್ರದಿಂದ ಸುದೀಪ್ ಅವರ ಪರಮಾಪ್ತ ಜಾಕ್ ಮಂಜುಗೆ ಬಿಜೆಪಿ ಟಿಕೆಟ್ ನೀಡೋದು ಬಹುತೇಕ ಖಚಿತವಾಗಿದೆ. ಸಿನಿಮಾ ನಿರ್ಮಾಣವಿರಲಿ, ಬೇರೆ ಯಾವುದೇ ಉದ್ಯಮದಲ್ಲಾಗಲಿ, ಜಾಕ್ ಮಂಜು ಅವರನ್ನು ಮುಂದೆ ಬಿಟ್ಟು ಟ್ರಯಲ್ ನೋಡೋದು ಕಿಚ್ಚ ಬಹುಕಾಲದಿಂದ ಅನುಸರಿಸಿಕೊಂಡು ಬಂದಿರುವ ರೀತಿ. ಈ ನಿಟ್ಟಿನಲ್ಲಿ ನೋಡಿದರೆ, ಈ ಸಲ ಜಾಕ್ ಮಂಜು ಪರವಾಗಿ ಪ್ರಚಾರ ಮಾಡುವುದು ಸುದೀಪ್ ಯೋಜನೆ. ಒಂದು ವೇಳೆ ಕಿಚ್ಚನ ವರ್ಚಸ್ಸು ವರ್ಕೌಟ್ ಆಗಿ ಮಂಜುನಾಥ್ ಗೆದ್ದರೆ, ಬಹುಶಃ ಮುಂದೊಂದು ದಿನ ತಾವೇ ಅಖಾಡಕ್ಕಿಳಿಯುವುದು ಸುದೀಪ್ ಮಾಸ್ಟರ್ ಪ್ಲಾನ್ ಆಗಿರಬಹುದು.
ಸಿನಿಮಾ ಇರಲಿ, ಕ್ರಿಕೆಟ್ ಇರಲಿ ಸುದೀಪ್ ಚತುರ ಆಟಗಾರ ಅನ್ನೋದು ಆಗಾಗ ಸಾಬೀತಾಗುತ್ತಲೇ ಬಂದಿದೆ. ಈ ಸಲ ಇವರು ಆಯ್ಕೆ ಮಾಡಿಕೊಂಡಿರುವ ಕ್ಷೇತ್ರ ರಾಜಕಾರಣವಾಗಿದೆ. ಹಾಗೆ ನೋಡಿದರೆ, ಸುದೀಪ್ಗೆ ತಕ್ಷಣಕ್ಕೆ ರಾಜಕಾರಣಕ್ಕೆ ಬರುವ ಯಾವ ಅನಿವಾರ್ಯತೆಯೂ ಇಲ್ಲ. ಕನ್ನಡ ಮಾತ್ರವಲ್ಲದೆ, ಇಡೀ ಇಂಡಿಯಾದಲ್ಲಿವರು ಬೇಡಿಕೆಯ ನಟ. ಇಲ್ಲಿ ಜನಪ್ರಿಯ ಹೀರೋ ಆಗಿದ್ದುಕೊಂಡೇ ಪಕ್ಕದ ರಾಜ್ಯಗಳಲ್ಲಿ ವಿಲನ್ ಆಗಿಯೂ ಅವತಾರವೆತ್ತಿದ್ದಾರೆ. ಇತ್ತೀಚೆಗೆ ಸುದೀಪ್ ನಟನೆಯ ಸಿನಿಮಾಗಳು ಹೇಳಿಕೊಳ್ಳುವಂತಾ ಯಶಸ್ಸು ಕಂಡಿಲ್ಲ. ಇದು ಅವರನ್ನು ಸ್ವಲ್ಪ ಮಟ್ಟಿಗೆ ವಿಚಲಿತರನ್ನಾಗಿಸಿರೋದು ನಿಜ. ಕಳೆದ ಹತ್ತು ವರ್ಷಗಳಲ್ಲಿ ಅದ್ಯಾವುದೋ ಬಿಗ್ ಬಾಸ್ ರಿಯಾಲಿಟಿ ಶೋಗಾಗಿಯೇ ತಮ್ಮ ಅಮೂಲ್ಯವಾದ ಸಮಯವನ್ನು ಖರ್ಚು ಮಾಡಿದ್ದಾರೆ. ಇದರಿಂದ ಒಂದು ಮಟ್ಟದ ಸಂಭಾವನೆ ಸಿಕ್ಕಿದೆ ಅನ್ನೋದು ಬಿಟ್ಟರೆ, ಸಾಕಷ್ಟು ರೀತಿಯ ನಷ್ಟ ಕೂಡಾ ಆಗಿದೆ. ಇದೇ ಸಮಯವನ್ನು ಅವರು ಸಿನಿಮಾಗಾಗಿ ಮೀಸಲಿಟ್ಟಿದ್ದಿದ್ದರೆ ಅವರ ಕೀರ್ತಿ ಪತಾಕೆ ಇನ್ನೂ ಬೇರೆಯದ್ದೇ ಲೆವೆಲ್ಲಿನಲ್ಲಿ ಬೆಳೆದುನಿಲ್ಲುತ್ತಿತ್ತು. ಇವೆಲ್ಲದರ ನಡುವೆ ಈಗ ರಾಜಕಾರಣಕ್ಕೂ ಕಾಲಿಡುತ್ತಿದ್ದಾರೆ. ಜನ ಕಿಚ್ಚನನ್ನು ಒಬ್ಬ ನಟನನ್ನಾಗಿ ಆರಾಧಿಸುತ್ತಾರೆ. ಕನ್ನಡದ ಹೆಸರನ್ನು ಗ್ಲೋಬಲ್ ಲೆವೆಲ್ಲಿನಲ್ಲಿ ಮಿಂಚಿಸಿದ ಪ್ರತಿಭಾವಂತ ಸುದೀಪ. ಆದರೆ, ರಾಜಕಾರಣ ಇವರಿಗೆ ಆಗಿಬರುತ್ತದಾ ಅನ್ನೋದನ್ನು ಈಗಲೇ ಅಂದಾಜಿಸಲು ಸಾಧ್ಯವಿಲ್ಲ!
No Comment! Be the first one.