ಮೊದಲೇ ಜಗತ್ತು ಕೊರೋನಾದ ಕರಾಳತೆಯಲ್ಲಿ ಸಿಲುಕಿ ನಲುಗಿದೆ. ಈಗ ಎದುರಾಗಿರುವ ಅವಾಂತರಗಳಿಂದ ಚಿತ್ರರಂಗ ಹೇಗೆ ಹೊರ ಬರುತ್ತದೋ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಬಾಂಬು, ಬದನೇಕಾಯಿ ಅಂತೆಲ್ಲಾ ಬೆದರಿಸಿ, ಕಿತಾಪತಿ ಮಾಡುವ ಜನರೂ ಇದ್ದಾರೆ…!
ಕೊರೋನಾ ಬಿಟ್ಟರೆ, ಹುಸಿ ಬಾಂಬ್ ಕರೆಗಳು ತಮಿಳು ನಟರಿಗೆ ವಿಪರೀತ ಹಿಂಸೆ ಕೊಡುತ್ತಿವೆ. ಇತ್ತೀಚೆಗೆ ತಮಿಳು ನಟ ಸೂರ್ಯ ಭಾರತದ ಶಿಕ್ಷಣ ನೀತಿಗಳು ಮತ್ತು ನೀಟ್ ಪರೀಕ್ಷೆಯ ವಿರುದ್ಧ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಿಗೇ ಚೆನ್ನೈನ ಆಳ್ವಾರ್ ಪೇಟೆಯಲ್ಲಿರುವ ಸೂರ್ಯನ ಆಫೀಸಿನಲ್ಲಿ ಸ್ಫೋಟಕ ಇಟ್ಟಿರುವುದಾಗಿ ಕಿಡಿಗೇಡಿಯೊಬ್ಬ ನೆನ್ನೆ ಬೆದರಿಸಿದ್ದಾನೆ. ತಕ್ಷಣ ಪೊಲೀಸರು ಸ್ಫೋಟಕ ನಿಷ್ಕ್ರಿಯ ತಜ್ಞರು, ಮೂಸಿನೋಡುವ ನಾಯಿಗಳ ಸಮೇತ ಸೂರ್ಯನ ಆಫೀಸಿಗೆ ಎಂಟ್ರಿ ಕೊಟ್ಟಿದ್ದರು. ಬಿಲ್ಡಿಂಗನ್ನೆಲ್ಲಾ ತಡಕಾಡಿದ ಪೊಲೀಸರಿಗೆ ಅಲ್ಲಿ ಢುಂ ಎನ್ನುವ ಯಾವ ವಸ್ತುವೂ ಸಿಗಲಿಲ್ಲ. ವಿಚಿತ್ರವೆಂದರೆ ಸೂರ್ಯ ಆ ಆಫೀಸನ್ನು ಕಾಲಿ ಮಾಡಿಕೊಂಡು ಹೊಸ ಕಟ್ಟಡಕ್ಕೆ ಹೋಗಿ ಎಷ್ಟೋ ದಿನಗಳಾಗಿವೆ. ಹುಸಿ ಕರೆ ಮಾಡಿದವನಿಗೆ ಸೂರ್ಯನ ಆಫೀಸು ಬೇರೆಡೆಗೆ ಸ್ಥಳಾಂತರಗೊಂಡಿದ್ದರ ಬಗ್ಗೆ ಮಾಹಿತಿ ಇರಲಿಲ್ಲವೇನೋ!
ಮೂರು ತಿಂಗಳ ಮುಂಚೆಯಷ್ಟೇ ಇಳಯದಳಪತಿ ವಿಜಯ್ ಮನೆಯಲ್ಲೂ ಬಾಂಬ್ ಇಟ್ಟಿರುವುದಾಗಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಬಂದಿತ್ತು. ನಿಜವೋ ಸುಳ್ಳೋ ಇಂಥ ಕರೆ ಬಂದಮೇಲೆ ತಕ್ಷಣ ಸಿಬ್ಬಂದಿಯ ಸಮೇತ ಹೋಗಿ ಒಂದು ಸಲ ಶೋಧಿಸುವುದು ಅಧಿಕಾರಿಗಳ ಕರ್ತವ್ಯ. ಹೀಗಾಗಿ, ಸಾಲಿಗ್ರಾಮದಲ್ಲಿರುವ ವಿಜಯ್ ಮನೆಗೆ ನಡುರಾತ್ರಿಯಲ್ಲಿ ಶ್ವಾನಗಳ ಸಮೇತ ಪೊಲೀಸರು ಎಂಟ್ರಿಕೊಟ್ಟಿದ್ದರು. ಇರೋಬರೋ ಜಾಗವನ್ನೆಲ್ಲಾ ತಡಕಾಡಿ, ಹುಡುಕಾಡಿದರೂ ಸ್ಫೋಟಕ ವಸ್ತುಗಳ್ಯಾವುವೂ ಸಿಗಲೇ ಇಲ್ಲ. ಅಲ್ಲಿಗೆ ಇದು ಕೂಡಾ ಹುಸಿ ಬೆದರಿಕೆ ಅನ್ನೋದು ಖಾತ್ರಿಯಾಗಿತ್ತು. ಇದೇ ವರ್ಷ ವಿಜಯ್ ಮನೆಯಲ್ಲಿ ಬಾಂಬ್ ಇರುವುದಾಗಿ ಬಂದ ಎರಡನೇ ಕರೆ ಇದಾಗಿದೆ. ಬಿಗಿಲ್ ಸಿನಿಮಾ ಬಿಡುಗಡೆಯಾಗಿ ಹಿಟ್ ಆದ ಸಂದರ್ಭದಲ್ಲೂ ಇದೇ ರೀತಿ ಆಗಿತ್ತು.
ಲಾಕ್ ಡೌನ್ ಸಮಯದಲ್ಲೂ ರಜನಿ ಮನೆಯನ್ನು ಸ್ಫೋಟಿಸುವುದಾಗಿ ಹೇಳಿದ್ದವನು ಎರಡೇ ದಿನಗಳಲ್ಲಿ ಸಿಕ್ಕಿಬಿದ್ದಿದ್ದ. ಆ ವ್ಯಕ್ತಿ ವಿಕಲಚೇತನನಾಗಿದ್ದ. ವಿಚಿತ್ರವೆಂದರೆ, ಈಗ ವಿಜಯ್ ಮನೆಯನ್ನು ಢುಂ ಅನ್ನಿಸುವುದಾಗಿ ಕರೆ ಮಾಡಿರುವ ವ್ಯಕ್ತಿ ಕೂಡಾ ವಿಶೇಷ ಚೇತನನಾಗಿದ್ದ. ಅಂಗ ವಿಕಲವಾಗಿದ್ದರೂ ಅದಮ್ಯ ಚೇತನದಿಂದ ಸಾಧಿಸಿದ ಎಷ್ಟೋ ಮಂದಿ ಇದ್ದಾರೆ. ಅಂಥವರ ನಡುವೆ ಕೆಲವರು ಚೇಷ್ಟೆ ಮಾಡಿ ಹೆಸರು ಕೆಡಿಸಿಕೊಳ್ಳುತಾರೆ. ಅದಕ್ಕೇ ಹೇಳಿದ್ದು ಗಾದೆ ಮಾತುಗಳನ್ನು ನಿಜವಾಗಿಸುವ ಪ್ರಯತ್ನ ಮಾಡುತ್ತಾರೆ ಅಂತಾ. ಮೊದಲೇ ಜಗತ್ತು ಕೊರೋನಾದ ಕರಾಳತೆಯಲ್ಲಿ ಸಿಲುಕಿ ನಲುಗಿದೆ. ಈಗ ಎದುರಾಗಿರುವ ಅವಾಂತರಗಳಿಂದ ಚಿತ್ರರಂಗ ಹೇಗೆ ಹೊರ ಬರುತ್ತದೋ ಗೊತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಬಾಂಬು, ಬದನೇಕಾಯಿ ಅಂತೆಲ್ಲಾ ಬೆದರಿಸಿ, ಕಿತಾಪತಿ ಮಾಡುವ ಜನರೂ ಇದ್ದಾರೆ…!
No Comment! Be the first one.