‘ಆಜಾರೆ… ಆಜಾರೆ ಮೇರೆ ದಿಲಭರೋ ಆಜಾ…’ ಎಂದು ಪ್ರೇಮಿಗಳು ಒಬ್ಬರನ್ನೊಬ್ಬರು ಭರಸೆಳೆಯುವ ಅತಿಸುಂದರ ಹಾಡು ಎಂದೆಂದಿಗೂ ಎವರ್‌ಗ್ರೀನ್ ಆಗಿರುತ್ತದೆ. ಹಾಗೆಯೇ ‘ಸುನ್ ಸಾಹಿಬಾ ಸುನ್….’ ಎಂಬ ಹಾಡು ಕೂಡಾ. ಹೇಳುತ್ತಾ ಹೋದರೆ ಇಂಥ ಸಹಸ್ರ ಸಹಸ್ರ ಹಾಡುಗಳೇ ಉದಾಹರಣೆಗಳಾಗಿಬಿಡುತ್ತವೆ.

ಸರಿಸುಮಾರು ಆರೂವರೆ ದಶಕಗಳ ಕಾಲ ಭಾರತೀಯ ಸಂಗೀತಲೋಕದ ಧೃವತಾರೆಯಂತೆ ಕಂಗೊಳಿಸಿದ ಲತಾ ಮಂಗೇಶ್ಕರ್ ಎಂಬ ಹಾಡುಹಕ್ಕಿಗೆ ಈಗ ತೊಂಬತ್ತೊಂದರ ಹರೆಯ…! ಭಾರತದ ಇಪ್ಪತ್ತೆರಡಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು ಮೂವತ್ತೈದು ಸಾವಿರದಷ್ಟು ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್ ಎಂಬ ಯಶಸ್ವೀ ಹೆಣ್ಣುಮಗಳೂ ಕೂಡ ಬದುಕು ಕಟ್ಟಿಕೊಳ್ಳಲು ಹೆಣಗಾಡಿದವರೇ. ೧೯೨೯ರ ಸೆಪ್ಟೆಂಬರ್ ೨೮ರಂದು ಹುಟ್ಟಿದ ಲತಾ ಮಂಗೇಶ್ಕರ್ ತೀರ ಸಣ್ಣ ವಯಸ್ಸಿಗೇ ದೊಡ್ಡ ರೀತಿಯ ಕಷ್ಟಗಳನ್ನು ಎದುರಿಸಿದಾಕೆ. ಇವರ ತಂದೆ ದೀನಾನಾಥ್ ‘ಬಂಲವಂತ್ ಸಂಗೀತ ಮಂಡಳಿ’ ಎಂಬ ಪುಟ್ಟದೊಂದು ಸಂಸ್ಥೆಯನ್ನು ಕಟ್ಟಿಕೊಂಡು, ಹಲವು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಒಮ್ಮೆ ‘ಸಂಗೀತ ಸೌಭದ್ರ’ ಎಂಬ ನಾಟಕದ ಪಾತ್ರಧಾರಿಯೊಬ್ಬರು ಕೈಕೊಟ್ಟಿದ್ದರಿಂದ ಆ ಪಾತ್ರವನ್ನು ಲತಾ ಮಾಡಬೇಕಾಗಿ ಬಂದಿತ್ತು. ನಂತರ ಪುಣ್ಯಪ್ರಭಾವ, ಗುರುಕುಲ್ ಮುಂತಾದ ರಂಗಪ್ರಯೋಗಗಳಲ್ಲೂ ಲತಾ ಕಾಣಿಸಿಕೊಂಡಿದ್ದರು. ಶಾಲೆಗೆ ಹೋದ ಎರಡನೇ ದಿನವೇ ಶಿಕ್ಷಕರು ಗದರಿದರು ಎಂಬ ಕಾರಣಕ್ಕೆ ಲತಾ ಮಂಗೇಶ್ಕರ್ ಇನ್ನೆಂದೂ ಶಾಲೆಗೆ ಹೋಗುವ ಮನಸ್ಸು ಮಾಡಲೇ ಇಲ್ಲ. ಹೀಗಾಗಿ ಲತಾ ಮಂಗೇಶ್ಕರ್ ಶಾಶ್ವತವಾಗಿ ಔಪಚಾರಿಕ ಶಿಕ್ಷಣದಿಂದ ದೂರವೇ ಉಳಿದುಬಿಟ್ಟರು.

ಹದಿಮೂರು ವರ್ಷದ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಲತಾ ಮಂಗೇಶ್ಕರ್ ಕುಟುಂಬ ಅದೆಷ್ಟು ಕಷ್ಟಕ್ಕೆ ಬಿತ್ತೆಂದರೆ, ಸಂಗೀತ ಪಾಠಕ್ಕೆ ಟ್ರೈನಿನಲ್ಲಿ ಹೋದರೆ ದುಡ್ಡು ಖರ್ಚಾಗುತ್ತದೆ ಎಂದು ದೂರದ ಜಾಗೆಗಳಿಗೆ ನಡೆದೇ ಹೋಗುತ್ತಿದ್ದರಂತೆ. ಹಾಗೆ ಉಳಿಸಿದ ಹಣದಲ್ಲಿ ಮನೆಗೆ ಬೇಕಾದ ಅಡುಗೆ ಸಾಮಗ್ರಿ, ತರಕಾರಿಗಳನ್ನು ಕೊಂಡುಕೊಳ್ಳುತ್ತಿದ್ದರಂತೆ. ‘ಹಳೇದನ್ನ ಮರೀಬಾರ‍್ದು’ ಎನ್ನುವಹಾಗೆ ಅಂದು ಒಪ್ಪೊತ್ತಿನ ಊಟಕ್ಕೂ ಪರದಾಡಿದ ದಿನಗಳನ್ನು ಲತಾ ಮಂಗೇಶ್ಕರ್ ಆಗಾಗ ನೆನೆಯುತ್ತಲೇ ಇರುತ್ತಾರೆ. ಯಶಸ್ಸು, ಖ್ಯಾತಿಯನ್ನು ತಲೆಗೇರಿಸಿಕೊಳ್ಳದೇ ಅಂದಿನ ದಿನಗಳನ್ನು ಆಗಾಗ ಹಿಂತಿರುಗಿ ನೋಡುವ ಲತಾ ಅವರ ಜೀವನ ಶೈಲಿಯೇ ಈಗಲೂ ಅವರನ್ನು ಇಷ್ಟೊಂದು ಸರಳವಾಗಿಟ್ಟಂತಿದೆ. ಮೊದಮೊದಲು ನಾಟಕಗಳಲ್ಲಿ ಅಭಿನಯಿಸುತ್ತಾ ಬದುಕಿಗಾಗಿ ಹೋರಾಡುತ್ತಿದ್ದ ಲತಾ ಮಂಗೇಶ್ಕರ್ ತಾವಿದ್ದ ಇಂದೋರ್‌ನಿಂದ ಪುಣೆ, ಅಲ್ಲಿಂದ ಕೊಲ್ಹಾಪುರಕ್ಕೆ ವಲಸೆ ಹೋಗಬೇಕಾಗಿಬಂದಿತ್ತು.

ತಾಯಿ, ನಾಲ್ಕು ಜನ ಸಹೋದರಿಯರು ಮತು ಒಬ್ಬ ತಮ್ಮ ಹೀಗೆ ದೊಡ್ಡ ಕುಟುಂಬವನ್ನು ಸಾಕಬೇಕಾದ ಹೊಣೆ ಲತಾರ ಮೇಲೇ ಇತ್ತಾಂದ್ದರಿಂದ ಕೆಲವು ಮರಾಠಿ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಅದು ೪೦ರ ದಶಕದ ಆರಂಭ. ಲತಾ ತಾನೊಬ್ಬ ಹಾಡುಗಾರ್ತಿಯಾಗಿ ಹೊರಹೊಮ್ಮಬೇಕು ಎಂದು ಹಪಹಪಿಸುತ್ತಿದ್ದ ದಿನಗಳವು. ಆದರೆ ಇವರ ಸಣ್ಣ ದನಿ ಅಂದಿನ ಚಿತ್ರನಟಿಯರಿಗೆ ಹೊಂದುವುದಿಲ್ಲ ಎಂಬ ಕಾರಣಕ್ಕೆ ಬಹುತೇಕ ಸಿನಿಮಾ ಮಂದಿ ಲತಾ ಅವರಿಗೆ ಅವಕಾಶವನ್ನೇ ನೀಡಿರಲಿಲ್ಲ. ಭಾರತ ವಿಭಜನೆಗೊಂಡ ನಂತರ ಹಲವು ಹಾಡುಗಾರರು ಬಾಂಬೆಯನ್ನು ತ್ಯಜಿಗೆ ಲಾಹೋರ್‌ಗೆ ಗುಳೆ ಹೊರಟನಂತರವಷ್ಟೇ ಲತಾ ಮಂಗೇಶ್ಕರ್ ಅವರ ಅದೃಷ್ಟ ಖುಲಾಯಿಸಿದ್ದು. ೧೯೪೯ರಲ್ಲಿ ‘ಕಿತೀ ಸಾಲ್’ ಎಂಬ ಮರಾಠಿ ಸಿನಿಮಾದಲ್ಲಿ ಹಾಡುವ ಅವಕಾಶವನ್ನು ಗಿಟ್ಟಿಸಿಕೊಂಡ ಲತಾ ಮಂಗೇಶ್ಕರ್‌ಗೆ ಹಿಂದಿಯಲ್ಲೂ ಒಂದು ಮಟ್ಟದ ಅವಕಾಶ ಮತ್ತು ಯಶಸ್ಸು ದೊರೆಯಿತು. ಬರಬರುತ್ತಾ ಲತಾ ಮಂಗೇಶ್ಕರ್‌ರ ಗಾನಸುಧೆಗೆ ಹಿಂದಿ ಚಿತ್ರಪ್ರೇಮಿಗಳೆಲ್ಲ ವ್ಯಸನಿಗಳಾಗಿಹೋದರು. ಆಕೆಯ ಹಾಡು ಕೇಳಲಿಕ್ಕೆ ಜನ ರೇಡಿಯೋ ಆನ್ ಮಾಡಿಕೊಂಡು ದಿನಗಟ್ಟಲೆ ಕಾಯುವಂತಾಯಿತು.

ಲತಾ ಅವರು ಹಾಡಿದ ‘ಯಾದ್ ರಖನಾ ಆಂದ್ ತಾರೋಂ ಯೆ ಸುಹಾನಿ ರಾತ್ ಹೈ….’ ಹಾಡು ಕಿವಿಗೆ ಬೀಳುತ್ತಿದ್ದಂದೇ ರಚ್ಚೆಹಿಡಿದ ಮಕ್ಕಳೂ ಜೋಗುಳಕ್ಕೆ ಬಿದ್ದಂತೆ ನಿದಿರೆಗೆ ಜಾರಿಬಿಡುತ್ತಿದ್ದವು; ಎಂಥ ಕಟುಕನೂ ಕರ್ಣಾನಂದಗೊಳ್ಳುತ್ತಿದ್ದ.. ‘ಆಜ್ ಫಿರ್ ಜೀನೆ ಕಾ ತಮನ್ನಾ ಹೈ…’ ಹಾಡಿನ ಸಾಲುಗಳ ಲತಾರ ಸ್ವರ ಮಾಧುರ್ಯದಿಂದ ಹೊರಹೊಮ್ಮುತ್ತಿದ್ದರೆ ಜೀವನಾಸಕ್ತಿ ಕಳಕೊಂಡವರ ಮುಖದಲ್ಲೂ ಜೀವಕಳೆ ಕಾಣಿಸುತ್ತಿತ್ತು. ‘ಆಯೆ ಮೇರೆ ದೇಶ್ ಕೆ ವತನ್ ಕೆ ಲೋಗೋಂ’ ಎಂಬ ಹಾಡನ್ನು ಒಮ್ಮೆ ಕೇಳಿದರೆ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಪರಮ ಉಡಾಳನಿಗೂ ‘ನಾನು, ನನ್ನ ದೇಶ’ ಎಂಬ ಭಾವನೆ ಮೂಡದಿರಲು ಸಾಧ್ಯವಿಲ್ಲ. ಕನ್ನಡದಲ್ಲೂ ಲತಾ ಮಂಗೇಶ್ಕರ್ ಹಾಡಿದ ‘ಬೆಳ್ಳನೆ ಬೆಳಗಾಯಿತು’ ಹಾಡನ್ನು ಕನ್ನಡದ ಕೇಳುಗ ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಶಾಲೆಯ ಮೆಟ್ಟಿಲೇ ಏರದ, ಅವಿದ್ಯಾವಂತ ಹೆಣ್ಣುಮಗಳೊಬ್ಬಳು ನ್ಯೂಯಾರ್ಕ್ ವಿಶ್ವವಿದ್ಯಾಲಯ ಸೇರಿದಂತೆ ಪ್ರಪಂಚದ ಆರು ವಿಶ್ವವಿದ್ಯಾಲಯಗಳಿಂದ ಗೌಡರ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ‘ಎರಡನೇ ಭಾರತರತ್ನ ಪಡೆದ ಮಹಿಳೆ’ ಎಂಬ ಹಿರಿಮೆ ಕೂಡ ಲತಾ ಮಂಗೇಶ್ಕರ್ ಅವರದ್ದು. ವಯಸ್ಸು ತೊಂಬತ್ತಾದರೂ ಇವತ್ತಿಗೂ ಸಣ್ಣ ಹುಡುಗರಂತೆ ಕ್ರಿಕೆಟ್ ಮೋಹವಿರಿಸಿಕೊಂಡಿರುವ ಲತಾ ಮಂಗೇಶ್ಕರ್ ಸಂಗೀತವನ್ನೇ ಜೀವನವನ್ನಾಗಿಸಿ ಕೊಂಡ ಅಪರೂಪದ ಮಹಿಳೆ. ‘ಕೊನೆವರೆಗೂ ಹಾಡುತ್ತಲೇ ಇರುತ್ತೇನೆ’ ಎನ್ನುವ ಈ ಗಾನಕೋಗಿಲೆಯ ಕಂಠ-ಮನಸ್ಸು ಈ ಕ್ಷಣಕ್ಕೂ ‘ಗಾತಾರಹೇ ಮೇರಾ ದಿಲ್’ ಎಂದು ಹಾಡುತ್ತಲೇ ಇದೆ. ಅದು ಹೀಗೇ ಸಾಗಲಿ….

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ವಿಂಡೋ ಸೀಟ್‌ ಟೀಸರ್‌ ಬಂತು!

Previous article

You may also like

Comments

Leave a reply

Your email address will not be published. Required fields are marked *

More in cbn