ಈಗ ಸೋಲಿನ ಸುಳಿಯಲ್ಲಿ ಸಿಲುಕಿ ದಿಕ್ಕೆಟ್ಟಿರುವ ತಮಿಳು ಸ್ಟಾರ್ ಒಬ್ಬ ಕನ್ನಡ ನೆಲದಲ್ಲಿ ಹುಟ್ಟಿ ಹೆಸರು ಮಾಡಿದ ಸಾಧಕರೊಬ್ಬರ ಜೀವನಗಾಥೆಯ ಮೂಲಕ ಗೆಲುವು ಕಾಣಲು ತವಕಿಸುವಂತಾಗಿದೆ. ಗೋಪಿನಾಥ್ ಅವರ ಪಾತ್ರದ ಮೂಲಕ ಸೂರ್ಯ ಮತ್ತೊಮ್ಮೆ ಬೆಳಗಲಿ. ಆ ಮೂಲಕ ಕನ್ನಡಿಗನ ಗೆಲುವಿನ ಹಾದಿ ಜಗತ್ತಿಗೇ ಗೊತ್ತಾಗಲಿ.
ಗಜಿನಿ, ಪಿತಾಮಗನ್, ಕಾಕ್ಕ-ಕಾಕ್ಕದಂತಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟವನು ತಮಿಳು ನಟ ಸೂರ್ಯ. ಸಿಂಗಂ ಅನ್ನೋ ಸರಣಿ ಸಿನಿಮಾವಂತೂ ಸೂರ್ಯನನ್ನು ಜಗದ್ವಿಖ್ಯಾತಿ ಮಾಡಿತ್ತು. ಇಂಥ ಸೂರ್ಯ ಈಗ ಸಂಪೂರ್ಣ ಮಾರ್ಕೆಟ್ಟು ಕಳೆದುಕೊಂಡ ಹೀರೋ. ಅದಕ್ಕೆ ಕಾರಣ, ಸೂರ್ಯ ನಟಿಸಿದ ಕಳೆದ ನಾಲ್ಕೈದು ಸಿನಿಮಾಗಳು ಬಕ್ಕಬೋರಲು ಬಿದ್ದಿವೆ. ೨೪, ತಾನಾ ಸೇಂದ ಕೂಟ್ಟಂ, ಎನ್.ಜಿ.ಕೆ., ಕಾಪ್ಪನ್ ಸೇರಿದಂತೆ ಸೂರ್ಯನ ಸಾಲು ಸಾಲು ಸಿನಿಮಾಗಳು ಫ್ಲಾಪ್ ಆಗಿವೆ. ಈ ಸೋಲಿನಿಂದ ಸೂರ್ಯ ನಿಜಕ್ಕೂ ಕಂಗಾಲಾಗಿದ್ದಾನೆ. ಇದೇ ಸೂರ್ಯನಿಗಾಗಿ ಅತಿಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದವರು ಕೆ.ವಿ. ಆನಂದ್. ಸೂರ್ಯ-ಆನಂದ್ ಜೋಡಿಯ ಅಯಾನ್, ಆದವನ್, ಮಾಟ್ರಾನ್ ಮುಂತಾದ ಸಿನಿಮಾಗಳು ದೊಡ್ಡ ಹೆಸರು ಮತ್ತು ದುಡ್ಡು ಎರಡನ್ನೂ ಮಾಡಿದ್ದವು. ಇದೇ ಕಾಂಬಿನೇಷನ್ನಿನ ಕಳೆದ ಸಿನಿಮಾ ಕಾಪ್ಪನ್ ಮಾತ್ರ ಎಕ್ಕುಟ್ಟಿಹೋಯಿತು. ಒಂದು ಕಡೆ ಸೂರ್ಯನ ತಮ್ಮ ಕಾರ್ತಿ ನಟಿಸಿದ ಸಿನಿಮಾಗಳು ಒಂದರ ಹಿಂದೆ ಒಂದು ಗೆಲ್ಲುತ್ತಲೇ ಇವೆ. ಇತ್ತೀಚೆಗೆ ಬಂದ ಖೈದಿ ಅನ್ನೋ ಸಿನಿಮಾವಂತೂ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡಿದೆ. ಆದರೆ ಸೂರ್ಯನ ಸಿನಿಮಾಗಳು ಮೇಲೇಳುತ್ತಲೇ ಇಲ್ಲ.
ಈ ನಡುವೆ ಸೂರ್ಯನ ಕೈ ಹಿಡಿಯಲು ಕನ್ನಡಿಗ ಸಾಧಕರೊಬ್ಬರ ಕತೆ ಸಾಥ್ ನೀಡಲಿದೆಯಾ ಎನ್ನುವ ಪ್ರಶ್ನೆ ಸೃಷ್ಟಿಯಾಗಿದೆ. ಅದೇನೆಂದರೆ, ಕರ್ನಾಟಕದ ಹಾಸನದ ಗೊರೂರು ಎಂಬ ಕುಗ್ರಾಮದಲ್ಲಿ ಹುಟ್ಟಿ, ಮಿಲಿಟರಿ ಸೇರಿ ಹೆಸರು ಮಾಡಿದವರು ಕ್ಯಾಪ್ಟನ್ ಜಿ.ಆರ್. ಗೋಪಿನಾಥ್. ಸೇನೆಯಲ್ಲಿ ಸೇವೆ ಮುಗಿಸಿಕೊಂಡು ಬಂದ ಗೋಪಿನಾಥ್ ಉಳಿದ ಬದುಕನ್ನು ಕೂಡಾ ಸಾರ್ಥಕವಾಗಿಸಿಕೊಳ್ಳಬೇಕು ಎಂದು ತೀರ್ಮಾನಿಸಿದರು. ಭಾರತದ ಪ್ರತಿಯೊಬ್ಬ ಪ್ರಜೆಯೂ ಒಮ್ಮೆಯಾದರೂ ವಿಮಾನದಲ್ಲಿ ಪ್ರಯಾಣಿಸಬೇಕು ಎನ್ನುವುದು ಅವರ ಕನಸಾಗಿತ್ತು. ಏರ್ ಡೆಕ್ಕನ್ ಸಂಸ್ಥೆಯನ್ನು ಆರಂಭಿಸಿದರು. ಜನಸಾಮಾನ್ಯರಿಗೂ ವಿಮಾನಯಾನ ಎನ್ನುವ ಕಾನ್ಸೆಪ್ಟನ್ನು ರೂಪಿಸಿ ಗೆದ್ದರು. ಸಿಂಪ್ಲಿ ಫ್ಲೈ ಹೆಸರಿನಲ್ಲಿ ಇವರ ಆತ್ಮಚರಿತ್ರೆ ಕೂಡಾ ಪ್ರಕಟವಾಗಿದೆ.
ಈಗ ಸೂರ್ಯ ನಟನೆಯಲ್ಲಿ ತಯಾರಾಗಿರುವ ಸೂರರೈ ಪೊಟ್ರು ಚಿತ್ರ ಕ್ಯಾಪ್ಟನ್ ಗೋಪಿನಾಥ್ ಅವರ ಬದುಕಿನ ಹಾದಿಯನ್ನು ಆಧರಿಸಿ ರೂಪುಗೊಂಡಿದೆ. ಕನ್ನಡದ ಸಾಧಕನ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿರುವುದರಿಂದ ಡಬ್ ಮಾಡಿ ಕರ್ನಾಟಕದಲ್ಲೂ ರಿಲೀಸು ಮಾಡುವ ಪ್ಲಾನು ನಡೆಯುತ್ತಿದೆ. ಸದ್ಯ ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಚಿತ್ರದ ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಚೆನ್ನೈ ಏರ್ ಪೋರ್ಟಿನಲ್ಲಿ ನಡೆಯುತ್ತಿರುವ ಮೊದಲ ಸಿನಿಮಾ ಕಾರ್ಯಕ್ರಮ ಕೂಡಾ ಇದಾಗಿದೆ.
ಮಣಿರತ್ನಂರಂಥಾ ನಿರ್ದೇಶಕ ಮೊದಲು ನಿರ್ದೇಶನ ಮಾಡಿದ್ದು ಕನ್ನಡದ ಚಿತ್ರವನ್ನು. ತಮಿಳು ಚಿತ್ರರಂಗವನ್ನು ಆಳುತ್ತಿರುವವರಲ್ಲಿ ಸೂಪರ್ ಸ್ಟಾರ್ ರಜನಿಕಾಂತರಿಂದ ಹಿಡಿದು ಅಲ್ಲಿನ ಬಹುತೇಕ ವಿಲನ್ನುಗಳೂ ಕನ್ನಡದವರೇ. ಸಾಕಷ್ಟು ವಿಚಾರಗಳಲ್ಲಿ ತಮಿಳು ಚಿತ್ರೋದ್ಯಮ ಕನ್ನಡದ ಆಸರೆ ಪಡೆದಿದೆ. ಈಗ ಸೋಲಿನ ಸುಳಿಯಲ್ಲಿ ಸಿಲುಕಿ ದಿಕ್ಕೆಟ್ಟಿರುವ ಸ್ಟಾರ್ ಒಬ್ಬ ಕನ್ನಡ ನೆಲದಲ್ಲಿ ಹುಟ್ಟಿ ಹೆಸರು ಮಾಡಿದ ಸಾಧಕರೊಬ್ಬರ ಜೀವನಗಾಥೆಯ ಮೂಲಕ ಗೆಲುವು ಕಾಣಲು ತವಕಿಸುವಂತಾಗಿದೆ. ಗೋಪಿನಾಥ್ ಅವರ ಪಾತ್ರದ ಮೂಲಕ ಸೂರ್ಯ ಮತ್ತೊಮ್ಮೆ ಬೆಳಗಲಿ. ಆ ಮೂಲಕ ಕನ್ನಡಿಗನ ಗೆಲುವಿನ ಹಾದಿ ಜಗತ್ತಿಗೇ ಗೊತ್ತಾಗಲಿ.
ಜೈ ಕರ್ನಾಟಕ!