ಮಾವಂದಿರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದಿನಕರ್ ಅವರುಗಳ ಮಾರ್ಗದರ್ಶನದಂತೆಯೇ ಮುಂದಡಿಯಿಡುತ್ತಾ ಬಂದಿರುವ ಮನೋಜ್ ಈಗ ಟಕ್ಕರ್ ಚಿತ್ರದ ನಾಯಕ ನಟ. ಈ ಚಿತ್ರದ ಚಿತ್ರೀಕರಣ ಮೈಸೂರು ಸುತ್ತಮುತ್ತ ಬಿಡುವಿರದೆ ನಡೆಸಿ, ಈಗ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಇದೀಗ ದಿನಕರ್ ಮಡದಿ ಮಾನಸಾ ಅವರೊಂದಿಗೆ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿ ಸೋದರಳಿಯ ಮನೋಜ್ ಅವರನ್ನು ಹುರಿದುಂಬಿಸಿದ್ದಾರೆ!
ಬೆಂಗಳೂರಿನ ಹೆಚ್.ಎಂ.ಟಿ, ಕಂಠೀರವ ಸ್ಟುಡಿಯೋ, ನಾಗರಬಾವಿ ಹೀಗೆ.. ಟಕ್ಕರ್ ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ಮನೋಜ್ ಮತ್ತು ಭಜರಂಗಿ ಲೋಕಿ ನಡುವಿನ ಮುಖ್ಯವಾದ ಫೈಟ್ ಸೀನುಗಳು ಚಿತ್ರೀಕರಿಸಲ್ಪಡುತ್ತಿವೆ. ಈ ಚಿತ್ರೀಕರಣ ನಡೆಯುತ್ತಿರುವಾಗಲೇ ದಿನಕರ್, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಮತ್ತು ಮಾನಸಾ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ.
ಟಕ್ಕರ್ ಚಿತ್ರ ಆರಂಭವಾದಾಗಿನಿಂದಲೂ ಅದೇನೇ ಕೆಲಸದೊತ್ತಡ ಇದ್ದರೂ ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆ ನೀಡುತ್ತಾ ಬಂದಿದ್ದವರು ದಿನಕರ್. ಇದೀಗ ಖುದ್ದಾಗಿ ಟಕ್ಕರ್ ಸೆಟ್ಟಿಗೆ ಭೇಟಿ ನೀಡಿದ ದಿನಕರ್ ಅವರು ಚಿತ್ರದ ಇದುವರೆಗಿನ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡು ಖುಷಿಗೊಂಡಿದ್ದಾರೆ. ಸೋದರಳಿಯ ಮನೋಜ್ ಬೆನ್ತಟ್ಟುತ್ತಲೇ ಇಡೀ ಚಿತ್ರತಂಡಕ್ಕೆ ಹುರುಪು ತುಂಬಿದ್ದಾರೆ.
ದಿನಕರ್ ಮತ್ತು ಅವರ ಮಡದಿ ಮಾನಸಾ ಇದೀಗ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಪ್ರಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಕೂಡಾ ಅವರು ಟಕ್ಕರ್ ಸೆಟ್ಟಿಗೆ ಭೇಟಿ ನೀಡಿರೋದು ಅವರಿಗೆ ಸೋದರಳಿಯ ಮನೋಜ್ ಮೇಲಿರೋ ಅಪಾರ ಕಾಳಜಿ, ಪ್ರೀತಿಯ ಪ್ರತೀಕ. ದರ್ಶನ್ ಅವರಂತೆಯೇ ಮನೋಜ್ಗೆ ಕಾಲ ಕಾಲಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿರುವ ದಿನಕರ್ ಭೇಟಿಯಿಂದ ಟಕ್ಕರ್ ಚಿತ್ರ ತಂಡಕ್ಕೆ ಹೊಸಾ ಹುಮ್ಮಸ್ಸು ಸಿಕ್ಕಿದಂತಾಗಿದೆ.
ಇದೇ ಸಂದರ್ಭದಲ್ಲಿ ದಿನಕರ್ ಅವರ ಜೊತೆ ಸ್ಥಳಕ್ಕಾಗಮಿಸಿದ್ದ ಸೃಜನ್ ಕೂಡಾ ಟಕ್ಕರ್ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.
ಅಂದಹಾಗೆ, ಕಮಲಿ ಧಾರಾವಾಹಿ ಖ್ಯಾತಿಯ ನಿರ್ದೇಶಕ ಅರವಿಂದ್ ಕೌಶಿಕ್ ನಿರ್ದೇಶಿಸಿದ್ದ ಹುಲಿರಾಯ ಚಿತ್ರವನ್ನು ನಿರ್ಮಿಸಿದ್ದರಲ್ಲಾ? ನಾಗೇಶ್ ಕೋಗಿಲು.. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಎರಡನೇ ಚಿತ್ರ ಟಕ್ಕರ್. ಪುಟ್ ಗೌರಿ ರಂಜನಿ ರಾಘವನ್ ಈ ಚಿತ್ರದಲ್ಲಿ ಮನೋಜ್ ಗೆ ನಾಯಕಿಯಾಗಿದ್ದಾರೆ. #