ರಾಮನಗರ ಜಿಲ್ಲೆಯ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ ಆ ಸಾಮಾನ್ಯ ಹುಡುಗನಿಗೆ ಹೈಸ್ಕೂಲು ಹಂತದಲ್ಲಿಯೇ ದೊಡ್ಡ ಕನಸೊಂದು ಆವರಿಸಿಕೊಂಡು ಬಿಟ್ಟಿತ್ತು. ತಾನು ಚಿತ್ರ ನಿರ್ದೇಶಕನಾಗಬೇಕು ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಚಿತ್ರವನ್ನೇ ನಿರ್ದೇಶನ ಮಾಡಬೇಕೆಂಬುದು ಆ ಕನಸಿನ ಸಾರ!
ಅಂಥಾದ್ದೊಂದು ಕನಸು ಕಂಡು ಕುರುಕ್ಷೇತ್ರ ಚಿತ್ರಕ್ಕೆ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿರೋ ಎಂ. ಸುಭಾಷ್‌ಚಂದ್ರ ಚಾಲೆಂಜಿಂಗ್‌ಸ್ಟಾರ್ ದರ್ಶನ್ ಅವರ ಹಾರ್ಡ್‌ಕೋರ್ ಅಭಿಮಾನಿಯೂ ಹೌದು!
ಸುಭಾಷ್ ಓದಿದ್ದು ಅರ್ಥಶಾಸ್ತ್ರ. ಆದರೆ ಕೈ ಹಿಡಿದದ್ದು ಎಕಾನಾಮಿಕ್ಸಿಗೆ ಅರ್ಥವೇ ಆಗದ ಕಲೆ. ತಾನು ದರ್ಶನ್ ಚಿತ್ರ ನಿರ್ದೇಶನ ಮಾಡಬೇಕೆಂಬ ಹಂಬಲದಿಂದ ಒಂಭತ್ತನೇ ತರಗತಿಯಲ್ಲಿಯೇ ಕಥೆಯನ್ನೂ ಸಿದ್ಧಪಡಿಸಿಕೊಂಡಿದ್ದ ಸುಭಾಷ್ ರಾಮನಗರ ಜಿಲ್ಲೆಯ ಹಗಲಹಳ್ಳಿ ಎಂಬ ಪುಟ್ಟ ಊರಿನವರು. ಹಪ್ಪಳದ ಫ್ಯಾಕ್ಟರಿ ನಡೆಸುತ್ತಿದ್ದ ತಂದೆ ಮುನಿಮಾರೇಗೌಡರಿಗೆ ಮಗ ಹೈಟೆಕ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿಯೇ ಓದಬೇಕೆಂಬ ಆಸೆ. ಪ್ರಾಥಮಿಕ ಶಿಕ್ಷಣವನ್ನು ಊರಲ್ಲಿಯೇ ಮುಗಿಸಿಕೊಂಡ ಸುಭಾಷ್ ಆ ನಂತರ ಐದು ವರ್ಷಗಳ ಕಾಲ ಬೆಂಗಳೂರಿನ ಉಳ್ಳಾಲದ ವಿದ್ಯಾನಿಖೇತನ ಶಾಲೆಗೆ ಪ್ರತೀ ದಿನ ಬಂದು ಹೋಗಿ ವಿದ್ಯಾಭ್ಯಾಸ ನಡೆಸಿದ್ದರು. ಮಗನ ಭವಿಷ್ಯದ ದೃಷ್ಟಿಯಿಂದಲೇ ಇಡೀ ಸಂಸಾರ ಬೆಂಗಳೂರಿಗೆ ಶಿಫ್ಟಾದದ್ದೂ ಆಗಿತ್ತು.
ಆದರೆ ಬಸವನಗುಡಿ ನ್ಯಾಷನಲ್ ಹೈಸ್ಕೂಲಿನಲ್ಲಿ ಓದುತ್ತಲೇ ಸುಭಾಷ್‌ಗೆ ನಿರ್ದೇಶಕನಾಗಬೇಕೆಂಬ ತುಡಿತ ತೀವ್ರವಾಗಿತ್ತು. ಅಪ್ಪನ ಆಸೆಯಂತೆ ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿಗೆ ಸೇರಿಕೊಂಡ ಸುಭಾಷ್ ಓದಿನ ನಡುವೆಯೇ ಕಿರುಚಿತ್ರ ನಿರ್ದೇಶನ ಮಾಡಲಾರಂಭಿಸಿದ್ದರು. ಅವರು ನಿರ್ದೇಶನ ಮಾಡಿದ್ದ ಪಶ್ಚಾತ್ತಾಪ, ಅಪ್ಪ ಮತ್ತು ಐಯಾಮ್ ಗಾಂಧಿ ಕಿರುಚಿತ್ರಗಳೂ ಹೊರ ಬಂದವು. `ಮೈ ಡೆತ್ ನೋಟ್ ಎನ್ನುವ ೨೫ ನಿಮಿಷದ ಸಿನಿಮಾವೊಂದನ್ನು ಸಿದ್ದಪಡಿಸಿದ್ದರು. ಈ ನಡುವೆ ಐ ಎಂಬ ಚಿತ್ರ ಮಾಡಿದರಾದರೂ ನಿರ್ಮಾಪಕರೇ ಆರ್ಥಿಕ ಸಂಕಷ್ಟದಲ್ಲಿದ್ದುದರಿಂದ ಅದೂ ಅರ್ಧ ಕನಸಾಗಿ ಉಳಿದು ಹೋಗಿತ್ತು.
ಆದರೂ ಛಲ ಬಿಡದೆ ನಿರ್ದೇಶಕನಾಗುವ ಕನಸು ಹೊತ್ತು ಅಡ್ಡಾಡುತ್ತಿದ್ದ ಸುಭಾಷ್ ಅದು ಹೇಗೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂಪರ್ಕಕ್ಕೆ ಬಂದಿದ್ದರು. ಅವರೇ ಕುರುಕ್ಷೇತ್ರ ಚಿತ್ರ ಆರಂಭವಾದಾಗ ೨೦೧೭ ಜುಲೈ ೭ರಂದು ಸುಭಾಷ್‌ಗೆ ಅಸೋಸಿಯೇಟ್ ಆಗಲು ಅವಕಾಶವನ್ನೂ ಕೊಡಿಸಿದ್ದರು. ಯಾವ ದರ್ಶನ್ ಅವರ ಚಿತ್ರ ನಿರ್ದೇಶನ ಮಾಡಬೇಕೆಂಬ ಕನಸು ಹೊಂದಿದ್ದರೋ ಅದೇ ದರ್ಶನ್ ನಟಿಸಿದ ಕುರುಕ್ಷೇತ್ರ ಚಿತ್ರಕ್ಕೆ ಅಸೋಸಿಯೇಟ್ ಆಗಿ ಕೆಲಸ ಮಾಡೋ ಅವಕಾಶ ಗಿಟ್ಟಿಸಿಕೊಂಡಿರುವ ಸುಭಾಷ್ ಇದೀಗ ಸ್ವತಂತ್ರ ನಿರ್ದೇಶಕರಾಗಲು ತಯಾರಿ ಆರಂಭಿಸಿದ್ದಾರೆ.
ಒಂದು ಕಥೆಯನ್ನೂ ರೆಡಿ ಮಾಡಿಕೊಂಡಿರುವ ಸುಭಾಷ್, ಹೈದ್ರಾಬಾದಿನಿಂದ ಆರ್ಟಿಸ್ಟುಗಳನ್ನು ಕರೆಸಿ ಸ್ಟೋರಿ ಬೋರ್ಡ್ ರೆಡಿ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದಾರೆ. ಸದ್ಯ ಇವರು ತಮ್ಮ ಬಹು ಕಾಲದ ನಿರ್ದೇಶಕನಾಗೋ ಕನಸನ್ನು ನನಸು ಮಾಡಿಕೊಳ್ಳುವ ಸನ್ನಾಹದಲ್ಲಿದ್ದಾರೆ.
ದರ್ಶನ್ ಅವರ ಅಫಿಷಿಯಲ್ ಫ್ಯಾನ್ಸ್ ಪೇಜ್ ಎಂದೇ ಹೆಸರಾಗಿರುವ `ಡಿ ಕಂಪೆನಿ’ಯ ಅಡ್ಮಿನ್ ಆಗಿಯೂ ಸುಭಾಷ್ ಕೆಲಸ ನಿರ್ವಹಿಸುತ್ತಿದ್ದಾರೆ. ಛಾಲೆಂಜಿಂಗ್ ಸ್ಟಾರ್ ಅವರಿಗೆ ಸಂಬಂಧಿಸಿದ ಸಮಗ್ರ ವಿವರಗಳು ಈ ಫೇಸ್ ಬುಕ್ ಪೇಜ್‌ನಲ್ಲಿ ಅಪ್‌ಡೇಟ್ ಆಗುತ್ತಿರುತ್ತವೆ.
ದರ್ಶನ್ ಅವರು ನಟಿಸುತ್ತಿರುವ ಕುರುಕ್ರೇತ್ರ ಚಿತ್ರದಲ್ಲಿನ ಅದ್ಭುತ ಅವಕಾಶವನ್ನು ಶ್ರದ್ಧೆಯಿಂದ ಬಳಸಿಕೊಂಡ ತೃಪ್ತಿಯಲ್ಲಿರುವ ಸುಭಾಷ್ ಅವರ ಕನಸು ನನಸಾಗಲಿ.
#
Leave a Reply
You must be logged in to post a comment.