ನಟಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್ಗೆ ’ತಲೈವಿ’ ಎಂದು ನಾಮಕರಣ ಮಾಡಲಾಗಿದೆ. ವಿಷ್ಣು ಇಂದೂರಿ ನಿರ್ಮಾಣದಲ್ಲಿ ತಯಾರಾಗಲಿರುವ ಚಿತ್ರವನ್ನು ’ಮದರಾಸಿಪಟ್ಟಣಂ’ ಸಿನಿಮಾ ಖ್ಯಾತಿಯ ವಿಜಯ್ ಬಯೋಪಿಕ್ ನಿರ್ದೇಶಿಸಲಿದ್ದಾರೆ. ’ಬಾಹುಬಲಿ’ ಸರಣಿ ಸಿನಿಮಾ ಖ್ಯಾತಿಯ ವಿಜಯೇಂದ್ರಪ್ರಸಾದ್ ಅವರು ಚಿತ್ರಕಥೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ವಿಶೇಷ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಲಿರುವ ಚಿತ್ರದ ತಾರಾಬಳಗ ಮತ್ತು ತಂತ್ರಜ್ಞರ ಆಯ್ಕೆ ಮುಂದಿನ ದಿನಗಳಲ್ಲಿ ನಡೆಯಲಿದೆ.
ಹಾಗೆ ನೋಡಿದರೆ ಜಯಲಲಿತಾ ಜೀವನ ಆಧರಿಸಿ ಮತ್ತೆರೆಡು ಚಿತ್ರಗಳೂ ತಯಾರಾಗಲಿವೆ. ಜನಪ್ರಿಯ ನಿರ್ದೇಶಕ ಭಾರತೀರಾಜ ಮತ್ತು ಪ್ರಿಯದರ್ಶಿನಿ ನಿರ್ದೇಶನದಲ್ಲಿ ಜಯಲಲಿತಾ ಬಯೋಪಿಕ್ಗಳು ಸಿದ್ಧವಾಗಲಿವೆ. ಭಾರತೀರಾಜ ನಿರ್ದೇಶಿಸಲಿರುವ ಚಿತ್ರಕ್ಕೆ ಭಾರದ್ವಾಜ್ ಹಣ ಹೂಡಲಿದ್ದಾರೆ. ’ತಲೈ: ಪುರಚ್ಚಿ ತಲೈವಿ’ ಎಂದು ಚಿತ್ರದ ಶೀರ್ಷಿಕೆ ನಿಗಧಿಯಾಗಿದ್ದು, ಇಳಯರಾಜ ಸಂಗೀತ ಸಂಯೋಜಿಸಲಿದ್ದಾರೆ. ಐಶ್ವರ್ಯಾ ರೈ ಅಥವಾ ಅನುಷ್ಕಾ ಶೆಟ್ಟಿ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ಪ್ರಿಯದರ್ಶಿನಿ ನಿರ್ದೇಶನದ ಚಿತ್ರದಲ್ಲಿ ನಿತ್ಯಾ ಮೆನನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದ ಫಸ್ಟ್ ಲುಕ್ ಸಿನಿಪ್ರಿಯರ ಗಮನಸೆಳೆದಿದೆ. ದಕ್ಷಿಣದ ಖ್ಯಾತ ನಾಯಕನಟಿಯರಾದ ತ್ರಿಷಾ ಮತ್ತು ನಯನತಾರಾ ಅವರು ಬಯೋಪಿಕ್ನಲ್ಲಿ ನಟಿಸಲು ಉತ್ಸುಕರಾಗಿರುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ವಿಜಯ್ ನಿರ್ದೇಶನದ ’ತಲೈವಿ’ಗೆ ಇವರಲ್ಲೊಬ್ಬರು ಆಯ್ಕೆಯಾಗುವ ಸಂಭವವಿದೆ.
No Comment! Be the first one.