ಬಹುನಿರೀಕ್ಷಿತ ತಮಿಳು ಸಿನಿಮಾ ’ಸೂಪರ್ ಡಿಲಕ್ಸ್’ ಟ್ರೈಲರ್ ಬಿಡುಗಡೆಯಾಗಿದೆ. ವಿಜಯ್ ಸೇತುಪತಿ, ಸಮಂತಾ ಅಕ್ಕಿನೇನಿ, ಮಿಸ್ಕಿನ್, ಫಹಾದ್ ಫಾಸಿಲ್, ರಮ್ಯಕೃಷ್ಣ ಅಭಿನಯದ ಸಿನಿಮಾದಲ್ಲಿ ವಿಶಿಷ್ಟ ಕತೆ ಇದೆ ಎನ್ನುವುದನ್ನು ಟ್ರೈಲರ್ ಹೇಳುತ್ತದೆ. ಎರಡು ನಿಮಿಷಗಳ ಟ್ರೈಲರ್ ತೀವ್ರ ಕುತೂಹಲದ ಕಾಯ್ದಿರಿಸುವಲ್ಲಿ ಯಶಸ್ವಿಯಾಗುತ್ತದೆ. ವಿಜಯ್ ಸೇತುಪತಿ ಪಾತ್ರದೊಂದಿಗೆ ಟ್ರೈಲರ್ ಬಿಚ್ಚಿಕೊಳ್ಳುತ್ತದೆ. ಚಿತ್ರದಲ್ಲಿ ವಿಜಯ್ ತೃತೀಯ ಲಿಂಗಿ ’ಶಿಲ್ಪ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ತ್ಯಾಗರಾಜನ್ ಕುಮಾರರಾಜ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರವಿದು.
ಟ್ರೈಲರ್‌ನಲ್ಲಿ ಶಿಲ್ಪ (ವಿಜಯ್ ಸೇತುಪತಿ) ನಿರೂಪಣೆಯಲ್ಲಿ ಕತೆ ತೆರೆದುಕೊಳ್ಳುತ್ತದೆ. ಗುಡ್ಡಗಾಡು ಪ್ರದೇಶದಲ್ಲಿ ಹುಲಿಯಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ವ್ಯಕ್ತಿಯ ಕತೆಯಿದು. ಒಂದು ರೂಪಕದಂತೆ ನಿರೂಪಣೆಯಿದ್ದು, ಕೆಲವೊಮ್ಮೆ ವೇಗವಾಗಿ ಮತ್ತೆ ಕೆಲವು ಬಾರಿ ನಿಧಾನಗತಿಯಲ್ಲಿ ಹಿನ್ನೆಲೆ ಧ್ವನಿ ಕೇಳಿಸುತ್ತಾ ನೋಡುಗರಲ್ಲಿ ಕುತೂಹಲ ಕೆರಳಿಸುತ್ತದೆ. ನಿರೂಪಕನಾಗಿ ವಿಜಯ್ ವಿವಿಧ ಸ್ತರದ ವ್ಯಕ್ತಿಗಳನ್ನು ಪರಿಚಯಿಸುತ್ತಾ ಹೋಗುತ್ತಾರೆ. ಇವರೆಲ್ಲರೂ ತೊಂದರೆಗೆ ಸಿಲುಕಿದವರಂತೆ ಗೋಚರಿಸುತ್ತಾರೆ. ’ಅರಣ್ಯ ಕಾಂಡಂ’ ತಮಿಳು ಚಿತ್ರದೊಂದಿಗೆ ಭರವಸೆ ಮೂಡಿಸಿದ್ದ ತ್ಯಾಗರಾಜನ್ ನಿರ್ದೇಶನದ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆಯಿದೆ. ಸುದೀರ್ಘ ಅವಧಿಯ ನಿರ್ಮಾಣದ ಚಿತ್ರ ಮಾರ್ಚ್ ೨೯ರಂದು ತೆರೆಕಾಣಲಿದೆ.