ಮುಸ್ಲಿಂ ಸಮುದಾಯದಲ್ಲಿ ಬಳಕೆಯಲ್ಲಿರುವ “ತಲಾಕ್ ತಲಾಕ್ ತಲಾಕ್” ಎನ್ನುವ ವಿಚಾರವೇ ಈಗ ಸಿನಿಮಾದ ಶೀರ್ಷಿಕೆಯಾಗಿದೆ. ಈ ವಿಚಾರದ ಕುರಿತಾಗಿ ಸಾಕಷ್ಟು ವರ್ಷಗಳಿಂದ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಬರುತ್ತಿದ್ದ ಮಾಹಿತಿಗಳನ್ನೆಲ್ಲಾ ಒಂದೆಡೆ ಕಲೆಹಾಕಿರುವ ಹಿರಿಯ ನಿರ್ದೇಶಕ ಎನ್. ವೈದ್ಯನಾಥ ಪ್ರಥಮ ಬಾರಿಗೆ ನಿರ್ಮಾಣ ಮಾಡಿ, ತಮ್ಮ ಇಬ್ಬರು ಮಕ್ಕಳನ್ನೇ ಪಾತ್ರಧಾರಿಗಳನ್ನಾಗಿಸಿ “ತಲಾಕ್ ತಲಾಕ್ ತಲಾಕ್” ಚಿತ್ರವನ್ನು ರೂಪಿಸಿದ್ದಾರೆ.
ಸಾಮಾಜಿಕ ಸಂದೇಶವನ್ನು ಸಾರುವ ಈ ಸಿನಿಮಾ ಈಗಾಗಲೇ ಕೆಲವು ರಾಷ್ಟ್ರ ಹಾಗೂ ರಾಜ್ಯ ಸಿನಿಮೋತ್ಸವಗಳಲ್ಲಿ ಸ್ಪರ್ಧಿಸಿದೆ. ಸಾಕಷ್ಟು ಗೌರವಗಳನ್ನೂ ತನ್ನದಾಗಿಸಿಕೊಂಡಿದೆ. ಕಳೆದ ವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೂಡ ಚಿತ್ರ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿತ್ತು. ಕೊರೋನಾ ಇಲ್ಲದಿದ್ದರೆ ಈ ಸಿನಿಮಾ ಇಷ್ಟೊತ್ತಿಗೆ ಬಿಡುಗಡೆಯೂ ಆಗಿರುತ್ತಿತ್ತು. ತಡವಾದರೂ ಪರವಾಗಿಲ್ಲ ಎಂದು ಈಗ ಪ್ರೇಕ್ಷಕರ ಮುಂದೆ ಬರಲು ʻತಲಾಕ್ʼ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ.
ಭಾರತ ದೇಶದ ನೂತನ ಕಾಯ್ದೆ ಆಧರಿಸಿ ನೂರ್ ಜಹೀರ್ ಅವರು ಬರೆದ ಪುಸ್ತಕವನ್ನು ಕನ್ನಡದಲ್ಲಿ ಅಬ್ದುಲ್ ರೆಹಮಾನ್ ಪಾಶಾ ಅವರು ಅನುವಾದ ಮಾಡಿದ್ದರು. ಈ ಕಥೆಗೆ ನಿರ್ದೇಶಕ ಎ. ವೈಧ್ಯನಾಥ್ ಚಿತ್ರಕಥೆ ರಚಿಸಿದ್ದಾರೆ. ವೈಧ್ಯನಾಥ್ ಅವರ ಮಡದಿ ಶ್ರೀಮತಿ ಎಸ್. ಎಸ್. ಸುಭಾಷಿಣಿ ಈ ಚಿತ್ರಕ್ಕೆ ಜಂಟಿ ನಿರ್ಮಾಪಕಿಯಾಗಿ ತೊಡಗಿಸಿಕೊಂಡಿದ್ದಾರೆ.
ಕಳೆದ 40 ವರ್ಷಗಳಲ್ಲಿ 50ಕ್ಕೂ ಹೆಚ್ಚು ಚಿತ್ರಗಳಿಗೆ ಸಹಾಯಕ ನಿರ್ದೇಶಕ ಆಗಿ 2000 ರಲ್ಲಿ ‘ದಂಡನಾಯಕ’ ಚಿತ್ರದಿಂದ ಸ್ವತಂತ್ರ ನಿರ್ದೇಶನ ಮಾಡಿದ ವೈಧ್ಯನಾಥ್ ಅವರು ಹಲವಾರು ಸಾಕ್ಷ್ಯ ಚಿತ್ರಗಳನ್ನು ಸಹ ಹೊರ ತಂದಿದ್ದಾರೆ. ಈ ಚಿತ್ರದಲ್ಲಿ ಮುಸ್ಲಿಂ ಮಹಿಳೆ “ತಲಾಕ್ ತಲಾಕ್ ತಲಾಕ್” ಎಂದು ಹೇಳಿದ ನಂತರ ಅನುಭವಿಸುವ ಯಾತನೆಯನ್ನು ನಿರ್ದೇಶಕರು ಮನ ಮಿಡಿಯುವಂತೆ ಕಟ್ಟಿಕೊಟ್ಟಿದ್ದಾರಂತೆ. “ತಲಾಕ್ ತಲಾಕ್ ತಲಾಕ್” ಈಗಾಗಲೇ ಯು.ಕೆ, ಆಸ್ಟ್ರೇಲಿಯ , ಚೆನ್ನೈ ಫಿಲ್ಮೋತ್ಸವಗಳಲ್ಲಿ ಪಾಲ್ಗೊಂಡು ಮೆಚ್ಚುಗೆ ಗಳಿಸಿದೆ. ಈ ಚಿತ್ರವನ್ನ ಮುಂದಿನ ತಿಂಗಳು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ತಯಾರಿ ವೈಧ್ಯನಾಥ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲಿಂ ಸಮುದಾಯದ ಕುರಿತು ಚಿತ್ರ ಮಾಡುವಾಗ ವೈಧ್ಯನಾಥ ಬಹಳ ಎಚ್ಚರ ವಹಿಸಿ ಆಯಾ ವ್ಯಕ್ತಿಗಳ ಜೊತೆ ಮಾತನಾಡಿ ಕೆಲವು ಸೂಕ್ಷ್ಮ ವಿಚಾರಗಳನ್ನು ತೆರೆಯ ಮೇಲೆ ತಂದಿದ್ದಾರೆ.
ಹಿರಿಯ ನಟ ಶ್ರೀನಿವಾಸ ಮೂರ್ತಿ ಮೌಲ್ವಿಯ ಪಾತ್ರದಲ್ಲಿ ಮೇಕಪ್ ರಾಮಕೃಷ್ಣ ಅವರಿಂದ ಮೇಕಪ್ ಹಾಕಿಸಿಕೊಂಡು ಬಂದು ನಿಂತಾಗ ನಿರ್ದೇಶಕರೆ ಬೆರಗಾಗುವಂತೆ ಇದ್ದ ಕ್ಷಣವನ್ನು ಮಾಧ್ಯಮದ ಮುಂದೆ ಹೇಳಿಕೊಂಡರು. ಶ್ರೀನಿವಾಸ ಮೂರ್ತಿ ಸಹ ವೈಧ್ಯನಾಥ ಅವರಂತೆ ಶ್ರೀಸಿದ್ದಲಿಂಗಯ್ಯ ಗರಡಿ ಇಂದ ಬಂದವರು. 45 ವರ್ಷಗಳ ಸ್ನೇಹ ಅವರನ್ನು ಈ ಚಿತ್ರಕ್ಕೆ ಕರೆತಂದಿದೆ. ಈ ಸಿನಿಮಾ ಇವತ್ತಿಗೆ ಬಹಳ ಹತ್ತಿರವಾಗಿದೆ. ಆರ್. ಜೆ. ನೇತ್ರ ಅವರ ಪಾತ್ರ ನಿರ್ವಹಣೆ ಚನ್ನಾಗಿ ಬಂದಿದೆ. ಜೊತೆಗೆ ವೈಧ್ಯನಾಥ್ ಅವರ ಅವಳಿ ಮಕ್ಕಳು ಅಮೆರಿಕದಲ್ಲಿ ನೆಲಸಿರುವವರು ಚನ್ನಾಗಿ ನಟಿಸಿದ್ದಾರೆ ಎಂದು ಶ್ಲಾಘಿಸಿದರು ಶ್ರೀನಿವಾಸಮೂರ್ತಿ.
ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕೆ ಮತ್ತಷ್ಟು ಮೆರಗು ತಂದಿದೆ ಎಂದರು ಹಿರಿಯ ನಟ ಶ್ರೀನಿವಾಸಮೂರ್ತಿ. ಯುವ ನಟಿ ಆರ್. ಜೆ .ನೇತ್ರ ಅವರಿಗೆ ಈ ಪಾತ್ರ ವಿಶೇಷ ಹಾಗೂ ವಿಭಿನ್ನ. ಮುಸ್ಲಿಂ ಮಹಿಳೆ ತಲಾಕ್ ಹೇಳಿಸಿಕೊಂಡ ತಕ್ಷಣ ಆಗುವ ನೋವುಗಳನ್ನು ಇಲ್ಲಿ ಬಣ್ಣಿಸಲಾಗಿದೆ. ನಾನಂತೂ ಈ ಚಿತ್ರವನ್ನೂ ನನ್ನ ಸ್ಮೃತಿ ಪಟಲದಲ್ಲಿ ಇಟ್ಟು ಕೊಂಡಿರುತ್ತೇನೆ. ಈ ಚಿತ್ರಕ್ಕೆ ಪ್ರೋತ್ಸಾಹ ಆಗತ್ಯ ಎಂದು ವಿವರಿಸಿದರು. ಇದೊಂದು ಅತ್ಯುತ್ತಮ ಕಥಾ ಹಂದರ ಹೊಂದಿರುವ ಉತ್ತಮ ನಿರೂಪಣೆಯ ಚಿತ್ರ ಎಂದು ಛಾಯಾಗ್ರಾಹಕ ಅಶೋಕ್ ಕಶ್ಯಪ್ ಹೇಳಿಕೊಂಡರು.
ರಾಷ್ಟ್ರ ಪ್ರಶಸ್ತಿ ವಿಜೇತ ಸಂಕಲನಕಾರ ಸುರೇಶ್ ಅರಸ್ ಈ ಸಂದರ್ಭದಲ್ಲಿ ಹಾಜರಿದ್ದರು. ಶ್ರೀಮತಿ ಸುಭಾಷಿಣಿ ವೈಧ್ಯನಾಥ ಅವರು ಪತ್ರಿಕಾ ಘೋಷ್ಟಿಯಲ್ಲಿ ನೆರದವರಿಗೆ ಧನ್ಯವಾದ ಅರ್ಪಿಸಿದರು. ತಲಾಕ್ ತಲಾಕ್ ತಲಾಕ್ ತಾರಾಗಣದಲ್ಲಿ ಸುಚೇತನ ಸ್ವರೂಪ್ ವೈಧ್ಯನಾಥ, ಸುನೇತ್ರ ನಾಗರಾಜ, ಶಾಮಂತ್ ವೈಧ್ಯ, ಶ್ರೀನಿವಾಸಮೂರ್ತಿ, ರವಿ ಭಟ್, ಶಿವಮೊಗ್ಗ ವೈಧ್ಯನಾಥ, ಕೆ. ವಿ. ಮಂಜಯ್ಯ, ಪ್ರವೀಣ್, ಹರೀಶ್ ಕುಟ್ಟಿ, ವಿನಾಯಕ, ಅರುಣ್ ಕುಮಾರ್, ವೀಣ ಸುಂದರ್, ವಿಜಯಲಕ್ಷ್ಮಿ, ತೇಜಸ್ವಿನಿ, ವಿದ್ಯ ಶ್ರೀನಿವಾಸ್, ಪದ್ಮ ಜೋಯಿಸ್, ಲಕ್ಷ್ಮಿ, ಸೌಜನ್ಯಶೆಟ್ಟಿ, ಪಲ್ಲವಿ ಹಾಗೂ ಇತರರು ಅಭಿನಯಿಸಿದ್ದಾರೆ. ಪ್ರವೀಣ್ ಗೋಡ್ಕಿಂಡಿ ಸಂಗೀತ, ಮೇಕಪ್ ರಾಮಕೃಷ್ಣ ಅವರ ಮೇಕಪ್, ಮಧು ಬೆಳಕವಡಿ ಅವರ ಸಂಭಾಷಣೆ ನೆರವು ಸಹ ತಂತ್ರಜ್ಞರ ಪಟ್ಟಿಯಲ್ಲಿ ಸೇರಿದೆ. ಸದ್ಯ ಎಲ್ಲಾ ಅಂದುಕೊಂಡಂತೆ ನಡೆಯುತ್ತಿದ್ದು , ಚಿತ್ರ ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ.
No Comment! Be the first one.