ಚಂದ್ರಶೇಖರ ಬಂಡಿಯಪ್ಪ ನಿರ್ದೇಶನದ ತಾರಕಾಸುರ ಚಿತ್ರ ಯಶಸ್ವಿಯಾಗಿ ಐವತ್ತು ದಿನ ಪೂರೈಸಿಕೊಂಡಿದೆ. ನರಸಿಂಹಲು ನಿರ್ಮಾಣದ, ವೈಭವ್ ನಾಯಕನಾಗಿ ನಟಿಸಿದ್ದ ತಾರಕಾಸುರ ಹೊಸಾ ಬಗೆಯ ಕಥೆಯ ಮೂಲಕವೇ ಪ್ರೇಕ್ಷಕರನ್ನು ಸೆಳೆದುಕೊಂಡಿತ್ತು. ಭರ್ಜರಿ ಪ್ರದರ್ಶನದೊಂದಿಗೇ ಓಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾವನ್ನ ಪ್ರೇಕ್ಷಕರು ಐವತ್ತನೇ ದಿನದಾಚೆಗೆ ಪ್ರೀತಿಯಿಂದಲೇ ದಾಟಿಸಿದ್ದಾರೆ!
ಇದು ನಿಜಕ್ಕೂ ಭರಪೂರ ಗೆಲುವು. ಭಿನ್ನ ಬಗೆಯ ಆಲೋಚನೆಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕಡೆಗಣಿಸೋದಿಲ್ಲ ಎಂಬುದಕ್ಕೆ ತಾರಕಾಸುರನ ಗೆಲುವಿನ ವೈಭವಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಈ ಸಿನಿಮಾ ಮೂಲಕವೇ ನಾಯಕ ವೈಭವ್ ಕೂಡಾ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾದ ನೆಲೆ ಕಂಡುಕೊಂಡಿದ್ದಾರೆ. ಹೊಸಾ ಹುಡುಗ ವೈಭವ್ ನಟನೆಯಲ್ಲಿಯೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇದೀಗ ತಾರಕಾಸುರ ಐವತ್ತನೇ ದಿನದಾಚೆಗೆ ಯಶಸ್ಸಿನ ಓಟ ಮುನ್ನಡೆಸಿರೋದಕ್ಕೆ ಮೂಲ ಕಾರಣ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪನವರ ವಿಶಿಷ್ಟವಾದ ಗ್ರಹಿಕೆ. ಈ ಹಿಂದೆ ರಥಾವರ ಚಿತ್ರದಲ್ಲಿಯೂ ರಗಡ್ ಕಥೆ ಹೇಳಿದ್ದ ಬಂಡಿಯಪ್ಪ ಪ್ರೇಕ್ಷಕರೆದುರು ಬೇರೆಯದ್ದೇ ಲೋಕವೊಂದನ್ನು ಅನಾವರಣಗೊಳಿಸಿದ್ದರು. ಇದೀಗ ತಾರಕಾಸುರ ಮೂಲಕ ಬುಡುಬಡಿಕೆ ಜನಾಂಗದ ಒಳನೋಟಗಳ ಜೊತೆಗೆ ಮರಳು ಮಾಫಿಯಾವನ್ನೂ ಬೆರೆಸಿ ರೋಚಕವಾಗಿ ತೆರೆದಿಟ್ಟಿದ್ದಾರೆ. ಖ್ಯಾತ ಹಾಲಿವುಡ್ ನಟ ಡ್ಯಾನಿ ಸಫಾನಿಯವರ ರಾಕ್ಷಸ ನಟನೆಯೂ ಸೇರಿದಂತೆ ಎಲ್ಲವೂ ತಾರಕಾಸುರನ ಗೆಲುವಿಗೆ ಪೂರಕವಾಗಿದೆ.
#
No Comment! Be the first one.