THARINI

ಮಾರ್ಚ್‌ 29ರಂದು ಥಿಯೇಟರಿಗೆ….

ಕನ್ನಡ ಚಿತ್ರರಂಗದಲ್ಲಿ ಕೆಲವು ಸಿನಿಮಾಗಳು ತಮ್ಮ ಬಿಗ್‌ ಬಜೆಟ್‌, ಬಿಗ್‌ ಸ್ಟಾರ್‌ ಕಾಸ್ಟಿಂಗ್‌ ಮೂಲಕ ಗಮನ ಸೆಳೆದರೆ, ಇನ್ನು ಕೆಲವು ಸಿನಿಮಾಗಳು ತಮ್ಮ ಕಂಟೆಂಟ್‌ ಮತ್ತು ಮೇಕಿಂಗ್‌ ಮೂಲಕವೇ ಗಮನ ಸೆಳೆಯುತ್ತವೆ. ಇತ್ತೀಚೆಗೆ ಹೀಗೆ ತನ್ನ ಕಂಟೆಂಟ್‌ ಮತ್ತು ಮೇಕಿಂಗ್‌ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ “ತಾರಿಣಿ’.

ಕೆಲ ತಿಂಗಳ ಹಿಂದಷ್ಟೇ ರಾಜ್ಯದ ಅತಿದೊಡ್ಡ ಲಿಂಗಪತ್ತೆ, ಭ್ರೂಣಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು ಅನೇಕರಿಗೆ ಗೊತ್ತಿರಬಹುದು. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಲಿಂಗಪತ್ತೆ, ಭ್ರೂಣಹತ್ಯೆ ಮಾಫಿಯಾ ರಾಜಕೀಯ ಮತ್ತು ಸಾಮಾಜಿಕವಾಗಿ ದೊಡ್ಡ ಸುದ್ದಿಯಾಗಿತ್ತು. ಇದೇ ಲಿಂಗಪತ್ತೆ, ಭ್ರೂಣಹತ್ಯೆ ವಿಷಯವನ್ನು ಇಟ್ಟುಕೊಂಡು ತಯಾರಾ ಗಿರುವ “ತಾರಿಣಿ’ ಸಿನಿಮಾ ಇದೇ ಮಾರ್ಚ್‌ 29ರಂದು ಥಿಯೇಟರಿಗೆ ಬರುತ್ತಿದೆ.

ಈಗಾಗಲೇ ಅನೇಕ ಸದ್ದಿಲ್ಲದೆ ಹತ್ತಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ, “ತಾರಿಣಿ’ ವಿವಿಧ ವಿಭಾಗಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ತನ್ನದಾಗಿಸಿ ಕೊಂಡಿದೆ. ಈ ಸಿನಿಮಾದ ಇನ್ನೊಂದು ವಿಶೇಷವೆಂದರೆ, ಮೊದಲ ಬಾರಿಗೆ ನಟಿ ಮಮತಾ ರಾಹುತ್‌ ನಿಜ ಜೀವನದಲ್ಲಿ ತಾನು ಗರ್ಭಿಣಿಯಾಗಿದ್ದಾಗಲೇ, ತೆರೆಮೇಲೆ ಕೂಡ “ತಾರಿಣಿ’ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲೇ ಕಾಣಿಸಿಕೊಂಡಿರುವುದು.
ಈ ಹಿಂದೆ “ಕೃಷ್ಣ ಗಾರ್ಮೆಂಟ್ಸ್‌’, “ದಾರಿ ಯಾವುದಯ್ಯ ವೈಕುಂಠಕ್ಕೆ’, “ಬ್ರಹ್ಮಕಮಲ’ ಮೊದಲಾದ ಸದಭಿರುಚಿ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿ ಕೊಂಡಿ ರುವ ಸಿದ್ದು ಪೂರ್ಣಚಂದ್ರ ನೈಜ ಘಟನೆ ಪ್ರೇರಿತ “ತಾರಿಣಿ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳಿದ್ದಾರೆ.

ಮೂಲತಃ ವೃತ್ತಿಯಲ್ಲಿ ವೈದ್ಯರಾಗಿರುವ ಮಮತಾ ರಾಹುತ್‌ ಪತಿ ಡಾ. ಸುರೇಶ್‌ ಕೋಟ್ಯಾನ್‌ ಚಿತ್ರಾಪು “ಶ್ರೀಗಜನಿ ಪ್ರೊಡಕ್ಷನ್ಸ್‌’ ಬ್ಯಾನರ್‌ನಲ್ಲಿ “ತಾರಿಣಿ’ ಸಿನಿಮಾ ವನ್ನು ನಿರ್ಮಿಸಿದ್ದಾರೆ. “ನಮ್ಮ ಸುತ್ತಮುತ್ತ ನೋಡಿದ ವಿಷಯಗಳು ಮತ್ತು ನನ್ನ ವೈದ್ಯಕೀಯ ವೃತ್ತಿ ಈ ಸಿನಿಮಾ ಮಾಡಲು ಕಾರಣ.

ಒಂದಷ್ಟು ಆದರ್ಶವನ್ನು ಇಟ್ಟುಕೊಂಡು, ಶಿಸ್ತುಬದ್ಧವಾಗಿ, ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಈ ಸಿನಿಮಾ ಮಾಡಿದ್ದೇವೆ. ಹಾಗಂತ ಈ ಸಿನಿಮಾದಲ್ಲಿ ಯಾವುದೇ ಉಪದೇಶವಿಲ್ಲ. “ತಾರಿಣಿ’ ಭಾವನಾತ್ಮಕವಾಗಿ ನೋಡುಗರಿಗೆ ಕನೆಕ್ಟ್ ಆಗುತ್ತದೆ. ನಮಗೇ ಗೊತ್ತಿಲ್ಲದಂತೆ, ನಮ್ಮನ್ನು ಆವರಿಸಿಕೊಂಡು ಭ್ರೂಣ ಹತ್ಯೆಯ ಪಾಪಪ್ರಜ್ಞೆ ಕಾಡುವಂತೆ ಮಾಡುತ್ತದೆ’ ಎನ್ನುವುದು “ತಾರಿಣಿ’ ಬಗ್ಗೆ ನಿರ್ಮಾಪಕ ಡಾ. ಸುರೇಶ್‌ ಕೋಟ್ಯಾನ್‌ ಮಾತು.
ಹೆಣ್ಣು ಭ್ರೂಣ ಹತ್ಯೆ ಮಾಡಬೇಡಿ ಎಂಬ ಸಾಮಾಜಿಕ ಸಂದೇಶವಿರುವ “ತಾರಿಣಿ’ ಸಿನಿಮಾದಲ್ಲಿ ಮಮತಾ ರಾಹುತ್‌ ಜೊತೆಗೆ ರೋಹಿತ್‌, ಭವಾನಿ ಪ್ರಕಾಶ್‌, ಸುಧಾ ಪ್ರಸನ್ನ, ಬೇಬಿ ನಿಶಿತಾ, ಬೇಬಿ ರಿಧಿ, ಪ್ರಿನ್ಸ್‌ ಜಿತಿನ್‌ ಕೋಟ್ಯಾನ್‌ ಅಭಿನಯಿಸಿದ್ದಾರೆ

Comments

Leave a Reply