ಕೊಟ್ಟ ಮಾತಿಗೆ ತಪ್ಪಿ ನಡೆದರೆ…

ಯಾವುದೇ ಕ್ಷೇತ್ರದಲ್ಲಿರಲಿ ಒಂದೊಂದು ಹೆಜ್ಜೆಯನ್ನೂ ಹುಷಾರಾಗಿಡಬೇಕು. ʻನಂಬಿಕೆʼಅನ್ನೋ ಹೆಸರಲ್ಲಿ ಯಾರು ಯಾರನ್ನು ಯಾವಾಗ ಮಣ್ಣು ಮುಕ್ಕಿಸಿಬಿಡುತ್ತಾರೋ ಗೊತ್ತಾಗೋದಿಲ್ಲ. ಅದರಲ್ಲೂ ಸಿನಿಮಾ ಕ್ಷೇತ್ರವಿದೆಯಲ್ಲಾ? ಚೂರು ಗಮನ ಕೆಡಿಸಿಕೊಂಡರೂ ಗಟಾರಕ್ಕೆ ಬಿದ್ದಂಗೇ… ಸರಿಸುಮಾರು ಎಂಟು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಕಾಲಿಟ್ಟ ನಿರ್ಮಾಪಕರೊಬ್ಬರು ತುಂಬಾ ಸರಳ, ಸುಂದರ  ಚಿತ್ರದಲ್ಲೇ ಅತ್ಯದ್ಭುತ ಗೆಲುವನ್ನು ಕಂಡರು. ಸೂಪರ್ ಹಿಟ್ ಹಾಡೊಂದು ಅವರ ನಸೀಬು ಬದಲಿಸಿತ್ತು. ಮಾಡಿದ ಮೊದಲ ಸಿನಿಮಾನೇ ಈ ಮಟ್ಟಕ್ಕೆ ಹಣ, ಹೆಸರು, ಜನಪ್ರಿಯತೆ ಎಲ್ಲವನ್ನೂ ತಂದುಕೊಟ್ಟಿತ್ತು. ಒಳ್ಳೆ ಟೀಮು ಫಾರ್ಮಾಗಿತ್ತು. ಪ್ರಾಮಾಣಿಕ, ಕುಶಾಲಮತಿಗಳು ಅವರೊಟ್ಟಿಗಿದ್ದರು. ಮತ್ತೆ ಮಾಡಿದ ಚಿತ್ರಗಳೂ ಒಂದು ಲೆವೆಲ್ಲಿಗೆ ಲಾಭವನ್ನೇ ತಂದುಕೊಟ್ಟವು. ಇವರು ಸಿನಿಮಾವೊಂದನ್ನು ಶುರು ಮಾಡಿದರೆ ಸಾಕು ಸ್ಯಾಟಲೈಟು, ಡಬ್ಬಿಂಗು ಎಲ್ಲಾ ವ್ಯವಹಾರ ಮುಗಿದುಬಿಡುತ್ತಿತ್ತು. ಆ ಮಟ್ಟಿಗಿನ ನಂಬಿಕೆ ಉಳಿಸಿಕೊಂಡಿದ್ದರು.

ದೊಡ್ಡ ಹೀರೋ ನಟನೆಯ ಒಂದು ಬಿಗ್ ಬಜೆಟ್ಟಿನ ಸಿನಿಮಾದ ಜೊತೆಗೆ ಮತ್ತೊಂದು ಮೀಡಿಯಮ್ ಲೆವೆಲ್ಲಿನ ಚಿತ್ರವನ್ನು ಒಟ್ಟೊಟ್ಟಿಗೇ ಆರಂಭಿಸಿದರು.  ಏಕಕಾಲಕ್ಕೆ ಮೂರು ನಾಲ್ಕು ಸಿನಿಮಾಗಳನ್ನು ಶುರು ಮಾಡುವ ಶೋಕಿಗೆ ಬಿದ್ದರು. ಬುದ್ದಿವಂತ ನಿರ್ಮಾಪಕರ ಅತೀ ಬುದ್ದಿವಂತಿಕೆ ಬಹುಶಃ ಕೈಕೊಟ್ಟಿತ್ತು. ಕೋವಿಡ್ಡು ಬಂದು ಎಲ್ಲಂದರಲ್ಲಿ ತಿವಿಯಿತು. ಸಿನಿಮಾ ಅಂದಮೇಲೆ ಸಾಲ ಇಲ್ಲದೇ ಆಗೋ ಮಾತಲ್ಲ. ಇವರ ಸಾಲಕ್ಕೂ ಬಡ್ಡಿ ಚಕ್ರಬಡ್ಡಿಗಳು ಬೆಳೆದವು.

ಸ್ಫಟಿಕದಂತೆ ಹೊಳಪು ಹೊಂದಿದ್ದ ಪ್ರೊಡ್ಯೂಸರ್ ಅದೆಲ್ಲಿ ಯಾಮಾರಿದರೋ? ಬೇಕಂತಲೇ ಎಡವಿದರೋ ಗೊತ್ತಿಲ್ಲ. ತೀರಾ ಕಳಪೆ ಗುಣಮಟ್ಟದ ಸಿನಿಮಾಗಳನ್ನು ಸುತ್ತಲು ಆರಂಭಿಸಿದರು. ಹೇಗಿದ್ದರೂ ಮಾರಿಬಿಡಬಹುದು ಎನ್ನುವ ಹಳೇ ಚಮಕ್ಕು ವರ್ಕೌಟ್ ಆಗಲಿಲ್ಲ. ಇವರನ್ನು ನಂಬಿ, ವಾಹಿನಿಯೊಂದು ಎರಡು ಸಿನಿಮಾಗೆ ಸೇರಿಸಿ ಬರೋಬ್ಬರಿ ಐದೂಕಾಲು ಕೋಟಿಯಷ್ಟು  ದುಡ್ಡನ್ನು ಫೀಡ್ ಮಾಡಿತ್ತು. ಅದರಲ್ಲಿ ಒಂದು ಹೊರಬಂತು. ಕಳಪೆ ಸಬ್ಜೆಕ್ಟಿನ ಆ ಸಿನಿಮಾವನ್ನು ಜನ ಮೂಸಿ ನೋಡಲಿಲ್ಲ. ಮತ್ತೊಂದು ಸಿನಿಮಾವನ್ನು ಮುಗಿಸಿ ಕೊಡಲೂ ಇಲ್ಲ. ಈಗ ವಾಹಿನಿಯವರು ಕೊಟ್ಟ ವಾಯ್ದೆಯೆಲ್ಲಾ ಮುಗಿದುಹೋಗಿದೆ. ಸಿನಿಮಾ ಮುಗಿಸಿ ತಂದುಕೊಡಬೇಕು ಇಲ್ಲವೇ ಮೂರೂಕಾಲು ಕೋಟಿಯನ್ನು ವಾಪಾಸು ತಂದು ಮಡಗಬೇಕು. ಎರಡನ್ನೂ ಮಾಡದ ಪ್ರೊಡ್ಯೂಸರು ಸಂಬಂಧಪಟ್ಟವರ ಕಾಲೆತ್ತದೇ ಕೈಯೆತ್ತುವ ಪ್ಲಾನು ಮಾಡುತ್ತಿದ್ದಾರೆ ಅನ್ನೋ ವಿಚಾರ ಈಗ ಊರಿಡೀ ಪಸರ್ ಆಗಿದೆ.

ಹಳೇ ಕಮಿಟ್ ಮೆಂಟಿಗೆ ಜೈ ಅಂದು ಹೊಸಬರಿಗೆ ಸಿನಿಮಾ ಮಾರಿಬಿಡುವ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಾರಂತೆ. ಇದು ಎಷ್ಟು ನಿಜವೋ ಗೊತ್ತಿಲ್ಲ. ಆದರೆ, ಗಾಂಧಿ ನಗರದಲ್ಲಿ ಎತೆಂಥವರನ್ನೋ ಕಂಡಿರುವ, ನವರಂಗಿ ಆಟ ಆಡಲು ಬಂದವರ ನಡ ಮುರಿದು ಕಳಿಸಿರುವ ಮಂದಿ ಈ ನಿರ್ಮಾಪಕರು ನಿಯತ್ತು ಮರೆತರೆ ಸುಮ್ಮನೆ ಬುಡ್ತಾರಾ? ಸಭ್ಯರಂತೆ ಕಾಣುವ ಪ್ರೊಡ್ಯೂಸರ್ ಸಾಹೇಬ್ರು ಎಚ್ಚರ ವಹಿಸಲಿ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಉಳಿಸಿಕೊಂಡಿರುವವರು  ಮಸಿ ಬಳೆದುಕೊಳ್ಳಬಾರದು ಎನ್ನುವ ಕಾಳಜಿಯಷ್ಟೇ ನಮ್ಮದು.


Posted

in

by

Tags:

Comments

Leave a Reply