ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರ ಬಿಡುಗಡೆಯಾಗೋ ದಿನಾಂಕ ಪಕ್ಕಾ ಆಗಿದೆ. ಇದೇ ತಿಂಗಳ ಇಪ್ಪತ್ತೇಳನೇ ತಾರೀಕಿನಂದು ಈ ಚಿತ್ರ ಬಿಡುಗಡೆಯಾಗಲಿರೋದರಿಂದ ಶಿವಣ್ಣನ ಅಭಿಮಾನಿಗಳ ಸಂಭ್ರಮ ತಾರಕಕ್ಕೇರಿದೆ. ಅತ್ತ ಕಿಚ್ಚಾ ಸುದೀಪ್ ಅಭಿಮಾನಿಗಳು ಕೂಡಾ ಈ ಬಗ್ಗೆ ಥ್ರಿಲ್ ಆಗಿದ್ದಾರೆ.
ಚಿತ್ರ ಬಿಡುಗಡೆಯಾಗಲು ಇನ್ನೊಂದು ವಾರ ಬಾಕಿ ಇದ್ದರೂ ಕೂಡಾ ಅಭಿಮಾನಿಗಳೆಲ್ಲ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ಮುಖ್ಯವಾದ ಥೇಟರುಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ದಿ ವಿಲನ್ ಚಿತ್ರಕ್ಕೆ ಅದ್ದೂರಿ ಸ್ವಾಗತ ಕೋರಲು ತಯಾರಿಗಳು ಭರದಿಂದ ಸಾಗುತ್ತಿವೆ. ಇದಕ್ಕಾಗಿ ಆಳೆತ್ತರದ ಕಟೌಟುಗಳೂ ಸೇರಿದಂತೆ ಡಿಫರೆಂಟಾದ ಬ್ಯಾನರುಗಳೂ ಸಿದ್ಧಗೊಳ್ಳುತ್ತಿವೆ.
ಆರಂಭದ ದಿನಗಳಲ್ಲಿ ಈ ಚಿತ್ರದ ಬಗ್ಗೆ ಖುದ್ದು ಅಭಿಮಾನಿಗಳಲ್ಲಿಯೇ ಅಸಮಾಧಾನ ಇದ್ದದ್ದು ನಿಜ. ಶಿವಣ್ಣನ ಅಭಿಮಾನಿಗಳಂತೂ ಅವರ ಗೆಟಪ್ಪಿನ ಬಗ್ಗೆ ತಕರಾರೆತ್ತಿದ್ದರು. ಆದರೆ ಒಂದು ಕೆಲಸ ಶುರು ಮಾಡಿದರೆ ತಾವಂದುಕೊಂಡಂತೆಯೇ ಮಾಡುವ, ತಕರಾರುಗಳೆಲ್ಲವನ್ನೂ ತಣ್ಣಗಾಗಿಸೋ ಕಲೆ ಕರಗತ ಮಾಡಿಕೊಂಡಿರೋ ಪ್ರೇಮ್ ಈ ವಿಚಾರದಲ್ಲಿಯೂ ಗೆದ್ದಿದ್ದಾರೆ.
ಅಷ್ಟಕ್ಕೂ ಇದೀಗ ದಿ ವಿಲನ್ ಸ್ವಾಗತಕ್ಕೆ ಶಿವಣ್ಣನ ಅಭಿಮಾನಿಗಳು ಕೂಡಾ ಉತ್ಸಾಹದಿಂದಲೇ ಸಜ್ಜಾಗಿದ್ದಾರೆ. ಕೊಂಚ ತಡವಾದರೂ ಟ್ರೈಲರ್, ಹಾಡುಗಳ ಮೂಲಕ ಎಲ್ಲರನ್ನೂ ತೃಪ್ತಿ ಪಡಿಸುತ್ತಲೇ ಕುತೂಹಲ ಕೆರಳಿಸುವಲ್ಲಿ ಪ್ರೇಮ್ ಸಫಲರಾಗಿದ್ದಾರೆ. ಈಗ ದಿ ವಿಲನ್ ಬಗೆಗಿರೋದು ಅಗಾಧವಾದ ನಿರೀಕ್ಷೆಗಳು ಮಾತ್ರ. ಭಾರೀ ಅಬ್ಬರದಿಂದ ತೆರೆಗಾಣಲು ಸಜ್ಜಾಗಿರೋ ದಿ ವಿಲನ್ ಚಿತ್ರದ ಅಸಲೀ ಖದರ್ ಇನ್ನೆರಡು ವಾರದಲ್ಲಿಯೇ ಜಾಹೀರಾಗಲಿದೆ.
#