ನವರಸನಾಯಕ ಜಗ್ಗೇಶ್, ‘ನೀರ್ ದೋಸೆ’ ಖ್ಯಾತಿಯ ನಿರ್ದೇಶಕ ವಿಜಯಪ್ರಸಾದ್ ಜೋಡಿ ಮತ್ತೊಮ್ಮೆ ಮೋಡಿ ಮಾಡುತ್ತಿದೆ. ‘ತೋತಾಪುರಿ’ ಭಾಗ 1ರ ಮೊದಲ ವೀಡಿಯೋ ಹಾಡು ಬಿಡುಗಡೆಯಾಗಿದ್ದು ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಳೆದ ವಾರ ಮೊದಲ ಹಾಡಿನ ಟೀಸರ್ ಹರಿಬಿಟ್ಟಿದ್ದ ಚಿತ್ರತಂಡಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಲಿರಿಕಲ್ ಆಡಿಯೋ ಬದಲಾಗಿ ಪೂರ್ತಿ ವೀಡಿಯೋ ಹಾಡನ್ನೇ ರಿಲೀಸ್ ಮಾಡಿದೆ.
ನಿರ್ದೇಶಕ ವಿಜಯಪ್ರಸಾದ್ ಬರೆದಿರುವ ಕಚಗುಳಿಯಿಡುವಂಥ ಸಾಹಿತ್ಯಕ್ಕೆ ಅಷ್ಟೇ ಮಜಬೂತಾದ ಸಂಗೀತ ಸಂಯೋಜಿಸಿದ್ದಾರೆ ಅನೂಪ್ ಸೀಳಿನ್. ಕಲರ್’ಫುಲ್ ಸೆಟ್’ನಲ್ಲಿ ಜಗ್ಗೇಶ್ ಹಾಗೂ ಅದಿತಿ ಮಿರಿ ಮಿರಿ ಮಿಂಚಿದ್ದಾರೆ. ನೂರಾರು ಡಾನ್ಸರ್’ಗಳ ಜೊತೆ ವೀಣಾ ಸುಂದರ್ ಹಾಗೂ ಹೇಮಾದತ್ ಸಹ ಸ್ಟೆಪ್ ಹಾಕಿರುವುದು ವಿಶೇಷ.
‘ಬಾಗ್ಲು ತೆಗಿ ಮೇರಿ ಜಾನ್…’ ಎಂದು ಶುರುವಾಗುವ ಈ ಹಾಡಿನಲ್ಲಿ ಅದಿತಿ ಹಾಗೂ ಜಗ್ಗೇಶ್ ಕೌಂಟರ್, ಎನ್’ಕೌಂಟರ್ ಸಾಲುಗಳಿಂದ ಹಾಡು ಕಿಕ್ ಕೊಡುತ್ತದೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಚಿತ್ರೀಕರಣವಾಗಿರುವ ಈ ಅದ್ಧೂರಿ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ. ವ್ಯಾಸರಾಜ್ ಸೋಸಲೆ, ಅನನ್ಯ ಭಟ್ ಹಾಗೂ ಸುಪ್ರಿಯಾ ರಾಮ್ ಈ ಹಾಡಿಗೆ ದನಿಗೂಡಿಸಿದ್ದಾರೆ.
ಗೋವಿಂದಾಯ ನಮಃ, ಶಿವಲಿಂಗ, ಶ್ರಾವಣಿ ಸುಬ್ರಹ್ಮಣ್ಯ ಮೊದಲಾದ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ತೋತಾಪುರಿ’ ಭಾಗ 1 ಹಾಗೂ ಭಾಗ 2 ಸಿನಿಮಾವನ್ನು ನಿರ್ಮಿಸಿದ್ದಾರೆ. ಸದ್ಯ ಮೊದಲ ಭಾಗದ ಮೊದಲ ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್ ಹಾಗೂ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಹಾಡು ಮೋನಿಫ್ಲಿಕ್ಸ್ ಆಡಿಯೋಸ್ ಯೂ ಟ್ಯೂಬ್ ಚಾನಲ್’ನಲ್ಲಿ ಬಿಡುಗಡೆಯಾಗಿದೆ.
Comments