ತೋತಾಪುರಿ ಭಾಗ ೨ ಬಿಡುಗಡೆಯಾಗಿದೆ. ಈ ಹಿಂದೆ ಮೊದಲ ಭಾಗ ಬಂದಿತ್ತು. ಒಂದು ವರ್ಗ ಸಿನಿಮಾವನ್ನು ನೋಡಿ ಎಂಜಾಯ್ ಮಾಡಿತ್ತು. ಮತ್ತೊಂದು ವರ್ಗ ಇದರಲ್ಲಿ ಡಬಲ್ ಮೀನಿಂಗ್ ಮಾತುಗಳೇ ತುಂಬಿಕೊಂಡಿವೆ ಅಂತಾ ಬೇಸರ ಮಾಡಿಕೊಂಡಿತ್ತು. ಈಗ ಎರಡೂ ವರ್ಗದವರ ಮನಸ್ಸಿಗೆ ಒಪ್ಪುವ, ಕಾಡುವ, ಕಚಗುಳಿ ಇಡುವ ತೋತಾಪುರಿಯ ಎರಡನೇ ಭಾಗ ತೆರೆಗೆ ಬಂದಿದೆ.
ತಮಾಷೆಯ ವಿಷಯಗಳನ್ನು ಹೇಳುತ್ತಲೇ ಗಂಭೀರ ವಿಚಾರಗಳನ್ನೂ ಇಲ್ಲಿ ಬಿಚ್ಚಿಡಲಾಗಿದೆ. ಬರಿಯ ಜಾತಿ ಮಾತ್ರವಲ್ಲ, ಧರ್ಮವನ್ನೂ ಮೀರಿದ್ದು ಪ್ರೀತಿ ಅನ್ನೋದು ಇಲ್ಲಿ ನಿರೂಪಿತಗೊಂಡಿದೆ. ಕಟ್ಟಕಡೆಯಲ್ಲಿ ಸಂವಿಧಾನಕ್ಕಿಂತಾ ದೊಡ್ಡ ನಂಬಿಕೆ, ಅಂಬೇಡ್ಕರರಿಗಿಂತಾ ದೊಡ್ಡ ದೇವರಿಲ್ಲ ಎನ್ನುವಂತಾ ಸಂದೇಶ ಎಂಥವರನ್ನಾದರೂ ಭಾವುಕರನ್ನಾಗಿಸುತ್ತದೆ.
ಡಾಲಿ ಧನಂಜಯ ಮತ್ತು ಸುಮನ್ ರಂಗನಾಥ್ ಅವರ ಪ್ರೀತಿ, ಹುಡುಕಾಟದ ಭಾಗ ಇಲ್ಲಿ ಪ್ರಧಾನವಾಗಿದೆ. ಜೊತೆಗೆ ಜಗ್ಗೇಶ್, ಅದಿತಿ ಜೋಡಿ ಕೂಡಾ ಆಪ್ತವಾಗಿ ಕಾಣುತ್ತದೆ. ದೊನ್ನೆ ರಂಗಮ್ಮನ ಪಾತ್ರದಲ್ಲಿ ವೀಣಾ ಸುಂದರ್ ಬ್ಯಾಕ್ಲೆಸ್ ಆಗಿ ಕಾಣಿಸಿಕೊಂಡಿರೋದನ್ನು ಅಚ್ಛರಿ ಅಂದುಕೊಳ್ಳಬಹುದು!
ಯಾವುದೇ ಸಿನಿಮಾ ಮನಸ್ಸಿಗೆ ಹತ್ತಿರವಾಗಬೇಕು ಅಂದರೆ, ಆ ಚಿತ್ರವನ್ನು ಕಟ್ಟಿದ ವಾತಾವರಣ ಕೂಡಾ ತುಂಬಾ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ತೋತಾಪುರಿ ಸಿನಿಮಾಗೆ ಆಯ್ಕೆ ಮಾಡಿಕೊಂಡಿರುವ ಊರು, ಮನೆಗಳು, ವಾಹನಗಳು ಎಲ್ಲವೂ ಒಂದು ಮೂಡ್ ಕ್ರಿಯೇಟ್ ಮಾಡಿದೆ.
ಉಳಿದಂತೆ ಅನೂಪ್ ಸಿಳೀನ್ ಸಂಗೀತ, ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ತೋತಾಪುರಿಯ ಅಂದವನ್ನು ಹೆಚ್ಚಿಸಿದೆ. ಈ ಸಲ ನಿರ್ದೇಶಕ ವಿಜಯಪ್ರಸಾದ್ ತೋತಾಪುರಿ ೨ ಮೂಲಕ ಹದವಾಗಿ, ರುಚಿಕಟ್ಟಾದ ತೊಟ್ಟನ್ನು ಕಿತ್ತು ಕೈಗಿಟ್ಟಿದ್ದಾರೆ. ಇಲ್ಲಿ ಡಬಲ್ ಮೀನಿಂಗ್ ಸಂಭಾಷಣೆಯೇ ಇಲ್ಲ ಅಂತೇನಿಲ್ಲ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಕೊಟ್ಟು, ಮಿಕ್ಕಂತೆ ಭಾವನೆಗಳಿಗೆ ಹೆಚ್ಚು ಜಾಗ ಕೊಟ್ಟಿದ್ದಾರೆ. ಒಂದು ಸಲ ನೋಡಿ ನಿಮಗೇ ಗೊತ್ತಾಗುತ್ತದೆ.
No Comment! Be the first one.