ಇತ್ತೀಚೆಗೆ ಬಿಡುಗಡೆಗೊಂಡಿದ್ದ ಅಥರ್ವ ಚಿತ್ರ ನೋಡಿದವರೆಲ್ಲ ಅದರಲ್ಲಿನ ವಿಲನ್ ಅಬ್ಬರ ಕಂಡು ಥ್ರಿಲ್ ಆಗಿದ್ದರು. ಬಹುತೇಕರು ಕನ್ನಡಕ್ಕೆ ಖದರ್ ಲುಕ್ಕಿನ ಯುವ ಖಳನಟನೊಬ್ಬನ ಆಗಮನವಾಗಿದೆ ಅಂತ ಖುಷಿಗೊಂಡಿದ್ದರು. ಆ ವಿಲನ್ ರೋಲಿನಲ್ಲಿ ಆರ್ಭಟಿಸಿದ್ದವರು ಯಶವಂತ್ ಶೆಟ್ಟಿ. ಇದಕ್ಕೂ ಮುಂಚೆಯೂ ನೆಗೆಟಿವ್ ಶೇಡಿನ ಪಾತ್ರಗಳಲ್ಲಿಯೇ ಅಬ್ಬರಿಸಿದ್ದ ಯಶವಂತ್ ಇದೀಗ ತ್ರಾಟಕ ಚಿತ್ರದಲ್ಲಿ ತದ್ವಿರುದ್ಧ ಪಾತ್ರವೊಂದರಲ್ಲಿ ಪ್ರೇಕ್ಷಕರನ್ನು ಎದುರುಗೊಳ್ಳಲಿದ್ದಾರೆ!
ಇದೇ ವಾರ ತೆರೆ ಕಾಣಲಿರುವ ತ್ರಾಟಕ ಭರ್ಜರಿಯಾಗಿಯೇ ಸೌಂಡು ಮಾಡುತ್ತಿದೆ. ನಾಯಕ ರಾಹುಲ್ ಐನಾಪುರ ಅವರ ಖಡಕ್ಕು ಲುಕ್ಕು ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆಯ ಕಿಕ್ಕೇರಿಸಿದೆ. ಪೋಸ್ಟರುಗಳ ಮೂಲಕವೇ ಭಿನ್ನವಾದ ಸುಳಿವು ನೀಡುತ್ತಿರೋ ಈ ಚಿತ್ರದಲ್ಲಿ ಯಶವಂತ್ ಶೆಟ್ಟಿ ಕೂಡಾ ಮುಖ್ಯವಾದೊಂದು ಪಾತ್ರದಲ್ಲಿ ನಟಿಸಿದ್ದಾರೆ. ಹಾಗಂದ ಮೇಲೆ ಅವರದ್ದಿಲ್ಲಿ ನೆಗೆಟವ್ ಶೇಡಿನ ಪಾತ್ರ, ಅದೇ ಠೇಂಕಾರವಿರುತ್ತೆ ಅಂದುಕೊಳ್ಳೋದು ಸಹಜ. ಆದರೆ ಅವರ ಪಾತ್ರವಿಲ್ಲಿ ತದ್ವಿರುದ್ಧ!
ಯಶ್ವಂತ್ ಶೆಟ್ಟಿ ಈ ಚಿತ್ರದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದ ಜೀವಾಳ ಹೊಂದಿರುವಂಥಾ ಆ ಪಾತ್ರ ತಮ್ಮ ಇದುವರೆಗಿನ ಚಿತ್ರಗಳಿಗಿಂತಲೂ ವಿಭಿನ್ನ ಅಂತ ಖುದ್ದು ಅವರೇ ಹೇಳಿಕೊಳ್ಳುತ್ತಾರೆ. ಡಾಕ್ಟರ್ ಆಗಿ ಅತ್ಯಂತ ನಯ ನಾಜೂಕಿನ ನಟನೆ, ಸಂಭಾಷಣೆ ಅವರ ಪಾಲಿಗೆ ಹೊಸಾ ಅನುಭವ. ಅಲ್ಲಲ್ಲಿ ನೆಗೆಟೀವ್ ಅಂಶವಿರುವಂತೆ ಕಂಡರೂ ಅಂತಿಮವಾಗೆ ಬೇರೇನಕ್ಕೋ ಕನೆಕ್ಟಾಗೋ ಈ ಪಾತ್ರ ಬಹುಶಃ ಯಶವಂತ್ ಶೆಟ್ಟಿಯವರನ್ನು ಪ್ರೇಕ್ಷಕರ ಮನಸಲ್ಲಿ ಬೇರೆಯದ್ದೇ ರೀತಿಯಲ್ಲಿ ನೆಲೆ ನಿಲ್ಲಿಸಲಿದೆ.
ಕನ್ನಡದಲ್ಲಿ ಖಳ ನಟರ ಸಂಖ್ಯೆ ಕಡಿಮೆ ಇದೆ. ಆ ಸಾಲಿನಲ್ಲಿ ಮುಖ್ಯವಾಗಿ ಕಾಣಿಸೋದು ರವಿಶಂಕರ್ ಮಾತ್ರ. ಅವರ ಜೊತೆ ನಿಸ್ಸಂಶಯವಾಗಿಯೂ ನೆಲೆನಿಲ್ಲುವ ಎಲ್ಲ ಲಕ್ಷಣಗಳನ್ನೂ ಹೊಂದಿರುವವರು ಯಶ್ವಂತ್ ಶೆಟ್ಟಿ. ವರ್ಷಗಳಿಂದೀಚೆಗೆ ನಾನಾ ಚಿತ್ರಗಳಲ್ಲಿ ಖಳನ ಪಾತ್ರಗಳಲ್ಲಿ ಸದ್ದು ಮಾಡುತ್ತಿರುವ ಯಶವಂತ್ ಶೆಟ್ಟಿ ಉಡುಪಿಯ ಹಿರಿಯಡ್ಕದವರು. ಶಾಲಾ ಕಾಲೇಜು ದಿನಗಳಲ್ಲಿಯೇ ಹತ್ತಿಕೊಂಡ ಸಿನಿಮಾದ ಗುಂಗು ಅದೇ ಹಾದಿಯಲ್ಲಿ ಯಶವಂತ್ ಅವರನ್ನು ಮುನ್ನಡೆಸಿದ್ದೇ ಒಂದು ಸೋಜಿಗ.
ಸಾಮಾನ್ಯವಾಗಿ ಯುವಕರಲ್ಲಿ ನಟನೆಯ ಸೆಳೆತ ಆರಂಭವಾಗೋದೇ ಹೀರೋಗಿರಿಯ ಆಸೆಯಿಂದ. ಆದರೆ ಯಶವಂತ್ ಶೆಟ್ಟಿ ಅದಕ್ಕೆ ತದ್ವಿರುದ್ಧ. ಯಾಕೆಂದರೆ ಅವರ ಪಾಲಿಗೆ ವಿಲನ್ನುಗಳಾಗಿ ವಿಜೃಂಭಿಸಿದ್ದವರೇ ಹೀರೋಗಳಾಗಿ ಕಾಣಿಸುತ್ತಿದ್ದರು. ವಜ್ರಮುನಿ, ರಘುವರನ್, ಪ್ರಕಾಶ್ ರೈ, ಕೆ ಕೆ ಮೆನನ್ ಮುಂತಾದ ನಟರ ಅಪ್ಪಟ ಅಭಿಮಾನಿಯಾದ, ಆ ಪಾತ್ರಗಳ ಪ್ರಭಾವದಿಂದಲೇ ಬೆಳೆದು ಬಂದ ಯಶ್ವಂತ್ಗೆ ತಾನು ವಿಲನ್ ರೋಲುಗಳಲ್ಲೇ ಮಿಂಚಬೇಕೆಂಬ ನಿಖರವಾದ ಗುರಿ ಇತ್ತು. ಇಂಥಾದ್ದೊಂದು ಗುರಿ ಮನಸಲ್ಲಿ ಬೇರೂರುವ ಹೊತ್ತಿಗೆಲ್ಲ ಅವರು ಹಿರಿಯಡ್ಕದ ಎಂಜಿಎಂ ಕಾಲೇಜಿನಲ್ಲಿ ಸೆಕೆಂಡ್ ಇಯರ್ ಡಿಗ್ರಿ ವ್ಯಾಸಂಗ ಮಾಡುತ್ತಿದ್ದರು, ಆ ಹೊತ್ತಿಗೆಲ್ಲ ಮನೆಯಲ್ಲಿ ಆರ್ಥಿಕ ಸಂಕಷ್ಟ ಕಾಡಿದ್ದರಿಂದ ಓದನ್ನು ಅಲ್ಲಿಗೇ ಕೈಬಿಟ್ಟ ಯಶವಂತ್ ಸೀದಾ ಹೋಗಿ ಸೇರಿಕೊಂಡಿದ್ದು ನೀನಾಸಂಗೆ!
ನೀನಾಸಂ ಕಲಿಕೆಯ ನಂತರ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಶಾಲೆಗೆ ಸೇರಿಒಕೊಂಡರು. ಅದು ಇರ್ಫಾನ್ ಖಾನ್, ನವಾಜುದ್ದೀನ್ ಸಿದ್ದಿಕಿ, ಅತುಲ್ ಕುಲಕರ್ಣಿ, ಕನ್ನಡದ ಜಯಶ್ರೀ, ಶಫಿ ಮುಂತಾದ ಪ್ರತಿಭಾನ್ವಿತ ನಟ ನಟಿಯರನ್ನು ರೂಪುಗೊಳಿಸಿದ್ದ ಪ್ರತಿಷ್ಟಿತ ಶಾಲೆ. ಅಲ್ಲಿಯೂ ನಟನಾ ತರಬೇತಿ ಮುಗಿಸಿಕೊಂಡ ಯಶವಂತ್ ಅವರ ಮುಂದಿನ ಗುರಿಯಾಗಿದ್ದದ್ದು ಏಷ್ಯನ್ ಥೇಟರ್ ಎಜುಕೇಶನ್ ಸೆಂಟರ್ (ಎಟಿಇಸಿ)ಯಲ್ಲಿ ಮತ್ತಷ್ಟು ಕಲಿಯುವ ಹಂಬಲ. ಆದರೆ ಅದಕ್ಕೆ ಸೇರ್ಪಡೆಯಾಗಲು ಡಿಗ್ರಿ ಕಂಪ್ಲೀಟಾಗಿರಬೇಕಾದದ್ದು ಖಡ್ಡಾಯವಾದ್ದರಿಂದ ಮತ್ತೆ ಊರ ಕಡೆ ಬಂದು ಡಿಗ್ರಿ ಕಂಪ್ಲೀಟು ಮಾಡಿಕೊಂಡ ಯಶವಂತ್ ತಮ್ಮ ಕನಸನ್ನು ನನಸು ಮಾಡಿಕೊಂಡರು.
ಏಷ್ಯನ್ ಥೇಟರ್ ಎಜುಕೇಶನ್ ಸೆಂಟರ್ನಲ್ಲಿ ಸೀಟು ಗಿಟ್ಟಿಸಿಕೊಳ್ಳುವುದೇ ದೊಡ್ಡ ಸಾಹಸ. ಇನ್ನೂರು ಜನರಲ್ಲಿ ಕೇವಲ ಇಪ್ಪತ್ತಾರು ಮಂದಿಯನ್ನು ಮಾತ್ರವೇ ಆಯ್ಕೆ ಮಾಡಲಾಗುತ್ತದೆ. ಮೂರು ವರ್ಷಗಳ ಆ ಕೋರ್ಸಿಗೆ ಆಯ್ಕೆಯಾದ ಯಶವಂತ್ ಎರಡನೇ ವರ್ಷದಲ್ಲಿರುವಾಗಲೇ ಚೀನಾದ ಬೀಜಿಂಗ್ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದರು. ಅಲ್ಲಿ ಬೆಸ್ಟ್ ಇಂಟರ್ನ್ಯಾಷನಲ್ ಆಕ್ಟರ್ ಎಂಬ ಪ್ರಶಸ್ತಿಯನ್ನೂ ಪಡೆದುಕೊಂಡರು. ಆ ಬಳಿಕ ಎಟಿಇಸಿಯಲ್ಲಿನ ಕಲಿಕೆ ಪೂರ್ಣಗೊಳಿಸಿಕೊಂಡ ಅವರಿಗೆ ಇದೇ ಸಂಸ್ಥೆಯಲ್ಲಿ ಅಭಿನಯ ತರರಬೇತಿ ಕೊಡುವಂತೆ ಆಫರ್ ಬಂದಿತ್ತು. ಆದರೆ ಖಳನಟನಾಗೋ ಗುರಿ ಹೊಂದಿದ್ದ ಯಶವಂತ್ ಸೀದಾ ಬಂದಿಳಿದದ್ದು ಕನ್ನಡ ಚಿತ್ರರಂಗಕ್ಕೆ.
ಹಾಗೆ ಬಂದ ಯಶವಂತ್ ಆರಂಭದಲ್ಲಿ ಶಿವಧ್ವಜ್ ಅವರ ಮಕ್ಕಳೇ ಮಾಣಿಕ್ಯ ಚಿತ್ರ ಮತ್ತು ದಿನೇಶ್ ಬಾಬು ಅವರ ಸ್ವಾತಿಮುತ್ತು ಧಾರಾವಾಹಿಗಳಲ್ಲಿ ಅಸಿಸ್ಟೆಂಟ್ ಆಗಿ ನಿರ್ದೇಶನ ವಿಭಾಗದಲ್ಲಿಯೂ ಕೆಲಸ ಮಾಡಿದ್ದರು. ಅಲ್ಲಿ ಅಸೋಸಿಯೇಟ್ ಆಗಿದ್ದ ಅಂಬರೀಶ್ ಎಂಬರ ಮೂಲಕವೇ ಜ್ವಲಂತಂ ಚಿತ್ರದಲ್ಲಿ ವಿಲನ್ ರೋಲ್ ಮಾಡೋ ಮೂಲಕ ತಮ್ಮ ಕನಸಿನ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದರು. ಆ ಚಿತ್ರ ನಿರೀಕ್ಷಿತ ಯಶ ಕಾಣದಿದ್ದರೂ ಯಶವಂತ್ ಮಾಡಿದ್ದ ಅಘೋರಿಯ ಪಾತ್ರ ಗಮನ ಸೆಳೆದಿತ್ತು. ಆ ನಂತರ ಸೋಜಿಗ, ಜಾನ್ ಜಾನಿ ಜನಾರ್ಧನ್, ನೂರೆಂಟು ನೆನಪು, ರಾಜ್ಯ ಪ್ರಶಸ್ತಿ ಪಡೆದುಕೊಂಡ ರೈಲ್ವೇ ಚಿಲ್ಡ್ರನ್ ಮುಂತಾದ ಚಿತ್ರಗಳಲ್ಲಿ ನಟಿಸಿದ ಯಶವಂತ್ ಅವರಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿದ್ದ ಅಥರ್ವ ಚಿತ್ರದಲ್ಲಿನ ಪಾತ್ರ. ಇದೀಗ ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿಯೂ ವಿಲನ್ ಆಗಿ ನಟಿಸಿರುವ ಯಶವಂತ್ ಸದ್ಯ ಬಿಡುಗಡೆಗೆ ಸಜ್ಜಾಗಿರೋ ತ್ರಾಟಕ ಚಿತ್ರದ ಬಗ್ಗೆ ಭಾರೀ ಭರವಸೆ ಹೊಂದಿದ್ದಾರೆ.
ಉಪೇಂದ್ರ ಮತ್ತು ರವಿಚಂದ್ರನ್ ಒಟ್ಟಾಗಿ ನಟಿಸಲಿರೋ ರವಿಚಂದ್ರ, ನಿರೂಪ್ ಭಂಡಾರಿ ಮತ್ತು ರಾಧಿಕಾ ಚೇತನ್ ನಟಿಸಿರೋ ರಾಕ್ಲೈನ್ ನಿರ್ಮಾಣದ ಚಿತ್ರದಲ್ಲಿಯೂ ಯಶವಂತ್ ವಿಲನ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಪ್ರಸಿದ್ಧ ಡಾರ್ಕ್ ನೈಟ್ ಚಿತ್ರದಲ್ಲಿ ಜೋಕರ್ ಪಾತ್ರ ಮಾಡಿದ್ದ ಲೇಡ್ಜರ್ನಂತೆ ಪಾತ್ರವನ್ನು ಸಮರ್ಪಿಸಿಕೊಂಡು ಮಾಡಬೇಕೆಂಬ ಹಂಬಲ ಹೊಂದಿರೋ ಯಶವಂತ್ಗೆ ಕಾಂಜೀವರಂ ಚಿತ್ರದಲ್ಲಿ ಪ್ರಕಾಶ್ ರೈ ಮಾಡಿದ್ದ ವಿಶಿಷ್ಟವಾದ ವಿಲನ್ ಕ್ಯಾರೆಕ್ಟರುಗಳಿಗೆ ಜೀವ ತುಂಬೋ ಬಯಕೆ ಇದೆ. ಇದೀಗ ಮಾರ್ಗಿ ಎಂಬ ತಮಿಳು ಚಿತ್ರದಲ್ಲಿಯೂ ನಟಿಸುತ್ತಿರೋ ಅವರು ಅನಂತ ಶೈನ್ ನಿರ್ದೇಶನದ ವಿರಾಟ ಪರ್ವ ಚಿತ್ರದಲ್ಲಿ ಮೂರು ಶೇಡುಗಳಖಿರೋ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಅದಾಗಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕಿರಾತಕ೨ ಚಿತ್ರದ ಮುಖ್ಯ ಖಳನಟನಾಗಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಅಬ್ಬರದ ನಟನೆಯ ಮೂಲಕ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟಿರೋ ಯಶವಂತ್ ಶೆಟ್ಟಿ ಪಾಲಿಗೆ ತ್ರಾಟಕ ಚಿತ್ರದ ಪಾತ್ರ ಹೊಸಾ ಅನುಭವ. ಆ ಪಾತ್ರ ತಮ್ಮ ವೃತ್ತಿ ಬದುಕಿಗೆ ಮತ್ತೊಂದು ಆಯಾಮ ನೀಡಲಿದೆ ಎಂಬ ನಂಬಿಕೆ ಹೊಂದಿರೋ ಯಶವಂತ್ ಶೆಟ್ಟಿ ಕನ್ನಡದ ಮುಖ್ಯ ಖಳನಟನಾಗಿ ನೆಲೆ ಕಂಡುಕೊಳ್ಳೋ ಕಾಲ ದೂರವಿದ್ದಂತಿಲ್ಲ!
#
No Comment! Be the first one.