ಮದುವೆ ಅನ್ನೋದೇ ಹಾಗೆ. ಯಾರು ಆ ಬಗ್ಗೆ ಹೆಚ್ಚು ಕುತೂಹಲ ಹೊಂದಿರುತ್ತಾರೋ, ಅತಿಯಾದ ಆಸಕ್ತಿ ವಹಿಸುತ್ತಾರೋ ಅಂಥವರಿಗೇ ಅದು ಸುಲಭಕ್ಕೆ ಕೈಗೂಡೋದಿಲ್ಲ.
ಇಲ್ಲೂ ಅಷ್ಟೇ ಹೀರೋ ವೆಂಕಿಗೆ ಮದುವೆಯಾಗಬೇಕು, ಮೊದಲ ರಾತ್ರಿಯನ್ನು ವೈಭೋಗದಿಂದ ನೆರವೇರಿಸಿಕೊಳ್ಳಬೇಕು ಅನ್ನೋದೇ ಬದುಕಿನ ಪರಮ ಗುರಿ. ಹೆಣ್ಣು ನೋಡಿ, ಎಲ್ಲಾ ಒಪ್ಪಿ ಇನ್ನೇನು ಗಟ್ಟಿ ಮೇಳದ ಸೌಂಡು ಕೇಳಿಸಬೇಕು ಅನ್ನುವಷ್ಟರಲ್ಲಿ ಸಂಬಂಧ ಮುರಿದು ಬೀಳುತ್ತಿರುತ್ತದೆ. ಅದಕ್ಕೆ ಏನು ಕಾರಣ ಅನ್ನೋದು ಕೂಡಾ ಒಂದು ಹಂತದಲ್ಲಿ ಪ್ರೇಕ್ಷಕರಿಗೆ ಮನವರಿಕೆಯಾಗುತ್ತದೆ.
ಇದೇ ಹೊತ್ತಿನಲ್ಲಿ ಜಗತ್ತಿಗೇ ಕೊರೋನಾ ಎನ್ನುವ ವೈರಸ್ಸು ಮೆತ್ತಿಕೊಳ್ಳುತ್ತೆ. ಗಂಡನಾಗೋ ಯೋಗ ಇದೆಯೋ ಇಲ್ಲವೋ, ಅಪ್ಪ ಅಮ್ಮ ಊರಲ್ಲಿಲ್ಲದ ವೇಳೆಯಲ್ಲಿ ಉಂಡು ಬಿಡುವ ಪ್ಲಾನು ಮಾಡುತ್ತಾನೆ. ಎದುರಾಗುವ ಅಡ್ಡಿ ಆತಂಕಗಳ ಮಧ್ಯೆಯೂ ಬಾಡಿಗೆ ಹುಡುಗಿಯನ್ನು ಕರೆಸಿಕೊಳ್ಳುತ್ತಾನೆ. ಬಂದವಳಿಗೆ ಗುಂಡಿನ ಗುಂಗು ಜಾಸ್ತಿಯಾಗುತ್ತದೆ. ಇನ್ನೇನು ಗರಡಿಯಲ್ಲಿ ಗುದ್ದಾಡಬೇಕು ಅನ್ನೋ ಹೊತ್ತಿಗೆ ಅವಳ ಗುಂಡಿಗೆ ಸದ್ದು ನಿಲ್ಲುತ್ತದೆ. ಅಲ್ಲಿಗೆ ಇವನ ಆಸೆ ಆಕಾಂಕ್ಷೆಗಳೆಲ್ಲಾ ಗುಡಿಸಿಕೊಂಡು ಮೂಲೆಗೆ ಬೀಳುತ್ತದೆ. ಇತ್ತ ಮೋದಿಮಾಮ ಬಂದು ಲಾಕ್ ಡೌನ್ ಘೋಷಣೆ ಮಾಡುತ್ತಾರೆ. ಅಪ್ಪ ಅಮ್ಮ ಧರ್ಮಸ್ಥಳದಲ್ಲೇ ಲಾಕ್ ಆಗುತ್ತಾರೆ. ಇಲ್ಲಿ ಸ್ನೇಹಿತನೊಬ್ಬ ವೆಂಕಿಯ ಜೊತೆಯಾಗುತ್ತಾನೆ. ಇವರಿಬ್ಬರ ನಡುವೆ ಲೇಡಿ ಬಾಡಿ ಅಕ್ಷರಶಃ ಎಲ್ಲೆಂದರಲ್ಲಿ ಉಳ್ಳಾಡುತ್ತದೆ. ಹೀರೋಗೆ ಎದುರಾಗುವ ಸಂಕಟವೆಲ್ಲಾ ನೋಡುಗರಿಗೆ ಚೆಲ್ಲಾಟದಂತೆ ಕಾಣುತ್ತವೆ. ಕಟ್ಟ ಕಡೆಯದಾಗಿ ಗುಬ್ಬಿ ಗೂಡಿನಲ್ಲಿ ಬಂಧಿಯಾದ ಮರಿ ಗುಬ್ಬಿ, ಅದರ ಯಾತನೆ ನೋಡುಗರ ಕಣ್ಣು ತೇವವಾಗಿಸುತ್ತದೆ.
ಮೇಲ್ನೋಟಕ್ಕೆ ಇದು ತಮಾಷೆಯ ದೃಶ್ಯಗಳನ್ನು ಸೇರಿಸಿ ಹೆಣೆದಿರುವ ಚಿತ್ರದಂತೆ ಕಂಡರೂ ಇಲ್ಲಿ ಒಂದಷ್ಟು ಸೀರಿಯಸ್ ವಿಚಾರಗಳೂ ಬೆರೆತುಕೊಂಡಿವೆ. ಹೆತ್ತ ತಂದೆಯ ಮೂಢ ನಂಬಿಕೆ, ಅದರಿಂದ ಸೃಷ್ಟಿಯಾಗುವ ಕುಯುಕ್ತಿ. ಅಮ್ಮನ ಅಪಶಕುನದ ಮಾತು, ಬದುಕಿನ ಇಕ್ಕಳಕ್ಕೆ ಸಿಲುಕಿ ಹಾದಿ ತಪ್ಪಿದ ಹೆಣ್ಣು, ಅತೃಪ್ತ ಆಂಟಿ, ಉಡಾಫೆ ಗೆಳೆಯ, ಫ್ರೆಂಡ್ಲೀ ಪೊಲೀಸ್, ಕಂಡವರ ಮನೆಮೇಲೆ ಕಣ್ಣಿಟ್ಟು ಕೂತ ಸಿಸಿ ಟೀವಿ ಅಂಕಲ್ಲು, ಲಂಗೂಲಗಾಮಿಲ್ಲದೆ ಮಕ್ಕಳನ್ನು ಸೈತಾನರಂತೆ ಬೆಳೆಸುವ ತಾಯಿ… ಹೀಗೆ ಯಾರೂ ಗುರುತಿಸದ ಎಷ್ಟೊಂದು ವಿಚಾರಗಳು ಇಲ್ಲಿವೆ.
ಅಚಾನಕ್ಕಾಗಿ ಹೆಣವಾದ ಪಾತ್ರವೊಂದರ ಸುತ್ತ ಸುತ್ತುವ ಅನೇಕ ಸಿನಿಮಾಗಳು ಬಂದಿವೆ. ತಮಿಳಿನ ಪಂಚತಂತ್ರಂ, ಸೂಪರ್ ಡಿಲಕ್ಸ್, ಕನ್ನಡದ ಬಾಡಿ ಗಾರ್ಡ್… ಮೊದಲಾದ ಸಿನಿಮಾಗಳಲ್ಲಿ ಡೆಡ್ ಬಾಡಿಯ ಜರ್ನಿಯನ್ನು ನೋಡಿದ್ದೇವೆ. ಉಂಡೆ ನಾಮ ಕೂಡಾ ಅಂಥದ್ದೊಂದು ಎಳೆಯನ್ನು ಹೊಂದಿದೆ.
ಈ ಚಿತ್ರದ ನಿರ್ದೇಶಕ ಕೆ.ಎಲ್. ರಾಜಶೇಖರ್ ಮೂಲತಃ ಹಾಸ್ಯ ಬರಹಗಾರ. ಬಹಳ ಹಿಂದೆ ದುಂಬಿ ಆದರ್ಶ ಅವರ ಜೊತೆಗೆ ಒಂದಿಷ್ಟು ಕಾಮಿಡಿ ಸಿನಿಮಾಗಳಿಗೆ ಕೆಲಸ ಮಾಡಿದ್ದರು. ನಂತರ ಮಜಾ ಟಾಕೀಸ್ ರಿಯಾಲಿಟಿ ಶೋಗೆ ನೂರಾರು ಎಪಿಸೋಡು ಸ್ಕ್ರಿಪ್ಟ್ ಬರೆದು, ಜೊತೆಗೆ ನಟಿಸಿ ಸೂಪರ್ ಹಿಟ್ ಮಾಡಿದ್ದರು. ರಾಬರ್ಟ್ ಸಿನಿಮಾಗೆ ಸಂಭಾಷಣೆ ಕೂಡಾ ಇವರದ್ದೇ ಇತ್ತು. ಇಲ್ಲಿ ಚೊಚ್ಚಲ ನಿರ್ದೇಶಕರಾಗಿಯೂ ರಾಜಶೇಖರ್ ಗೆದ್ದಿದ್ದಾರೆ.
ಕೋಮಲ್ ಬಹು ದಿನಗಳ ನಂತರ ನಟಿಸಿರುವ ಸಿನಿಮಾ ಉಂಡೆ ನಾಮ. ಆದರೆ, ಇವರಲ್ಲಿರುವ ನಗಿಸುವ ಶಕ್ತಿ ಮಾತ್ರ ಒಂದಿಷ್ಟೂ ಬತ್ತಿಲ್ಲ. ಈ ಚಿತ್ರ ಕೋಮಲ್ ಅವರ ವೃತ್ತಿ ಬದುಕಿಗೆ ಮಹತ್ತರ ತಿರುವು ನೀಡೋದಂತೂ ನಿಜ. ಅಷ್ಟರ ಮಟ್ಟಿಗೆ ಅವರ ಪಾತ್ರ ಕೂಡಾ ಗೆದ್ದಿದೆ.
ತಬಲಾ ನಾಣಿ ಮತ್ತು ಅಪೂರ್ವ ಕೆಮಿಸ್ಟ್ರಿ ಅಮೋಘ ಮೂರನೇ ಬಾರಿಗೆ ಕಮಾಲ್ ಮಾಡಿದೆ. ಸಿನಿಮಾದ ಬಹುತೇಕ ಒಂದು ಮನೆಯೊಳಗೆ ನಡೆಯುತ್ತದೆ. ಇದು ಛಾಯಾಗ್ರಾಹಕನಿಗೆ ಸವಾಲಿನ ಕೆಲಸ. ನವೀನ್ ಕುಮಾರ್ ಅದನ್ನು ಸರಳ ಮತ್ತು ಸರಾಗವಾಗಿ ನಿಭಾಯಿಸಿದ್ದಾರೆ. ಕೊನೆಯಲ್ಲಿ ಬರುವ ಹಾಡಿನಲ್ಲಿ ಶ್ರೀಧರ್ ವಿ ಸಂಭ್ರಮ್ ಮತ್ತು ಚೇತನ್ ಕುಮಾರ್ ಸ್ಕೋರ್ ಮಾಡಿಕೊಳ್ಳುತ್ತಾರೆ. ತನಿಷಾ ಕುಪ್ಪಂಡಗೆ ಇಲ್ಲಿ ಕೂಡಾ ಸೆಕ್ಸೀ ಆಂಟಿ ಪಾತ್ರವೇ ಸಿಕ್ಕಿದೆ. ಜಂಪಿಂಗ್ ಸ್ಟಾರ್ ಹರೀಶ್ ರಾಜ್ ಸಖತ್ ಮಜಾ ಕೊಡುತ್ತಾರೆ. ಪೊಲೀಸ್ ಪಾತ್ರದಲ್ಲಿ ಸಂಪತ್ ಮೈತ್ರೇಯ ತುಂಬಾನೇ ಇಷ್ಟವಾಗುತ್ತಾರೆ.
No Comment! Be the first one.