ಒಂದಲ್ಲ ಎರಡಲ್ಲ ಐದು ಬಿಡಿ ಚಿತ್ರಗಳು!

ಒಂದಕ್ಕೊಂದು ಸಂಬಂಧವಿಲ್ಲದ ನಾಲ್ಕಾರು ಕಿರು ಚಿತ್ರಗಳನ್ನು ಒಂದು ಕಡೆ ಜೋಡಿಸಿ ಗುಚ್ಚವಾಗಿಸಿ ಸಿನಿಮಾ ಮಾಡೋದು ಕನ್ನಡಕ್ಕೆ ತೀರಾ ಹೊಸದಲ್ಲ. ಈಗ ಅಂಥದ್ದೇ ಒಂದು ಪ್ರಯತ್ನ ʻಪೆಂಟಗನ್ʼ ಮೂಲಕ ನಡೆದಿದೆ. ಕಾಮಿಡಿ, ಕರಾಳತೆ, ಧರ್ಮ, ಕರ್ಮ, ಕಾಮ – ಈ ಎಲ್ಲ ವಿಚಾರಗಳನ್ನು ಒಂದೊಂದು ಭಿನ್ನ ಕತೆಗಳನ್ನಾಗಿಸಿ ಚೆಂದಗೆ ಕಟ್ಟಿರುವ ಚಿತ್ರ ಪೆಂಟಗನ್. ʻಸಾವುʼ ಪ್ರತಿಯೊಂದೂ ಕಿರುಚಿತ್ರದ ಕೇಂದ್ರ ಬಿಂದು. ಕಾಗೆ ಅದರ ರೂಪಕ!

ಆತ್ಮಹತ್ಯೆ ಮಾಡಿಕೊಳ್ಳಲು ಹೆದರಿ ತನ್ನನ್ನು ಕೊಲ್ಲಿಸಿಕೊಂಡು ತಾನೇ ಸುಫಾರಿ ಕೊಡುವ ಹುಡುಗನ ಕಥೆಯ ಸುತ್ತ ʻಮಿಸ್ಟರ್ ಗೂಫೀಸ್ ಕೆಫೆʼಯನ್ನು ರೂಪಿಸಿದ್ದಾರೆ. ಕೆಫೆಯಲ್ಲಿ ನಡೆಯುವ ಘಟನೆಗಳ ಪ್ರಧಾನ ಉದ್ದೇಶ ನಗು ಹುಟ್ಟಿಸುವುದು. ಪ್ರಮೋದ್ ಶೆಟ್ಟಿ ಮತ್ತಿತರರು ಅದನ್ನು ಭಾಗಶಃ ಸಾಧ್ಯವಾಗಿಸಿದ್ದಾರೆ. ಕಾಮಿಡಿ ಸಿನಿಮಾಗಳಿಗೇ ಹೆಸರಾಗಿರುವ ಚಂದ್ರಮೋಹನ್ ಈ ಕಿರು ಚಿತ್ರವನ್ನು ನಿರ್ದೇಶಿಸಿದ್ದಾರೆ.

ಮಕ್ಕಳು ಬೆಳೆದು, ಸಂಸಾರಸ್ಥರಾದಾಗ ಹೆತ್ತವರನ್ನು ಕಡೆಗಣಿಸಿಬಿಡೋದೇ ಹೆಚ್ಚು. ಅವರ ಇಷ್ಟ ಕಷ್ಟಗಳ ಬಗ್ಗೆ ಗಮನ ಹರಿಸದೆ, ಯಾಂತ್ರಿಕವಾಗಿ ನಡೆದುಕೊಂಡು ಬಿಡುತ್ತಾರೆ. ಇದ್ದಷ್ಟೂ ದಿನ ಅವರು ನೋವನ್ನೇ ಉಣ್ಣುವಂತೆ ಮಾಡಿ, ಸತ್ತ ಮೇಲೆ ಪಿಂಡ ಇಟ್ಟು, ಅವರ ಆತ್ಮವನ್ನು ಶಾಂತಗೊಳಿಸುವ ಪ್ರಯತ್ನ ಮಾಡುತ್ತಾರೆ. ಅಲ್ಲೂ ಕೂಡ, ʻಪಿಂಡ ತಿಂದು ಒಳ್ಳೇದನ್ನು ಹರಸಲಿʼ ಎನ್ನುವ ಭಯಾನಕ ಸ್ವಾರ್ಥವಿರುತ್ತದೆ. ಇದರ ಸುತ್ತ ಕಟ್ಟಿರುವ ಕತೆ ʻಮೈಸೂರ್ ಪಾಕ್ʼ. ಈ ಕಿರುಚಿತ್ರದ ಅವಧಿ ಚಿಕ್ಕದಾದರೂ ಕಾಡುವ ಅಂಶಗಳಿಂದ ಹೆಚ್ಚು ಕಾಲ ಮನಸ್ಸಿನಲ್ಲುಳಿಯುತ್ತದೆ. ಬಿರಾದಾರ್ ತಂದೆಯಾಗಿ ಇಷ್ಟವಾಗುತ್ತಾರೆ. ಆಕಾಶ್ ಶ್ರೀವತ್ಸ ನಿರ್ದೇಶನ ಪರಿಣಾಮಕಾರಿ ಅನ್ನಿಸುತ್ತದೆ.

ಗಂಡನಿಂದ ದೂರವಾಗಿ ಪ್ರೀತಿ ಮತ್ತು ಕಾಮವನ್ನು ಬಯಸುವ ಹೆಣ್ಣುಮಗಳು. ಅಮಾಯಕನಂತಿದ್ದ ಹುಡುಗನ ಬದುಕಲ್ಲಿ ನಡೆಯುವ ಒಂದಷ್ಟು ಘಟನೆಗಳು, ಆನ್ ಲೈನ್ ಮೂಲಕವೇ ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಪೀಡಿಸುವ ಕಿರಾತಕರು. ಇವೆಲ್ಲದರಿಂದ ಆಗುವ ದುರ್ಘಟನೆಯ ಸುತ್ತ ಕಥೆ ಹೇಳುತ್ತಲೇ ಸಮಾಜವನ್ನು ಎಚ್ಚರಿಸುವ ಚಿತ್ರ ʻಕಾಮಾತುರಾಣಂ ನ ಭಯಂ ನ ಲಜ್ಜಾʼ. ಈ ಹಿಂದೆ ಚೂರಿ ಕಟ್ಟೆ ಸಿನಿಮಾದ ಮೂಲಕ ಹೆಸರು ಮಾಡಿದ ನಿರ್ದೇಶಕ ರಾಘು ಶಿವಮೊಗ್ಗ. ಸದ್ಯ ನಟನಾಗಿಯೂ ಹೆಸರು ಮಾಡುತ್ತಿರುವ ರಾಘು ಕಾಮದ ಹಿನ್ನೆಲೆಯಲ್ಲಿ ಘಟಿಸುವ ಕರಾಳತೆಯನ್ನು ʻಕಾಮಾತುರಾಣಂ ನ ಭಯಂ ನ ಲಜ್ಜಾʼ ಮೂಲಕ ಜಾಹೀರುಮಾಡಿದ್ದಾರೆ. ನಟಿ ತನಿಷಾ ಕುಪ್ಪಂಡ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದು ಮಾತ್ರವಲ್ಲ, ಪಾತ್ರದೊಳಗಿಳಿದು ನಟಿಸಿದ್ದಾರೆ. ಕಿರಣ್ ನಾಯಕ್ ಮತ್ತು ಅವರ ಮಗನ ಪಾತ್ರಧಾರಿ ಕೂಡಾ ಇಷ್ಟವಾಗುತ್ತಾರೆ.  ಪ್ರಕಾಶ್‌ ಬೆಳವಾಡಿ ಖದರ್‌ ನೋಡೋದೇ ಚೆಂದ. ಸಿನಿಮಾಗಳಲ್ಲಿ ಇದು ಹೆಚ್ಚು ಗಮನ ಸೆಳೆಯುತ್ತದೆ ಕೂಡ.

ʻದೋಣಿ ಸಾಗಲಿ ಮುಂದೆ ಹೋಗಲಿʼ ಎನ್ನುವ ಕಿರುಚಿತ್ರ ಜಾತಿ ವ್ಯವಸ್ಥೆ ಮತ್ತು ಅದರ ಸುತ್ತಲಿನ ಕ್ರೌರ್ಯವನ್ನು ಅನಾವರಣಗೊಳಿಸಿದೆ. ಭೂಮಾಲೀಕರ ಎಸ್ಟೇಟುಗಳಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುವ ಜನರ ಬದುಕನ್ನಿದು ಕಟ್ಟಿಕೊಟ್ಟಿದೆ. ಕೆಳಜಾತಿಯ ಜನರ ನೆರಳೂ ಸಹ ತಮ್ಮ ಮೇಲೆ ಬೀಳಬಾರದು ಅಂತಾ ಬಯಸುವ ಪರಮ ಕ್ರೂತಿ ಭೂಮಾಲೀಕ. ತನ್ನ ನೆಲದಲ್ಲಿ, ತನ್ನದಲ್ಲದ ಜಾತಿಯ ಮಗುವಿನ ಹೆಣಕ್ಕೂ ಜಾಗ ಕೊಡದೆ, ಹೂತಿಟ್ಟ ಕಳೇಬರವನ್ನು ತೆಗೆದು ಬಿಸಾಡುವ ಅವನ ಕ್ರೌರ್ಯತೆ ಮನಸ್ಸನ್ನು ಆರ್ದ್ರಗೊಳಿಸುತ್ತದೆ. ಜಾತಿ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದು, ಅವರ ಸಂಚಿಗೆ ಬಲಿಯಾಗುವ, ಬದುಕು ಕಳೆದುಕೊಳ್ಳುವ ಒಂದಿಡೀ ಸಮುದಾಯದ ವ್ಯಥೆಯ ಕಥನ ಇದಾಗಿದೆ. ಈ ಸಿನಿಮಾದ ಬರುವ ಒಂದೊಂದು ಪಾತ್ರಗಳೂ ಅಷ್ಟು ಚೆಂದಗೆ ನಟಿಸಿದ್ದಾರೆ. ಇದರ ನಿರ್ದೇಶಕ ಕಿರಣ್ ಕುಮಾರ್ ಘಟಿಸಿಹೋದ ಈ ನೆಲದ ಕಥಾನಕಗಳಿಗೆ ಜೀವ ಕೊಡುವ ಕಸುವಿದೆ.

ಕಡೆಯದಾಗಿ ಸ್ವತಃ ನಿರ್ಮಾಪಕ ಗುರು ದೇಶಪಾಂಡೆ ಅವರೇ ʻಕರ್ಮʼ ಚಿತ್ರವನ್ನು ರೂಪಿಸದ್ದಾರೆ. ಅನ್ಯಾಯದ ವಿರುದ್ದ ತಿರುಗಿಬಿದ್ದವನೊಬ್ಬ ಮುಂದೊಂದು ದಿನ ಭೂಗತ ಪಾತಕಿಯಾಗಿ ಬೆಳೆದು ನಿಂತಿರುತ್ತಾನೆ. ಆ ಇಮೇಜಿನಿಂದ ಹೊರಬರಲು ಕನ್ನಡಪರ ಹೋರಾಟಗಾರನಾಗಿ ಮಾರ್ಪಟ್ಟಿರುತ್ತಾನೆ. ಏನೇ ಮಾಡಿದರೂ ʻಕರ್ಮʼ ಅನ್ನೋದು ಸುಮ್ಮನೇ ಬಿಡೋದಿಲ್ಲ. ಹಿಂಬಾಲಿಸಿಕೊಂಡು ಬಂದು ಕೆಡವಿಕೊಳ್ಳುತ್ತದೆ ಅನ್ನೋದು ಈ ಚಿತ್ರದ ಸಾರಾಂಶ. ಸದ್ಯ ಹೋರಾಟನಿರತರಾಗಿರುವ ಸಾಕಷ್ಟು ಜನ ಜನನಾಯಕರು, ಮಾಜಿ ಡಾನ್ ಗಳನ್ನು ಈ ಚಿತ್ರ ನೆನಪಿಸುತ್ತದೆ. ನಟ ಕಿಶೋರ್ ಅದ್ಭುತವಾಗಿ ಪಾತ್ರ ನಿರ್ವಹಿಸಿದ್ದಾರೆ.

ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಐದೂ ಕಥೆಗಳ ಗುಚ್ಚದ ಜೀವಧಾತುವಿನಿಂದೆ. ಕಿರಣ್‌ ಹಂಪಾಪುರ, ಅಭಿಲಾಷ್‌ ಮತ್ತು ಗುರುಪ್ರಸಾದ್‌ ಅವರ ಛಾಯಾಗ್ರಹಣ ನೀಟಾಗಿದೆ. ಒಟ್ಟಾರೆ ಸಿನಿಮಾ ಎರಡೂವರೆ ಗಂಟೆಯೊಳಗೆ ಮುಗಿದಿದ್ದರೆ ನೋಡುಗರಿಗೆ ಸಲೀಸಾಗಿತ್ತು. ಐದು ಜನ ನಿರ್ದೇಶಕರು ತಂದುಕೊಟ್ಟ ದೃಶ್ಯಗಳನ್ನು ಕತ್ತರಿಸಿ ಪೋಣಿಸಿರುವ ಸಂಕಲನಕಾರ ಯು.ಡಿ.ವಿ. ವೆಂಕಿ ಅವರ ಶ್ರಮ ದೊಡ್ಡದು. ಓಟಿಟಿಗೆ ಬರುವ ತನಕ ಕಾಯದೇ, ಚಿತ್ರಮಂದಿರದಲ್ಲೇ ಈ ಚಿತ್ರಗುಚ್ಛವನ್ನೊಮ್ಮ ನೋಡಿ…


Posted

in

by

Tags:

Comments

Leave a Reply