ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ ಬಿಡುಗಡೆಯಾಗಿದೆ. ಹೆಸರಿಗೆ ತಕ್ಕಂತೆ ಇದು ಇತ್ತೀಚೆಗೆ ತೆರೆಕಂಡಿರುವ ಗಮನಾರ್ಹ ಕಮರ್ಷಿಯಲ್ ಚಿತ್ರ. ಅನೀಶ್ ಅಕಿರಾ ಚಿತ್ರದ ನಂತರ ವರ್ಷಗಳ ಗ್ಯಾಪ್ ತೆಗೆದುಕೊಂಡು ಸ್ವತಃ ನಿರ್ಮಾಣವನ್ನೂ ಮಾಡಿ ತೆರೆಗೆ ತಂದಿರುವ ಚಿತ್ರ ವಾಸು ನಾನ್ ಪಕ್ಕಾ ಕಮರ್ಷಿಯಲ್. ಈಗಾಗಲೇ ಚಿತ್ರದ ಟ್ರೇಲರು ಮತ್ತು ಹಾಡುಗಳೆಲ್ಲಾ ಸೌಂಡು ಮಾಡಿರೋದರಿಂದ `ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾ’ದ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿತ್ತು.
ಬಾಕ್ಸಿಂಗ್ ಮ್ಯಾಚುಗಳಲ್ಲಿ ಸ್ಪರ್ಧಿಸಿ ಎಂಥಾ ಘಟಾನುಘಟಿಗಳ ಎದೆಗೂ ಗುದ್ದಿ, ಕಪ್ ಗೆಲ್ಲೋದು ವಾಸುಗೆ ಒಂಥರಾ ಹವ್ಯಾಸ. ಪಕ್ಕಾ ಮಿಡ್ಲ್ ಕ್ಲಾಸ್ ಫ್ಯಾಮಿಲಿ. ಅಪ್ಪ ರಿಯಲ್ ಎಸ್ಟೇಟ್ ಬ್ರೋಕರು. ಬಾಣಂತನಕ್ಕೆ ಮನೆಗೆ ಬಂದುಳಿದ ಅಕ್ಕ, ಸೀರೆ ಅಂಗಡಿಯಲ್ಲಿ ಕೆಲಸ ಮಾಡೋ ತಾಯಿ. ಮಗನನ್ನು ಸ್ನೇಹಿತನಂತೆ ಟ್ರೀಟ್ ಮಾಡೋ ತಂದೆ, ತಾಯಿ. ಮಾಡೋಕೆ ಇಂಥದ್ದೇ ಅಂತಾ ನಿರ್ಧಿಷ್ಟವಾದ ಕೆಲಸವಿಲ್ಲದಿದ್ದರೂ, ಆತನ ಹೊಡೆದಾಟದ ತಾಕತ್ತು ನೋಡಿಯೇ ಲವ್ವಿಗೆ ಬೀಳುವ ಶ್ರೀಮಂತನ ಮಗಳು. ಮೊದಲ ಭಾಗವಿಡೀ ಹೀರೋ ಹೀರೋಯಿನ್ ಓಡಾಟ, ಎದುರು ಬಂದವರ ಜೊತೆಗಿನ ಹೊಡೆದಾಟ, ಫ್ಯಾಮಿಲಿ, ಸೆಂಟಿಮೆಂಟು, ಸಾಂಗುಗಳ ಮಧ್ಯೆ ಸಿನಿಮಾ ಸಾಗೋದೇ ಗೊತ್ತಾಗೋದಿಲ್ಲ. ಎಲ್ಲವೂ ಸುಸೂತ್ರವಾಗಿದೆ ಅನ್ನುವಷ್ಟರಲ್ಲಿ ಸಿನಿಮಾದ ಆರಂಭ ಮತ್ತು ಮಧ್ಯಂತರದ ನಡುವಿನ ಕಥೆಗೆ ಲಿಂಕೇ ಇಲ್ಲದಂತೆ ಹೀರೋ ವಾಸು ಹೀರೋಯಿನ್ ಮಹಾಲಕ್ಷ್ಮಿಯನ್ನು ಎತ್ತಿಬಿಡುವ ನಿರ್ಧಾರ ಮಾಡಿರುವುದಾಗಿ ಅದನ್ನು ಸ್ವತಃ ಪೊಲೀಸರ ಮುಂದೆಯೇ ಹೇಳುತ್ತಾನೆ. ವಾಸು ಯಾಕೆ ಇಂಥಾ ನಿರ್ಧಾ ಮಾಡಿದ್ದು ಅನ್ನೋದನ್ನು ತಿಳಿಯಬೇಕಾದರೆ ಪೂರ್ತಿ ಸಿನಿಮಾ ನೋಡಬೇಕು.
ಮನೆಯಲ್ಲಿ ಕಷ್ಟವಿದ್ದರೂ ಪ್ರೀತಿಗೆ ಕೊರತೆಯಿಲ್ಲದ ಕುಟುಂಬ, ಭಯಾನಕ ಶ್ರೀಮಂತಿಕೆ ಮತ್ತು ದುಡ್ಡಿನ ಅಮಲಿನಲ್ಲಿ ಬದುಕನ್ನು ಮರೆತ ಶ್ರೀಮಂತ- ಈ ಎರಡೂ ವೈರುಧ್ಯಗಳು ಚಿತ್ರದಲ್ಲಿ ಪ್ರಧಾನ ಅಂಶವಾಗಿವೆ. ಅನೀಶ್ ಎಂಬ ನಟ ತನ್ನೆಲ್ಲಾ ಪ್ರತಿಭೆಯನ್ನು ಧಾರೆಯೆರೆದು ಶ್ರಮವಹಿಸಿ ಸಿನಿಮಾ ಮಾಡಿದ್ದಾರೆ ಅನ್ನೋದು ತೆರೆಮೇಲೆ ಕಾಣುತ್ತಿದೆ. ಈ ಸಿನಿಮಾವನ್ನು ಜನ ತುಂಬು ಮನಸ್ಸಿನಿಂದ ಸ್ವೀಕರಿಸಿದ್ದೇ ಆದಲ್ಲಿ ಕಮರ್ಷಿಯಲ್ ಹೀರೋಗಳ ಲಿಸ್ಟಿಗೆ ಅನೀಶ್ ಮತ್ತೊಂದು ಸೇರ್ಪಡೆಯಾಗಲಿದ್ದಾರೆ. ಯುವ ಸಮುದಾಯವನ್ನು ಹುಚ್ಚೆಬ್ಬಿಸುವಂತೆ ಅನೀಶ್ ಡ್ಯಾನ್ಸ್ ಮಾಡಿದ್ದಾರೆ, ಎಲ್ಲ ವರ್ಗದವರನ್ನೂ ಸೆಳೆಯುವಂತೆ ಅಭಿನಯಿಸಿದ್ದಾರೆ. ನಾಯಕಿ ನಿಶ್ವಿಕಾ ನಾಯ್ಡು ಕೂಡಾ ಪಳಗಿದ ನಟಿಯಂತೆ ಕಾಣುತ್ತಾರೆ. ಯುವ ನಟ ವರ್ಧನ್ ತೀರ್ಥಹಳ್ಳಿ ಬರೋದು ಕಡಿಮೆ ದೃಶ್ಯಗಳಲ್ಲಾದರೂ ಭಯಹುಟ್ಟಿಸುವಂತೆ ನಟಿಸಿದ್ದಾರೆ. ಇನ್ನು ಅಪ್ಪನ ಪಾತ್ರ ನಿರ್ವಹಿಸಿರುವ ಮಂಜುನಾಥ ಹೆಗಡೆ ಸೇರಿದಂತೆ ಸಿನಿಮಾದ ಇತರೆ ಕಲಾವಿದರೂ ಸಹ ತಮ್ಮತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ದಿಲೀಪ್ ಚಕ್ರವರ್ತಿ ಕ್ಯಾಮೆರಾ ಕೆಲಸ ಕ್ರಿಯಾಶೀಲತೆಯಿಂದ ಕೂಡಿದೆ. ಅಜನೀಶ್ ಲೋಕನಾಥ್ ಸೃಷ್ಟಿಸಿರುವ ಹಾಡುಗಳು ಒಂದಕ್ಕಿಂತ ಒಂದು ಭಿನ್ನ. ರಚಿಸಿ ನಿರ್ದೇಶಿಸಿರುವ ಅಜಿತ್ ವಾಸನ್ ಉಗ್ಗಿನ ಇನ್ನೊಂಚೂರೇಚೂರು ಶ್ರಮ ವಹಿಸಿದ್ದಿದ್ದರೆ `ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರ ಇನ್ನೂ ಬೇರೆಯದ್ದೇ ಮಟ್ಟದಲ್ಲಿರುತ್ತಿತ್ತು. ಆದರೂ ಪಕ್ಕಾ ಕಮರ್ಷಿಯಲ್ ಸಿನಿಮಾ ಬಯಸುವ ಪ್ರೇಕ್ಷಕರಿಗೆ ವಾಸು ಮೋಸ ಮಾಡೋದಿಲ್ಲ.
#
No Comment! Be the first one.