ರಾಮಾಚಾರಿ ಸಿನಿಮಾ ಗೆಲ್ಲೋದಕ್ಕೆ ಯಶ್-ರಾಧಿಕಾ ಪಂಡಿತ್ ಕಾರಣ ಅಂದರು. ರಾಜಕುಮಾರ ಸಿನಿಮಾದ ಗೆಲುವು ಪವಾಡ ಅಂತಾ ಮಾತಾಡಿಕೊಂಡರು. ಡೈರೆಕ್ಟ್ರು ಸಂತೋಷ್ ನಿಜಕ್ಕೂ ಪ್ರತಿಭಾವಂತನಾ ಅನ್ನೋದು ಈ ಸಿನಿಮಾದಲ್ಲಿ ಸಾಬೀತಾಗಲಿದೆ ಬಿಡಿ ಅಂತಾ ಸಿನಿಮಾರಂಗದ ಮಂದಿ ಈಗಲೂ ಮಾತಾಡಿಕೊಳ್ಳುತ್ತಲೇ ಇದ್ದಾರೆ. ಪ್ರೇಕ್ಷಕರನ್ನು ರಂಜಿಸಲು ಬೇಕಿದ್ದ ಎಲ್ಲ ಅಂಶಗಳನ್ನೂ ಬೆರೆಸಿ, ಎರಡು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರನ್ನು ಚಿತ್ರೋದ್ಯಮದ ಜನ ಯಾಕಿಷ್ಟು ಅನುಮಾನದಿಂದ ನೋಡುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಯುವರತ್ನ ಸಂತೋಷ್ ವೃತ್ತಿಜೀವನಕ್ಕೆ ಮಹಾತಿರುವು ನೀಡಬೇಕಿರುವ ಸಿನಿಮಾ. ಪವರ್ ಸ್ಟಾರ್ ನಟನೆಯ ಹಿಂದಿನ ನಟಸಾರ್ವಭೌಮ ಸಿನಿಮಾವನ್ನು ಅವರ ಅಭಿಮಾನಿಗಳೇ ಇಷ್ಟಪಟ್ಟಿರಲಿಲ್ಲ. ಯುವರತ್ನ ಗೆಲ್ಲಲೇಬೇಕಿರುವ ಅನಿವಾರ್ಯತೆ ಸ್ವತಃ ಪುನೀತ್ ಅವರಿಗಿದೆ. ಕೆ.ಜಿ.ಎಫ್ ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದ ದೃಷ್ಟಿಯನ್ನು ತನ್ನತ್ತ ಕೇಂದ್ರೀಕರಿಸಿಕೊಂಡಿರುವ ಹೊಂಬಾಳೆ ಸಂಸ್ಥೆ ದೊಡ್ಡಸ್ತಿಕೆಯನ್ನು ಮುಂದುವರೆಸುತ್ತಾ ಎಂದು ಇಡೀ ಭಾರತೀಯ ಚಿತ್ರರಂಗ ಬೆರಗುಗಣ್ಣಿನಿಂದ ಕಾದು ಕುಳಿತಿದೆ. ಈ ಎಲ್ಲ ಕುತೂಹಲಗಳ ನಡುವೆ ಯುವರತ್ನ ಇಂದು ಬಿಡುಗಡೆಯಾಗಿದೆ.
ಹೇಗಿದೆ ಯುವರತ್ನ? : ಆರ್ ಕೆ ಯೂನಿವರ್ಸಿಟಿ ಎನ್ನುವ ಗೌರ್ಮೆಂಟ್ ಕಾಲೇಜು. ಶಿಕ್ಷಣದ ವ್ಯಾಪಾರೀಕರಣದ ವಿರುದ್ಧ ಹೋರಾಡುವ ಆ ಕಾಲೇಜಿನ ಮುಖ್ಯಸ್ಥ. ಕಾಲೇಜಿನೊಳಗೆ ರೌಡಿಸಮ್ಮು, ಡ್ರಗ್ಸು, ಮಾಫಿಯಾವನ್ನು ತೂರಿಸಲು ಪಣತೊಟ್ಟವರು ರಾಜ್ಯದ ಶಿಕ್ಷಣ ಮಂತ್ರಿ ಮತ್ತಾತನ ಬಾಲಬಡುಕರು. ಹನ್ನೆರಡು ವರ್ಷಗಳ ಹಿಂದೆ ಇದೇ ಯೂನಿವರ್ಸಿಟಿಯ ಮುಖ್ಯಸ್ಥ ಗುರುದೇವ್ ರಿಂದ ಹೊರಹಾಕಿಸಿಕೊಂಡ ಯುವರಾಜ. ಅದೇ ವ್ಯಕ್ತಿ ಈಗ ಅರ್ಜುನನ ವೇಷದಲ್ಲಿ ಮತ್ತೆ ಎಂಟ್ರಿ ಕೊಟ್ಟಿರುತ್ತಾನೆ. ಅದು ಯಾಕೆ? ಯುವ ಅರ್ಜುನನಾಗಿ ಅಷ್ಟು ವರ್ಷದ ನಂತರ ಬರಲು ಕಾರಣ ಯಾವುದು? ಅಸಲಿಗೆ ಯುವರಾಜ್ ಏನಾಗಿರುತ್ತಾನೆ? ಆರ್ ಕೆ ಯೂನಿವರ್ಸಿಟಿ ಮತ್ತು ಗುರುದೇವ್ ನೆತ್ತಿಗೆ ಸುತ್ತಿಕೊಳ್ಳುವ ಅರೋಪ ಯಾವುದು? ಅದರಿಂದ ಯೂನಿವರ್ಸಿಟಿಗೆ ಮುಕ್ತಿ ಸಿಗುತ್ತದಾ? ಅಥವಾ ಬಾಗಿಲು ಹಾಕುತ್ತದಾ? ಎಂಬಿತ್ಯಾದಿ ವಿವರಗಳು ಯುವರತ್ನ ಚಿತ್ರದಲ್ಲಿ ಎಳೆಎಳೆಯಾಗಿ ತೆರೆದುಕೊಳ್ಳುತ್ತದೆ.
ನಿಮ್ಮನ್ನು ನೋಡಿದರೆ ಸ್ಟೂಡೆಂಟ್ ಥರಾನೇ ಇದ್ದೀರ ಅಂತಾ ಹೇಳಿದಾಗ ಏನ್ ಮಾಡದು ನನಗೂ ನಮ್ಮಣ್ಣಂಗೂ ವಯಸ್ಸೇ ಆಗಲ್ಲ ಅಂತಾ ಪುನೀತ್ ಹೇಳುವಾಗ ನಿಜ ಅನ್ನಿಸಿತ್ತದೆ. ಹಾಗೇ, ನಂದು ಪ್ರೋಟೀನ್ ವಿಟಮಿನ್ನಿಂದ ಬಂದಿರೋ ಮಾಸ್ ಅಲ್ಲ ಬ್ಲಡ್ಡಲ್ಲೇ ಬಂದಿರೋ ಮಾಸ್ ಅನ್ನೋದೆಲ್ಲಾ ಯಾರನ್ನೋ ತಿವಿಯುವ ಮಾತು ಅಂದುಕೊಳ್ಳುವಂತಿಲ್ಲ.
ಶಿಕ್ಷಣದ ವ್ಯಾಪಾರವನ್ನು ತಡೆಯುವ, ಕಾಲೇಜನ್ನು ಉಳಿಸಿಕೊಳ್ಳುವ ಹೋರಾಟದ ಕಥೆ ಈ ಚಿತ್ರದ್ದಾಗಿರುವುದರಿಂದ ಅಲ್ಲಲ್ಲಿ ಬೇಕಾಬಿಟ್ಟಿ ಬೋಧನೆ ಕೂಡಾ ಬೆಸೆದುಕೊಂಡಿದೆ. ಸಂಭಾಷಣೆ ಕೆಲವುಕಡೆ ಪರ್ಸನಾಲಿಟಿ ಡೆವಲಪ್ ಮೆಂಟ್ ಪ್ರವಚನದಂತೆ ಕೇಳಿಸುತ್ತದೆ. ನಿರೂಪಣೆಯಂತೂ ಪಾಠದಂತೆ ಪ್ರದರ್ಶನಗೊಂಡಿದೆ. ಕತೆ ಕ್ಯಾಂಪಸ್ಸಿನಿಂದ ಯಾವಾಗ ಹೊರಬರುತ್ತದೋ ಅನ್ನಿಸುವಂತೆ ಮಾಡುತ್ತದೆ.
ತಂತ್ರ-ಜ್ಞಾನ: ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿ, ಕಾರ್ತಿಕ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿರುವ ಯುವರತ್ನ ಚಿತ್ರ ತಾಂತ್ರಿಕವಾಗಿ ಅದ್ದೂರಿಯಾಗಿ ಮೂಡಿಬಂದಿದೆ. ಹಾಡುಗಳ ಸಾಹಿತ್ಯ ಒಂದಕ್ಕಿಂತಾ ಒಂದು ಚೆಂದ ಇವೆ. ಆದರೆ, ಎಸ್ ತಮನ್ ತಮ್ಮ ಟ್ಯೂನುಗಳಿಗೆ ಇನ್ನೊಂಚೂರು ಶಕ್ತಿ ತುಂಬಬೇಕಿತ್ತು. ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ನೋಡುಗರ ಕಣ್ಣೆದುರಿಗೆ ವಂಡರ್ ಜಗತ್ತನ್ನೇ ಸೃಷ್ಟಿಸಿದೆ. ಜ್ಞಾನೇಶ್ ಬಿ ಮಠದ್ ಸಂಕಲನ ಮೊನಚಾಗಿದೆ. ಶಿವಕುಮಾರ್ ಕಲಾ ನಿರ್ದೇಶನ ಮೋಹಕ. ಚಿನ್ನಿಪ್ರಕಾಶ್, ಜಾನಿ, ಸಿರೀಶ್ ಮತ್ತು ಮೋಹನ್ ಪವರ್ ಸ್ಟಾರ್ ಈವರೆಗೆ ಹಾಕಿರದ ಸ್ಟೆಪ್ಪುಗಳನ್ನು ಹಾಕಿಸಿದ್ದಾರೆ. ರಾಮ್ ಲಕ್ಷ್ಮಣ್, ಅಂಬು ಅರಿವು, ವಿಜಯ್, ದಿಲೀಪ್ ಸುಬ್ರಹ್ಮಣ್ಯಂ ಸಂಯೋಜಿಸಿರುವ ಸಾಹಸ ದೃಶ್ಯಗಳು ಎದೆ ನಡುಗಿಸುವಂತಿವೆ. ಯೋಗಿ ಜಿ ರಾಜ್ ವಸ್ತ್ರವಿನ್ಯಾಸ ನಿಜಕ್ಕೂ ಆಟ್ರಾಕ್ಟೀವ್ ಆಗಿದೆ.
ಪಾತ್ರಧಾರಿಗಳ ಪವರ್: ಪವರ್ ಸ್ಟಾರ್ ಹುಟ್ಟು ಕಲಾವಿದ. ಪಾತ್ರ ಯಾವುದಾದರೂ ತನ್ಮಯರಾಗಿ ಅದರೊಳಗಿಳಿದು ಅಭಿನಯಿಸುತ್ತಾರೆ. ಕ್ರಾಂತಿಕಾರಕ ಪಾತ್ರವೊಂದರ ಮೂಲಕ ಪುನೀತ್ ಯುವರತ್ನನಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ, ಯುವಕರನ್ನು ಅಪ್ಪಿಕೊಳ್ಳುತ್ತಾರೆ. ನಾಯಕಿ ಸಯೀಶಾರದ್ದು ಬಣ್ಣ ಜಾಸ್ತಿ ನಟನೆ ಕಡಿಮೆ. ಪ್ರಕಾಶ್ ರೈ, ಸಾಯಿಕುಮಾರ್ ರಂಥಾ ದೈತ್ಯ ನಟರ ನಡುವೆಯೂ ಧನಂಜಯ ತಮ್ಮ ಅಭಿನಯದ ಮೂಲಕ ಗಮನ ಸೆಳೆಯುತ್ತಾರೆ. ದಿಗಂತ್, ಸೋನು ಗೌಡ, ವಿಶಾಲ್ ಹೆಗ್ಡೆ, ಸಾಧುಕೋಕಿಲ, ರಂಗಾಯಣ ರಘು, ಅಚ್ಯುತ್ ಕುಮಾರ್, ಅವಿನಾಶ್, ಸುಧಾರಾಣಿ, ಪ್ರಕಾಶ್ ಬೆಳವಾಡಿ, ತಾರಕ್ ಪೊನ್ನಪ್ಪ, ರಾಜೇಶ್ ನಟರಂಗ, ಗುರುದತ್, ಕುರಿ ಪ್ರತಾಪ್, ಹನುಮಂತೇಗೌಡ ಸೇರಿದಂತೆ ಯುವರತ್ನದ ತುಂಬ ಜನಜಂಗುಳಿಯ ನಡುವೆಯೂ ಎದ್ದು ಕಾಣೋದು ಪ್ರಕಾಶ್ ರೈ ನಟನೆ.
ಒಟ್ಟಾರೆಯಾಗಿ ಯುವರತ್ನ ಯುವಕರನ್ನೇ ಗಮನದಲ್ಲಿಟ್ಟುಕೊಂಡು, ಆ ಮೂಲಕ ಅವರ ಹೆತ್ತವರನ್ನೂ ಸೆಳೆಯುವ ಪ್ರಯತ್ನ. ಕ್ಯಾಂಪಸ್ಸು, ಫೀಲ್ಡಿನಿಂದ ಹೊರಬಂದು ಕತೆಯನ್ನು ಬೇರೆ ದಾರಿಗೆ ಕರೆದೊಯ್ದಿದ್ದರೆ ಸಿನಿಮಾ ಬೇರೆಯದ್ದೇ ಲೆವೆಲ್ಲು ತಲುಪುತ್ತಿತ್ತು. ಆದರೂ ಪವರ್ ಸ್ಟಾರ್ ಅಭಿಮಾನಿಗಳು ಮಾತ್ರವಲ್ಲದೆ ಎಲ್ಲರೂ ನೋಡಬಹುದಾದ ಸಿನಿಮಾವಾಗಿ ಯುವರತ್ನ ಮೂಡಿಬಂದಿದೆ ಅನ್ನೋದು ಖುಷಿಯ ವಿಚಾರ.