Connect with us

ಕಲರ್ ಸ್ಟ್ರೀಟ್

ಸ್ವಾರ್ಥದ ದುನಿಯಾದಲ್ಲಿ ಬಿತ್ತು ಮೊದಲ ಗುನ್ನ!

Published

on

ದುನಿಯಾ ಚಿತ್ರದಲ್ಲಿ ಸಹಜವಾದ ಫೈಟ್ ಸೀನುಗಳ ಮೂಲಕವೇ ಸಾಹಸ ನಿರ್ದೇಶಕರಾಗಿ ಹೆಸರುವಾಸಿಯಾದವರು ಡಿಫರೆಂಟ್ ಡ್ಯಾನಿ. ಆ ಚಿತ್ರದ ಮಹಾ ಗೆಲುವಿನ ಭಾಗವಾಗಿದ್ದರೂ ಅದೇ ಚಿತ್ರದ ಸಂಭ್ರಮದಲ್ಲಿ ಅವಮಾನಿತರಾಗಿ ನಿಂತವರು, ಅದನ್ನೇ ಕೆಂಡದಂತೆ ಎದೆಯಲ್ಲಿಟ್ಟುಕೊಂಡು ಮತ್ತಷ್ಟು ಖ್ಯಾತಿ ಗಳಿಸಿಕೊಂಡವರು ಡ್ಯಾನಿ. ಕನ್ನಡ ಮಾತ್ರವಲ್ಲದೆ ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಬ್ಯುಸಿಯಾಗಿರೋ ಅವರ ಬದುಕೂ ಒಂದು ಸಾಹಸವೇ!
ದಶಕಗಳಷ್ಟು ಹಿಂದೆ ಅಂದರೆ ಸರಿಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಅಚಾನಕ್ಕಾಗಿ ಆ ಹುಡುಗ ಪ್ರೀಮಿಯರ್ ಸ್ಟುಡಿಯೋದತ್ತ ಸುಳಿಯುತ್ತಾನೆ. ಅಲ್ಲಿ ಕುಮಾರ್ ಬಂಗಾರಪ್ಪ ಅಭಿನಯದ ಅಂಗೈಯಲ್ಲಿ ಅಪ್ಸರೆ ಎಂಬ ಚಿತ್ರದ ಚಿತ್ರೀಕರಣ ನಡೆಯುತ್ತಿರುತ್ತದೆ. ವಯೋ ಸಹಜ ಕುತೂಹಲದಿಂದ ಆ ಹುಡುಗ ಸ್ಟುಡಿಯೋದೊಳಗೆ ಎಂಟ್ರಿ ಕೊಡುವ ಹೊತ್ತಿಗೆಲ್ಲ ಅಲ್ಲಿ ಸಾಹಸ ದೃಷ್ಯಾವಳಿಗಳ ಚಿತ್ರೀಕರಣ ನಡೆಯುತ್ತಿರುತ್ತೆ. ಹಿಂದೆ ಫೈಟರುಗಳು ಹತ್ತನ್ನೆರಡಡಿ ಎತ್ತರದಿಂದ ಕೆಳ ಜಿಗಿಯೋ ಸನ್ನಿವೇಷವದು. ಅದನ್ನು ಕಂಡ ಈ ಹುಡುಗ ತಾನೇ ಆ ಸಾಹಸ ಸನ್ನಿವೇಷವನ್ನು ಮಾಡಲು ಮುಂದಾಗುತ್ತಾನೆ. ಆತನ ಉತ್ಸಾಹ ಕಂಡ ಫೈಟ್ಮಾಸ್ಟರ್ ಅವಕಾಶ ಕೊಟ್ಟೇಟಿಗೆ ಹುಡುಗ ಪಳಗಿದ ಫೈಟರ್‌ನಂತೆ ಪುಟಿದೆದ್ದಿದ್ದೇ ಅದೇ ಚಿತ್ರದಲ್ಲಿ ಫೈಟರ್ ಆಗೋ ಅವಕಾಶವನ್ನೂ ಗಿಟ್ಟಿಸಿಕೊಳ್ಳುತ್ತಾನೆ.
ಇದೆಲ್ಲ ನಡೆಯುವ ಹೊತ್ತಿಗೆ ಆತನಿಗೆ ಕೇವಲ ಹದಿನೈದು ವರ್ಷ ವಯಸ್ಸು. ಆತ ಡಿಫರೆಂಟ್ ಡ್ಯಾನಿ!
ಹೀಗೆ ಅನಿರೀಕ್ಷಿತವಾಗಿ ತನ್ನ ಆಂತರ್ಯದ ಕನಸನ್ನು ನನಸಾಗಿಸಿಕೊಂಡ ಡ್ಯಾನಿ ಮೈಸೂರಲ್ಲಿ ನಲವತೈದು ಅಡಿ ಎತ್ತರದಿಂದ ಲೀಲಾಜಾಲವಾಗಿ ಜಿಗಿದಿದ್ದರು. ಅದನ್ನು ಕಂಡ ಕುಮಾರ್ ಬಂಗಾರಪ್ಪ ಇವರಿಗೆ ಫೈಟರ್ ಕಾರ್ಡನ್ನು ಕೊಡಿಸಿದ್ದೇ ಡ್ಯಾನಿ ಬಹು ಬೇಡಿಕೆಯ ಫೈಟರ್ ಆಗಿ ಬದಲಾಗಿದ್ದರು. ಇದೆಲ್ಲ ಆದ ನಂತರ ಡ್ಯಾನಿ ಶಾಸ್ತ್ರೋಕ್ತವಾಗಿ ಫೈಟರ್ ಆಗಿ ಕಾರ್ಯ ನಿರ್ವಹಿಸಿದ್ದ ಮೊದಲ ಚಿತ್ರ ವಿನೋದ್ ಪ್ರಭಾಕರ್ ಅಭಿನಯದ ಕ್ಯಾಪ್ಟನ್ ಚಿತ್ರದಲ್ಲಿ. ಆ ನಂತರ ಅಖಂಡ ಮುನ್ನೂರೈವತ್ತು ಚಿತ್ರಗಳಲ್ಲಿ ಡ್ಯಾನಿ ಫೈಟರ್ ಆಗಿ ಕಾರ್ಯನಿರ್ವಹಿಸಿದ್ದರು. ಅದು ನಿಜಕ್ಕೂ ಕ್ಷಣವೂ ಸಾವಿಗೆದುರಾಗುವಂಥಾ ಕೆಲಸ!
ಫೈಟರ್‌ಗಳೆಂದರೆ ಅಂಥಾ ಸಾಹಸ ಮಾಡಿಯೂ ಅದರ ಕ್ರೆಡಿಟ್ಟನ್ನೆಲ್ಲ ಹೀರೋಗಳಿಗೆ, ನಟ ನಟಿಯರಿಗೆ ಬಿಟ್ಟುಕೊಟ್ಟು ಜೀವವನ್ನೇ ಒತ್ತೆಯಿಟ್ಟು ಉಸಿರಾಡೋ ವೃತ್ತಿ. ಅದರ ಸಂಕಟ ಹೆಚ್ಚಿನ ಸಂದರ್ಭಗಳಲ್ಲಿ ಪ್ರೇಕ್ಷಕರಿಗೂ ಗೊತ್ತಾಗುವುದಿಲ್ಲ. ಡ್ಯಾನಿ ಅದೆಷ್ಟೋ ಸಾರಿ ಸತ್ತೇ ಹೋಗುವಂಥಾ ಅಪಾಯಗಳನ್ನು ಮೈ ಮೇಲೆಳೆದುಕೊಂಡಿದ್ದಾರೆ. ವಿಷ್ಣುವರ್ಧನ್ ಅವರಿಗೆ ಡ್ಯೂಪ್ ಆಗಿ ಮೇಕೆದಾಟುವಿನಲ್ಲಿ ೧೭೫ ಅಡಿಯಿಂದ ದುಮುಕಿದ್ದ ಡ್ಯಾನಿ ಬದುಕುಳಿದಿದ್ದೇ ಹೆಚ್ಚು. ಲಾಕಪ್ ಡೆತ್, ಯುದ್ಧ ಮುಂತಾದ ಚಿತ್ರಗಳ ಚಿತ್ರೀಕರಣದ ಸಂದರ್ಭದಲ್ಲಯೂ ಅವರು ಸಾವಿಗೆ ಮುಖಾಮುಖಿಯಾಗಿದ್ದರು. ಹಾಯ್ ಬೆಂಗಳೂರ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಂತೂ ಟ್ರಾಫಿಕ್ ಪೊಲೀಸ್ ಜೀಪು ಡ್ಯಾನಿಗೆ ಹಿಂಬದಿಯಿಂದ ಬಂದು ಹೊಡೆದಿತ್ತು. ಆ ರಭಸಕ್ಕೆ ಬೆನ್ನಿನ ಭಾಗ ಓರೆಯಾಗಿ ಹೋಗಿತ್ತು. ಆಪರೇಷನ್ ಮಾಡಿಸಿದರೆ ಮತ್ತೆಂದೂ ಫೈಟರ್ ಆಗಲು ಸಾಧ್ಯವಿಲ್ಲ ಎಂದರಿತ ಡ್ಯಾನಿ ಆ ನೋವು ನುಂಗಿಕೊಂಡೇ ವೃತ್ತಿಯಲ್ಲಿ ಮುಂದುವರೆದಿದ್ದರು. ಅದು ಶಾಶ್ವತ ಊನವಾಗಿ ಈವತ್ತಿಗೂ ಡ್ಯಾನಿ ಜೊತೆಗಿದೆ!
ಹಾಗೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಫೈಟರ್ ಆಗಿ ಕೆಲಸ ಮಾಡಿದ್ದ ಡ್ಯಾನಿ ಸ್ವತಂತ್ರ ಸಾಹಸ ನಿರ್ದೇಶಕರಾಗಿದ್ದು ಎಕ್ಸ್‌ಕ್ಯೂಸ್‌ಮಿ ಚಿತ್ರದ ಮೂಲಕ. ಅದರಲ್ಲಿ ಡಿಫರೆಂಟಾದ ಸಾಹಸ ಪಟ್ಟುಗಳ ಮೂಲಕ ಅವರು ಗಮನ ಸೆಳೆದಿದ್ದರು. ಸಹಜವಾದ ಫೈಟ್ ಸೀನುಗಳು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿದ್ದವು. ಮೊದಲ ಚಿತ್ರದಲ್ಲಿಯೇ ಡ್ಯಾನಿಯ ವಿಭಿನ್ನ ಕಸುಬುದಾರಿಕೆ ಕಂಡ ಮಾಧ್ಯಮಗಳೂ ಡ್ಯಾನಿ ಡಿಫರೆಂಟು ಅಂತ ಹಾಡಿ ಹೊಗಳಿದ್ದವು. ಆ ಮೂಲಕ ಅವರು ಡಿಫರೆಂಟ್ ಡ್ಯಾನಿ ಎಂದೇ ಪ್ರಖ್ಯಾತರಾಗಿದ್ದರು.
ಹೆಸರಲ್ಲಿಯೇ ಡಿಫರೆಂಟ್ ಎಂಬ ವಿಶೇಷಣ ಸೇರಿದ್ದರಿಂದ ಪ್ರತೀ ಚಿತ್ರದಲ್ಲಿಯೂ ಅದಕ್ಕೆ ತಕ್ಕುದಾಗಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಡ್ಯಾನಿಯೆದುರು ಸೃಷ್ಟಿಯಾಗಿತ್ತು. ಅದುವೇ ಅವರನ್ನು ವರ್ಷಾಂತರಗಳ ನಂತರವೂ ಹಳತಾಗದಂತೆ ಪೊರೆಯುತ್ತಾ ಬಂದಿದೆ. ಇಂಥಾ ಡ್ಯಾನಿಗೆ ದೊಡ್ಡ ಹೆಸರು ತಂದು ಕೊಟ್ಟ ಚಿತ್ರ ದುನಿಯಾ. ಅದರ ಭಾರೀ ಗೆಲುವಿನಲ್ಲಿ ಅವರ ಪಾಲೂ ಇತ್ತು. ಆದರೆ ಈ ಚಿತ್ರದ ಮೊದಲ ಶೋನ ನಂತರ ಚಿತ್ರ ತಂಡದ ಕೆಲ ಮಂದಿ ಬದಲಾಗಿ ಬಿಟ್ಟಿದ್ದರು. ತಾವೇ ಟಿಕೆಟು ಖರೀದಿಸಿ ಆ ಚಿತ್ರವನ್ನು ಮೊದಲ ಶೋನಲ್ಲಿ ನೋಡಿದ್ದ ಡ್ಯಾನಿಗೆ ಆ ಚಿತ್ರದ ಗೆಲುವಿನ ಸಂಭ್ರಮದಲ್ಲಿಯೂ ಅವಮಾನವಾಗಿತ್ತು. ಪ್ಯಾಲೇಸ್ ಗ್ರೌಂಡಿನಲ್ಲಿ ನಡೆದಿದ್ದ ಆ ಸಮಾರಂಭಕ್ಕೆ ಕಡೇ ಘಳಿಗೆಯಲ್ಲಿ ನಿರ್ಮಾಪಕ ಸಿದ್ದರಾಜು ಕರೆ ಮಾಡಿ ಆಹ್ವಾನಿಸಿದ್ದರಂತೆ. ಆದರೆ ಹೆಬ್ಬಾಗಿಲಲ್ಲಿಯೇ ಡ್ಯಾನಿಯನ್ನು ತಡೆದು ನಿಲ್ಲಿಸಲಾಗಿತ್ತು. ಕಡೆಗೆ ಸಾರ್ವಜನಿಕರೇ ಅವರ ಗುರುತು ಹಿಡಿದು ಪೊಲೀಸರಿಗೆ ಹೇಳಿ ಒಳ ಬಿಟ್ಟಿದ್ದರು. ಆದರೆ ಅಲ್ಲಿಗೆ ಹೋದರೂ ದೊಡ್ಡ ಹೀರೋಗಳೆಲ್ಲ ಬಂದು ಹೋದ ಮೇಲೆ ಡ್ಯಾನಿಯನ್ನು ಕಾಟಾಚಾರಕ್ಕೆ ವೇದಿಕೆಗೆ ಕರೆದು ಶೀಲ್ಡು ಕೊಟ್ಟು ಕಳಿಸಲಾಗಿತ್ತು.
ಆದರೆ ಆ ಹೊತ್ತಿಗೆಲ್ಲ ಡ್ಯಾನಿ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಹೊಂದಿದ್ದರು. ಯಾಪಾಟಿ ಬೆಳೆದರೆಂದರೆ ಯಾವುದೇ ಚಿತ್ರಕ್ಕಾದರೂ ಅವರನ್ನು ನಾಲಕ್ಕು ತಿಂಗಳ ಮುಂಚೆಯೇ ಬುಕ್ ಮಾಡೋ ವಾತಾವರಣ ಸೃಷ್ಟಿಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೇ ಮೊದಲು ಡ್ಯಾನಿಯ ಡೇಟು ಫಿಕ್ಸ್ ಮಾಡುವಂತೆ  ಚಿತ್ರತಂಡಕ್ಕೆ ಸಲಹೆ ನೀಡುವ ಮಟ್ಟಕ್ಕೆ ಅವರು ಬೆಳೆದು ನಿಂತಿದ್ದರು. ಹಾಗೆ ಡ್ಯಾನಿ ಫೈಟ್ ಮಾಸ್ಟರ್ ಆಗಿ ಇದುವರೆಗೂ ೬೦೫ ಚಿತ್ರಗಳನ್ನು ಮಾಡಿದ್ದಾರೆ. ತೆಲುಗಿನಲ್ಲಿ ವರ್ಮಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ಡಾಲಿ ಧನಂಜಯ್ ಅಭಿನಯದ ಭೈರವ ಗೀತಾ ಅವರ 602ನೇ ಚಿತ್ರವಂತೆ!
ಈ ನಡುವೆ ಡಿ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಿ ನಾಯಕನಾಗಲೂ ಡ್ಯಾನಿ ಮುಂದಾಗಿದ್ದರು. ಆದರದು ಮುಂದುವರೆಯಲಿಲ್ಲ. ಇದೀಗ ಆ ಚಿತ್ರಕ್ಕೆ ಬೇರೆ ಹೀರೋನನ್ನು ಹಾಕಿಕೊಂಡು ನಿರ್ದೇಶನ ಮಾಡೋ ಕನಸು ಹೊಂದಿದ್ದಾರೆ. ಇಂಥಾ ಡ್ಯಾನಿ ಮೂಲತಃ ಕೊಳ್ಳೇಗಾಲದವರು. ಆದರೆ ಬೆಳೆದಿದ್ದೆಲ್ಲವೂ ಮೈಸೂರಿನಲ್ಲಿ ಬನ್ನೂರು, ಮುಳ್ಳೂರು ಸೇರಿದಂತೆ ಒಂದಷ್ಟು ಊರುಗಳಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಡ್ಯಾನಿಗೆ ಓದೆಂದರೆ ಅಷ್ಟಕ್ಕಷ್ಟೇ. ಅವರ ತಂದೆ ಸಿಐಡಿ ಅಧಿಕಾರಿಯಾಗಿದ್ದವರು. ಅಮ್ಮ ಗೃಹಿಣಿ. ತಂದೆ ಆಗಾಗ ಕೆಲ ಸಾಹಸಮಯ ವ್ಯಾಯಾಮ ಮಾಡಿಸುತ್ತಿದ್ದರಲ್ಲಾ? ಅದುವೇ ಡ್ಯಾನಿಯನ್ನು ಸಾಹಸ ನಿರ್ದೇಶಕನಾಗೋ ಕನಸಿನತ್ತ ಕೈ ಹಿಡಿದು ಮುನ್ನಡೆಸಿತ್ತು. ಆ ಬಳಿಕೆ ಚಿಕ್ಕ ವಯಸ್ಸಿಗೇ ಫೈಟರ್ ಆಗಿ ಪ್ರತೀ ಕ್ಷಣವೂ ಸಾವಿನೊಂದಿಗೆ ಸರಸವಾಡುತ್ತಾ ಬಂದಿದ್ದ ಡ್ಯಾನಿ ವಿಷ್ಣುವರ್ಧನ್, ಶಶಿಕುಮಾರ್, ದೇವರಾಜ್, ಮಾಲಾಶ್ರೀ, ಚರಣ್ ರಾಜ್ ಸೇರಿದಂತೆ ಅನೇಕ ನಟ ನಟಿಯರಿಗೆ ಡ್ಯೂಪ್ ನೀಡಿದ್ದಾರೆ. ಈ ಕ್ಷಣಕ್ಕೂ ಅವರು ಕನ್ನಡ, ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.  ಕರ್ನಾಟಕ ಚಲನಚಿತ್ರ ಸಾಹಸ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಕೂಡಾ ಕಾರ್ಯ ನಿರ್ವಹಿಸುತ್ತಿರುವ ಡಿಫರೆಂಟ್ ಡ್ಯಾನಿ ಅವರಿಗೆ ಒಳಿತಾಗಲಿ…
– ಅರುಣ್ ಕುಮಾರ್.ಜಿ

Continue Reading
Advertisement
Click to comment

Leave a Reply

Your email address will not be published. Required fields are marked *

ಕಲರ್ ಸ್ಟ್ರೀಟ್

ಇರುವುದೆಲ್ಲವ ಬಿಟ್ಟು ನಿರ್ದೇಶಕನ ಅಸಲೀ ಕಥೆ!

Published

on

ಮೊದಲ ಚಿತ್ರ ಜಲ್ಸಾ ಮೂಲಕವೇ ಭರವಸೆ ಹುಟ್ಟಿಸಿದ್ದ ಯುವ ನಿರ್ದೇಶಕ ಕಾಂತ ಕನ್ನಲ್ಲಿ. ಇವರು ನಿರ್ದೇಶನ ಮಾಡಿರುವ ಎರಡನೇ ಚಿತ್ರ ಇರುವುದೆಲ್ಲವ ಬಿಟ್ಟು… ಬಣ್ಣದ ಲೋಕದ ಕನಸುಗಳನ್ನು ಪುಟ್ಟ ಹಳ್ಳಿಯೊಂದರಲ್ಲಿ ಕಣ್ತುಂಬಿಕೊಂಡಿದ್ದ ಕಾಂತ ಚಿತ್ರರಂಗದ ಬಗ್ಗೆ ನಿರ್ಧಿಷ್ಟವಾಗಿ ಕನಸು ಕಾಣಲೂ ಸಾಧ್ಯವಾಗದಂಥಾ ಹಳ್ಳಿಯಿಂದ ಬಂದವರು. ಆದರೆ ಮನೆಯೊಳಗಿನ ಕಲೆಯ ವಾತಾವರಣದಿಂದ ಆ ನಂಟನ್ನು ಪೊರೆದುಕೊಂಡು ಬಂದಿದ್ದ ಕಾಂತ ಕನ್ನಲ್ಲಿ ನಿರ್ದೇಶಕನಾಗಿ ಹೊರ ಹೊಮ್ಮಿದ್ದರ ಹಿಂದೆ ಬಹು ದೂರದ ಪ್ರಯಾಣವೊಂದಿದೆ!

ಬೆಂಗಳೂರಿಗೆ ಹತ್ತಿರದಲ್ಲೇ ಇದ್ದಾರೂ ಹಳ್ಳಿಗಾಡಿನ ಸ್ವರೂಪವನ್ನೂ ಇನ್ನೂ ಇಟ್ಟುಕೊಂಡಿರೋ ಮಾಗಡಿ ಸಮೀಪದ ಕನ್ನಲ್ಲಿ ಕಾಂತಾರ ಊರು. ತಂದೆ ಶಿವಣ್ಣ ಹರಿಕಥೆಯಲ್ಲಿ ಪ್ರಸಿದ್ಧರಾಗಿದ್ದವರು. ನಾಟಕಗಳಲ್ಲಿಯೂ ಅಭಿನಯಿಸುತ್ತಿದ್ದ ತಂದೆಯ ಪ್ರಭಾವ ಬಾಲ್ಯದಿಂದಲೇ ಕಾಂತಾರ ಮೇಲಾಗಿತ್ತು. ತಂದೆಯ ಜೊತೆ ಹರಿಕಥೆಗಳಿಗೆ ಹಾರ್ಮೋನಿಯಂ ನುಡಿಸಲು ಹೋಗುತ್ತಿದ್ದ ಕಾಂತಾರ ಪಾಲಿಗೆ ಅದುವೇ ಕಲಾ ಜಗತ್ತಿನ ಮೊದಲ ಹೆಜ್ಜೆ.

ಕಾಂತಾ ಅವರಿಗೆ ಆರಂಭದಿಂದಲೂ ಸಿನಿಮಾ ಹಾಡುಗಳೆಂದರೆ ವಿಪರೀತ ಇಷ್ಟ. ಶಾಲಾ ದಿನಗಳಲ್ಲಿಯೇ ಸಿಗುತ್ತಿದ್ದ ಚಿಲ್ಲರೆ ಕಾಸನ್ನು ಕೂಡಿಟ್ಟು ಹೊಸಾ ಕ್ಯಾಸೆಟ್ಟುಗಳು ಬಿಡುಗಡೆಯಾದೇಟಿಗೆ ಖರೀದಿಸಿ ಕೇಳೋ ಕ್ರೇಜ಼ು ಕಾಂತಾಗಿತ್ತು. ಹೀಗೆ ಸಿನಿಮಾ ಹಾಡು ಕೇಳುತ್ತಲೇ ತಾನಾ ಹಾಡು ಬರೆಯಬೇಕೆಂದುಕೊಳ್ಳುತ್ತಿದ್ದ ಕಾಂತಾ ಕಾಲೇಜು ದಿನಗಳಲ್ಲಿ ಪ್ರಸಿದ್ಧ ಹಾಡಿಗೆ ತಾವೇ ಪರ್ಯಾಯ ಸಾಹಿತ್ಯ ಬರೆಯುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದರು. ಕಾಲೇಜಿನಲ್ಲಿ ಸ್ನೇಹಿತರನ್ನು ರೇಗಿಸಲು ಅಚಿಟಿಸಿಕೊಂಡಿದ್ದ ಈ ಗುಂಗು ಕ್ರಮೇಣ ಗೀತರಚನೆಗಾರನಾಗಬೆಂಕೆಂಬ ಕನಸು ಕಾಣಲೂ ಪ್ರೇರೇಪಿಸಿತ್ತು.

ಈ ನಡುವೆಯೇ ಓದು ಮುಗಿಸಿಕೊಂಡು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಲಾರಂಭಿಸಿದ್ದ ಕಾಂತಾ ಅವರಿಗೆ ಹೇಗಾದರೂ ಸಿನಿಮಾ ಜಗತ್ತಿಗೆ ಎಂಟ್ರಿ ಕೊಡಬೇಕೆಂಬ ವಾಂಛೆ ತೀವ್ರವಾಗಿತ್ತು. ಅದೇನೇ ಕೆಲಸವಿದ್ದರೂ ಪ್ರತೀ ಶುಕ್ರವಾರ ಸಿನಿಮಾ ನೋಡಿಯೇ ತೀರುತ್ತಿದ್ದ ಕಾಂತಾ ಹೊಸಬರಿಗೆ ಅವಕಾಶವಿದೆ ಎಂಬ ಸಿನಿಮಾ ಜಾಹೀರಾತೊಂದು ಪತ್ರಿಕೆಯಲ್ಲಿ ಕಣ್ಣಿಗೆ ಬಿದ್ದಾಕ್ಷಣವೇ ಸಿಈದಾ ಗಾಂಧಿನಗರಕ್ಕೆ ತೆರಳಿದರಾದರೂ ಅದರಿಂದ ಯಾವ ಪ್ರಯೋಜನವೂ ಆಗಿರಲಿಲ್ಲ.

ನಂತರ ಕಾಂತಾ ಅವೆನ್ಯೂ ರಸ್ತೆಯ ಜ಼ೆರಾಕ್ಸ್ ಅಂಗಡಿಯೊಂದರಲ್ಲಿ ಕೆಲಸ ಶುರು ಮಾಡಿಕೊಂಡು ಆ ಕಾಲದಲ್ಲಿಯೂ ಸಿನಿಮಾ ಎಂಟ್ರಿಗಾಗಿ ಪ್ರಯತ್ನಿಸುತ್ತಲೇ ಇದ್ದರು. ಈ ಜ಼ೆರಾಕ್ಸ್ ಅಂಗಡಿ ಕೆಲಸದ ಸಂದರ್ಭದಲ್ಲಿಯೇ ತಾನು ಎಸ್ ನಾರಾಯಣ್ ಅವರಿಗೆ ತುಂಬಾ ಕ್ಲೋಸು, ಅವರ ಬಳಿಯೇ ಕೆಲಸಕ್ಕೆ ಸೇರಿಸುತ್ತೇನೆ ಅಂತೆಲ್ಲ ಒಬ್ಬ ಆಸಾಮಿ ಆಸೆ ಹುಟ್ಟಿಸಿದ್ದನಂತೆ. ಆದರೆ ಅದೂ ಕೂಡಾ ಫಲಿಸಲಿಲ್ಲ. ಹೀಗೆ ಒಂದಷ್ಟು ವರ್ಷ ಕಳೆದ ಮೇಲೆ ಸಿಕ್ಕ ಫ್ಯಾಮಿಲಿ ಫ್ರೆಂಡ್ ಒಬ್ಬರು ಕಡೆಗೂ ಕಾಂತಾರನ್ನು ನಿರ್ದೇಶಕ ಶರಣ್ ಕಬ್ಬೂರ್ ಅವರ ಬಳಿ ಕರೆದುಕೊಂಡು ಹೋಗಿದ್ದರು. ಕಾಂತಾ ಪಾಲಿಗೆ ಅವರ ಕನಸಿನ ಬಾಗಿಲು ತೆರೆದುಕೊಂಡಿದ್ದು ಆ ಘಳಿಗೆಯಿಂದಲೇ.

ಕುಳ್ಳರ ಲೋಕ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದ ಶರಣ್ ಆ ನಂತರ ಡಾ ಬಿ ಆರ್ ಅಂಬೇಡ್ಕರ್ ಬಗೆಗಿನ ಚಿತ್ರ ಆರಂಭಿಸಿದ್ದರು. ಅದರಲ್ಲಿ ಅಸಿಸ್ಟೆಂಟ್ ಆಗಿರೋ ಅವಕಾಶವನ್ನು ಕಾಂತಾ ಅವರಿಗೆ ಕೊಟ್ಟಿದ್ದರು. ಇದಕ್ಕೆ ಪ್ರೊಡ್ಯೂಸರ್ ಆಗಿದ್ದವರು ಕಾಂತಾ ಅವರ ತಂದೆಯ ಸ್ನೇಹಿತ. ಅವರೂ ಕೂಡಾ ಚಿತ್ರರಂಗದ ಬಗ್ಗೆ ನೊಂದುಕೊಂಡು ಈ ಸಹವಾಸವೇ ಬೇಡ ಅಂತ ಕಾಂತಾರನ್ನು ಬೇರೆ ಕೆಲಸದತ್ತ ಕಳಿಸಿದ್ದರಂತೆ. ಆ ಹಂತದಲ್ಲಿ ಮತ್ತೆ ಬೇರೆ ಬ್ಯುಸಿನೆಸ್ ಶುರು ಮಾಡಿಕೊಂಡ ಕಾಂತಾ ನಿರ್ದೇಶಕನಾಗೋ ಕನಸನ್ನು ಹತ್ತಿಕ್ಕಲಾರದೆ ಹೇಗೋ ನಿರ್ದೇಶಕ ಎಂ ಡಿ ಶ್ರೀಧರ್ ಅವರ ಗರಡಿ ಸೇರಿಕೊಂಡಿದ್ದರು. ಅವರ ಬದುಕಿನ ಅಸಲೀ ಅಧ್ಯಾಯ ಶುರುವಾಗಿದ್ದು ಆವಾಗಿನಿಂದಲೇ.

ಎಂ ಡಿ ಶ್ರೀಧರ್ ಅವರ ಜೊತೆ ಜಾಲಿಡೇಸ್, ಪೊರ್ಕಿ ಮುಂತಾದ ಚಿತ್ರಗಳಿಗೆ ಕೆಲಸ ಮಾಡೋ ಮೂಲಕ ಕಾಂತಾ ನಿರ್ದೇಶನದ ಪಟ್ಟುಗಳನ್ನು ಅರಿತುಕೊಳ್ಳುವಂತಾಗಿತ್ತು. ಒಂದು ಅಚ್ಚುಕಟ್ಟಾದ ಚಿತ್ರ ರೂಪಿಸಲು ಏನೇನು ಬೇಕೆಂಬ ವಿಚಾರವೂ ಕಾಂತಾಗೆ ಪಕ್ಕಾ ಆಗಿತ್ತು. ಆ ನಂತರದಲ್ಲಿ ಗೀತರಚನೆ ಮಾಡೋ ಹಳೇ ಕನಸಿಗೆ ಪಾಲೀಶು ಹಾಕಿಕೊಂಡ ಕಾಂತಾ ಇಂದ್ರಜಿತ್ ಲಂಕೇಶ್ ನಿರ್ದೇಶನದ ಹುಡುಗ ಹುಡುಗಿ ಚಿತ್ರಕ್ಕೆ ಎರಡು ಹಾಡು ಬರೆದಿದ್ದರು. ನಂತರ ಬುಲೆಟ್ ಪ್ರಕಾಶ್ ಐತಲಕ್ಕಡಿ ಚಿತ್ರದಲ್ಲೊಂದು ಹಾಡು ಬರೆಯಲು ಸಾಧು ಕೋಕಿಲಾ ಅವಕಾಶ ಮಾಡಿಕೊಟ್ಟಿದ್ದರು. ಇದಾದ ನಂತರ ಶಶಾಂಕ್ ಅವರ ಜೊತೆ ಬಚ್ಚನ್, ಕೃಷ್ಣ ಲೀಲಾ ಚಿತ್ರಗಳಿಗೂ ಕೆಲಸ ಮಾಡಿದ ಕಾಂತಾಗೆ ತಾನು ಮಾಡಿದರೆ ನಿರ್ದೇಶನವನ್ನೇ ಮಾಡಬೇಕೆಂಬುದರ ಸಾಕ್ಷಾತ್ಕಾರವೂ ಆಗಿತ್ತು.

ಕಾಂತಾ ಅವರು ಮುಂಗಾರುಮಳೆ೨ ಚಿತ್ರಕ್ಕೆ ಕೋ ಡೈರೆಕ್ಟರ್ ಆಗಿದ್ದ ಕಾಲದಲ್ಲಿಯೇ ಪರಿಚಿತರಾದವರೊಬ್ಬರು ನೀವೇ ಸಿನಿಮಾ ನಿರ್ದೇಶನ ಮಾಡಿ ಅಂತ ಹೇಳಿದ್ದಲ್ಲದೇ ಹಣ ಹೂಡಲೂ ತಯಾರಾಗಿ ನಿಂತಿದ್ದರಂತೆ. ಅದರ ಫಲವಾಗಿ ಶುರುವಾದದ್ದು ಜಲ್ಸಾ. ಇದೀಗ ಕಾಂತಾ ಇರುವುದೆಲ್ಲವ ಬಿಟ್ಟು ಚಿತ್ರದ ಮೂಲಕ ಮತ್ತೆ ನಿರೀಕ್ಷೆ ಹುಟ್ಟಿಸಿದ್ದಾರೆ. ಹಣ ಹೂಡೋ ನಿರ್ಮಾಪಕರಿಗೆ ಚೂರೂ ತೊಂದರೆಯಾಗಕೂಡದೆಂಬ ಮನಸ್ಥಿತಿಯ ಕಾಂತಾಗೆ ಸಿನಿಮಾ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ. ಅಂಥಾ ಗಾಢವಾದ ಸಿನಿಮಾ ವ್ಯಾಮೋಹದಿಂದಲೇ ಅವರು ರೂಪಿಸಿರುವ ಇರುವುದೆಲ್ಲವ ಬಿಟ್ಟು ಚಿತ್ರವೀಗ ತೆರೆ ಕಾಣಲು ತಯಾರಾಗಿದೆ.

Continue Reading

ಕಲರ್ ಸ್ಟ್ರೀಟ್

ಶ್ರೀ ಭರತ ಬಾಹುಬಲಿಯಲ್ಲಿ ಅಣ್ಣಾವ್ರ ಕಾರು!

Published

on

ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ “ಮಾಸ್ಟರ್ ಪೀಸ್” ನಿರ್ದೇಶಿಸಿದ್ದವರು ಮಂಜು ಮಾಂಡವ್ಯ. ಅದಕ್ಕೂ ಮುಂಚೆ ಸಾಕಷ್ಟು ಸೂಪರ್ ಸ್ಟಾರ್ ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಮಂಜು ಮಾಂಡವ್ಯ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. `ಶ್ರೀ ಭರತ ಬಾಹುಬಲಿ’ ಸಿನಿಮಾದ ಮೂಲಕ ಮಂಜು ಮಾಂಡವ್ಯ ನಾಯಕನಟನಾಗುವ ಪ್ರಯತ್ನ ಮಾಡುತ್ತಿದ್ದಾರೆ.

ಇತ್ತೀಚೆಗೆ ಚಿತ್ರದ ಒಂದು ಪ್ರಮುಖ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ಆ ದೃಶ್ಯದಲ್ಲಿ ಆ ಕಾಲದಲ್ಲಿ ಅಣ್ಣಾವ್ರ ಕ್ರೇಜ್ ಎಷ್ಟು ದೊಡ್ಡದು ಎಂದು ತೋರಿಸುವ ಸನ್ನಿವೇಶ ಇತ್ತು. ಆ ದೃಶ್ಯಕ್ಕೆ ಚಿತ್ರತಂಡ ಕಾಂಟೆಸ್ಸಾ ಕಾರ್ ಒಂದನ್ನು ಬುಕ್ ಮಾಡಿತ್ತು. ಅನಿರೀಕ್ಷಿತವಾಗಿ ಬರಬೇಕಾಗಿದ್ದ ಕಾಂಟೆಸ್ಸಾ ಕಾರು ಬರದೇ ಕೈ ಕೊಟ್ಟಿತು. ಆಗ ಬೇರೊಂದು ಮೂಲದಿಂದ ಪ್ರಯತ್ನಿಸಿದಾಗ ಚಿತ್ರತಂಡಕ್ಕೆ ಅಣ್ಣಾವ್ರು ಬಳಸಿದ್ದ ಅಂಬಾಸಡರ್ ಕಾರು ಸಿಕ್ಕಿಬಿಟ್ಟಿತ್ತು ಈ ಬೆಳವಣಿಗೆಯಿಂದ ವಿಪರೀತ ಥ್ರಿಲ್ಲಾದ ಚಿತ್ರತಂಡ ಅಣ್ಣಾವ್ರ ದೃಶ್ಯಕ್ಕೆ ಅಣ್ಣಾವ್ರ ಕಾರೇ ಬಂದಿದ್ದು ನೋಡಿ ಇದು ಅಣ್ಣಾವ್ರ ಆಶೀರ್ವಾದವೇ ಸರಿ ಎಂದು ಭಾವಿಸಿತಂತೆ.

ಮಾನವ ಜೀವನದಲ್ಲಿ ತ್ಯಾಗ ಎಷ್ಟು ಮುಖ್ಯವಾದದ್ದು ಎಂದು ತೋರಿಸುವ ಕಥೆಗೆ ವಿಶೇಷವಾದ ಮಂಜು ಮಾಂಡವ್ಯ ಬ್ರ್ಯಾಂಡ್‌ನ ಹಾಸ್ಯದ ಲೇಪನವಿರುವ ಶ್ರೀ ಭರತ ಬಾಹುಬಲಿ ಕನ್ನಡ ಚಿತ್ರರಸಿಕರಿಗೆ ಹೊಸ ಅನುಭವ ನೀಡಿ ರಂಜಿಸುವುದು ಗ್ಯಾರಂಟಿ.

Continue Reading

ಕಲರ್ ಸ್ಟ್ರೀಟ್

ಸುಗುಣ ಸಂಸಾರಸ್ಥರಾದ ರಘು ಭಟ್!

Published

on

ಸರ್ವಸ್ವ ಚಿತ್ರದ ಮೂಲಕ ನಾಯಕನಟನಾಗಿದ್ದ ರಘು ಭಟ್ ವೈವಾಹಿಕ ಜೀವನಕ್ಕೆ ಅಡಿಯಿರಿಸಿದ್ದಾರೆ. ಬಹು ಕಾಲದಿಂದ ಪ್ರೀತಿಸಿದ್ದ ಸುಗುಣ ಅವರನ್ನು ಕೈ ಹಿಡಿದಿರುವ ರಘು ಅವರ ಆರತಕ್ಷತೆ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ನೆರವೇರಿದೆ. ಸಿಎಂ ಕುಮಾರಸ್ವಾಮಿ ಸೇರಿದಂತೆ, ಸಿನಿಮಾ, ಧಾರಾವಾಹಿ ಮತ್ತು ಮಾಧ್ಯಮ ತಾರೆಯರ ಸಮ್ಮುಖದಲ್ಲಿ ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ.

ನೆಲಮಂಗಲದ ಸುಗುಣ ಬಿ.ಸಿ ಮತ್ತು ರಾಘವೇಂದ್ರ.ಎ ಅವರ ಮೊದಲ ಭೇಟಿ ನಡೆದದ್ದು ಕಾರ್ಯಕ್ರಮವೊಂದರಲ್ಲಿ. ಅಲ್ಲಿಂದ ಪರಿಚಯವಾಗಿ, ಅದು ಪ್ರೀತಿಯಾಗಿ ಇತ್ತೀಚೆಗೆ ಇವರಿಬ್ಬರ ನಿಶ್ಚಿತಾರ್ಥ ಕೂಡಾ ನಡೆದಿತ್ತು. ಕಳೆದ ತಿಂಗಳ ಮೂವತ್ತರಂದು ಮದುವೆಯಾಗಿದ್ದ ರಘು ಭಟ್, ನೆನ್ನೆ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಕೃಷ್ಣಲೀಲೆ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸೋ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದವರು ರಘು ಭಟ್. ಆ ನಂತರದಲ್ಲಿ ಹಲವಾರು ಚಿತ್ರಗಳಲ್ಲಿ ನಾನಾ ಪಾತ್ರಗಳನ್ನು ಮಾಡಿದ್ದ ಅವರು ರಾಮಕೃಷ್ಣ ಗೋವಿಂದ ಚಿತ್ರದ ಮೂಲಕ ನಾಯಕ ನಟನಾಗಿ ಅನಾವರಣಗೊಂಡಿದ್ದರು. ದಾದಾ ಈಸ್ ಬ್ಯಾಕ್, ಅನ್ವೇಷಿ, ಕರ್ವ, ರಘುವೀರ, ಬಕಾಸುರ, ಡ್ರೀಮ್ ಗರ್ಲ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಇದೀಗ ನಾಯಕ ನಟನಾಗಿಯೂ ನೆಲೆ ನಿಲ್ಲುತ್ತಿದ್ದಾರೆ.

ಇದರ ಜೊತೆಗೇ ಈಗ ರಘು ಭಟ್ ಪ್ರೀತಿಸಿದ್ದ ಹುಡುಗಿಯ ಜೊತೆಗೇ ದಾಂಪತ್ಯ ಜೀವನಕ್ಕೆ ಅಡಿಯಿರಿಸಿದ್ದಾರೆ. ನಾಯಕ ನಟನಾಗಿ ಹಲವಾರು ಅವಕಾಶಗಳನ್ನೂ ಹೊಂದಿರುವ ರಘು ಭಟ್ ಅವರ ವೈವಾಹಿಕ ಜೀವನಕ್ಕೆ ಶುಭ ಹಾರೈಸೋಣ…

Continue Reading

Trending

Copyright © 2018 Cinibuzz