ಗೌರಿ ಲಂಕೇಶರದ್ದು ಭಾವುಕ ಮನಸು. ಎಲ್ಲರೊಂದಿಗೂ ಬೆರೆಯುವ ಸಾದಾ ಸೀದಾ ವ್ಯಕ್ತಿತ್ವ. ಬಹುಶಃ ಇಂಥಾ ತಾಯ್ತನ ಇಲ್ಲದೇ ಯಾರದ್ದೋ ಸಂಕಷ್ಟ, ಕಣ್ಣ ಹನಿಗಳನ್ನು ನಮ್ಮದೆಂದೇ ಭಾವಿಸಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಬರೀ ಹಾಗೆ ಭಾವಿಸಿ ಎಸಿ ರೂಮಲ್ಲಿ ಕೂತು ಮೈಮರೆಯಲಿಲ್ಲ.
ಅಂಥವರ ಪರವಾಗಿ ಹೋರಾಡಿದರು.

ಇವತ್ತಿಗೆ ಒಂದು ವರ್ಷಕ್ಕೆ ಸರಿಯಾಗಿ ಜೀವಪರ ಕಾಳಜಿ ಹೊಂದಿರುವವರೆಲ್ಲಾ ಆಘಾತಗೊಂಡಿದ್ದರು. ಪತ್ರಕರ್ತೆಯಾಗಿ, ಹೋರಾಟಗಾರ್ತಿಯಾಗಿ ಸದಾ ಪಾದರಸದಂತೆ ಕ್ರಿಯಾಶೀಲವಾಗಿದ್ದ ಗೌರಿ ಲಂಕೇಶ್ ಹತ್ಯೆ ದೇಶ ವಿದೇಶಗಳಲ್ಲೂ ಸದ್ದು ಮಾಡಿತ್ತು. ಈ ಹತ್ಯೆಯ ಹಿಂದೆ ಯಾರಿದ್ದಾರೋ, ಎಂಥಾ ದುಷ್ಟ ಶಕ್ತಿಗಳು ಇಂಥಾದ್ದೊಂದು ಸಂಚು ಹೊಸೆದಿದೆಯೋ? ಅನ್ನೋ ಪ್ರಶ್ನೆ ಬಿಟ್ಟರೆ ಬೇರೇನೂ ತೋಚದಂತಾಗಿತ್ತು. ಆದರೆ ಒಂದು ವೈಚಾರಿಕ ಸಂಘರ್ಷ, ಸೈದ್ಧಾಂತಿಕ ವಿರೋಧವೇ ಗೌರಿ ಲಂಕೇಶರನ್ನು ಬಲಿ ಪಡೆದಿದೆ ಎಂಬ ಅಭಿಪ್ರಾಯವಂತೂ ಎಲ್ಲೆಡೆ ಪಸರಿಸಿಕೊಂಡಿತ್ತು.

ಗೌರಿ ಲಂಕೇಶರ ವಿಚಾರಗಳನ್ನೆಲ್ಲ ಬೇಷರತ್ತಾಗಿ ಒಪ್ಪಿಕೊಳ್ಳಲೇಬೇಕೆಂದೇನೂ ಇಲ್ಲ. ಅಂಥಾ ವಿಚಾರ ಬೇಧ ನಿಷಿದ್ಧವೂ ಅಲ್ಲ. ಆದರೆ ಅವರೊಂದಿಗೆ ಅಲ್ಪ ಕಾಲ ಕಳೆದವರಿಗೂ ಅವರೊಳಗೆ ಸದಾ ಜಿನುಗುತ್ತಿದ್ದ ತಾಯ್ತನದ ಕಾಳಜಿ, ಕಕ್ಕುಲಾತಿ ತಾಕದಿರಲು ಸಾಧ್ಯವೇ ಇಲ್ಲ. ಗಟ್ಟಿತನ ಮತ್ತು ಭಾವುಕತೆ ವಿಶೇಷ ವ್ಯಕ್ತಿತ್ವಗಳಲ್ಲಿ ಮಾತ್ರ ಒಟ್ಟಿಗೆ ನೆಲೆಸುತ್ತವೆ. ಗೌರಿ ಅವರದ್ದು ಅಂಥಾ ವಿಶೇಷವಾದ, ಅಪರೂಪದ ವ್ಯಕ್ತಿತ್ವ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಪತ್ರಿಕಾ ಜಗತ್ತಿಗೆ ಹೊಸಾ ಓಘ ನೀಡಿ ದಿಕ್ಕು ದೆಸೆಗಳನ್ನೇ ಬದಲಿಸಿದವರು ಲಂಕೇಶ್ ಮೇಷ್ಟ್ರು. ಅವರ ಪ್ರಖರ ವೈಚಾರಿಕ ಮನೋಭಾವ, ಸ್ಪಷ್ಟವಾದ ವಿಚಾರ ಮಂಡನೆ ಮತ್ತು ಯಾವ ಶಕ್ತಿಗೂ ಕೇರು ಮಾಡದೆ ಸತ್ಯ ಬರೆಯುವ ಛಾತಿ ಎಂದೆಂದಿಗೂ ಪ್ರಸ್ತುತ. ಅಂಥಾದ್ದೊಂದು ಪರಂಪರೆಯನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಬಂದಿದ್ದ ಗೌರಿ ಲಂಕೇಶ್ ನಿಜಕ್ಕೂ ಗಟ್ಟಿಗಿತ್ತಿ ಹೆಣ್ಣುಮಗಳು.

ವಾರ ಪತ್ರಿಕೆ ಎಂದರೇನೇ ಎರಡಲಗಿನ ಕತ್ತಿಯ ಮೇಲಿನ ನಡಿಗೆ. ಅದು ಪುರುಷರಿಗೆ ಮಾತ್ರವೇ ಲಾಯಕ್ಕಾದ ವೃತ್ತಿ ಎಂಬ ನಂಬಿಕೆಯೇ ಲಾಗಾಯ್ತಿನಿಂದಲೂ ಬೆಳೆದುಕೊಂಡು ಬಂದಿತ್ತು. ಕನ್ನಡ ಪತ್ರಿಕಾ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಅಂಥಾದ್ದೊಂದು ಸಿದ್ಧ ಸೂತ್ರವನ್ನು ಛಿದ್ರಗೊಳಿಸಿದವರು ಗೌರಿ. ಆ ನಂತರ ಪತ್ರಿಕೆಯನ್ನು ಕಟ್ಟಿ ನಿಲ್ಲಿಸಿದ ರೀತಿ, ಯಾವ ಸವಾಲಿಗೂ ಅಂಜದೆ ಮುಂದುವರೆದ ಪರಾಕ್ರಮಗಳೆಲ್ಲವೂ ಕನ್ನಡ ನಾಡಿನ ಇತಿಹಾಸದಲ್ಲಿ ಯಾವತ್ತಿಗೂ ಅಜರಾಮರವಾಗಿರುತ್ತದೆ.

ದಿಟ್ಟ ಪತ್ರಕರ್ತೆಯಾಗಿ ಸಾಹಿತಿಯಾಗಿ ಹೊರ ಹೊಮ್ಮಿದ ಗೌರಿಯವರು ನಂತರ ಬಡವರ, ದಲಿತರ, ಬಾಯಿ ಸತ್ತವರ ಪರವಾಗಿ ಬೀದಿಗೇ ಬಂದು ಹೋರಾಡಿದರು. ಮೌಢ್ಯಗಳ ವಿರುದ್ಧ ಕೆಂಡ ಕಾರಿದರು. ಕೋಮುವಾದಿ ಮನಸ್ಥಿತಿಗಳ ವಿರುದ್ಧ ಸಮರ ಸಾರಿದರು. ಇಷ್ಟೆಲ್ಲ ಆದ ಮೇಲೆ ಸಹಜವಾಗಿಯೇ ವಿರೋಧಗಳೂ ಹುಟ್ಟಿಕೊಂಡವು. ಆದರೆ, ಇಂಥಾ ವಿರೋಧಗಳೇನೇ ಇದ್ದರೂ ಗೌರಿಯವರಿಗೆ ಇಂಥಾದ್ದೊಂದು ಭೀಭತ್ಸ ಅಂತ್ಯ ಕಾಣಿಸೋ ಮಟ್ಟಕ್ಕಿಳಿಯಬಾರದಿತ್ತೆಂಬುದು ಜೀವಪರ ಮನಸುಗಳ ಆಕ್ರೋಶ.

ಮೊದಲೇ ಹೇಳಿದಂತೆ ಗೌರಿ ಲಂಕೇಶರದ್ದು ಭಾವುಕ ಮನಸು. ಎಲ್ಲರೊಂದಿಗೂ ಬೆರೆಯುವ ಸಾದಾ ಸೀದಾ ವ್ಯಕ್ತಿತ್ವ. ಬಹುಶಃ ಇಂಥಾ ತಾಯ್ತನ ಇಲ್ಲದೇ ಯಾರದ್ದೋ ಸಂಕಷ್ಟ, ಕಣ್ಣ ಹನಿಗಳನ್ನು ನಮ್ಮದೆಂದೇ ಭಾವಿಸಲು ಸಾಧ್ಯವಿಲ್ಲ. ಗೌರಿ ಲಂಕೇಶ್ ಬರೀ ಹಾಗೆ ಭಾವಿಸಿ ಎಸಿ ರೂಮಲ್ಲಿ ಕೂತು ಮೈಮರೆಯಲಿಲ್ಲ. ಅಂಥವರ ಪರವಾಗಿ ಹೋರಾಡಿದರು.

ಸಿನಿಮಾ ಮತ್ತು ಸಿನಿಮಾದವರ ಕುರಿತು ಇಷ್ಟೆಲ್ಲಾ ನೇರವಾದ ಬರಹಗಳನ್ನು ಸಿನಿಬಜ಼್ ಪ್ರಕಟಿಸುತ್ತಿದೆ ಅಂದರೆ ಅದಕ್ಕೆ ಗೌರಿ ಮೇಡಂ ಅವರೇ ನೇರ ಕಾರಣ. ಯಾಕೆಂದರೆ ನನಗೆ `ಲಂಕೇಶ್’ ವಾರಪತ್ರಿಕೆಯಲ್ಲಿ ಕೆಲಸ ಕೊಟ್ಟು, ಹೆತ್ತ ಮಗುವಂತೆ ಬೆಳೆಸಿ, ಎರಡಕ್ಷರ ಬರೆಯೋದನ್ನು ಕಲಿಸಿದ್ದೇ ಗೌರಿ ಲಂಕೇಶ್. ಎಂಟೂವರೆ ವರ್ಷಗಳ ಕಾಲ ಗೌರಿ ಮೇಡಂ ಜೊತೆ ಕೆಲಸ ಮಾಡಿದ ಅನುಭವ ನನ್ನದು. `ನಾನು ಪತ್ರಿಕೆ ಸಂಪಾದಕಿ, ನೀವೆಲ್ಲ ನನ್ನ ಕೈಕೆಳಗೆ ಕೆಲಸ ಮಾಡುವವರು ಅಂತಾ ಯಾವತ್ತೂ ಕಂಡವರಲ್ಲ. ಕೆಲಸದ ವಿಚಾರದಲ್ಲಿ ಗೊಂದಲಗಳಾದಾಗ ಕ್ಷಣಮಾತ್ರದಲ್ಲಿ ಅದನ್ನು ಬಗೆಹರಿಸಿ `ಐ ಯಾಮ್ ಜೀನಿಯಸ್’ ಅನ್ನುತಿದ್ದದ್ದು ಅವರ ಸಿಗ್ನೇಚರ್ ನುಡಿ. ಅವರ ಬಗ್ಗೆ ಬರೆಯೋದು ಬೇಕಾದಷ್ಟಿವೆ. ಆದರೆ ಅವರ ನೆನಪಾದರೂ ಸಾಕು, ಅಕ್ಷರಗಳು ಕಳೆದುಹೋದಂತಾಗುತ್ತದೆ.

ಗೌರಿ ಮೇಡಮ್ ತೀರಿಕೊಂಡಮೇಲೆ ಒಂದು ವರ್ಗದ ಜನ ಅವರ ಸಾವನ್ನು ಸಂಭ್ರಮಿಸಿದರು. ಪಾಪ, ಬಿಡಿ ಅವರಿಗೆ ಗೌರಿಯವರ ನಿಜವಾದ ಗುಣಲಕ್ಷಣಗಳ ಪರಿಚಯವಿರಲಿಲ್ಲ.. ಆದರೆ `ಐ ಯಾಮ್ ಗೌರಿ’ ಅಂತಾ ಬೋರ್ಡು ಹಿಡಿದುಕೊಂಡು ನಿಂತವರಲ್ಲೇ ಕೆಲವರು ಕಾಸೆತ್ತುವ ಕಾಯಕ ಶುರು ಮಾಡಿದರು ಎನ್ನುವ ನಿಜಕ್ಕೂ ಬೆಚ್ಚಿಬೀಳಿಸುವ ವಿಚಾರ ಕೂಡಾ ಕೇಳಿಬಂತು.  ಅದೆಷ್ಟು ನಿಜವೋ  ಪಡೆದವರು ಮತ್ತು ಕೊಟ್ಟವರಿಗಷ್ಟೇ ಗೊತ್ತು. ಇನ್ನು ಗೌರಿಯವರ ನೆರಳನ್ನೂ ನೋಡದವರು `ಹೇ… ಗೌರಿ ನಂಗೆ ಭಾಳಾ ಕ್ಲೋಸು. ಏನಾದರೂ ಡೌಟಿದ್ದರೆ ನನ್ನನ್ನೇ ಕೇಳುತ್ತಿದ್ದಳು… ಅವಳೂ, ಇವಳೂ, ಲೊಟ್ಟೆ ಲೊಸುಕು’ ಅಂತೆಲ್ಲಾ ಫೇಸುಬುಕ್ಕಿನ ಗೋಡೆ ತುಂಬಾ ಕಕ್ಕಿದರು.

ಥತ್… ಆರಂಭದಲ್ಲಿ ಅವರ ಸಾವನ್ನು ಸಂಭ್ರಮಿಸಿದರಲ್ಲಾ? ಅವರಾದರೂ ಕ್ರಮೇಣ ಸುಮ್ಮನಾಗಿಬಿಟ್ಟರು. ಆದರೆ ಕೆಲವರು ಇಂದು ಎರಡನೇ ಸುತ್ತಿನ ಎತ್ತುವಳಿಗೆ ತಯಾರಾದಂತೆ ಕಾಣುತ್ತಿದೆ.
ತಾಯ್ತನದ ಗುಂಡಿಗೆಗೆ ಗುಂಡಿಟ್ಟ ಪಾಪಿಗಳಿಗೂ ಅವರ ಸಾವನ್ನು ತಮ್ಮ ಬದುಕಿಗೆ ಬಳಸಿಕೊಳ್ಳುವ ನೀಚ ಮನಸ್ಸಿನವರ್‍ಯಾರಾದರೂ ಇದ್ದರೆ ಅವರಿಗೂ ಧಿಕ್ಕಾರ!

  • ಅರುಣ್ ಕುಮಾರ್.ಜಿ

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ತಮಿಳಲ್ಲಿ ಮಿಂಚಿದರೂ ಈತ ಕನ್ನಡದ ಕಂದ!

Previous article

ಸ್ವಾರ್ಥದ ದುನಿಯಾದಲ್ಲಿ ಬಿತ್ತು ಮೊದಲ ಗುನ್ನ!

Next article

You may also like

Comments

Leave a reply

Your email address will not be published. Required fields are marked *