Connect with us

ಕಲರ್ ಸ್ಟ್ರೀಟ್

ಕೈ ಹಿಡಿದವರಿಗಿಂತ ಪಾಠ ಕಲಿಸಿದವರೇ ಹೆಚ್ಚು!

Published

on

ವರ್ಷದ ಹಿಂದೆ ತೆರೆ ಕಂಡಿದ್ದ ಒನ್ಸ್ ಮೋರ್ ಕೌರವ ಚಿತ್ರದ ನಾಯಕನಾಗಿ ನಟಿಸಿದ್ದವರು ನರೇಶ್ ಗೌಡ. ಒಟ್ಟಾರೆ ಚಿತ್ರದ ಏಳುಬೀಳಿನಾಚೆಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಒಳ್ಳೆ ನಟನಾಗಿ ರೂಪುಗೊಳ್ಳುತ್ತಾರೆಂಬ ಭರವಸೆಯನ್ನಂತೂ ನರೇಶ್ ಹುಟ್ಟಿಸಿದ್ದರು. ಆದರೆ, ಆ ನಂತರದಲ್ಲಿ ಸದ್ದಿಲ್ಲದಂತಿದ್ದ ನರೇಶ್ ಗೌಡ ಈಗೇನು ಮಾಡುತ್ತಿದ್ದಾರೆ? ಅವರ ಮುಂದಿನ ನಡೆಯೇನು ಎಂಬ ಪ್ರಶ್ನೆಗಳಿಗೆ ಅವರೇ ಉತ್ತರವಾಗಿದ್ದಾರೆ. ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಚಿತ್ರದಲ್ಲಿಯೇ ಯಾವತ್ತೂ ಮರೆಯದ ಒಂದಷ್ಟು ಪಾಠಗಳನ್ನು ಕಲಿತಿರೋ ನರೇಶ್ ಎಲ್ಲ ನಿರಾಸೆಗಳನ್ನೂ ಕೊಡವಿಕೊಂಡು ಮೇಲೆದ್ದು ನಿಲ್ಲಲು ತಯಾರಾಗುತ್ತಿದ್ದಾರೆ!

ಅವರ ಮಾತುಗಳ ತುಂಬಾ ಒನ್ಸ್ ಮೋರ್ ಕೌರವ ಚಿತ್ರದ ಹಿಂಚುಮುಂಚಿನ ವಿದ್ಯಮಾನಗಳ ಬಗೆಗೊಂದು ವಿಷಾದ, ಕಾಸು ಸುರಿಯೋ ನಿರ್ಮಾಪಕರು ಸಿಕ್ಕಿದರೆ ಎಲ್ಲ ದಿಕ್ಕಿನಿಂದಲೂ ಹಿಂಡಿ ಹಿಪ್ಪೆ ಮಾಡುವವರ ಬಗೆಗೊಂದು ಅಸಹ್ಯ, ಮುಂದೊಂದು ಹಿಂದೊಂದು ಎಂಬಂಥಾ ನವರಂಗೀ ಆಸಾಮಿಗಳ ಬಗೆಗೆ ತಣ್ಣಗಿನ ಸಿಟ್ಟು ಮತ್ತು ಇದೆಲ್ಲವನ್ನೂ ಪಾಠ ಅಂದುಕೊಂಡು ಮತ್ತೆ ಪುಟಿದೇಳುವ ಹುಮ್ಮಸ್ಸು ನಿಗಿನಿಗಿಸುತ್ತದೆ!

ನರೇಶ್ ಗೌಡರ ಉಳಿದ ಕಥೆ, ಮುಂದಿನ ಕನಸುಗಳ ಬಗ್ಗೆ ಹೇಳುವ ಮೊದಲು ಆರಂಭದಲ್ಲೇ ಎಡವುವಂತೆ ಮಾಡಿದ ಒನ್ಸ್ ಮೋರ್ ಕೌರವ ಚಿತ್ರದ ಬಗ್ಗೆ ಹೇಳಲೇ ಬೇಕು. ಈ ಚಿತ್ರ ಭಾರೀ ಸೌಂಡಿನೊಂದಿಗೇ ಆರಂಭವಾಗಿತ್ತಲ್ಲಾ? ಹಳ್ಳಿ ಘಮಲಿನ ಚಿತ್ರಗಳಿಗೆ ಹೆಸರಾದ ಎಸ್ ಮಹೇಂದರ್ ಬಹು ಕಾಲದ ನಂತರ ನಿರ್ದೇಶನಕ್ಕಿಳಿದಿದ್ದರಿಂದ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿತ್ತು. ಆದರೆ ಮಹೇಂದರ್ ಥೇಟು ಜಡಭರಥನಂತೆ ಓಬೀರಾಯನ ಕಾಲದ ಕಾನ್ಸೆಪ್ಟಿನೊಂದಿಗೆ ಅಖಾಡಕ್ಕಿಳಿದಿದ್ದರು. ಈವತ್ತಿಗೆ ಮಹೇಂದರ್ ಚಿತ್ರಕ್ಕೆ ಸೋಲಾದುದರ ಎಲ್ಲ ಭಾರವನ್ನೂ ನರೇಶ್ ಗೌಡ ಹೆಗಲಿಗೆ ನೇತುಹಾಕಿ ಹೊಸಾ ಮಿಕಗಳ ಭೇಟೆಗಿಳಿದಿದ್ದಾರೆ. ಆದರೆ ನರೇಶ್ ಹೇಳೋ ಅಸಲೀ ಕಥೆ ಬೇರೆಯದ್ದೇ ಇದೆ!

ಈ ಚಿತ್ರವನ್ನು ಆರಂಭಿಸುವ ಮುನ್ನ ಮೂರು ತಿಂಗಳ ಕಾಲ ಮಹೇಂದರ್ ನರೇಶ್ ಕಚೇರಿಗೆ ಎಡತಾಕಿದ್ದರು. ರಸವತ್ತಾಗಿ ಕಥೆಯನ್ನೂ ಹೇಳಿದ್ದರು. ಕೌರವ ಚಿತ್ರದ ಮೂಲಕವೇ ವಿಜೃಂಭಿಸಿದ್ದ ಬಿ ಸಿ ಪಾಟೀಲ್ ಅವರು ತಂದೆಯ ಪಾತ್ರದಲ್ಲಿ ಕೌರವನಾಗಿ ನಟಿಸುತ್ತಾರೆಂದೂ ಮಹೇಂದರ್ ಹೇಳಿದ್ದರು. ಅವರೇ ಪೊಲೀಸ್ ಆಫೀಸರ್ ಪಾತ್ರವನ್ನು ನರೇಶ್ ಅವರೇ ನಿರ್ವಹಿಸುವಂತೆ ಒತ್ತಾಯ ಮಾಡಿದ್ದರು. ಬಿ ಸಿ ಪಾಟೀಲ್ ಜೊತೆ ನಟಿಸೋ ಅವಕಾಶ ಇರೋದರಿಂದ, ಪಳಗಿದ ನಿರ್ದೇಶಕರು ತಿದ್ದೋದರಿಂದ ನಟನಾಗಿ ನೆಲೆ ನಿಲ್ಲಬಹುದೇನೋ ಎಂಬ ಸಣ್ಣ ಆಸೆ ಮತ್ತು ಧೈರ್ಯದಿಂದ ನರೇಶ್ ಕೂಡಾ ಒಪ್ಪಿಕೊಂಡಿದ್ದರು. ಆದರೆ ಅಸಲೀ ಕಥೆ ಶುರುವಾಗಿದ್ದು ಚಿತ್ರೀಕರಣ ಶುರುವಾದ ನಂತರವೇ!

ಅದುವರೆಗೂ ತಂದೆಯ ಪಾತ್ರದಲ್ಲಿ ಬಿ ಸಿ ಪಾಟೀಲ್ ನಟಿಸುತ್ತಾರೆಂದುಕೊಂಡಿದ್ದ ನರೇಶ್‌ಗೆ ಚಿತ್ರೀಕರಣದ ಸಂದರ್ಭದಲ್ಲಿಯೇ ಶಾಕು ಕಾದಿತ್ತು. ಅಲ್ಲಿ ಪಾಟೀಲರ ಸುಳಿವೇ ಇರಲಿಲ್ಲ. ಈ ಬಗ್ಗೆ ಕೇಳಿದರೆ ‘ಹೇ ಅವ್ರು ರೆಸ್ಪಾಂಡ್ ಮಾಡ್ತಿಲ್ಲ. ಅವ್ರಿಗೆ ಬ್ರೇಕ್ ನೀಡಿದ್ದೇ ನಾನು. ಈಗದರ ನೆನಪಿಲ್ಲ. ಅವ್ರಲ್ದಿದ್ರೆ ಮತ್ತೊಬ್ರು. ನೀವೇನೂ ತಲೆ ಕೆಡಿಸ್ಕೋಬೇಡಿ’ ಎಂಬ ಭೋಳೇ ಉತ್ತರ ಎದುರಾಗಿತ್ತು. ಆ ನಂತರ ತಮ್ಮ ಪಾತ್ರವೇ ಬರಖತ್ತಾಗೋದಿಲ್ಲ ಎಂಬ ವಿಚಾರ ಚಿತ್ರೀಕರಣದ ಹಂತದಲ್ಲಿಯೇ ನರೇಶ್ ಅವರಿಗೆ ಅರ್ಥವಾಗಿ ಹೋಗಿತ್ತು. ಈ ಬಗ್ಗೆ ಮಾತಾಡಿದರೆ ಮಹೇಂದರ್ ಅವರ ಕಡೆಯಿಂದ ಬರುತ್ತಿದ್ದದ್ದು ತಾನು ಎಂತೆಂಥಾ ಸಿನಿಮಾ ಕೊಟ್ಟ ನಿರ್ಮಾಪಕ ಎಂಬ ಒಣ ಜಂಭ ಮಾತ್ರ.

ಇದಾದ ಮೇಲೆ ಪ್ರಮೋಷನ್ ವಿಚಾರವಾಗಿಯೂ ಮಹೇಂದರ್ ದಂಗಾಗುವಂತೆ ನಡೆದುಕೊಳ್ಳಲಾರಂಭಿಸಿದ್ದರು. ಚಾನೆಲ್‌ಗಳಲ್ಲಿ ಪ್ರಮೋಷನ್ ಪ್ರೋಗ್ರಾಮಿದ್ದರೆ ಅದಕ್ಕೂ ಚಕ್ಕರ್. ಮಜಾ ಟಾಕೀಸ್ ಪ್ರೋಗ್ರಾಮಿಗೆ ಹೋಗಿ ಅಂದರೆ ಅದೊಂದು ಪ್ರೋಗ್ರಾಮೇನ್ರೀ ಎಂಬಂಥಾ ಧಾಡಸಿ ಉತ್ತರ. ಆದರೆ ಆ ಹೊತ್ತಿಗಾಗಲೇ ಮಹೇಂದರ್ ಆರಂಭದಲ್ಲಿ ಕೊಟ್ಟಿದ್ದ ಬಜೆಟ್ಟು ಮೂರು ಪಟ್ಟಾಗಿತ್ತು. ಒಂದು ಕೋಟಿ ಕಾಸು ಸುರಿದರೆ ಸಾಕೆಂದಿದ್ದ ಮಹೇಂದರ್ ಬಣ್ಣ ಬಣ್ಣದ ಮಾತಾಡಿ ನಾಲಕ್ಕೂ ಚಿಲ್ಲರೆ ಕೋಟಿ ಖರ್ಚು ಮಾಡಿಸಿದ್ದರು. ಇದು ಹೀಗೇ ಇದ್ದರೆ ಕಷ್ಟ ಅಂದುಕೊಂಡ ನರೇಶ್ ತಾವೇ ಪ್ರಮೋಷನ್ ನಡೆಸಿದರೂ ಮಹೇಂದರ್ ಅವರದ್ದು ಇದೆಲ್ಲ ವರ್ಕೌಟ್ ಆಗಲ್ಲ ಎಂಬಂಥಾ ನಿರಾಸಕ್ತಿ.

ಆದರೆ, ಅದುವರೆಗೂ ಮನೆಯಲ್ಲಿಯೇ ಇದ್ದ ಮಹೇಂದರ್ ಚಿತ್ರ ಬಿಡುಗಡೆಯಾಗೋ ಮುನ್ನಾ ದಿನ ನರೇಶ್ ಅವರ ಮುಂದೆ ನಿಂತಿದ್ದರು. ಮನೆ ಬಾಡಿಗೆ ಕಟ್ಟಿಲ್ಲ ಅಂತ ಗೋಳು ತೋಡಿಕೊಂಡು ಐವತ್ತು ಸಾವಿರ ಇಸಿದುಕೊಂಡು ಹೋಗಿದ್ದರು. ಅದಕ್ಕೂ ಮುನ್ನ ನರೇಶ್ ಖುದ್ದಾಗಿ ನಿರ್ಮಾಪಕ ಭೋಗೇಂದ್ರ ಬಾಡಿಗೆಗಿದ್ದ ಮನೆಯನ್ನೇ ಮೂರು ಲಕ್ಷ ಕೊಟ್ಟು ಮಹೇಂದರ್ ಅವರಿಗೆ ಕೊಡಿಸಿದ್ದರು. ಇಂಥಾ ಮಹೇಂದರ್ ಈವತ್ತು ಒನ್ಸ್ ಮೋರ್ ಕೌರವ ಚಿತ್ರದ ವಿಚಾರವಾಗಿ ನರೇಶ್ ಮೇಲೇ ತಪ್ಪು ಹೊರಿಸುತ್ತಾ ಓಡಾಡಿಕೊಂಡಿದ್ದಾರಂತೆ. ಹೇ ಅವನೇ ಮೂರು ವರ್ಷ ನನ್ನ ಮನೆ ಬಾಗಿಲಿಗೆ ಅಲೆದಿದ್ದ ಎಂಬಂಥಾ ಮಾತುಗಳನ್ನೂ ಆಡುತ್ತಿದ್ದಾರಂತೆ. ಇವಿಷ್ಟನ್ನೂ ಕೂಡಾ ಹಳೇ ಗಾಯವೊಂದನ್ನು ಕೆದಕಿಕೊಂಡಷ್ಟೇ ನೋವಿನಿಂದ ನರೇಶ್ ಗೌಡ ತೆರೆದಿಡುತ್ತಾರೆ!

ಹೀಗೆ ಮೊದಲ ಸಿನಿಮಾದಲ್ಲಿಯೇ ಕೊನೆ ಮೊದಲಿಲ್ಲದ ಪಾಠ ಕಲಿತಿರುವ ನರೇಶ್ ಗೌಡ ಅವರಿಗೆ ನಟನಾಗಬೇಕೆಂಬ ಕನಸೇನೂ ಇರಲಿಲ್ಲವಂತೆ. ಕಡೆಗೆ ತಾನೇ ತಾನಾಗಿ ಹೀರೋ ಆಗುವ ಅವಕಾಶ ಒದಗಿ ಬಂದಾಗಲೂ ಅವರ ಒಲವಿದ್ದದ್ದು ಖಳನ ಪಾತ್ರದ ಮೇಲೆಯೇ. ಹುಲಿಯೂರುದುರ್ಗದ ಉಜ್ಜಿನಿ ಮೂಲದವರಾದ ನರೇಶ್ ಬ್ಯುಸಿನೆಸ್ ಮೂಲಕವೇ ಮೇಲೆದ್ದು ನಿಂತವರು. ಮಾಮೂಲಿ ಸಿನಿಮಾ ವ್ಯಾಮೋಹದ ಹೊರತಾಗಿ ಅವರಿಗೆ ಬೇರ‍್ಯಾವ ಕನಸೂ ಇರಲಿಲ್ಲ. ಇಂಥಾ ಸಂದರ್ಭದಲ್ಲಿಯೇ ಅಚಾನಕ್ಕಾಗಿ ಪರಿಚಯವಾದವರು ಇತ್ತೀಚೆಗೆ ನಿಧನ ಹೊಂದಿದ್ದ ನಿರ್ದೇಶಕ ಪಿ ಎನ್ ಸತ್ಯ. ಪಾಗಲ್ ಚಿತ್ರಕ್ಕೆ ಮೂವತ್ತು ಲಕ್ಷ ಸುರಿದರೂ ಒಂದು ರೂಪಾಯಿಯೂ ವಾಪಾಸಾಗಿರಲಿಲ್ಲ. ಆ ಬಳಿಕ ಅನಾಮಿಕರಾಗಿ ಒಂದಷ್ಟು ಚಿತ್ರಗಳಿಗೆ ನಿರ್ಮಾಪಕರಾಗಿದ್ದ ನರೇಶ್ ಶಿವಾಜಿ ನಗರ ಚಿತ್ರದಲ್ಲಿ ನಟಿಸಿದ್ದರು. ಆ ಸಂದರ್ಭದಲ್ಲಿಯೇ ಒಂದಷ್ಟು ಕಹಿ ಉಂಡಿದ್ದರಾದರೂ ಸತ್ತ ವ್ಯಕ್ತಿಯ ಬಗ್ಗೆ ಕೆಡುಕು ಮಾತಾಡಲು ಅವರಿಗಿಷ್ಟವಿಲ್ಲ ಅನಿಸುತ್ತದೆ.

ಹೀಗೆ ಆರಂಭದಿಂದ ಇಲ್ಲಿಯವರೆಗೂ ಕಹಿಯನ್ನೇ ಅನುಭವಿಸುತ್ತಾ ಬಂದ ನರೇಶ್‌ಗೀಗ ಗಾಂಧಿನಗರ ಅರ್ಥವಾಗಿದೆ. ನಿರ್ಮಾಪಕರನ್ನು ಕಾಮಧೇನು ಎಂಬಂತೆ ಡೌ ಮಾಡೋ ಕೆಲ ಮಂದಿ ಕೆಚ್ಚಲನ್ನೇ ಕತ್ತರಿಸುತ್ತಾರೆಂಬ ವಾಸ್ತವವೂ ಅವರಿಗರ್ಥವಾಗಿದೆ. ಒನ್ಸ್ ಮೋರ್ ಕೌರವ ಚಿತ್ರವಾದ ಮೇಲೆ ಬಂದವರಿಗೆಲ್ಲ ಖಡಕ್ ಆಗಿಯೇ ಮಾತಾಡಿ ಸಾಗಹಾಕಿದ್ದಾರೆ. ಸದ್ಯ ಎಂ ಡಿ ಶ್ರೀಧರ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದಲ್ಲಿ ನರೇಶ್ ಅವರಿಗೊಂದು ಪಾತ್ರ ಸಿಕ್ಕಿದೆ. ಬೋಗೇಂದ್ರ ಅವರ ಕಡೆಯಿಂದ ಕಿರಾತಕ ಚಿತ್ರದಲ್ಲೂ ಒಂದು ಪಾತ್ರ ಒಲಿದು ಬಂದಿದೆ. ಅದಾದ ನಂತರ ಮತ್ತೊಂದು ಹೊಸಾ ಬಗೆಯ ಚಿತ್ರದ ಮೂಲಕ ಎದ್ದು ನಿಲ್ಲೋ ಕಸುವಿನೊಂದಿಗೆ ನರೇಶ್ ಹೊರಟಿದ್ದಾರೆ.

ನಿರ್ದೇಶಕ ಲಕ್ಕಿ ಶಂಕರ್ ಹೇಳಿದ ಕಥೆಯೊಂದು ನರೇಶ್ ಅವರಿಗೆ ಇಷ್ಟವಾಗಿದೆ. ಅದು ಖಡಕ್ ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣವರ್ ಜೀವನಾಧಾರಿತ ಚಿತ್ರ. ಈ ಕುರಿತಾಗಿ ಈಗಾಗಲೇ ನರೇಶ್ ರವಿಯವರನ್ನು ಭೇಟಿಯಾಗಿದ್ದಾರಂತೆ. ಈ ಖಡಕ್ ಅಧಿಕಾರಿಯ ಜೀವನಾಧಾರಿತ ಚಿತ್ರದೊಂದಿಗೆ ನರೇಶ್ ಇದುವರೆಗೆ ಉಂಡಿರೋ ಕಹಿ ಮರೆಯಲು ಸಜ್ಜಾಗಿದ್ದಾರೆ.

ಕಲರ್ ಸ್ಟ್ರೀಟ್

ಇದೇ ಶನಿವಾರ ಬರಲಿದೆ ಸುವರ್ಣ ಸುಂದರಿ ಟ್ರೈಲರ್!

Published

on


ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಸುವಣ್ ಸುಂದರಿ ಸಿನಿಮಾ ಆರಂಭದಿಂದಲೂ ಸುದ್ದಿಯಾಗುತ್ತಲೇ ಬಂದಿದೆ. ಇದೀಗ ಚಿತ್ರತಂಡ ಈ ಸಿನಿಮಾದ ಟ್ರೈಲರ್ ಲಾಂಚ್ ಮಾಡಲು ತಯಾರಾಗಿದೆ. ಇದೇ ೧೯ನೇ ತಾರೀಕಿನ ಶನಿವಾರದಂದು ಸುವರ್ಣ ಸುಂದರಿ ಟ್ರೈಲರ್ ಬಿಡುಗಡೆಯಾಗಲಿದೆ.

ಎಸ್ ಟೀಮ್ ಪಿಕ್ಚರ್‍ಸ್ ಲಾಂಛನದಡಿಯಲ್ಲಿ ತಯಾರಾಗಿರುವ `ಸುವರ್ಣ ಸುಂದರಿ’ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ. ತೆಲುಗಿನಲ್ಲಿ ಈಗಾಗಲೇ ಒಂದಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿರುವ ಸೂರ್ಯ ನಿರ್ದೇಶನದ ಈ ಚಿತ್ರ ನಾಲಕ್ಕು ಕಾಲಮಾನಗಳ ವಿಶಿಷ್ಟವಾದ ಕಥಾ ಹಂದರ ಹೊಂದಿದೆ.
ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕ ಕಾಲದಲ್ಲಿ ತಯಾರಾಗಿರೋ ಈ ಚಿತ್ರಕ್ಕೆ ರಾಂಗೋಪಾಲ್ ವರ್ಮಾ ಅವರ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಸಾಯಿ ಕಾರ್ತಿಕ್ ಅವರೇ ರಾಗ ಸಂಯೋಜನೆ ಮಾಡಿರೋದು ವಿಶೇಷ. ಬೆಂಗಳೂರು, ಅನಂತಪುರಂ, ಹೈದರಾಬಾದ್, ಬೀದರ್, ಕೇರಳ ಮುಂತಾದೆಡೆಗಳಲ್ಲಿ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರವೀಗ ಅಂತಿಮ ಹಂತಕ್ಕೆ ತಲುಪಿಕೊಂಡಿದೆ. ಇದರ ಜೊತೆಗೇ ಒಂದು ಸುಂದರವಾದ ಟ್ರೈಲರ್ ಕೂಡಾ ಇಗಾಗಲೆ ಬಿಡುಗಡೆಗೊಂಡಿದೆ. ಇದೀಗ ವಿಶಿಷ್ಟವಾದ ಎರಡನೇ ಟ್ರೈಲರ್ ನೋಡೋ ಕಾಲ ಹತ್ತಿರಾಗಿದೆ.

ಬಾಹುಬಲಿ ಚಿತ್ರಕ್ಕೆ ಸಿಜಿ ವರ್ಕ್ ಮಾಡಿದ್ದ ತಂತ್ರಜ್ಞರೇ ಈ ಚಿತ್ರಕ್ಕೆ ನಲವತೈದು ನಿಮಿಷಗಳ ಸಿಜಿ ವರ್ಕ್ ಮಾಡಿದ್ದಾರಂತೆ. ಪೂರ್ಣ, ಸಾಕ್ಷಿ, ತಿಲಕ್, ಸಾಯಿ ಕುಮಾರ್, ಜೈ ಜಗಧೀಶ್, ರಾಮ್, ಅವಿನಾಶ್, ಇಂದಿರಾ, ಸತ್ಯಪ್ರಕಾಶ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಎಲ್ಲಾ ಕೆಲಸ ಕಾರ್ಯಗಳನ್ನೂ ಸಂಪೂರ್ಣವಾಗಿ ಮಗಿಸಿಕೊಂಡಿರುವ ಚಿತ್ರತಂಡ ಇದೀಗ ಟ್ರೈಲರ್ ತೋರಿಸಲು ಮುಂದಾಗಿದೆ.

Continue Reading

ಕಲರ್ ಸ್ಟ್ರೀಟ್

ಯಜಮಾನನ ಅಬ್ಬರದ ಮುಂದೆ ತಮಿಳು ಚಿತ್ರಗಳೂ ಥಂಡ! ಯೂಟ್ಯೂಬಿನಲ್ಲಿ ಶಿವನಂದಿಗೆ ಎದುರು ನಿಲ್ಲೋರಿಲ್ಲ!

Published

on


ಸಂಕ್ರಾಂತಿಯ ಶುಭ ಘಳಿಗೆಯಲ್ಲಿ ದರ್ಶನ್ ಅಭಿಮಾನಿಗಳ ಪಾಲಿಗೆ ಭರ್ಜರಿ ಸಂಭ್ರಮವೇ ಸಿಕ್ಕಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಯಜಮಾನ ಚಿತ್ರದ ಶಿವನಂದಿ ಹಾಡಿನ ನಾಗಾಲೋಟ. ಯೂಟ್ಯೂಬ್‌ನಲ್ಲಿ ಈ ಹಾಡಿನ ಹವಾ ಅದ್ಯಾವ ಥರ ಇದೆಯೆಂದರೆ, ಅದರ ಮುಂದೆ ತಮಿಳು ಚಿತ್ರಗಳೂ ಥಂಡಾ ಹೊಡೆದು ಬಿಟ್ಟಿವೆ.

ಸಂಕ್ರಾಂತಿಯಂದು ಬಿಡುಗಡೆಯಾಗಿದ್ದ ಶಿವನಂದಿ ಆ ದಿನವೇ ಬಹುತೇಕ ದಾಖಲೆಗಳನ್ನು ಬ್ರೇಕ್ ಮಾಡಿತ್ತು. ಅದಾಗಿ ಮಾರನೇ ದಿನ, ಅಂದರೆ ಈ ಕ್ಷಣದ ವರೆಗೇ ಶಿವನಂದಿ ಹಾಡು ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಇದರ ಅಬ್ಬರದ ಮುಂದೆ ತಮಿಳಿನ ಚಿಯಾನ್ ವಿಕ್ರಂ ಚಿತ್ರವೇ ಮಂಕಾಗಿ ಬಿಟ್ಟಿದೆ!

ಇದೇ ದಿನ ಚಿಯಾನ್ ವಿಕ್ರಂ ಅಭಿಯದ ಕೊಡರಂ ಕೊಂಡನ್ ಟೀಸರ್ ಮತ್ತು ಪ್ರಭುದೇವ ನಟನೆಯ ಚಾರ್ಲಿ ಚಾಪ್ಲಿನ್ ೨ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಈ ಎರಡಕ್ಕೂ ವೀಕ್ಷಣೆ ಸಿಕ್ಕಿದೆಯಾದರೂ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿ ಯಜಮಾನನ ಶಿವನಂದಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಈಗಿರೋ ಹವಾ ನೋಡಿದರೆ ಅದು ಅಷ್ಟು ಸಲೀಸಾಗಿ ಸಾಧ್ಯವಾಗೋದೂ ಇಲ್ಲ.
ಇದು ಯಜಮಾನ ಚಿತ್ರದ ಆರಂಭಿಕ ಯಶಸ್ಸು ಎಂಬುದರಲ್ಲಿ ಎರಡು ಮಾತಿಲ್ಲ. ಈ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊ ಬೇರೆಯದ್ದೇ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬರಲು ಅಣಿಯಾಗಿದ್ದಾರೆ. ಒಟ್ಟಾರೆ ಕಥೆ ಭಿನ್ನವಾಗಿದೆ ಎಂಬುದೂ ಸೇರಿದಂತೆ ಈಗಾಗಲೇ ಯಜಮಾನನ ಬಗ್ಗೆ ಅಭಿಮಾನದಾಚೆಯೂ ಪ್ರೇಕ್ಷಕರು ಆಕರ್ಷಿತರಾಗಿದ್ದಾರೆ.

Continue Reading

ಕಲರ್ ಸ್ಟ್ರೀಟ್

ಕನ್ನಡದ ಹೆಮ್ಮೆಯ ಕಥೆಗಾರ ಟಿ.ಕೆ. ದಯಾನಂದ ಅವರ ಬೆಲ್ ಬಾಟಮ್

Published

on

ಟಿ.ಕೆ. ದಯಾನಂದ ಅನ್ನೋ ಹೆಸರು ಕನ್ನಡ ಚಿತ್ರರಂಗಕ್ಕೆ ತೀರಾ ಹೊಸದೇನಲ್ಲ. ಈ ಹಿಂದೆ ‘ಬೆಂಕಿ ಪಟ್ಣ’ ಅನ್ನೋ ಸಿನಿಮಾ ತೆರೆಗೆ ಬಂದಿತ್ತಲ್ಲಾ? ನಿರೂಪಕಿ ಅನುಶ್ರೀ ನಾಯಕಿಯಾಗಿ ನಟಿಸಿದ ಸಿನಿಮಾ… ಅದನ್ನು ನಿರ್ದೇಶನ ಮಾಡಿದ್ದವರು ಇದೇ ದಯಾನಂದ್. ಕಥೆ ಬರೆಯೋನಿಗೆ ಜೀವನದ ಕಷ್ಟ ಸುಖಗಳ ಬಗ್ಗೆ ಇಂಚಿಂಚೂ ಅನುಭವವಿರಬೇಕು. ಸಮಾಜಜ್ಞಾನ ಕೂಡಾ ಇರಬೇಕು. ದಯಾನಂದ್ ವಿಚಾರದಲ್ಲಿ ಇವೆಲ್ಲವೂ ಒಂಚೂರು ಹೆಚ್ಚೇ ಇದೆ. ಕಡು ಕಷ್ಟದ ಹಿನ್ನೆಲೆಯಿಂದ ಬಂದ ದಯಾನಂದ್ ಓದು ಮುಗಿಸಿ ಟೀವಿ ನೈನ್ ಚಾನೆಲ್ಲಿನಲ್ಲಿ ಡೆಸ್ಕ್ ಎಡಿಟರ್ ಆಗಿದ್ದವರು. ಅದರ ಜೊತೆಗೆ ಅಗ್ನಿ, ಲಂಕೇಶ್ ಸೇರಿದಂತೆ ಸಾಕಷ್ಟು ಪತ್ರಿಕೆಗಳಿಗೆ ಬರೆಯುತ್ತಿದ್ದವರು. ಜಗತ್ತಿನ ಎಲ್ಲ ಭಾಷೆಗಳ ಸಿನಿಮಾಗಳನ್ನು ನೋಡಿ ಅದರ ಕುರಿತು ಬರೆಯುತ್ತಿದ್ದ ದಯಾನಂದ್ ತಳಸಮುದಾಯಗಳ ಅಧ್ಯಯನಗಳನ್ನು ಕುರಿತ ಸಾಕಷ್ಟು ಡಾಕ್ಯುಮೆಂಟರಿಗಳನ್ನೂ ತಯಾರಿಸಿದ್ದಾರೆ. ಜೀವವನ್ನು ಪಣಕ್ಕಿಟ್ಟು ಮ್ಯಾನ್ ಹೋಲ್ ಗಳಲ್ಲಿ ಇಳಿಯುವ ಸಫಾಯಿಕರ್ಮಚಾರಿಗಳ ಕುರಿತಾಗಿ ದಯಾನಂದ ಮಾಡಿರುವ ಸಂಶೋಧನೆಗಳು ಸಾಕಷ್ಟು. ಇವತ್ತೇನಾದರೂ ಸಫಾಯಿಕರ್ಮಚಾರಿಗಳ ಬದುಕಲ್ಲಿ ಬೆಳಕು ಕಾಣಿಸೋ ಸೂಚನೆ ಕಂಡಿದೆಯೆಂದರೆ ಅದಕ್ಕೆ ದಯಾನಂದ್ ಮಾಡಿರುವ ಆಧ್ಯಯನ ವರದಿಗಳ ಪಾತ್ರ ದೊಡ್ಡದು.

ಚಾಕು ಸಾಣೆ ಹಿಡಿಯೋರು, ಹಾವಾಡಿಗರು, ಕರಡಿ ಕುಣಿಸೋರು… ಹೀಗೆ ಬದುಕಿಗಾಗಿ ನಾನಾ ಕಸುಬುಗಳನ್ನು ಮಾಡುವ ಜನರ ಕುರಿತು ದಯಾನಂದ್ ಬರೆದ ‘ರಸ್ತೆನಕ್ಷತ್ರಗಳು’ ಪುಸ್ತಕ ಹೊಸ ಸಾಮಾನ್ಯ ಜನರಿಗೆ ಗೊತ್ತಿಲ್ಲದ ಹೊಸ ಲೋಕವನ್ನು ಪರಿಚಯಿಸುತ್ತದೆ. ಇವರ ನಾಯಿಬೇಟೆ ಕಥೆಗಾಗಿ ಪ್ರಜಾವಾಣಿಯ ಪ್ರತಿಷ್ಟಿತ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ವಿಜಯ ನೆಕ್ಸ್ಟ್ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಇವರ ಒಂದಾನೊಂದು ಊರಿನಲ್ಲಿ ಕಥೆ ಕೂಡಾ ಮೊದಲ ಕಥೆಯಾಗಿ ಆಯ್ಕೆಯಾಗಿತ್ತು. ಕಣ್ಣೆದುರೇ ನಡೆಯುತ್ತಿದ್ದರೂ ಯಾರೂ ಕಣ್ಣೆತ್ತಿನೋಡದ ವಿಚಾರಗಳನ್ನೇ ಕಥೆಗಳನ್ನಾಗಿಸಿ, ರೋಚಕವೆನ್ನುವಂತೆ ಬರೆಯೋದು ದಯಾನಂದ್ ಅವರಿಗೆ ಸಿದ್ದಿಸಿದೆ.

ಕನ್ನಡದ ಹೆಮ್ಮೆಯ ಕಥೆಗಾರ ದಯಾನಂದ್ ‘ಬೆಲ್‌ಬಾಟಮ್’ ಸಿನಿಮಾಗೆ ಕಥೆ ಒದಗಿಸಿದ್ದಾರೆ. ಇಂಥ ಸಿನಿಮಾಗಳು ಗೆದ್ದರೆ ಕನ್ನಡದಲ್ಲೂ ಸಾಕಷ್ಟು ಹೊಸ ಕಂಟೆಂಟುಗಳ ಸಿನಿಮಾ ಬರೋದು ಗ್ಯಾರೆಂಟಿ. ಈ ಕಾರಣಕ್ಕಾದರೂ ನಾವು ಬೆಲ್ ಬಾಟಮ್ ಸಿನಿಮಾವನ್ನೊಮ್ಮೆ ನೋಡಲೇಬೇಕು.

Continue Reading

Trending

Copyright © 2018 Cinibuzz