One N Only Exclusive Cine Portal

ಒಂದುಮೊಟ್ಟೆಯ ಕಥೆಯನ್ನು ಪವರ್‌ಸ್ಟಾರ್ ಎಷ್ಟುಸಲ ನೋಡಿದ್ದಾರೆ ಗೊತ್ತೇ?

ಒಂದು ಹಿಟ್ ಚಿತ್ರ ಕೊಟ್ಟ ಬಳಿಕ ಆ ನಿರ್ದೇಶಕ, ನಟರ ಮುಂದಿನ ಚಿತ್ರ ಯಾವುದೆಂಬ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇರುತ್ತದೆ. ಅಂಥಾದ್ದೊಂದು ಕೌತುಕ ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್. ಬಿ ಶೆಟ್ಟಿ ಅವರ ಮೇಲೂ ಇತ್ತು. ಇದೀಗ ಅವರು ಮಾಯಾ ಬಜ಼ಾರ್ ಚಿತ್ರದ ಮೂಲಕ ಮತ್ತೊಮ್ಮೆ, ಮತ್ತೊಂದು ಭಿನ್ನವಾದ ಪಾತ್ರದ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗೋದು ಸ್ಪಷ್ಟವಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಮಾಯಾ ಬಜಾರ್ ಚಿತ್ರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ನಡೆದಿದೆ. ರಾಧಾಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ವಸಿಷ್ಠಸಿಂಹ ಮತ್ತು ರಾಜ್ ಬಿ.ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದಾರೆ. ಇದರ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದ ಪುನೀತ್ ರಾಜ್‌ಕುಮಾರ್ ವಸಿಷ್ಠ, ರಾಜ್ ಶೆಟ್ಟಿ ಸೇರಿದಂತೆ ಇಡೀ ಚಿತ್ರವನ್ನೇ ಮೆಚ್ಚಿಕೊಂಡು ಮಾತಾಡಿದ್ದಾರೆ.
ಯಾರೇ ಹೊಸಾ ಪ್ರಯತ್ನ ಮಾಡಿದರೂ ಹಮ್ಮು ಬಿಮ್ಮಿಲ್ಲದೇ ಮೆಚ್ಚಿಕೊಂಡು ಬೆಂಬಲಿಸೋದು ಪುನೀತ್ ರಾಜ್‌ಕುಮಾರ್ ಅವರ ಹೆಚ್ಚುಗಾರಿಕೆ. ಅದೇ ಮನಸ್ಥಿತಿಯಲ್ಲಿಯೇ ಪುನೀತ್ ಮಯಾಬಜ಼ಾರ್ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಬಿಚ್ಚುಮನಸಿನಿಂದ ಮಾತಾಡಿದ್ದಾರೆ. ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ ಒಂದು ಮೊಟ್ಟೆಯ ಕಥೆ ಚಿತ್ರದ ಬಗ್ಗೆ ಒಳ್ಳೆ ಮಾತು ಕೇಳಿ ಬರುತ್ತಲೇ ಅದನ್ನು ವೀಕ್ಷಿಸಿದ್ದ ಪುನೀತ್ ಆ ನಂತರ ಆ ಚಿತ್ರವನ್ನು ಕಡಿಮೆಯೆಂದರೂ ಹತ್ತು ಸಲ ನೋಡಿದ್ದರಂತೆ. ಆ ಕ್ಷಣದಿಂದಲೇ ರಾಜ್ ಶೆಟ್ಟಿ ಅವರುಗಳ ಅಭಿಮಾನಿಯಾಗಿದ್ದೇನೆ ಅಂತ ಮನತುಂಬಿ ಮಾತಾಡಿದವರು ಪುನೀತ್!


ಅಂದಹಾಗೆ ಮಯಾಬಜ಼ಾರ್ ಕೂಡಾ ಅಂಥಾದ್ದೇ ಸೂಕ್ಷ್ಮ ವಿಚಾರಗಳನ್ನೊಳಗೊಂಡ ಕಥಾ ಹಂದರ ಹೊಂದಿದೆಯಂತೆ. ೨೦೧೬ರಲ್ಲಿ ನಡೆದಿದ್ದ ನೈಜ ಘಟನೆಯೊಂದನ್ನು ಆಧರಿಸಿದ ಕಥಾ ಹಂದರ ಹೊಂದಿರೋ ಈ ಚಿತ್ರದಲ್ಲಿ ರಾಜ್ ಶೆಟ್ಟಿ ಇಡೀ ಜಗತ್ತನ್ನೇ ಗೆದ್ದುಕೊರ್ಳಳುವಂಥಾ ಮಹಾತ್ವಾಕಾಂಕ್ಷೆ ಹೊಂದಿರೋ ಪಕ್ಕಾ ಬೆಂಗಳೂರು ಹುಡುಗನಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಮಂಗಳೂರು ಜನಾರ್ಧನನ ಪಾತ್ರದ ಮೂಲಕ ಮೋಡಿ ಮಾಡಿದ್ದ ರಾಜ್ ಶೆಟ್ಟಿ ಈ ಚಿತ್ರದ ಪಾತ್ರವನ್ನೂ ಕೂಡಾ ಕಾಡುವಂತೆ ಆವಾಹಿಸಿಕೊಳ್ಳುವ ಉತ್ಸಾಹದಿಂದಿದ್ದಾರೆ.


ಇನ್ನು ನಿರ್ದೇಶಕರು ಪ್ರತೀ ಪಾತ್ರಗಳನ್ನೂ ವಿಭಿನ್ನವಾಗಿ ಕಟ್ಟಿ ಕೊಡಲಿದ್ದಾರಂತೆ. ಪ್ರಕಾಶ್ ರೈ ಮತ್ತು ಸಾಧು ಕೋಕಿಲಾ ಅವರನ್ನು ಹಿಂದೆಂದೂ ನೋಡದ ಪಾತ್ರದಲ್ಲಿ ತೋರಿಸೋ ಭರವಸೆ ನಿರ್ದೇಶಕರದ್ದು. ವಸಿಷ್ಠ ಸಿಂಹ ಮೊದಲ ಸಲ ಒಂದು ಕಾಮಿಡಿ ಟ್ರ್ಯಾಕಿನ ಪಾತ್ರ ಮಾಡುತ್ತಿದ್ದಾರಂತೆ. ಜೋಡಿಹಕ್ಕಿ ಸೀರಿಯಲ್ ಖ್ಯಾತಿಯ ಚೈತ್ರಾ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *


CAPTCHA Image
Reload Image