ವರ್ಷಾನುಗಟ್ಟಲೆ ಕನಸಿಟ್ಟು ಹೊಸೆದ ಕಥೆ, ಅದರಲ್ಲಿ ಬರುವ ಪಾತ್ರಗಳಿಗೆ ಜೀವ ಕೊಟ್ಟು ತೆರೆ ಮೇಲೆ ತಂದು ನಿಲ್ಲಿಸಬೇಕು. ತಾನು ಯಶಸ್ವೀ ಸಿನಿಮಾ ನಿರ್ದೇಶಕ ಅನ್ನಿಸಿಕೊಳ್ಳಬೇಕು. ತನ್ನಲ್ಲಿರುವ ಕ್ರಿಯಾಶೀಲತೆಯನ್ನು ನೋಡಿ ಜನ ಮೆಚ್ಚಿ ಕೊಂಡಾಡಬೇಕು; ಅದನ್ನೆಲ್ಲಾ ನೋಡಿ ಮನೆಯವರು ಹೆಮ್ಮೆ ಪಡಬೇಕು – ಡೈರೆಕ್ಟರ್ ಆಗಬೇಕು ಅಂತಾ ಬಯಸಿ ಅಲೆಯುವ ಪ್ರತಿಯೊಬ್ಬರ ಕನಸಿದು…

ಒಂದೊಳ್ಳೆ ಕಥೆಯನ್ನು ಬರೆದುಕೊಂಡು ಹೋಗಿ ಹಣ ಹೂಡುವವರ ಮುಂದೆ ಕೂತು ಹರವಿಬಿಟ್ಟರೆ ಸಾಕು, ಅವಕಾಶ ಸಿಗುತ್ತದೆ. ಸಿನಿಮಾ ಮಾಡಿಬಿಡಬಹುದು. ಒಳ್ಳೇ ಸಿನಿಮಾ ಮಾಡಿದ ಮೇಲೆ ಗೆಲುವು ಗ್ಯಾರೆಂಟಿ – ಅಂತಾ ಸಿಂಪಲ್ಲಾಗಿ ಥಿಂಕ್ ಮಾಡಿರುತ್ತಾರೆ. ಈ ಕಾರಣದಿಂದಲೇ ಎಷ್ಟೋ ಜನ ಪಡೆದ ಡಿಗ್ರಿ ಸರ್ಟಿಫಿಕೇಟುಗಳನ್ನು ಸೈಡಿಗೆಸೆದು, ಸ್ಕ್ರಿಪ್ಟು ರೆಡಿ ಮಾಡಿಕೊಂಡಿರುತ್ತಾರೆ. ಲಕ್ಷಲಕ್ಷ ಸಂಬಳ ಸಿಕ್ಕರೂ ಬೇರೆ ಕೆಲಸಕ್ಕೆ ಸೇರೋದಿಲ್ಲ. ಬಣ್ಣದ ಜಗತ್ತಿನ ಸೆಳೆತವೇ ಅಂಥದ್ದು. ಆದರೆ, ಸೆಳೆದಷ್ಟು ಸಲೀಸಾಗಿ ಇಲ್ಲಿ ಯಾವುದೂ ದಕ್ಕುವುದಿಲ್ಲ. ಡೈರೆಕ್ಟರ್ ಅನ್ನಿಸಿಕೊಳ್ಳಲು ಲವಲೇಶದ ಯೋಗ್ಯತೆ ಇಲ್ಲದವರು ಇಲ್ಲಿ ಸರಾಗವಾಗಿ ಎಲ್ಲವನ್ನೂ ಪಡೆಯುತ್ತಾರೆ. ಚಾಚಿದ ಕಡೆಯಲ್ಲೆಲ್ಲಾ ನಿರ್ಮಾಪಕರು ಬಂದು ಕೈ ಹಿಡಿಯುತ್ತಾರೆ. ಸಿನಿಮಾಗಳೂ ಆಗುತ್ತವೆ. ಒಂದರ ಹಿಂದೆ ಒಂದರಂತೆ‌ ತೋಪಾದರೂ ಮತ್ತೊಬ್ಬ ನಿರ್ಮಾಪಕರು ನಿಯತ್ತಾಗಿ ನಿಂತು ಸಿನಿಮಾ ಮಾಡುತ್ತಾರೆ.

ಆದರೆ ನಿವಾದ ಪ್ರತಿಭಾವಂತರು, ಶ್ರಮಪಟ್ಟು ಸಿನಿಮಾ ಮಾಡಲು ಬಂದವರನ್ನು ನಂಬಿ ಹಣ ಹಾಕುವವರು ಇಲ್ಲಿ ತೀರಾ ವಿರಳ. ಸಿನಿಮಾರಂಗದಲ್ಲಿ ಯಾವತ್ತಿಗೂ ಜೀವಂತವಾಗಿರುವ ಇಂಥಾ ಹತ್ತು ಹಲವು ಒಳಮರ್ಮಗಳೇ ಸಿನಿಮಾ ಆಗಿ ರೂಪುಗೊಂಡಿದೆ. ಅದು ಕೊಡೆ ಮುರುಗ!

ಯಾವ ಕೋನದಿಂದಲೂ ಹೀರೋ ಆಗಲು ಲಾಯಕ್ಕಲ್ಲದ ವ್ಯಕ್ತಿ. ಅವನನ್ನೇ ಹೀರೋ ಮಾಡಿದರಷ್ಟೇ ಸಿನಿಮಾ ನಿರ್ಮಿಸುವುದಾಗಿ ಹೇಳುವ ಆತನ ಅಣ್ಣ. ತಮ್ಮನನ್ನು ಹೀರೋ ಆಗಿ ಮಾಡಿ ಮತ್ತಿನ್ನೆಲ್ಲೋ ಲಾಭ ಮಾಡಿಕೊಳ್ಳುವ ಅಣ್ಣನ ಸ್ಕೆಚ್ಚು. ನೋಡಲು ಖರಾಬಾಗಿದ್ದರೂ, ಕಂಡಕಂಡವರ ಹಣೆಗೆ ನಾಮದ ಸೀಲು ಗುದ್ದುವ ಪ್ರಳಯಾಂತಕ ಮುರುಗ… ಇವರ ನಡುವೆ ಸಿಕ್ಕಿಕೊಂಡು ಒದ್ದಾಡುವ ನಿರ್ದೇಶಕ.

ಇದು ಕೊಡೆ ಮುರುಗ ಸಿನಿಮಾದ ಎಳೆ. ಸಿನಿಮಾದ ಒಳಗೊಂದು ಸಿನಿಮಾ ಕಟ್ಟುವ ಕಥೆಯ ಸಿನಿಮಾಗಳು ಸಾಕಷ್ಟು ಬಂದಿವೆ. ಯಾರೋ ಡೈರೆಕ್ಟರ್ ಆಗಲು ಬಂದವನ ವಿವರವನ್ನು ನಾವ್ಯಾಕೆ ನೋಡಬೇಕು? ಚಿತ್ರರಂಗದ ಒಳಗಿನ ಕತೆ ಕಟ್ಟಿಕೊಂಡು ಸಾಮಾನ್ಯ ಪ್ರೇಕ್ಷಕರಿಗೆ ಏನಾಗಬೇಕು? ಅಂತಾ ಅಂದುಕೊಳ್ಳುವಂತಿಲ್ಲ. ಕೊಡೆ ಮುರುಗ ಆರಂಭದಿಂದ ಹಿಡಿದು ಅಂತ್ಯದವರೆಗೂ  ಮನರಂಜಿಸಿ, ನಗಿಸುತ್ತಾ ಸಾಗುತ್ತಾನೆ. ಯೋಗರಾಜ್ ಭಟ್ ಮತ್ತು ನಿರ್ದೇಶಕ ಸುಬ್ರಮಣ್ಯ ಪ್ರಸಾದ ಬರೆದಿರುವ, ತ್ಯಾಗರಾಜ್ ಸಂಗೀತ ನಿರ್ದೇಶನದ ಮಜಬೂತಾದ ಹಾಡುಗಳಿವೆ. ಚಲನಚಿತ್ರರಂಗದ ಪ್ರತಿಯೊಂದೂ ವಿವರಗಳು ಇಲ್ಲಿ ಎಳೆಎಳೆಯಾಗಿ ಬಿಚ್ಚಿಕೊಂಡಿದೆ.

ಯಾಮಾರಿದರೆ ನಿರ್ದೇಶಕನಾಗಲು  ಬಂದವನನ್ನು ತಲೆಹಿಡುಕನನ್ನಾಗಿಸುವ ಶೋಕಿವಾಲರು, ಅವಕಾಶ ಕೊಡಿಸುವ ನೆಪದಲ್ಲಿ ಜೇಬು ತುಂಬಿಸಿಕೊಳ್ಳುವ ಸುಳ್ಳುಬುರುಕರು, ನಿರ್ಮಾಪಕ ಕೊಡುವ ಕಾಟ, ಕಲಾವಿದರ ಬಿಲ್ಡಪ್ಪುಗಳು, ಅಸಹಕಾರಗಳ ನಡುವೆಯೂ ತನ್ನ ಕನಸನ್ನು ನೆರವೇರಿಸಿಕೊಳ್ಳಲು ಶತಪ್ರಯತ್ನ ಮಾಡುವ ಡೈರೆಕ್ಟರೊಬ್ಬನ ಒದ್ದಾಟಗಳೆಲ್ಲಾ ಕೊಡೆ ಮುರುಗ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿತಗೊಂಡಿದೆ. ಸಿನಿಮಾದಲ್ಲಿ ಬರುವ  ಪಾತ್ರಗಳು ಕೆಲವು ಸಿನಿಮಾ ಮಂದಿಯ ಸಾಮ್ಯತೆ ಹೊಂದಿದೆ. ಇಲ್ಲಿ ಸಂಬಂಧ, ನಂಬಿಕೆ, ವಿಶ್ವಾಸಗಳಿಗಿಂತಾ ದುಡ್ಡು ಮುಖ್ಯ ಅನ್ನೋದನ್ನು ನಿರ್ದೇಶಕರು ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ದಾರೆ.

ಸ್ವತಃ ನಿರ್ದೇಶಕ ಸುಬ್ರಮಣ್ಯ ಪ್ರಸಾದ ಡೈರೆಕ್ಟರ್ ಪಾತ್ರವನ್ನು ನಿಭಾಯಿಸಿದ್ದಾರೆ. ಹೀರೋ ಕೊಡೆ ಮುರುಗನಾಗಿ ಮುನಿಕೃಷ್ಣ ಮಜಾ ಕೊಟ್ಟಿದ್ದಾರೆ. ನಾಯಕಿ ಪಲ್ಲವಿ ಗೌಡ ಚೆಂದಗೆ ಅಭಿನಯಿಸಿದ್ದಾರೆ. ಅರವಿಂದ್ ರಾವ್ ಗಮನ ಸೆಳೆಯುತ್ತಾರೆ. ಕುರಿ ಪ್ರತಾಪ್ ಮತ್ತು ರಾಕ್ ಲೈನ್ ಸುಧಾಕರ್ ಸಿನಿಮಾಗೆ ಶಕ್ತಿ ನೀಡಿದ್ದಾರೆ. ಕಡೆಯಲ್ಲಿ ಬರುವ ನಿರ್ದೇಶಕರ ಭಾಷಣ ಸ್ವಲ್ಪ ಜಾಸ್ತಿ ಎನಿಸೋದು ಬಿಟ್ಟರೆ ಕೊಡೆ ಮುರುಗ ಎಲ್ಲೂ ಬೋರು ಹೊಡೆಸೋದಿಲ್ಲ.

ಸಿನಿಮಾರಂಗದ ಕಥೆಯಿದ್ದೂ ಎಲ್ಲೂ ಅಶ್ಲೀಲತೆಯನ್ನು ಬೆರೆಸದೆ, ಪ್ರತೀ ದೃಶ್ಯದಲ್ಲೂ ನಗಿಸುವ, ಮನೆಮಂದಿಯೆಲ್ಲಾ ಕೂತು ನೋಡಬಹುದಾದ ಸಿನಿಮಾ ಕೊಡೆ ಮುರುಗ!

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಏನ್‌ ಪವರ್‌ ಗುರೂ…!

Previous article

ಯಾಕೆ ಹಿಂಗಾಯ್ತು ಯುವರತ್ನ?

Next article

You may also like

Comments

Leave a reply

Your email address will not be published.