Connect with us

ಫೋಕಸ್

ಸುಂದರ್ ಕೃಷ್ಣ ಅರಸ್ ಪುತ್ರನ ವಾರೆಂಟ್!

Published

on

ಕನ್ನಡದ ಪ್ರೇಕ್ಷಕರು ಯಾವ ಕಾಲಕ್ಕೂ ಮರೆಯದ ಖಳನಟ ಸುಂದರ್ ಕೃಷ್ಣ ಅರಸ್. ಅವರ ಪುತ್ರ ನಾಗೇಂದ್ರ ಅರಸ್ ಸಂಕಲನಕಾರರಾಗಿ ಸಕ್ರಿಯರಾಗಿದ್ದುಕೊಂಡೇ ನಿರ್ದೇಶಕರಾಗಿಯೂ ಛಾಪು ಮೂಡಿಸಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿರುವ ನಾಗೇಂದ್ರ ಅರಸ್ ಮೇ ಫಸ್ಟ್ ಚಿತ್ರದ ನಂತರ ಅದೇ ಜೆಕೆ ನಾಯಕನಾಗಿರೋ ವಾರೆಂಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈಗಷ್ಟೇ ಬಿಡುಗಡೆಯಾಗಿರೋ ಪ್ರೋಮೋ ಮೂಲಕ ಈ ಚಿತ್ರ ಪ್ರೇಕ್ಷಕರು ಇದರ ಬಗ್ಗೆ ಮಾತಾಡುವಂತೆ ಮಾಡಿದೆ. ಇದುವರೆಗೂ ವಿಭಿನ್ನ ಕಥಾನಕಗಳ ಮೂಲಕವೇ ಕನ್ನಡದ ಮಹತ್ವದ ನಿರ್ದೇಶಕರಲ್ಲೊಬ್ಬರಾಗಿ ಸ್ಥಾನ ಪಡೆದಿರುವ ನಾಗೇಂದ್ರ ಅರಸ್ ವಾರೆಂಟ್ ಚಿತ್ರದ ಮೂಲಕ ಮತ್ತೊಂದು ತೆರನಾದ ಅಲೆಯೆಬ್ಬಿಸಲಿರೋ ಲಕ್ಷಣಗಳೂ ಕೂಡಾ ದಟ್ಟವಾಗಿಯೇ ಕಾಣಿಸುತ್ತಿದೆ!

ವಾರೆಂಟ್ ಮನೀಷಾ ವಾಮನ್ಗರ್ ನಿರ್ಮಾಣದ ಚಿತ್ರ. ಮನೀಷಾ ಕಾರವಾರ ಮೂಲದ ಕನ್ನಡತಿಯೇ ಆದರೂ ಮುಂಬೈನಲ್ಲಿ ಬದುಕು ರೂಪಿಸಿಕೊಂಡು ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದವರು. ಆ ಕನಸಿಗೆ ನಾಗೇಂದ್ರ ಅರಸ್ ಜೀವ ತುಂಬಿದ್ದಾರೆ. ಮನೀಷಾ ಅವರೇ ಬರೆದಿರೋ ಆಕ್ಷನ್ ಕಥೆಗೆ ಚೇತೋಹಾರಿಯಾಗಿ ದೃಷ್ಯರೂಪ ನೀಡಿದ ಖುಷಿಯಲ್ಲಿದ್ದಾರೆ. ಇದು ಪಕ್ಕಾ ಆಕ್ಷನ್ ಬೇಸಿನ ಕಮರ್ಷಿಯಲ್ ಚಿತ್ರ. ಒಂದು ಪಕ್ಕಾ ಕಮರ್ಷಿಯಲ್ ಸಿನಿಮಾದ ಅಷ್ಟೂ ಕ್ವಾಲಿಟಿಗಳನ್ನು ಹೊಂದಿರೋ ವಾರೆಂಟ್ ಚಿತ್ರದಲ್ಲಿ ಜಯ ಕಾರ್ತಿಕ್ ಎರಡು ಶೇಡ್‌ಗಳಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಜೋಡಿಹಕ್ಕಿ ಸೀರಿಯಲ್ಲಿನಲ್ಲಿ ರಾಮಣ್ಣ ಎಂಬ ಪಾತ್ರದಿಂದ ಖ್ಯಾತರಾಗಿರೋ ತಾಂಡವ್ ಕೂಡಾ ನಾಯಕರಲ್ಲೊಬ್ಬರಾಗಿ ನಟಿಸಿದ್ದಾರೆ.

ಈ ಸಿನಿಮಾಗೆ ಕಥೆ ಬರೆದಿದ್ದು ನಿರ್ಮಾಪಕಿ ಮನೀಷಾ ಅವರೇ ಆದ್ದರಿಂದ ಇಡೀ ಕಥೆ ಏನು ಬೇಡುತ್ತದೆ ಎಂಬ ಸ್ಪಷ್ಟ ಅಂದಾಜು ಅವರಿಗಿತ್ತು. ಜೊತೆಗೆ ಈ ಚಿತ್ರದ ನಾಯಕಿಯಾಗಿಯೂ ನಟಿಸಿರೋ ಮನೀಷಾ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದರಿಂದ ತಮ್ಮ ಕೆಲಸ ಸಲೀಸಾಯ್ತೆಂಬುದು ನಾಗೇಂದ್ರ ಅರಸ್ ಅಭಿಪ್ರಾಯ. ನಾಗೇಂದ್ರ ಅರಸ್ ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನು ಬ್ಯಾಂಕಾಕಿನಲ್ಲಿ ನಡೆಸಿದ್ದಾರೆ. ಸುಂದರವಾದ ಮೂರು ಹಾಡುಗಳು, ಟಾಕಿ ಪೋಷನ್ ಮತ್ತು ಹದಿನೈದರಿಂದ ಇಪ್ಪತ್ತು ಸೀನುಗಳನ್ನು ಅಲ್ಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಅದರಿಂದಲೇ ಇಡೀ ಚಿತ್ರ ರಿಚ್ ಆಗಿ ಮೂಡಿ ಬಂದಿದೆ ಎಂಬುದು ನಾಗೇಂದ್ರ ಅರಸ್ ಖುಷಿಯ ಮಾತು.

ರಾಕಿ ಎಂಬ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್ ವೃತ್ತಿ ಬದುಕನ್ನೇ ಬದಲಾಯಿಸಿದವರು ನಿರ್ದೇಶಕ ನಾಗೇಂದ್ರ ಅರಸ್. ಇಂಥಾ ಪ್ರತಿಭೆಯಿಂದಲೇ ತಮ್ಮ ತಂದೆಯ ಹೆಸರುಳಿಸಿರೋ ಅವರು ಅಪ್ಪನ ಹೆಸರಿದ್ದರೂ ಕೂಡಾ ಕಷ್ಟದ ದಾರಿ ದಾಟಿಕೊಂಡೇ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡವರು. ೧೯೯೫ರಲ್ಲಿ ನಾಗೇಂದ್ರ ಅರಸ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಅಸಿಸ್ಟೆಂಟ್ ಎಡಿಟರ್ ಆಗಿ. ತಮ್ಮ ಚಿಕ್ಕಪ್ಪ ಸುರೇಶ್ ಅವರಿಗೆ ಅಸಿಸ್ಟೆಂಟ್ ಆಗಿದ್ದುಕೊಂಡು ಸಂಕಲನ ವಿಭಾಗದ ಪಟ್ಟುಗಳನ್ನು ಕಲಿತುಕೊಂಡ ನಾಗೇಂದ್ರ ಅರಸ್ ೨೦೦೧ರಲ್ಲಿ ತೆರೆ ಕಂಡಿದ್ದ ಚಾಲೆಂಜಿಂಗ್ ಸ್ಟಾರ್ ಅಭಿನಯದ ಮೊದಲ ಚಿತ್ರ ಮೆಜೆಸ್ಟಿಕ್ ಮೂಲಕ ಸ್ವತಂತ್ರ ಸಂಕಲನಕಾರರಾಗಿ ಭಡ್ತಿ ಹೊಂದಿದ್ದರು. ಇದುವರೆಗೂ ಇನ್ನೂರಕ್ಕೂ ಹೆಚ್ಚಿನ ಸಿನಿಮಾಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿದ ಹೆಗ್ಗಳಿಕೆ ನಾಗೇಂದ್ರ ಅರಸ್ ಅವರದ್ದು.

ಹೀಗೆ ಸಂಕಲನಕಾರರಾಗಿ ಬಹು ಬೇಡಿಕೆ ಹೊಂದಿದ್ದರು ನಿರ್ದೇಶಕನಾಗಬೇಕೆಂಬ ತುಡಿತ ಅವರೊಳಗೆ ಸದಾ ಜಾಗೃತವಾಗಿತ್ತು. ಯಾವ ಹಿನ್ನೆಲೆಯೂ ಇಲ್ಲದೆ ಚಿತ್ರರಂಗಕ್ಕೆ ಬರುವ ಸಾಮಾನ್ಯ ಹುಡುಗನಂತೆಯೇ ಅದಕ್ಕಾಗಿ ಪ್ರಯತ್ನ ಪಡಲಾರಂಭಿಸಿದ್ದ ನಾಗೇಂದ್ರ ಅರಸ್ ರಾಕಿ ಚಿತ್ರದ ಮೂಲಕ ತಮ್ಮ ಕನಸನ್ನು ಸಾಕಾರಗೊಳಿಸಿಕೊಂಡಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ಅದುವರೆಗೂ ಒಂದು ಬ್ರೇಕ್‌ಗಾಗಿ ತಡಕಾಡುತ್ತಿದ್ದ ಯಶ್ ಮಾಸ್ ಹೀರೋ ಆಗಿ, ರಾಕಿಂಗ್ ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ಮೊದಲ ಪ್ರಯತ್ನದಲ್ಲಿಯೇ ಗೆಲುವು ಕಂಡ ನಾಗೇಂದ್ರ ಅರಸ್ ಆ ನಂತರ ವಿಜಯ ರಾಘವೇಂದ್ರ ನಟನೆಯ ಹಾರ್ಟ್‌ಬೀಟ್, ನಗೆಬಾಂಬ್, ವರ್ಧನ, ಮೇ ಫಸ್ಟ್ ಮುಂತಾದ ಸಾಲು ಸಾಲು ಚಿತ್ರಗಳನ್ನು ನಿರ್ದೇಶನ ಮಾಡಿದರು. ಇದೀಗ ಅಂಥಾದ್ದೇ ಶ್ರದ್ದೆ ಮತ್ತು ಕನಸಿನೊಂದಿಗೆ ವಾರೆಂಟ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಈಗಾಗಲೇ ಈ ಸಿನಿಮಾ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ ತಿಂಗಳೊಪ್ಪತ್ತಿನಲ್ಲಿಯೇ ಆಡಿಯೋ ರಿಲೀಸ್ ಮಾಡಲೂ ತಯಾರಿ ಆರಂಭವಾಗಿದೆ. ಈ ಚಿತ್ರಕ್ಕೆ ಒಂದು ಐಂಟಂ ಸಾಂಗಿಗೆ ವಿ ಮನೋಹರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಮೂರು ಹಾಡುಗಳಿಗೆ ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀಧರ್ ಕಷ್ಯಪ್ ಕಥೆಯ ಫೋರ್ಸಿಗೆ ಹೇಳಿ ಮಾಡಿಸಿದಂಥಾ ಹೊಸಾ ಥರದ ಹಿನ್ನೆಲೆ ಸಂಗೀತ ನೀಡಿದ್ದಾರಂತೆ.

ವಾರೆಂಟ್ ಚಿತ್ರ ಜಯ ಕಾರ್ತಿಕ್ ಅವರನ್ನೂ ಮಾಸ್ ಆಗಿ ನೆಲೆಗಾಣಿಸುವ ಸೂಚನೆಗಳಿವೆ. ಒಟ್ಟಾರೆಯಾಗಿ ಇಡೀ ಸಿನಿಮಾವನ್ನು ಕನ್ನಡಕ್ಕೆ ಹೊಸತೆನ್ನಿಸುವಂತೆ, ಪ್ರೇಕ್ಷಕರನ್ನು ಆವರಿಸಿಕೊಳ್ಳುವಂತೆ ರೂಪಿಸಿರುವ ತೃಪ್ತಿ ನಾಗೇಂದ್ರ ಅರಸ್ ಮಾತುಗಳಲ್ಲಿ ಜಿನುಗುತ್ತವೆ.

Continue Reading
Advertisement
Click to comment

Leave a Reply

Your email address will not be published. Required fields are marked *

ಫೋಕಸ್

ಕಬ್ಬಿನ ಹಾಲು ಮಾರಲು ಬಂದಳು ಬಾಲಿವುಡ್ ಚೆಲುವೆ!

Published

on

ಸಾಹಸ ನಿರ್ದೇಶಕರಾಗಿ ಬಾಲಿವುಡ್ ರೇಂಜಿಗೂ ತಲುಪಿಕೊಂಡಿದ್ದ ರವಿವರ್ಮಾ, ಮಾಸ್ತಿಗುಡಿಯಲ್ಲಿ ಮಾಡಿಕೊಂಡಿದ್ದ ಯಡವಟ್ಟಿನಿಂದ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಆದರೆ ಅದಾದ ನಂತರ ರವಿವರ್ಮಾ ನಿರ್ದೇಶಕನಾಗಿ ಹೊಸಾ ಬದುಕು ಆರಂಭಿಸಿದ್ದಾರೆ. ಅವರೀಗ ಶಿವಣ್ಣ ಮುಖ್ಯ ಭೂಮಿಕೆಯಲ್ಲಿರೋ ರುಸ್ತುಂ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ತಾರೆಯರ ದಂಡು ನೆರೆಯುವಂತೆಯೂ ಮಾಡುತ್ತಿದ್ದಾರೆ!

ಬಾಲಿವುಡ್ ನಟ ವಿವೇಕ್ ಒಬೇರಾಯ್ ಈ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸುತ್ತಿರೋದು ಗೊತ್ತಿರೋ ವಿಚಾರವೇ. ಇದೀಗ ರುಸ್ತುಂ ಅಡ್ಡೆಗೆ ಮತ್ತೋರ್ವ ಬಾಲಿವುಡ್ ನಟಿಯ ಆಗಮನವಾಗಿದೆ. ಹಾಗೆ ಬಂದವಳು ಮಾದಕ ಚೆಲುವೆ ಸಾಕ್ಷಿ ಚೌಧರಿ!

ಸಾಕ್ಷಿ ಚೌಧರಿ ಬಂದಿರೋದು ಹಾಡೊಂದಕ್ಕೆ ಕುಣಿಯುವುದಕ್ಕಾಗಿ. ಎಪಿ ಅರ್ಜುನ್ ಬರೆದಿರೋ ‘ಕಬ್ಬಿನ ಹಾಲು ಮಾರೋಕಂತ ಮಂಡ್ಯದಿಂದ ಬಂದಿದ್ದೀನಿ’ ಎಂಬ ಹಾಡಿಗೆ ಈಕೆ ಕುಣಿಯಲಿದ್ದಾಳೆ. ಈ ಹಾಡು ಅರ್ಜುನ್ ಜನ್ಯಾ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿದೆ. ಇದಕ್ಕೆ ರಾಜು ಸುಂದರಂ ನೃತ್ಯ ನಿರ್ದೇಶನ ಮಾಡಲಿದ್ದಾರೆ.

ರುಸ್ತುಂ ಚಿತ್ರದಲ್ಲಿ ಶಿವಣ್ಣನ ಪಾತ್ರ, ಅವರ ಲುಕ್ಕು ಸೇರಿದಂತೆ ಎಲ್ಲವೂ ಸಂಚಲನವನ್ನೇ ಸೃಷ್ಟಿಸಿವೆ. ಇದರಲ್ಲಿ ವಿವೇಕ್ ಒಬೇರಾಯ್ ನಟಿಸೋ ಮೂಲಕ ಮೊದಲ ಸಲ ಕನ್ನಡಕ್ಕೆ ಬಂದಿದ್ದಾರೆ. ಶ್ರದ್ಧಾ ಶ್ರೀನಾಥ್, ರಚಿತಾ ರಾಮ್, ಮಯೂರಿ ಮುಂತಾದವರೂ ನಟಿಸಿದ್ದಾರೆ. ತಾರಾಗಣ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಕೂಡಾ ರುಸ್ತುಂ ಚಿತ್ರವನ್ನು ರವಿವರ್ಮಾ ರಿಚ್ ಆಗಿಯೇ ರೂಪಿಸೋ ಪಣ ತೊಟ್ಟಿದ್ದಾರೆ.

Continue Reading

ಫೋಕಸ್

ಚಪ್ಪರಿಸುವಂತಿದೆ ಚಜ್ಜಿರೊಟ್ಟಿ, ಚವಳಿಕಾಯಿ ಹಾಡು….

Published

on

‘ಮಟಾಶ್’ ಸಿನಿಮಾದ ’ಉಡಾಳರಪ್ಪೋ ಉಡಾಳರೋ ಊರ ತುಂಬ ಉಡಾಳರೋ’ ಎಂದು ಶುರುವಾಗುವ ಬಿಜಾಪುರ ಸೀಮೆಯ ಅಪ್ಪಟ ಆಡುನುಡಿಗಳ ಈ ಹಾಡು, ಈ ಪ್ರದೇಶದಲ್ಲಿನ ಒಂದು ವರ್ಗದ ಯುವಕರ ದೈನಂದಿನ ತೊಳಲಾಟಗಳನ್ನೂ ಎತ್ತಿ ತೋರಿಸುತ್ತದೆ. ಚಿತ್ರಕತೆಗೆ ಹೊಂದಿಕೊಂಡಂತೆ ಬರೆದಿರುವ ಕಾರಣದಿಂದ, ರೊಕ್ಕ ಮಾಡಲು ಹೊರಟ ನಿರುದ್ಯೋಗಿ ಉಡಾಳರ ದೈನಿಕ ಬದುಕಿನ ವಿವರಗಳನ್ನು ಕಟ್ಟಿ ಕೊಡುವಲ್ಲಿ ಸಫಲವಾಗಿದೆ.

ಬಿಜಾಪುರ ನೆಲದ ಶೈಲಿಯ ಭಾಷೆ, ಅದರಲ್ಲಿ ಉರ್ದು, ಲಂಬಾಣಿ ಪದಗಳ ಬಳಕೆಯನ್ನು ತೂಕ ಹಾಕಿದಂತೆ ಪ್ರಯೋಗ ಮಾಡಲಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿರುವೀ ಆಡಿಯೋಕ್ಕೆ ’ಚಜ್ಜಿರೊಟ್ಟಿ ಚವಳಿಕಾಯಿ’ ಸಾಂಗ್ ಎಂದೇ ಕರೆಯಲಾಗುತ್ತಿದೆ. ’ಚಜ್ಜಿರೊಟ್ಟಿ ಚವಳಿಕಾಯಿ, ರೂಪಾಯ್‌ಗೆ ಸೇರ್ ಬದನೆಕಾಯಿ’ ಎಂಬ ಸಾಲುಗಳ ಜೊತೆಗೆ ಇಲ್ಲಿನ ಪೆನಪೆಟಿಗಿ (ಹಾರ್ಮೊನಿಯಂ), ತಬಲಾ ಇತ್ಯಾದಿ ಸ್ಥಳೀಯ ಸಂಗೀತ ವಾದ್ಯಗಳ ಇಂಪೂ ಕಿವಿ ತುಂಬುತ್ತದೆ.

ಬೀರೋ ಬ್ರ್ಯಾಂಡಿ ಕುಡಿಯೋವಾಗ ಉಪ್ಪಿನಕಾಯಿ ನೆಕ್ತಾರ

ಮಾವಾ, ಗುಟ್ಕಾ ಇಲ್ಲಾರದಾಗ ಸುಣ್ಣ, ತಂಬಾಕು ತಿಕ್ತಾರ….

ಹಗಲು ಕ್ರಿಕೆಟ್ಟು ಬೆಟ್ಟಿಂಗ್, ಇಸ್ಪೀಟ್ ಆಟ

ರಾತ್ರಿಯಾದರೆ ಡಾಬಾದೊಳಗ ಊಟ…..

-ಇಂತಹ ಸಾಲುಗಳು ಪಡ್ಡೆಗಳಿಗೆ, ಉಡಾಳರಿಗೆ ಇಷ್ಟವಾದಂತಿವೆ. ವಿಜಾಯಪುರದ ಮೂಲ ಆಹಾರ ಸಂಸ್ಕೃತಿ, ಭಾಷಾ ಸೊಗಡನ್ನು ರಂಜನೆಯ ರೂಪದಲ್ಲಿ ಉಣಬಡಿಸಲಾಗಿದೆ. ’ಉಡಾಳರ’ ಈ ಹಾಡು ರಚಿಸಿದವರು, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಧ್ಯಾಪಕ ಸುನೀಲಕುಮಾರ್ ಸುಧಾಕರ್. ಪುನೀತ್ ಧ್ವನಿ ಇದಕ್ಕೆ ಇನ್ನಷ್ಟು ರಂಗು ನೀಡಿದೆ. ’ರೊಕ್ಕಕ್ಕಾಗಿ ಕೈ ಕೊಡಬ್ಯಾಡ, ರೊಕ್ಕಕ್ಕಾಗಿ ಬಾಯಿ ಬಿಡಬೇಡ’ ಎಂಬ ಉಪದೇಶವೂ ಈ ಸಾಂಗಿನಲ್ಲಿದೆ!

ನಿರ್ದೇಶಕ ಎಸ್.ಡಿ. ಅರವಿಂದ ’ಅಮಾನ್ಯೀಕರಣದ ೫೦ ದಿನಗಳ ತೊಳಲಾಟದ ಹಿನ್ನೆಲೆ ಇಟ್ಟುಕೊಂಡು, ಕಾಮಿಡಿ ಥ್ರಿಲ್ಲರ್ ರೂಪಿಸಿದ್ದೇವೆ’ ಎಂದಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ.

Continue Reading

ಪ್ರಚಲಿತ ವಿದ್ಯಮಾನ

ಆಕ್ಷನ್ ಪ್ರಿನ್ಸ್ ವಿರುದ್ಧ ದಾಖಲಾಯ್ತು ಕೇಸ್!

Published

on

ಬೆಂಗಳೂರಿನಲ್ಲಿ ಫ್ಲೆಕ್ಸ್ ಹಾಗೂ ಬ್ಯಾನರ್ ಹಾಕುವಂತಿಲ್ಲ ಎಂಬ ಬಗ್ಗೆ ಹೈಕೋರ್ಟ್ ತಪರಾಕಿ ನೀಡಿದ್ದರಿಂದ ಬಿಬಿಎಂಪಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಈ ಸಂಬಂಧವಾಗಿ ಕಟೌಟ್, ಫ್ಲೆಕ್ಸ್‌ಗಳನ್ನು ಕೂಡಾ ಬಿಬಿಎಂಪಿ ಬೆಂಗಳೂರು ವ್ಯಾಪ್ತಿಯಲ್ಲಿ ಬ್ಯಾನ್ ಮಾಡಿದೆ. ಆದರೆ ಹುಟ್ಟುಹಬ್ಬದ ಸಂದರ್ಭದಲ್ಲಿ ಇದನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ದ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ!

ಬೆಂಗಳೂರು ಮಹಾನಗರ ಪಾಲಿಕೆಯ ಬನಶಂಕರಿ ಉಪ ವಿಭಾಗದಲ್ಲಿ ಎಆರ್‌ಓ ಆಗಿರುವ ತಾರಕಾನಾಥ್ ಧ್ರುವ ವಿರುದ್ಧ ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಮೂವತ್ತನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರಲ್ಲಾ ಧ್ರುವ? ಆ ಸಂದರ್ಭದಲ್ಲಿ ಕೆಆರ್ ರಸ್ತೆಯ ಶಾಸ್ತ್ರಿ ನಗರ ಸುತ್ತಮುತ್ತ ಅಭಿಮಾನಿಗಳು ಆಳೆತ್ತರದ ಕಟೌಟ್ ಹಾಕಿದ್ದರು. ಈ ರಸ್ತೆಯ ತುಂಬಾ ಧ್ರುವ ಸರ್ಜಾರ ಕಟೌಟ್, ಬ್ಯಾನರ್ ಹಾಕಿ ಶುಭ ಕೋರಿದ್ದರು. ಇದು ಕಾನೂನು ಉಲ್ಲಂಘನೆ ಅಂತ ಆರೋಪಿಸಿ ತಾರಕಾನಾಥ್ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧವಾಗಿ ದ್ರುವ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತು, ಹೋರ್ಡಿಂಗ್ಸ್ ಮತ್ತು ಬ್ಯಾನರ್ ಅಳವಡಿಸದಂತೆ ಆಗಸ್ಟ್ ೧೨ರಂದೇ ಕಟ್ಟುನಿಟ್ಟಿನ ಆದೇಶ ರವಾನೆ ಮಾಡಲಾಗಿತ್ತು. ಇದರ ಅರಿವಿದ್ದೋ ಇಲ್ಲದೆಯೋ ಧ್ರುವ ಅಭಿಮಾನಿಗಳು ಈ ಕಾನೂನು ಉಲ್ಲಂಘಿಸಿದ್ದಾರೆ. ಇದರ ಪರಿಣಾಮವಾಗಿ ಇದೀಗ ಧ್ರವಾ ಸರ್ಜಾಜೆ ಹೊಸಾ ತಲೆನೋವು ಶುರುವಾಗಿದೆ. ದ್ರುವ ಇದೀಗ ತಮ್ಮ ಮೇಲೆ ಕಾನೂನು ಕ್ರಮ ಜರುಗುವ ಭೀತಿ ಎದುರಿಸುತ್ತಿದ್ದಾರೆ.

Continue Reading

Trending

Copyright © 2018 Cinibuzz