ತಮಿಳು ನಟ ರಾಧಾ ರವಿ ನಟನೆಯಿಂದ ಪ್ರಸಿದ್ಧರಾದಷ್ಟೇ ತನ್ನ ವಿವಾದಾತ್ಮಕ ಮಾತುಗಳಿಂದಲೂ ಸುದ್ದಿಯಾದವರು. ಸಾಕಷ್ಟು ಸಲ ತನ್ನದೇ ಚಿತ್ರರಂಗದ ನಟ, ನಟಿಯರ ಬಗ್ಗೆ ಕ್ಷುಲ್ಲಕ ಮಾತನಾಡಿ ಕಿಡಿ ಹುಟ್ಟಿಸಿರುವ ಭೂಪ ರಾಧಾ ರವಿ. ಇದಕ್ಕೆ ಕಮಲ್ ಹಾಸನ್, ಆಸಿನ್, ಎ ಆರ್ ರೆಹಮಾನ್ ಎಲ್ಲರೂ ಬಲಿಪಶುವಾದವರೇ. ಈಗ ರಾಧಾ ರವಿ ಕಣ್ಣು ನಟಿ ನಯನತಾರಾ ಮೇಲೆ ಬಿದ್ದು ಅದೇ ದೊಡ್ಡ ವಿವಾದವಾಗಿ ಕುಳಿತಿದೆ.
‘ನಯನತಾರಾಳನ್ನ ಸ್ಕ್ರೀನ್ ಮೇಲೆ ಸೀತೆ ಮಾಡ್ತೀರಲ್ಲ.. ಆ ಯೋಗ್ಯತೆ ಆಕೆಗಿದೆಯೇ?’ ಎಂಬ ಧಾಟಿಯಲ್ಲಿ ರಾಧಾ ರವಿ ಮಾತನಾಡಿ ಚಿತ್ರರಂಗದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ನಯನತಾರಾ ನಟನೆಯ ಚಿತ್ರವೊಂದರ ಸಮಾರಂಭಕ್ಕೆ ಹೋಗಿದ್ದ ರಾಧಾರವಿ ನಯನ್‍ರನ್ನ ಲೇವಡಿ ಮಾಡಲು ವೇದಿಕೆ ಬಳಸಿಕೊಂಡಿದ್ದಾರೆ. ಆ ಫಂಕ್ಷನ್‍ಗೆ ನಯನಾ ಗೈರು ಹಾಜರಾಗಿದ್ದು ರಾಧಾರವಿ ಬಾಯಿ ಚಪಲಕ್ಕೆ ದಾರಿ ಸುಗಮ ಮಾಡಿಕೊಟ್ಟಿತ್ತು. ‘ಈ ಯಮ್ಮ ಒಂದ್ಸಲ ದೆವ್ವದ ಪಾತ್ರ ಮಾಡ್ತಾಳೆ. ಇನ್ನೊಮ್ಮೆ ದೇವತೆ ಪಾತ್ರ ಮಾಡುತ್ತಾಳೆ. ಈಗಿನವರಿಗೆ ಬುದ್ಧಿ ಇಲ್ಲ. ಯಾರ್ಯಾರಿಗೆ ಏನು ಪಾತ್ರ ಕೊಡಬೇಕು ಅನ್ನೋದೆ ತಿಳಿಯದಂತೆ ವರ್ತಿಸುತ್ತಾರೆ. ಹಿಂದೆಲ್ಲಾ ದೇವತೆ ಪಾತ್ರ ಕೊಡಬೇಕೆಂದಿದ್ದಾರೆ ಅಂಥ ವ್ಯಕ್ತಿತ್ವ, ಹಿನ್ನೆಲೆಯನ್ನ ಗುರುತಿಸಿ ಅಂಥವರಿಗೇ ಪಾತ್ರ ಕೊಡುತ್ತಿದ್ದರು. ಜನರಿಗೂ ಗೌರವ ಭಾವ ಮೂಡುತ್ತಿತ್ತು. ಆದರೆ ನಯನಾತಾರಾಳಂಥವಳಿಗೆ ಈಗ ಆ ಅವಕಾಶ ನೀಡುತ್ತಿದ್ದಾರೆ. ದೇವತೆ ಪಾತ್ರ ಮಾಡುವವಳನ್ನ ನೋಡಿದಾಗ ಕೈ ಎತ್ತಿ ಮುಗಿಯಬೇಕು ಅನ್ನಿಸುವಂತಿರಬೇಕು. ಆದರೆ ನೋಡಿದೊಡನೆ ಹಾಸಿಗೆ ನೆನಪಾಗುವವಳನ್ನ ತಂದು ದೇವತೆ ವೇಷ ಕಟ್ಟುತ್ತಿದ್ದಾರೆ..’!
ಇದು ರಾಧಾ ರವಿ ಮಾತಿನ ಭಾವಾರ್ಥ. ಯಾವಾಗ ಈ ಮಾತು ವೈರಲ್ ಆಯಿತೋ ತಮಿಳು ಚಿತ್ರರಂಗದ ಅನೇಕರು ರಾಧಾರವಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕಮಲ್ ಹಾಸನ್, ರಾಧಿಕಾ ಶರತ್ ಕುಮಾರ್, ಮಂಜರಿಮಾ, ವಿಶಾಲ್ ಸೇರಿದಂತೆ ಅನೇಕರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡಿನ ಡಿಎಂಕೆ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ರಾಧಾರವಿಯನ್ನ ತತ್ ಕ್ಷಣಕ್ಕೆ ಬರುವಂತೆ ಆ ಪಕ್ಷ ಸಸ್ಪೆಂಡ್ ಮಾಡಿದೆ. ತಮಿಳುನಾಡಿನ ನಡಿಗೇರ್ ಸಂಘಂ ರಾಧಾರಾವಿಗೆ ನೋಟೀಸ್ ನೀಡಿದ್ದು ನಾಲಿಗೆ ಹದ್ದುಬಸ್ತಿನಲ್ಲಿಟುಕೊಳ್ಳುವಂತೆ ಹೇಳಿರುವುದು ಸದ್ಯದ ವರ್ತಮಾನ.
No Comment! Be the first one.