ಸಿನಿಮಾ ಬಹುತೇಕರ ಆಕರ್ಷಣೆಯ ಕ್ಷೇತ್ರ. ಬದುಕಿಗಾಗಿ ಯಾವ್ಯಾವುದೋ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆಲ್ಲಾ ಚಿತ್ರರಂಗದಲ್ಲಿ ಹೆಸರು ಮಾಡಿಬಿಡಬೇಕು ಎನ್ನವ ತುಡಿತ. ಸಿನಿಮಾವನ್ನು ಧ್ಯಾನಿಸುತ್ತಾ, ತಮ್ಮದಲ್ಲದ ಕೆಲಸಗಳನ್ನು ಮಾಡುವವರೂ ಅಂತಿಮವಾಗಿ ಇಲ್ಲಿ ಬಂದು ಗೆದ್ದ ಉದಾಹರಣೆಗಳಿವೆ. ಮಿನರಲ್ ವಾಟರ್ ಮಾರಾಟ ಮಾಡುತ್ತಿದ್ದ ರಿಷಬ್ ಶೆಟ್ಟಿ ಇವತ್ತು ಕನ್ನಡ ಚಿತ್ರರಂಗದ ಮುಂಚೂಣಿ ಸ್ಥಾನ ಗಿಟ್ಟಿಸಿದ್ದಾರೆ. ಒಂದು ಕಾಲದಲ್ಲಿ ಟಾಯ್ಲೆಟ್ ಸಾಮಗ್ರಿಗಳ ವ್ಯಾಪಾರ ಮಾಡುತ್ತಿದ್ದ ವಿಜಯ್ ಸೇತುಪತಿ ಇವತ್ತು ಭಾತರದ ಅತ್ಯುತ್ತಮ ನಟ ಅನ್ನಿಸಿಕೊಂಡಿದ್ದಾರೆ. ಛಲ, ಶ್ರದ್ಧೆ ಮತ್ತು ನಿರಂತರ ಪರಿಶ್ರಮದಿಂದ ಮಾತ್ರ ಯಾವುದೇ ಕ್ಷೇತ್ರದಲ್ಲಿ ಗೆಲ್ಲಲು ಸಾಧ್ಯ. ಸಿನಿಮಾರಂಗ ಕೂಡಾ ಅದಕ್ಕೆ ಹೊರತಲ್ಲ.
ಇಷ್ಟೆಲ್ಲಾ ಹೇಳಲೂ ಕಾರಣವಿದೆ. ಅದೇನೆಂದರೆ, 3.0 ಹೆಸರಿನ ಚಿತ್ರವೊಂದು ಈ ವಾರ ತೆರೆಗೆ ಬರುತ್ತಿದೆ. ಈ ಸಿನಿಮಾತಂಡದಲ್ಲಿ ಮೂವರು ಹೀರೋಗಳಿದ್ದಾರೆ. ಒಬ್ಬರು ಇಂಟೀರಿಯರ್ ಡಿಸೈನ್ ಮಾಡೋ ಸಂಸ್ಥೆಯಲ್ಲಿ, ಮತ್ತೊಬ್ಬರು ಮೊಬೈಲ್ ಅಂಗಡಿ ಮತ್ತೊಬ್ಬರು ಸಾಫ್ಟ್ ವೇರ್ ಉದ್ಯೋಗಿಯಾಗಿದ್ದಾರೆ. ಮೂವರಿಗೂ ಚಿತ್ರರಂಗದಲ್ಲಿ ನೆಲೆ ನಿಲ್ಲಬೇಕು ಎನ್ನುವ ತುಡಿತ ಅತೀವವಾಗಿದ್ದಂತಿದೆ. ಎಲ್ಲ ಹೊಸಬರಿಗೂ ಎದುರಾದಂತೆ ಇವರ ಮುಂದೆ ಕೂಡಾ ಸಾಕಷ್ಟು ಸವಾಲುಗಳು ಎದುರಾಗಿವೆ. ಅದನ್ನೆಲ್ಲಾ ಮೀರಿ ಇವರ 3.0 ಸಿನಿಮಾ ಉತ್ತಮವಾಗಿ ಮೂಡಿಬಂದಿದ್ದೇ ಆಗಿದ್ದಲ್ಲಿ ಇವರ ಗೆಲುವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಸಿನಿಮಾರಂಗದ ಮೇಲೆ ಸೆಳೆತ ಇದ್ದ ಮಾತ್ರಕ್ಕೆ ಇಲ್ಲಿ ಯಶಸ್ಸು ಸಿಕ್ಕಿಬಿಡುವುದಿಲ್ಲ. ಗುಣಮಟ್ಟದ ಕೆಲಸ ಮಾತ್ರದಿಂದ ಸದ್ದು ಮಾಡಲು ಸಾಧ್ಯ. ಅದು ಎಷ್ಟರ ಮಟ್ಟಿಗೆ ಅನ್ನೋದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ..
ಒರಾಕಲ್ ಕಲಾ ಕ್ರಿಯೇಶನ್ಸ್ ಲಾಛನದಲ್ಲಿ ತಯಾರಾಗಿರುವ ಕ್ರೈಂ, ಥ್ರಿಲ್ಲರ್ ಕಥಾಹಂದರದ ಚಿತ್ರ “3.O” ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇಂದ್ರಜಿತ್ ಅವರು ಚಿತ್ರದ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿದ್ದಾರೆ. ಹೊಸ ಪ್ರತಿಭೆಗಳಾದ ಶಶಿಕಿರಣ್, ಶಿವರಾಜ್ ಮತ್ತು ಲೋಹಿತ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದು, ಅವರೇ ಬಂಡವಾಳವನ್ನೂ ಹಾಕಿದ್ದಾರೆ. ನಾಯಕಿಯಾಗಿ ನಿಶ್ಕಲಗೌಡ ನಟಿಸಿದ್ದಾರೆ. ಇದೊಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಯುವತಿಯ ಕೊಲೆಯ ತನಿಖೆಯ ಸುತ್ತ ಸಾಗುವ ಕಥೆ ಇದರಲ್ಲಿದೆ. ಬಹುತೇಕ ಬೆಂಗಳೂರು ಸುತ್ತ ಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ವೀರ ಸಮರ್ಥ ಅವರ ಸಂಗೀತ ನಿರ್ದೇಶನ, ಕೆ.ಕಲ್ಯಾಣ್ ಸಾಹಿತ್ಯ, ಅರ್ಜುನ್ ಕಿಟ್ಟು ಸಂಕಲನ, ಮಲ್ಲಿಕಾರ್ಜುನ ಕಲಾನಿರ್ದೇಶನವಿದ್ದು, ಸಂಗೀತಾ, ಸ್ವಾತಿ, ವಾಣಿಶ್ರೀ, ಪ್ರವೀಣ್ ಪ್ರಮುಖ ಪಾತ್ರಗಳಲ್ಲಿದ್ದಾರೆ
No Comment! Be the first one.