ಗಜಿಬಿಜಿ ಬೆಂಗಳೂರಿನ ಗಾಂಜಾ ಘಮಲಿನ ಸುತ್ತ ವಿಜಿಯ ಭೀಮ!

Picture of Cinibuzz

Cinibuzz

Bureau Report

ಬೆಂಗಳೂರು ಇಷ್ಟೊಂದು ಕೆಟ್ಟೋಗಿದ್ಯಾ? ಗಾಂಜಾ ಅನ್ನೋ ಮಾದಕ ವಸ್ತು ಮಕ್ಕಳ ಬದುಕನ್ನು ಈ ಮಟ್ಟಿಗೆ ಆಪೋಶನ ತೆಗೆದುಕೊಳ್ಳುತ್ತಿದೆಯಾ? ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರುವಾಗಲೂ ಈ ಮಾಫಿಯಾವನ್ನು ಮಟ್ಟ ಹಾಕಲು ಸಾಧ್ಯವಾಗುತ್ತಿಲ್ವಾ? ಅಸಲಿಗೆ ಗಾಂಜಾ ಕೃಷಿ ಮಾಡುತ್ತಿರುವವರು ಯಾರು? ಇದು ಹೇಗೆ ಹದಿಹರೆಯದವರ ಕೈಗೆ ಸಿಗುತ್ತಿದೆ? ಇದರ ಹಿಂದೆ ಯಾರೆಲ್ಲಾ ಇರಬಹುದು? ರಾಜಕಾರಣಿಗಳ ಕೈವಾಡವಿರಬಹುದಾ? ಪೊಲೀಸ್‌ ವ್ಯವಸ್ಥೆಯಲ್ಲೇ ಲೋಪವಿದೆಯಾ…? ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವುದರ ಜೊತೆಗೆ ಉತ್ತರವನ್ನೂ ಹುಡುಕಿಕೊಟ್ಟಿದ್ದಾನೆ ʻಭೀಮʼ!

ಬೆಂಗಳೂರಿನ ಏರಿಯಾವೊಂದರಲ್ಲಿ ಬೈಕ್‌ ಮೆಕ್ಯಾನಿಕ್‌ ಕೆಲಸ ಮಾಡಿಕೊಂಡಿದ್ದ  ಜಾವಾ ರಾಮಣ್ಣ ಅಂದರೆ ಸುತ್ತಮುತ್ತಲಿನವರಿಗೆ ಎಷ್ಟು ಮರ್ಯಾದೇನೋ ಅಷ್ಟೇ ಭಯ ಕೂಡಾ ಇರತ್ತೆ. ತನ್ನ ಪತ್ನಿ ಬೇಬಿಅಮ್ಮ ಮತ್ತು ಮಗ ವಿನೋದ್‌ ಜೊತೆಗೆ ಗೌರವದಿಂದ ಬಾಳ್ವೆ ನಡೆಸುತ್ತಿರುತ್ತಾನೆ. ತನ್ನೊಟ್ಟಿಗೆ ಗ್ಯಾರೇಜಿನಲ್ಲಿ ಕೆಲಸ ಮಾಡಿಕೊಂಡಿದ್ದ ಹುಡುಗ ಮಂಜನನ್ನು ಗಂಡ-ಹೆಂಡತಿ ಇಬ್ಬರೂ ಮಗನಂತೆಯೇ ನೋಡಿಕೊಳ್ಳುತ್ತಿರುತ್ತಾರೆ. ಆದರೆ, ಮಂಜು ಹಣದ ಆಸೆಗೆ ನಿಷ್ಠತೆಯನ್ನು ಬಿಟ್ಟು ನಮಕ್‌ ಹರಾಮಿ ಕೆಲಸ ಮಾಡುತ್ತಿರುತ್ತಾನೆ. ರಾಮಣ್ಣನ ಮನೆಯಲ್ಲಿ ನಡೆಯುವ ದೊಡ್ಡ ಅನಾಹುತಕ್ಕೆ ಇದೇ ಮಂಜ ಕಾರಣನೂ ಆಗಿಬಿಡುತ್ತಾನೆ. ಕಾಲಾಂತರದಲ್ಲಿ ಈ ಮಂಜ ಡ್ರ್ಯಾಗರ್‌ ಮಂಜನಾಗಿ ಫೀಲ್ಡಲ್ಲಿ ಹೇಗೆಲ್ಲಾ ಬೆಳೆಯುತ್ತಾನೆ? ಭೀಮ ಅನ್ನೋ ಪಾತ್ರ ಎಂಟ್ರಿ ಕೊಡೋದು ಹೇಗೆ? ಭೀಮನಿಗೂ ಡ್ರ್ಯಾಗರ್‌ ಮಂಜನಿಗೂ ಯಾವ ಕಾರಣಕ್ಕಾಗಿ ದುಶ್ಮನಿ ಬೆಳೆಯುತ್ತದೆ? ಭೀಮನ ಹಿನ್ನೆಲೆ ಏನು? ಜಾವಾ ರಾಮಣ್ಣನಿಗಾಗಿ ಭೀಮ ಯಾಕೆ ಕಾದಾಡುತ್ತಾನೆ? ಭೀಮನ ಬದುಕಿನಲ್ಲಿ ಬೇಬಿಅಮ್ಮ ಯಾಕೆ ಅಷ್ಟು ಪ್ರಾಮುಖ್ಯತೆ ಪಡೆಯುತ್ತಾಳೆ? ನಡುವೆ ಬರುವ ನಾಯಕಿಯದ್ದೇನು ಕೆಲಸ? ಎಂಬಿತ್ಯಾದಿ ವಿಚಾರಗಳ ಸುತ್ತ ಹರಡಿಕೊಂಡ ಕಥೆ ʻಭೀಮʼಮನದ್ದು!

Bheema (2024) - Movie | Reviews, Cast & Release Date in haveri- BookMyShow

ದುನಿಯಾ ವಿಜಯ್‌ ದೊಡ್ಡಗುಣ!

ಅದು ಸಹಜವೋ ಅಸಹಜವೋ ಗೊತ್ತಿಲ್ಲ. ಸಾಮಾನ್ಯಕ್ಕೆ ಯಾವುದೇ ಸ್ಟಾರ್‌ ನಟರು ಸಿನಿಮಾದ ತುಂಬಾ ತಾವೇ ಇರಬೇಕು ಅಂತಾ ಬಯಸುತ್ತಾರೆ. ಆದರೆ, ವಿಜಯ್‌ ಅವರು ಹಾಗೆ ಮಾಡುವುದಿಲ್ಲ. ಹೇರಳವಾದ ಪಾತ್ರಗಳನ್ನು ಸೃಷ್ಟಿಸಿ, ಆ ಎಲ್ಲ ಪಾತ್ರಗಳಿಗೂ ಸ್ಕ್ರೀನ್‌ ಸ್ಪೇಸ್‌ ಕೊಟ್ಟು, ತಾವೂ ಅದರ ಭಾಗವಾಗುತ್ತಾರೆ. ಇದನ್ನು ದುನಿಯಾ ವಿಜಿ ಅವರ ದೊಡ್ಡ ಗುಣ ಅನ್ನಬಹುದು. ಅವರ ಹಿಂದಿನ ಚಿತ್ರದಲ್ಲೂ ಇದು ಸಾಬೀತಾಗಿತ್ತು. ʻಭೀಮʼ ಸಿನಿಮಾದಲ್ಲೂ ಹಾಗೆ ಹತ್ತು ಹಲವು ಪಾತ್ರಗಳು ಬಂದು ಗಮನ ಸೆಳೆಯುತ್ತವೆ- ರೌಡಿಸಂನಲ್ಲಿ ಸಂಪಾದನೆಯೂ ಇಲ್ಲ, ಸಾಧನೇನೂ ಇಲ್ಲ ಅಂತಾ ಪ್ರತಿಪಾದಿಸುವ ನಿವೃತ್ತ ರೌಡಿ ಕಾಂಪ್ರೊಮೈಸ್‌ ಆಂಟನಿ. ಎಂಎಲ್‌ಎ ಭಂಟ ಪಳನಿ. ಅವನ ʻಜೊತೆಗಾರʼ ಮಲ್ಲ, ಪುನಿ, ಅಭಿ, ಗಿಲಿಗಿಲಿ ಚಂದ್ರ, ಶುಂಠಿ, ಹೀರೋಯಿನ್‌ ಅಶ್ವಿನಿ, ಪೊಲೀಸ್‌ ಆಫೀಸರ್‌ ಗಿರಿಜಾ, ಕ್ರೈಮ್‌ ಪೊಲೀಸ್‌ ರಾಘು… ಇಡೀ ಚಿತ್ರದಲ್ಲಿ ಅರವತ್ತೆಪ್ಪತ್ತು ಜನ ಕಲಾವಿದರು, ಜೂನಿಯರುಗಳು ತುಂಬಿ ಹೋಗಿದ್ದಾರೆ. ಭೀಮ ಚಿತ್ರದಲ್ಲಿ ಪ್ರೊಫೆಷನಲ್‌ ನಟರ ಸಂಖ್ಯೆ ತೀರಾ ಕಡಿಮೆ. ವಿಜಯ್‌ ಅವರನ್ನು ಹೊರತುಪಡಿಸಿ, ಅಚ್ಯುತ್‌ ಕುಮಾರ್‌, ಕಲ್ಯಾಣಿ, ರಂಗಾಯಣ ರಘು, ಗೋಪಾಲ್‌ ಕೃಷ್ಣ ದೇಶಪಾಂಡೆ, ರಾಘು ಶಿವಮೊಗ್ಗ, ಕಾಕ್ರೋಜ್‌ ಸುಧಿ, ರಮೇಶ್‌ ಇಂದಿರಾ ಬಿಟ್ಟರೆ ಮಿಕ್ಕೆಲ್ಲವೂ ಹೊಚ್ಚಹೊಸ ಮುಖಗಳೇ. ಆದರೆ ಎಲ್ಲವೂ ಸಿನಿಮಾದ ಸಬ್ಜೆಕ್ಟಿಗೆ ಹೇಳಿಮಾಡಿಸಿದಂತಿವೆ!

Bheema Movie Latest News: ಪ್ರೇಮಿಗಳ ದಿನದಂದು ಭೀಮನ ನಾಟಿ ಸ್ಟೈಲ್‌ ಹುಡುಗಿಯನ್ನು ಪರಿಚಯಿಸಿದ ದುನಿಯಾ ವಿಜಯ್‌ -duniya vijay introduced bheema movie heroine ,ಮನರಂಜನೆ ಸುದ್ದಿ

ಗಮನ ಸೆಳೆದವರು…

ಭೀಮ ಸಿನಿಮಾದಲ್ಲಿ ವಿಜಯ್‌ ಅವರ ಪಾತ್ರ ಎಷ್ಟು ಗಟ್ಟಿಯಾಗಿದೆಯೋ ಅದಕ್ಕೆ ಸರಿಗಟ್ಟುವ ಮತ್ತೊಂದು ಕ್ಯಾರೆಕ್ಟರ್‌ ಇದೆ. ಅದು ಇನ್ಸ್‌ಪೆಕ್ಟರ್‌ ಗಿರಿಜಾ ರೋಲು. ಖಡಕ್ ಲೇಡಿ ಪೊಲೀಸ್‌ ಪಾತ್ರದಲ್ಲಿ ಈಕೆ ಯಾವ ಅಂಜಿಕೆಯೂ ಇಲ್ಲದೆ ಅದ್ಭುತವಾಗಿ ಅಭಿನಯಿಸಿದ್ದಾರೆ. ಸಿನಿಮಾದ ಪೂರ್ತಿ ʻಥೂʼ ಅನ್ನಿಸಿಕೊಳ್ಳುವ ರಾಘು ಶಿವಮೊಗ್ಗ ಪಾತ್ರ ಕಟ್ಟಕಡೆಯದಾಗಿ ಎಲ್ಲರ ಕಣ್ಣಲ್ಲಿ ನೀರುಕ್ಕಿಸುತ್ತದೆ. ಗೋಪಾಲಕೃಷ್ಣ ದೇಶಪಾಂಡೆ ಅಣ್ಣನಾಗಿ, ಜಾವಾ ರಾಮಣ್ಣನಾಗಿ ಅಚ್ಯುತ್‌  ಮನಸಿಗೆ ತುಂಬಾ ಹತ್ತಿರವಾಗುತ್ತಾರೆ. ಕಾಕ್ರೋಜ್‌ ಸುಧಿ ಅವರದ್ದು ‌ಎಂದಿನಂತೆ ಖತರ್ನಾಕ್‌ ಅಭಿನಯ!

ಇವರೆಲ್ಲರ ಜೊತೆಗೆ ಈ ಸಿನಿಮಾ ಮೂಲಕವೇ ತೆರೆಗೆ ಪರಿಚಯಗೊಂಡಿರುವ ಹೊಸ ನೈಜ ಪ್ರತಿಭೆಗಳೆಲ್ಲಾ ತಮಗೆ ಸಿಕ್ಕ ಪಾತ್ರವನ್ನು ತಿಂದು ಹಾಕಿವೆ. ಅಷ್ಟರ ಮಟ್ಟಿಗೆ ನಿರ್ದೇಶಕ ವಿಜಯ್‌ ಕುಮಾರ್‌ ಮತ್ತೊಮ್ಮೆ ಗೆದ್ದಿದ್ದಾರೆ.

ʻಭೀಮನʼ ಬಲ ಹೆಚ್ಚಿಸಿದವರು!

ನಿರ್ದೇಶಕ ಕಂ ಹೀರೋ ವಿಜಯ್‌ ಅವರ ಜೊತೆಗೆ ಮೂರು ದೊಡ್ಡ ಶಕ್ತಿಗಳು ʻಭೀಮʼನಿಗೆ ಬಲ ನೀಡಿವೆ. ಮೊದಲನೆಯದಾಗಿ ರೈಟರ್‌ ಮಾಸ್ತಿ ಅವರ ಡೈಲಾಗು. ಈ ಪಾಟಿ ಜನರಿರುವ ಸಿನಿಮಾದಲ್ಲಿ ಯಾವ್ಯಾವ ಪಾತ್ರಗಳು ಹೇಗೇಗೆ ಮಾತಾಡುತ್ತವೆ ಅಂತಾ ಡಿಸೈನು ಮತ್ತು ಡಿಸೈಡು ಮಾಡೋದು ಕಷ್ಟದ ಕೆಲಸ.  ಅದನ್ನು ಸಲೀಸಾಗಿ ನಿಭಾಯಿಸಿರುವ ಮಾಸ್ತಿ ಅವರ ಶ್ರಮ ದೊಡ್ಡದು. ʻಸರ್ವಜನಾಂಗದ ಮಿಶ್ರ ತೋಟʼದಂತಿರುವ ಬೆಂಗಳೂರಿನ ಭಾಷೆಯನ್ನು ಯಥಾವತ್ತಾಗಿ ಬಳಸಿಕೊಂಡು ಮಾತುಗಳನ್ನಾಗಿ ಜೋಡಿಸಿರುವುದು ಮಾಸ್ತಿಯವರ ಕ್ರಿಯಾಶೀಲತೆ. ಹಾಗೆಯೇ ಲೆಕ್ಕವಿಡದಷ್ಟು ಲೊಕೇಷನ್ನುಗಳು ಇಲ್ಲಿವೆ. ಗಲ್ಲಿ ಗಟಾರ ಅಂತಾ ನೋಡದೆ ಅದೆಲ್ಲೆಲ್ಲಿ ಕ್ಯಾಮೆರಾ ಇಟ್ಟಿದ್ದಾರೆ ಅನ್ನೋದೇ ಗೊತ್ತಾಗಂತೆ ಚಿತ್ರೀಕರಿಸಿರುವ ಶಿವ ಸೇನಾ ಅವರ ಕುಶಲತೆಯನ್ನು ಮೆಚ್ಚದಿದ್ದರೆ ತಪ್ಪಾಗುತ್ತದೆ. ಮಾಮೂಲಿ ಗ್ರಾಫ್‌ ಅನ್ನು ಮೀರಿ ಹಾಡುಗಳನ್ನೇ ಹಿನ್ನೆಲೆ ಸಂಗೀತವನ್ನಾಗಿ ಬಳಸಿರುವ ಮ್ಯೂಸಿಕ್‌ ಡೈರೆಕ್ಟರ್‌ ಚರಣ್‌ ರಾಜ್‌ ಕೆಲಸ ಕೂಡಾ ಅಷ್ಟೇ ಇಷ್ಟವಾಗುತ್ತದೆ.

ಭೀಮ ಚಿತ್ರದಲ್ಲಿ ವೈಲೆನ್ಸ್‌ ಜಾಸ್ತಿ, ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂಬಿತ್ಯಾದಿಯಾಗಿ ಅಂದುಕೊಂಡರೆ ಅದು ನೋಡುಗರ ಮನಸ್ಥಿತಿಗೆ ಬಿಟ್ಟಿದ್ದು.  ವಿಚಾರ ಯಾವುದು ಅಂತಾನೇ ಹೇಳದೆ ಒಳ್ಳೇದು, ಕೆಟ್ಟದ್ದನ್ನು ಪರದೆ ಮೇಲೆ ಕಟ್ಟೋದು ಅಸಾಧ್ಯ. ಈ ನಿಟ್ಟಿನಲ್ಲಿ, ಜಗತ್ತು ಹೇಗೆಲ್ಲಾ ಇದೆಯೋ ಅದನ್ನು ಹಸಿಹಸಿಯಾಗಿ, ಸಹಜವಾಗಿ ತೋರಿಸಿ, ಅದಕ್ಕೆ ಪರಿಹಾರವನ್ನು ಹುಡುಕಲಾಗಿದೆ. ನಶೆ ಬಿಡಿಸಲು ಹೊರಡುವ ಭೀಮ ತಾನೇ ಚಟಗಳನ್ನು ಸುಟ್ಟು ಹಾಕುವುದು ಒಪ್ಪುವಂಥದ್ದು.

BHEEMA – BENNE AND BENKI ON AUG 9 - Flick Feeds

ದೊಡ್ಡ ವ್ಯಾಪ್ತಿಯ ವಿಚಾರವನ್ನು ಒಂದು ಸಿನಿಮಾದಲ್ಲಿ, ಅದೂ ನೋಡುಗರನ್ನು ರಂಜಿಸುತ್ತಾ ಹೇಳುವುದು ಸುಲಭವಲ್ಲ. ಎಲ್ಲ ಸವಾಲುಗಳನ್ನೂ ಮೀರಿ ʻಭೀಮʼ ಗಟ್ಟಿಗನಾಗಿ ಹೊರಬಂದಿದ್ದಾನೆ. ಎಲ್ಲವನ್ನೂ ಸಹಜವಾಗಿರುವ ʻಭೀಮʼನ ಕ್ಲೈಮ್ಯಾಕ್ಸ್‌ ಫೈಟ್‌ ಮಾತ್ರ ಮಾಮೂಲಿ ಫಾರ್ಮುಲಾ ವ್ಯಾಪ್ತಿಯಲ್ಲಿ ಸಿಕ್ಕಿಕೊಂಡಿದ್ದು ಯಾಕೋ ಗೊತ್ತಿಲ್ಲ. ವಿಜಯ್‌ ಅವರು ತಮ್ಮ ಅಭಿಮಾನಿಗಳು ಬಯಸಿದ್ದನ್ನೇ ಭರ್ಜರಿಯಾಗಿ ಬಡಿಸಿದ್ದಾರೆ. ಇದರ ಹೊರತಾಗಿ ʻಮಡಿವಂತʼ ಮನಸ್ಥಿತಿಯವರು ʻಭೀಮʼನನ್ನು ಕಂಡು ಮೂಗು ಮುರಿದರೆ ಬಹುಶಃ ವಿಜಯ್‌ ಅವರಂತೂ ಅದಕ್ಕೆ ಜವಾಬ್ದಾರರಲ್ಲ!

ಇನ್ನಷ್ಟು ಓದಿರಿ

Scroll to Top