ತೆರೆಮೇಲೆ ‘ಸ್ಕೂಲ್ ರಾಮಾಯಣ’ ಪ್ರದರ್ಶನ

Picture of Cinibuzz

Cinibuzz

Bureau Report

ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಸ್ಕೂಲ್ ರಾಮಾಯಣ’ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರವನ್ನು ಪಡೆದುಕೊಂಡಿರುವ ‘ಸ್ಕೂಲ್ ರಾಮಾಯಣ’ ಚಿತ್ರವನ್ನು ಇದೇ ಜೂನ್. 06 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ.

ಇನ್ನು ಹೆಸರೇ ಹೇಳುವಂತೆ, ‘ಸ್ಕೂಲ್ ರಾಮಾಯಣ’ ಅಪ್ಪಟ ಗ್ರಾಮೀಣ ಸೊಗಡಿನ ಮಕ್ಕಳ ಚಿತ್ರ. ಹಳ್ಳಿಯೊಂದರ ಸರ್ಕಾರಿ ಶಾಲೆ ಮತ್ತು ಅಲ್ಲಿನ ಮಕ್ಕಳ ತುಂತಾಟಗಳ ಸುತ್ತ ಇಡೀ ಚಿತ್ರದ ಕಥಾಹಂದರ ಸಾಗುತ್ತದೆ. ಸರ್ಕಾರ ನೀಡುವ ಮೂಲಭೂತ ಸೌಕರ್ಯಗಳನ್ನು ಬಳಕೆ ಮಾಡಿಕೊಳ್ಳಲು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸರ್ಕಾರಿ ಶಾಲೆಗಳು ಏಕೆ ವಿಫಲವಾಗುತ್ತಿವೆ ಎಂಬ ವಿಷಯಗಳನ್ನು ಈ ಚಿತ್ರದಲ್ಲಿ ಚರ್ಚಿಸಲಾಗಿದೆ. ಇದರ ಜೊತೆಗೊಂದು ನವಿರಾದ ಪ್ರೇಮಕಥೆಯಿದ್ದು, ಪ್ರೇಕ್ಷಕರಿಗೆ ‘ಸ್ಕೂಲ್ ರಾಮಾಯಣ’ ಮಾಹಿತಿ ಜೊತೆಗೆ ಮನರಂಜನೆ ಕೂಡ ನೀಡಲಿದೆ ಎಂಬುದು ಚಿತ್ರತಂಡದ ಮಾತು.

‘ಸ್ಕೂಲ್ ರಾಮಾಯಣ’ ಚಿತ್ರಕ್ಕೆ ಯುವ ನಿರ್ದೇಶಕ ವೇದ್ ಮತ್ತು ಸಂತೋಷ್ ಆರ್ಯ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಲೀಲಾವತಿ ಎನ್. ಹಸನಘಟ್ಟ, ಹರೀಶ್ ಕೆ. ಎಸ್, ಯೋಗೇಶ್ ಎನ್.ಟಿ.ಬಿ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.

ದೀಕ್ಷಿತ್ ಗೌಡ, ಸುಪ್ರೀತಾ ರಾಜ್, ಅಪೂರ್ವಾ, ಮೂಗು ಸುರೇಶ್, ಅಂಜನಪ್ಪ, ಕಿರಣ್ ಆರ್ಯ ಮೊದಲಾದವರು ‘ಸ್ಕೂಲ್ ರಾಮಾಯಣ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದು, ಅಜಯ್ ವಾರಿಯರ್, ಮೆಹಬೂಬ್ ಸಾಬ್, ದೇವರಾಜ್ ಕುಂಬಾರ್, ಸಹನಾ ಮೊದಲಾದವರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಒಟ್ಟಾರೆ ತನ್ನ ಟೈಟಲ್ ಮತ್ತು ಕಥಾಹಂದರದ ಮೂಲಕ ಒಂದಷ್ಟು ಗಮನ ಸೆಳೆಯುತ್ತಿರುವ ಚಿಣ್ಣರ ಚಿತ್ರ ‘ಸ್ಕೂಲ್ ರಾಮಾಯಣ’ ತೆರೆಮೇಲೆ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮನ ಗೆಲ್ಲಲಿದೆ ಎಂಬುದು ಚಿತ್ರ ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.

ಇನ್ನಷ್ಟು ಓದಿರಿ

Scroll to Top