ವಿನೋದ್ ಪ್ರಭಾಕರ್ ಅಭಿನಯದ, ನವೀನ ರೆಡ್ಡಿ ನಿರ್ದೇಶನದ ‘ಮಾದೇವ’ ಸಿನಿಮಾ ಕನ್ನಡ ಚಿತ್ರರಂಗದ ಮಟ್ಟಿಗೆ ನಿಜಕ್ಕೂ ಒಂದು ವಿಭಿನ್ನ ಪ್ರಯತ್ನವಾಗಿ ಗಮನ ಸೆಳೆದಿದೆ. 1980ರ ದಶಕದ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರ, ಒಬ್ಬ ನೇಣುಗಾರನ ಜೀವನದ ಏಕಾಂತ, ಭಾವನಾತ್ಮಕ ಪಯಣ ಮತ್ತು ಅವನ ಸುತ್ತಲಿನ ಸಮಾಜದ ಸಂಘರ್ಷಗಳನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತದೆ.

ಚಿತ್ರದ ನಾಯಕ ಮಾದೇವ (ವಿನೋದ್ ಪ್ರಭಾಕರ್), ಒಬ್ಬ ನೇಣುಗಾರ. ಅವನದು ಭಾವನೆಗಳಿಲ್ಲದ, ಕಠೋರ ಜಗತ್ತು. ನೇಣುಗಂಬವೇ ಅವನ ಮನೆಯಾಗಿ, ಮೌನವೇ ಅವನ ಭಾಷೆಯಾಗಿರುತ್ತದೆ. ಇಂತಹ ಅವನ ಜೀವನದಲ್ಲಿ ಪಾರ್ವತಿ (ಸೋನಾಲ್ ಮೊಂತೆರೋ) ಪ್ರವೇಶವಾದಾಗ ಕಥೆಗೆ ಹೊಸ ತಿರುವು ಸಿಗುತ್ತದೆ. ಪ್ರೀತಿ, ಮದುವೆ ಹಾಗೂ ಭಾವನಾತ್ಮಕ ಸಂಬಂಧಗಳ ಸುಳಿಗೆ ಸಿಲುಕುವ ಮಾದೇವ, ತನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನ ನಡುವೆ ಹೇಗೆ ನಲುಗುತ್ತಾನೆ ಎಂಬುದೇ ಚಿತ್ರದ ಮೂಲಧಾತು. ಇದರ ಜೊತೆಗೆ, ಸೇಡಿನ ಕಿಚ್ಚಿನಲ್ಲಿ ಬೇಯುತ್ತಿರುವ ಸಮುದ್ರ (ಶ್ರೀನಗರ ಕಿಟ್ಟಿ) ಮತ್ತು ತನ್ನ ಮಗನನ್ನು ಜೈಲಿನಿಂದ ಹೊರತರಲು ಹೋರಾಡುವ ಕಮಲಾಕ್ಷಿ (ಶ್ರುತಿ) ಅವರ ಪಾತ್ರಗಳು ಕಥೆಗೆ ಮತ್ತಷ್ಟು ಆಯಾಮಗಳನ್ನು ನೀಡುತ್ತವೆ.
‘ಮಾದೇವ’ ಚಿತ್ರದ ಜೀವಾಳವೇ ವಿನೋದ್ ಪ್ರಭಾಕರ್ ಅವರ ಅಭಿನಯ. ತಮ್ಮ ಮಾಸ್ ಹೀರೋ ಇಮೇಜ್‌ನಿಂದ ಹೊರಬಂದು, ಜೀವ ತೆಗೆಯುವ, ಜೀವಂತ ಪಾತ್ರದ ಭಾವಾಗಿದ್ದಾರೆ. ಅವರ ನಡಿಗೆ, ಮೌನ ಮತ್ತು ನೋಟದಲ್ಲೇ ಪಾತ್ರದ ಆಳವನ್ನು ಕಟ್ಟಿಕೊಟ್ಟಿದ್ದಾರೆ. ಭಾವನೆಗಳನ್ನು ವ್ಯಕ್ತಪಡಿಸದೆಯೇ, ಕೇವಲ ಸೂಕ್ಷ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಾರೆ. ಕಮರ್ಷಿಯಲ್ ಸಿನಿಮಾ ಅಂದರೆ ಹೀರೋ ಆರ್ಭಟಿಸಬೇಕು, ಭಯಾನಕ ಡೈಲಾಗುಗಳನ್ನು ಉದುರಿಸಬೇಕು ಅನ್ನೋದನ್ನುಇ ಇಲ್ಲಿ ಸುಳ್ಳಾಗಿಸಿದ್ದಾರೆ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಸಂಭಾಷಣೆ ಬಳಸಿದ್ದಾರೆ.
ನಾಯಕಿಯಾಗಿ ಸೋನಾಲ್ ಮೊಂತೆರೋ ಡಿ-ಗ್ಲಾಮ್ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಪಾರ್ವತಿಯಾಗಿ ಅವರ ಮುಗ್ಧತೆ ಮತ್ತು ಸಹಜ ಅಭಿನಯ ಚಿತ್ರಕ್ಕೆ ಪೂರಕವಾಗಿದೆ. ಹಿರಿಯ ನಟಿ ಶ್ರುತಿ ಅವರು ಕಮಲಾಕ್ಷಿ ಪಾತ್ರದಲ್ಲಿ ತಮ್ಮ ಅನುಭವವನ್ನು ಧಾರೆ ಎರೆದಿದ್ದಾರೆ. ಶ್ರೀನಗರ ಕಿಟ್ಟಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ನಿರ್ದೇಶಕ ನವೀನ್ ರೆಡ್ಡಿ ಅವರು ಒಂದು ಗಟ್ಟಿಯಾದ ಮತ್ತು ಭಾವನಾತ್ಮಕ ಕಥೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ನಿರೂಪಣೆಯಲ್ಲಿ ಮೌನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿರುವುದು ಶ್ಲಾಘನೀಯ. 1980ರ ದಶಕದ ಕಾಲಘಟ್ಟವನ್ನು ಮರುಸೃಷ್ಟಿಸುವಲ್ಲಿ ಕಲಾ ನಿರ್ದೇಶನ ಮತ್ತು ಛಾಯಾಗ್ರಹಣ ಯಶಸ್ವಿಯಾಗಿದೆ. ಕಲಾನಿರ್ದೇಶಕ ಗುಣ ಸೃಷ್ಟಿಸಿದ ಹಿನ್ನೆಲೆ ಇಡೀ ಚಿತ್ರಕ್ಕೆ ಜೀವಕಳೆ ತಂದುಕೊಟ್ಟಿದೆ. ಹಾಗೆಯೇ, ಬಾಲಕೃಷ್ಣ ತೋಟ ಇಟ್ಟಿರುವ ಪ್ರತೀ ಫ್ರೇಮು ಕೂಡಾ ನಿರ್ದೇಶಕರ ಕಲ್ಪನೆಯನ್ನು ಯಥಾವತ್ತಾಗಿ ತೆರೆಮೇಲೆ ಅರಳಸಿದೆ. ತಂತ್ರಜ್ಞರು ಮತ್ತು ಕಲಾವಿದರ ಆಯ್ಕೆಯಲ್ಲೇ ಬಹುಪಾಲು ಗೆದ್ದಿರುವ ನವೀನ್ ರೆಡ್ಡಿ ಉಳಿದದ್ದನ್ನು ಪ್ರೇಕ್ಷಕರ ಎದೆಗೆ ಧಾಟಿಸುವ ಮೂಲಕ ಸಾಧಿಸಿದ್ದಾರೆ.
ಪ್ರದ್ಯೋತ್ತನ್ ಅವರ ಸಂಗೀತ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ‘ಅಬ್ಬಲಗೆರೆ’ ಹಾಡು ಕಥೆಯ ಭಾವಕ್ಕೆ ತಕ್ಕಂತೆ ಮೂಡಿಬಂದಿದ್ದರೆ, ‘ಎದೇಲಿ ತಂಗಾಳಿ’ ಪ್ರೇಮಗೀತೆಯು ಮನಸ್ಸಿಗೆ ಮುದ ನೀಡುತ್ತದೆ. ಒಟ್ಟಾರೆ ‘ಮಾದೇವ’ ಒಂದು ವಿಭಿನ್ನ ಕಥಾನುಭವ ನೀಡುವ ಚಿತ್ರ. ವಿನೋದ್ ಪ್ರಭಾಕರ್ ಅವರ ವೃತ್ತಿಜೀವನದಲ್ಲಿ ಇದೊಂದು ಮೈಲಿಗಲ್ಲಿನ ಚಿತ್ರ ಎನ್ನಬಹುದು.
-ಶಿವು ಅರಿಸಿನಗೆರೆ












































