ವಿಜಯ್ ಸೂರ್ಯ ನಿರ್ದೇಶನದ ಎ ಪ್ಲಸ್ ಚಿತ್ರ ತೆರೆ ಕಂಡಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿ ಪಳಗಿರುವ ವಿಜಯ್ ಟ್ರೈಲರ್ ಮೂಲಕವೇ ಒಂದಷ್ಟು ಕ್ರೇಜ್ ಹುಟ್ಟು ಹಾಕೋ ಪ್ರಯತ್ನ ಮಾಡಿದ್ದರು. ಅದರ ಒಡ್ಡೋಲಗದಲ್ಲಿ ತೆರೆ ಕಂಡಿರೋ ಈ ಚಿತ್ರ ಪ್ರೀತಿ, ಮೋಸ, ದ್ವೇಷ ಸೇರಿದಂತೆ ಎಲ್ಲವೂ ಅಡಕವಾಗಿರೋ ಕಥೆಯೊಂದನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ. ಒಂದಷ್ಟು ಹೊಸತನ ಮತ್ತು ಲೀಲಾಜಾಲ ನಿರೂಪಣೆಯಿಂದಾಗಿ ಈ ಚಿತ್ರ ಒಂದು ಹೊಸಾ ಅನುಭವದೊಂದಿಗೆ ಪ್ರೇಕ್ಷಕರನ್ನು ಮುದಗೊಳಿಸಿದೆ.
ನಾಯಕ ತನ್ನ ಗುರುವಿನ ಕುಟುಂಬವನ್ನು ಹಾಡಲೆಬ್ಬಿಸಿದ ಶ್ರೀಮಂತನೊಬ್ಬನ ಸಂಹಾರಕ್ಕೆ ಹೊಂಚು ಹಾಕಿದವನು. ನಾಯಕಿ ಅವನನ್ನೇ ಪ್ರೀತಿಸಿ ಹೊರಟವಳು. ಆದರೆ ಆಕೆ ಪ್ರೇಮಿಯೂ ಹೌದು, ಕಟಕಿಯಂಥಾ ವಿಲನ್ನೂ ಹೌದು… ಒಂದು ಟೈಟ್ ಕಂಟೆಂಟ್ ಮತ್ತು ಒಂದೇ ಒಂದೆಳೆ ಕೈ ತಪ್ಪಿದರೂ ಇಡೀ ಚಿತ್ರವೇ ಹಳಿ ತಪ್ಪೋ ಅವಕಾಶವಿರುವಂಥಾ ಪ್ರಯೋಗಗಳು ಆರಂಭದಲ್ಲಿ ಪ್ರೇಕ್ಷಕನನ್ನು ಗೊಂದಲಕ್ಕೆ ತಳ್ಳಿದರೂ ಅದನ್ನೂ ಕುತೂಹಲವಾಗಿ ಪರಿವರ್ತಿಸಿರೋದು ನಿರ್ದೇಶಕರ ಜಾಣ್ಮೆ.
ನಿರ್ದೇಶಕರು ಆರಂಭದಲ್ಲಿಯೇ ಇದೊಂದು ಹೊಸಾ ಪ್ರಯೋಗದ ಚಿತ್ರ ಅಂದಿದ್ದರು. ಅದಕ್ಕೆ ಚಿತ್ರದುದ್ದಕ್ಕೂ ಸಾಕಷ್ಟು ಕುರುಹುಗಳೂ ಸಿಗುತ್ತವೆ. ಕಟ್ಟುಮಸ್ತಾದೊಂದು ಕಥೆ, ಅಲ್ಲಲ್ಲಿ ಟ್ವಿಸ್ಟು ಮತ್ತು ಗೊಂದಲ ಹುಟ್ಟಿಸುತ್ತಲೇ ಪರಿಹಾರವನ್ನೂ ಸೂಚಿಸುವ ಮೂಲಕ ನಿರ್ದೇಶಕರು ಇಡೀ ಸಿನಿಮಾವನ್ನು ಕುತೂಹಲದೊಂದಿಗೇ ನಿರಾಳವಾಗಿ ನೋಡಿಸಿಕೊಳ್ಳುವಂತೆ ಮಾಡಿದ್ದಾರೆ.
ಈ ಚಿತ್ರದ ಹೆಸರೇ ಎ ಪ್ಲಸ್. ಇದನ್ನು ನಿರ್ದೇಶನ ಮಾಡಿರುವವರು ಉಪೇಂದ್ರರ ಶಿಷ್ಯ. ಹಾಗಂದ ಮೇಲೆ ಇದು ಎ ಚಿತ್ರದ ಮುಂದುವರೆದ ಭಾಗ ಅಂತೊಂದು ಸುದ್ದಿ ಹರಡಿಕೊಂಡಿತ್ತು. ಆದರೆ ಅದನ್ನು ಸುಳ್ಳಾಗಿಸಿದ್ದರೂ ಅಲ್ಲಲ್ಲಿ ಆ ಚಿತ್ರದ ಛಾಯೆಯಂತೂ ಇದ್ದೇ ಇದೆ. ಆದರೆ ಅದನ್ನೂ ಕೂಡಾ ಈ ಸಿನಿಮಾದ ಓಘಕ್ಕೆ ಅನುಗುಣವಾಗಿ ಪ್ಲಸ್ ಆಗಿಸಿಕೊಂಡಿರೋದು ನಿರ್ದೇಶಕರ ಜಾಣತನ.
ತನ್ನ ವೈಯಕ್ತಿಕ ಸವಾಲುಗಳ ಜೊತೆಗೇ ನಿರ್ದೇಶಕನಾಗೋ ಕನಸು ಹೊತ್ತ ನಾಯಕನ ಪಾತ್ರವನ್ನು ಸಿದ್ದು ಸಮರ್ಥವಾಗಿಯೇ ನಿರ್ವಹಿಸಿದ್ದಾರೆ. ಹಣವಂತರ ಅಟ್ಟಹಾಸ, ಪ್ರೀತಿಯ ಮೋಸ… ಹೀಗೆ ತಾನೇ ಕಂಡುಂಡ ಕಹಿಸತ್ಯಗಳಿಗೆ ಸಿನಿಮಾ ಫ್ರೇಮು ಹಾಕಬೇಕೆಂಬುದು ನಾಯಕನ ಆಸೆ. ಅದೆಲ್ಲವೂ ಯಾವ ಅಂತ್ಯಕ್ಕೆ ಕೊಂಡೊಯ್ಯುತ್ತದೆ ಎಂಬುದೇ ಅಸಲೀ ಕುತೂಹಲ. ಇಲ್ಲಿ ನಾಯಕಿಯಾಗಿ ಸಂಗೀತಾ ಶೃಂಗೇರಿ ನೆಗೆಟಿವ್ ಶೇಡಿನಲ್ಲಿಯೂ ಪ್ರತಿಭೆ ತೋರಿಸಿದ್ದಾರೆ. ಎಲ್ಲ ನಟ ನಟಿಯರೂ ತಂತಮ್ಮ ಪಾತ್ರಕ್ಕೆ ಒಗ್ಗಿಕೊಂಡಿದ್ದಾರೆ. ಅಂದಹಾಗೆ ಭೂಪಿಂದರ್ ಸಿಂಗ್ ರೈನಾ ಅವರ ಕ್ಯಾಮೆರಾ ಕೆಲಸವನ್ನೂ ಕೂಡಾ ಈ ಚಿತ್ರದ ಪ್ಲಸ್ ಪಾಯಿಂಟುಗಳಲ್ಲಿ ಒಂದಾಗಿ ಗುರುತಿಸಬಹುದು.
#
No Comment! Be the first one.