ಖಳನಟ ರವಿಶಂಕರ್ ಹೆಸರು ಕೇಳಿದರೇನೇ ಖಡಕ್ಕು ಕಂಠದ, ಕಣ್ಣಲ್ಲೇ ಕೆಂಡವುಗುಳೋ ಪಾತ್ರಗಳು ಕಣ್ಮುಂದೆ ಚಲಿಸುತ್ತವೆ. ಎಂಥಾ ಪಾತ್ರಗಳನ್ನಾದರೂ ನಿಭಾಯಿಸಬಲ್ಲ ಈ ನಟಭಯಂಕರ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೇಲಿನ ಪ್ರೀತಿಯಿಂದಲೇ ಗಾಯಕರಾಗಿದ್ದಾರೆ!
ಶಿವಣ್ಣ ಅಭಿನಯಿಸಿರುವ ರುಸ್ತುಂ ಚಿತ್ರ ಈಗ ಬಗೆ ಬಗೆಯ ಫೋಟೋಗಳ ಮೂಲಕವೇ ಸುದ್ದಿಯಾಗುತ್ತಿವೆ. ಆರಂಭದಲ್ಲಿಯೇ ನಿರ್ದೇಶಕ ರವಿ ವರ್ಮಾ ಈ ಚಿತ್ರದ ಮೂಲಕ ಹ್ಯಾಟ್ರಿಕ್ ಹೀರೋ ಶಿವಣ್ಣನ ಲುಕ್ಕು ಸಂಪೂರ್ಣ ಬದಲಾಗಲಿದೆ ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದರು. ಅದೀಗ ನಿಜವಾಗಿದೆ. ರುಸ್ತುಂನಲ್ಲಿನ ಶಿವರಾಜ್ ಕುಮಾರ್ ಡಿಫರೆಂಟ್ ಗೆಟಪ್ ಕಂಡು ಅಭಿಮಾನಿ ಬಳಗ ಖುಷಿಗೊಂಡಿದೆ. ರವಿಶಂಕರ್ ಗಾಯಕರಾಗಿರೋದೂ ಕೂಡಾ ರುಸ್ತುಂ ಚಿತ್ರದಿಂದಲೇ. ಇದರ ಟೈಟಲ್ ಟ್ರ್ಯಾಕನ್ನು ರವಿಶಂಕರ್ ಹಾಡಿದ್ದಾರಂತೆ. ಅನೂಪ್ ಸಿಳೀನ್ ಸಂಗೀತ ನಿರ್ದೇಶನದ ಈ ಹಾಡು ರವಿಶಂಕರ್ ಕಂಠದಲ್ಲಿ ರಗಡ್ ಆಗಿಯೇ ಮೂಡಿ ಬಂದಿದೆಯಂತೆ. ಈ ಹಿಂದೆ ಟಗರು ಟೈಟಲ್ ಸಾಂಗ್ ತಮಿಳು ಗಾಯಕ ಅಂತೋಣಿ ದಾಸನ್ ಹಾಡಿದ್ದರಲ್ಲಾ? ಆ ಹಾಡು ಟ್ರೆಂಡ್ ಸೆಟ್ ಮಾಡಿತ್ತು. ಈಗ ರುಸ್ತುಂ ಟೈಟಲ್ ಸಾಂಗ್ ಕೂಡಾ ರವಿಶಂಕರ್ ಧ್ವನಿಯಲ್ಲಿ ಅಂಥಾದ್ದೇ ದಾಖಲೆ ಮಾಡಲಿದೆ ಅನ್ನೋ ನಂಬಿಕೆ ಚಿತ್ರತಂಡದಲ್ಲಿದೆ.