ಇದು ಪಕ್ಕಾ ಈ ದಿನಮಾನದ ಕಾಲೇಜು ಹುಡುಗರ ಮನಸ್ಥಿತಿಗೆ ಕನ್ನಡಿ ಹಿಡಿದಂಥಾ ಚಿತ್ರ. ಕಿಸಿಂಗ್ ಸೀನಿನ ಫೋಟೋ ಮೂಲಕವೇ ಭಾರೀ ಸದ್ದು ಮಾಡಿದ್ದ ಆದಿಪುರಾಣ ಕಿಸ್ಸಿನ ಸುತ್ತಲೇ ಹರಡಿಕೊಂಡಂತಿರೋ ಯುವ ಬಾಧೆಯ ಕಥಾನಕವನ್ನು ಹೊತ್ತು ತಂದಿದೆ. ಬಹುಶಃ ಈ ಕಾರಣದಿಂದಲೇ ಈ ಚಿತ್ರ ಯುವ ಸಮುದಾಯಕ್ಕೆ ಹತ್ತಿರಾಗೋ ಸೂಚನೆಗಳೂ ಕಾಣಿಸುತ್ತವೆ.
ಇದು ಆದಿ ಎಂಬೊಬ್ಬ ಹುಡುಗನ ಸುತ್ತಲೇ ಹರಡಿಕೊಂಡಿರೋ ಕಥೆ. ಆದರೆ ಅದರ ಆಚೀಚೆಗೆ ಯುವ ಮನಸುಗಳ ಮನೋಲೋಕವನ್ನೂ ಬಿಚ್ಚಿಡುತ್ತಾ ಸಾಗೋ ಆದಿಪುರಾಣ ಅಂತ್ಯವಾಗೋ ಹೊತ್ತಿಗೆ ಕಾಲೇಜು ಲೈಫು, ಮದುವೆ ನಂತರದ ಪಡಿಪಾಟಲು ಮತ್ತು ಕಾಮದ ಮಾಯೆಯತ್ತ ಹೊರಳಿಕೊಳ್ಳೋ ಆಸೆಗಣ್ಣಿನ ಕಥೆ ಹೇಳುತ್ತಲೇ ಒಂದು ಸಂದೇಶದಂಥಾದ್ದನ್ನೂ ರವಾನಿಸುತ್ತದೆ.
ಬೆಂಗಳೂರಿನಲ್ಲಿ ಓದಿ ಅಲ್ಲಿಯೇ ಕೆಲಸ ಗಿಟ್ಟಿಸಿಕೊಂಡ ಹುಡುಗ ಆದಿ. ಆತನ ಸುತ್ತಾ ಆವರಿಸಿಕೊಂಡಿರೋ ಕಾಲೇಜು ಲೈಫಿನ ಕೊಂಡಿಗಳಂಥಾ ಸ್ನೇಹಿತರ ಪಡೆ. ಕುಡಿತ ಮೋಜು ಮಸ್ತಿ ಎಂಬುದು ಈ ಪಟಾಲಮ್ಮಿನ ನಿತ್ಯ ಕಾಯಕ ಮತ್ತು ಅದುವೇ ಬದುಕಿನ ಏಕಮಾತ್ರ ಉದ್ದೇಶ. ಆದರೆ ತನ್ನ ಸುತ್ತೆಲ್ಲ ಎಣ್ಣೆಗಾಡಿಗಳೇ ಇದ್ದರೂ ಅದರಲ್ಲೊಂದು ಹನಿಯ ಟೇಸ್ಟೂ ನೋಡದ ಆದಿ ಆ ವಿಚಾರದಲ್ಲಿ ಪಕ್ಕಾ ಸಾಚಾ. ಆದರೆ ವಯೋಸಹಜ ಕಾಮ ಕುತೂಹಲದಲ್ಲಿ ಕೊತಗುಡುವ ಆದಿ ಅದೊಂದು ವಿಷ ಘಳಿಗೆಯಲ್ಲಿ ಸಾಕ್ಷಾತ್ ಅಪ್ಪನ ಮುಂದೆ ಸಿಕ್ಕಿ ಬಿದ್ದ ಕಾರಣಕ್ಕೆ ಕಂಕಣ ಭಾಗ್ಯವೂ ಕೂಡಿ ಬರುತ್ತೆ.
ಆದರೆ ಫಸ್ಟ್ ನೈಟ್ ಭಾಗ್ಯಕ್ಕೆ ಮಾತ್ರ ಪ್ರತೀ ರಾತ್ರಿಯೂ ಅಡ್ಡಾಗಾಲಾಗುತ್ತಿರುತ್ತದೆ. ಇದುವೇ ಮುಂದುವರೆದು ಮನಸೊಳಗಿನ ಕುತೂಹಲದಿಂದ ಕೊತಗುಡುವ ಆದಿಯದ್ದು ಫಸ್ಟ್ ನೈಟೆಂಬ ಕೆಂಡದ ಮೇಲೆ ಕುಂತ ಕಾವಲಿಯಂಥಾದ್ದೇ ಸ್ಥಿತಿ. ಹೀಗೆ ನಿಗಿನಿಗಿಸೋ ಕೆಂಡಕ್ಕೆ ಆಫೀಸಿನ ಟೀಮ್ ಲೀಡರ್ ಆಗಿದ್ದ ಬೆಣ್ಣೆಯಂಥಾ ಹುಡುಗಿ ಸಿಕ್ಕಾಗ ಅನಾಹುತವಾಗುತ್ತಾ? ಆದಿ ಕುಡಿತದ ವಿಚಾರದಲ್ಲಿನ ಕಟ್ಟುನಿಟ್ಟನ್ನು ಕಾಮದ ವಿಚಾರದಲ್ಲಿಯೂ ಪರಿಪಾಲಿಸುತ್ತಾನಾ? ಕಡೆಗೂ ಆದಿ ಪುರಾಣದ ಅಂತ್ಯ ಏನಾಗುತ್ತೆ ಎಂಬೆಲ್ಲ ಕುತೂಹಲಕ್ಕೆ ಥೇಟರಿನಲ್ಲಿಯೇ ಉತ್ತರ ಹುಡುಕಬೇಕು.
ಆದರೆ ಚಿತ್ರದುದ್ದಕ್ಕೂ ಕಾಲೇಜು ಜೀವನದ ಕಿತಾಪತಿಗಳು, ಯುವ ಮನಸಿನ ಹಸಿಹಸೀ ಭಾವನೆಗಳಿರೋದರಿಂದ ಅಷ್ಟಾಗಿ ಬೋರು ಹೊಡೆಸೋದಿಲ್ಲ. ಆದರೆ ಇಡೀ ಚಿತ್ರ ಅಲ್ಲಲ್ಲಿ ನಿಧಾನಗತಿಗೆ ಒಗ್ಗಿಕೊಳ್ಳುವ ಮೂಲಕ ನೋಡುಗರಿಗೆ ಒಂದಷ್ಟು ಕಸಿವಿಸಿ ಕಾಡುತ್ತದೆ. ನಾಯಕ ಶಶಾಂಕ್ ಇನ್ನೊಂಚೂರು ಕಷ್ಟಪಟ್ಟರೂ ಉತ್ತಮ ನಟನಾಗಿ ನಿಲ್ಲುವ ಎಲ್ಲ ಸಾಧ್ಯತೆಗಳೂ ಗೋಚರಿಸಿವೆ. ಮೊದಲನೇ ಸಿನಿಮಾದಲ್ಲೇ ಅಚ್ಚರಿ ಹುಟ್ಟಿಸುವಂತೆ ನಟಿಸಿರೋದು ಶಶಾಂಕ್ ಹೆಚ್ಚುಗಾರಿಕೆ. ಒಟ್ಟಾರೆಯಾಗಿ ಯೂಥ್ಫುಲ್ ಕಥೆ ಹೊಂದಿರೋ ಈ ಚಿತ್ರ ಮನರಂಜನೆ ನೀಡುತ್ತದೆ. ಇದು ಒಂದಷ್ಟು ಮೈನಸ್ಗಳನ್ನೂ ಮರೆಯಾಗಿಸಬಲ್ಲ ಫ್ಲಸ್ ಪಾಯಿಂಟ್. ನಿರ್ದೇಶಕ ಮೋಹನ್ ಕಾಮಾಕ್ಷಿ ಮೊದಲ ಚಿತ್ರ ಅಂತಾ ಅನ್ನಿಸದಂತೆ ಕೆಲಸ ನಿಭಾಯಿಸಿದ್ದಾರೆ.
#
No Comment! Be the first one.