ಆಡಿಸಿ ನೋಡು ಬೀಳಿಸಿ ನೋಡು ಅನ್ನೋ ಚಿತ್ರವೊಂದು ಬಿಡುಗಡೆಗೆ ತಯಾರಾಗಿದೆ. ಇತ್ತೀಚಿಗಷ್ಟೇ ಈ ಚಿತ್ರದ ಆಡಿಯೋ ಕೂಡಾ ಬಿಡುಗಡೆಯಾಗಿತ್ತು. ಇನ್ನೇನೆ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನು ನಡೆಯುತ್ತಿದೆ. ಅದು ಕಾರ್ಯ ರೂಪಕ್ಕೆ ಬರುವ ಮುಂಚೆಯೇ ಇದೇ ಚಿತ್ರದ ನಿರ್ದೇಶಕ ಮನೋಜ್ ಶ್ರೀ ಹರಿ ಉಸಿರುಚೆಲ್ಲಿ ಎದ್ದು ನಡೆದಿದ್ದಾರೆ.
ಮನೋಜ್ ಶ್ರೀಹರಿ ಇನ್ನೂ ಇಪ್ಪತ್ತೈದರ ತರುಣ. ಮೂಲತಃ ಹಾಸನ ಜಿಲ್ಲೆಯವರಾದರೂ ನೆಲೆಸಿರೋದು ಬೆಂಗಳೂರಿನಲ್ಲೇ. ಇವರ ತಾಯಿ ಕೆ.ಸಿ. ಜನರಲ್ ಆಸ್ಪಸ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನೋಜ್ ಶ್ರೀಹರಿ ಅವರಿಗೆ ಮೊದಲಿನಿಂದಲೂ ಸಿನಿಮಾ, ಸಂಗೀತ ಅಂದರೆ ಏನೋ ಮೋಹ. ತಾನು ನಿರ್ದೇಶಿಸಿದ ಸಿನಿಮಾಗಳಿಗೆ ತನ್ನದೇ ಸಂಗೀತ ಕೂಡಾ ಇರಬೇಕು ಅನ್ನೋದು ಶ್ರೀಹರಿಯ ಬಯಕೆಯಾಗಿತ್ತು.

ಈಗ ರಿಲೀಸಿಗೆ ತಯಾರಾಗಿರುವ ಆಡಿಸಿ ನೋಡು ಬೀಳಿಸಿ ನೋಡು ಚಿತ್ರಕ್ಕೂ ಸ್ವತಃ ಮನೋಜ್ ಶ್ರೀಹರಿ ಸಂಗೀತ ನಿರ್ದೇಶನ ಮಾಡಿದ್ದರು. ಇನ್ನೂ ಐದು ಸಿನಿಮಾಗಳಿಗೆ ಆಗುವಷ್ಟು ಹಾಡುಗಳಿಗೆ ಮನೋಜ್ ಮ್ಯೂಸಿಕ್ ಕಂಪೋಸ್ ಮಾಡಿಟ್ಟಿದ್ದಾರಂತೆ. ನೆನ್ನೆ ಬೆಳಿಗ್ಗೆ ಮನೋಜ್ ಶ್ರೀ ಹರಿಗೆ ಎದೆ ನೋವು ಕಾಣಿಸಿಕೊಂಡಿತಂತೆ. ಜೇಬಿನಲ್ಲಿ ಅಷ್ಟಾಗಿ ಹಣ ಕೂಡಾ ಇಲ್ಲದಿದ್ದರಿಂದ ತಾವೇ ಕಾರು ಚಲಾಯಿಸಿಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಮನೋಜ್ ಅಲೆದಿದ್ದಾರೆ. ಆದರೆ ಯಾವ ಆಸ್ಪತ್ರೆಯವರೂ ಇವರನ್ನು ದಾಖಲು ಮಾಡಿಕೊಂಡಿಲ್ಲ. ಕಡೆಗೆ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಹೋಗೋಹೊತ್ತಿಗೆ ಮನೋಜ್ ಪ್ರಾಣಪಕ್ಷಿ ಹಾರಿಹೋಗಿತ್ತು. ಅಲ್ಲಿಗೆ, ಆಡಿಸಿ ನೋಡು ಬೀಳಿಸಿನೋಡು ಅಂತಾ ತಮ್ಮ ಮೊದಲ ಚಿತ್ರಕ್ಕೆ ಹೆಸರಿಟ್ಟಿದ್ದ ಮನೋಜ್ ಶ್ರೀಹರಿ ಇನ್ನೂ ಬಾಳಿ ಬೆಳಗೋ ಮುಂಚೆಯೇ ಇನ್ಯಾವತ್ತೂ ಮೇಲೇಳದಂತೆ ಉರುಳಿಬಿದ್ದಂತಾಗಿದೆ.