ರಾಗಿಣಿ ದ್ವಿವೇದಿ ಮತ್ತು ಶರಣ್ ನಟನೆಯ ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಚಿತ್ರದ ಮೊದಲ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಮಲಯಾಳಂ ಭಾಷೆಯ ಟು ಕಂಟ್ರೀಸ್ ರಿಮೇಕ್ ಸಿನಿಮಾ ಇದಾಗಿದ್ದು, ಭರಪೂರ ಹಾಸ್ಯ, ಮನರಂಜನೆಯಿಂದ ಕೂಡಿರಲಿದೆಯಂತೆ. ಚಿತ್ರದಲ್ಲಿ ಶರಣ್ ಜತೆಗೆ ಗೋವಿಂದೇಗೌಡ, ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿಯವರ ಕಾಮಿಡಿ ಪ್ರೇಕ್ಷಕರಿಗೆ ಸಖತ್ ಕಿಕ್ ನೀಡಲಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿರುವ ರಾಗಿಣಿ ನಟನೆ ಮತ್ತು ಮಾದಕ ನೋಟ ಪ್ರೇಕ್ಷಕರಿಗೆ ಮುದನೀಡಲಿದೆ.
ಚಿತ್ರದ ಟ್ರೇಲರ್ ಬಿಡುಗಡೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತಿಗೆ ಇಳಿದ ನಟ ಶರಣ್, ‘ನಾನು ಮೊದಲು ನಟಿಸಿದ, ಸಿದ್ದಲಿಂಗಯ್ಯ ನಿರ್ದೇಶನದ ‘ಪ್ರೇಮ ಪ್ರೇಮ ಪ್ರೇಮ’ ಚಿತ್ರದ ಡಬ್ಬಿಂಗ್ ಇದೇ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ನಡೆದಿತ್ತು. ಅಯೋಗ್ಯ ಸಿನಿಮಾದ ಆಡಿಯೊ ಬಿಡುಗಡೆಯೂ ಇಲ್ಲೇ ಆಗಿತ್ತು. ಈಗ ನನ್ನ ಬಹು ನಿರೀಕ್ಷಿತ ಚಿತ್ರದ ಟ್ರೇಲರ್ ಕೂಡ ಇಲ್ಲೇ ಬಿಡುಗಡೆಯಾಗಿದೆ’ ಎಂದು ಚಾಮುಂಡೇಶ್ವರಿ ಸ್ಟುಡಿಯೊ ಜತೆಗೆ ತಮಗಿರುವ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು.
ಸದ್ಯದಲ್ಲೇ ಆಡಿಯೊ ಬಿಡುಗಡೆ ಕೂಡ ಮಾಡಲು ಯೋಜಿಸಲಾಗಿದ್ದು, ಆಗಸ್ಟ್ ತಿಂಗಳ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಕಲಾವಿದರ ಮತ್ತು ತಂತ್ರಜ್ಞರ ಶ್ರಮ ಟ್ರೇಲರ್ನಲ್ಲಿ ಕಾಣಿಸುತ್ತಿದೆ. ‘ಅಧ್ಯಕ್ಷ’ ಸಿನಿಮಾ ಕೂಡ ಆಗಸ್ಟ್ ಕೊನೆಯಲ್ಲಿ ಬಿಡುಗಡೆಯಾಗಿತ್ತು. ಹಾಗಂತ ಅಧ್ಯಕ್ಷ ಸಿನಿಮಾದ ಮುಂದುವರಿದ ಭಾಗವೇನಲ್ಲ ಇದು. ಆದರೆ, ಆ ಸಿನಿಮಾದಲ್ಲಿರುವ ಪಾತ್ರದ ಹೋಲಿಕೆಯ ಛಾಯೆ ಇಲ್ಲಿ ಕಾಣಬಹುದು. ಹೊಸ ದಂಪತಿ ಅಮೆರಿಕಕ್ಕೆ ಹೋದಾಗ ಅಲ್ಲಿ ಎದುರಿಸುವ ಸನ್ನಿವೇಶವೇ ಈ ಚಿತ್ರದ ಕಥಾಹಂದರ. ನನ್ನ ಹೆಚ್ಚಿನ ಸಿನಿಮಾಗಳಲ್ಲಿ ಮದುವೆಯಾಗುವ ಮೂಲಕ ಸಿನಿಮಾ ಮುಗಿಯುತ್ತಿತ್ತು. ಆದರೆ, ಇದರಲ್ಲಿ ಮದುವೆಯಾಗುವ ಮೂಲಕ ಸಿನಿಮಾ ಕಥೆ ಶುರುವಾಗುತ್ತದೆ ಎಂದು ಶರಣ್ ತಿಳಿಸಿದರು.
ಒಂದು ಗಂಟೆ ತಡವಾಗಿ ಬಂದ ನಟಿ ರಾಗಿಣಿ ದ್ವಿವೇದಿ, ‘ಏಕೆ ಯಾರಲ್ಲೂ ಉತ್ಸಾಹ, ನಗುವೇ ಕಾಣಿಸುತ್ತಿಲ್ಲ’ ಎಂದು ಸುದ್ದಿಗೋಷ್ಠಿಯಲ್ಲಿದ್ದವರ ಮೊಗದಲ್ಲಿ ಮಂದಹಾಸ ಮೂಡಿಸಲು ಯತ್ನಿಸಿದರು. ‘ಇದೇ ಮೊದಲ ಬಾರಿಗೆ ಕಾಮಿಡಿ ಜಾನರ್ ಸಿನಿಮಾದಲ್ಲಿ ನಟಿಸಿದ್ದೇನೆ. ನಾವು ನಿರೀಕ್ಷೆ ಮಾಡಿದಂತೆಯೇ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ‘ಕಾಮಿಡಿ ಕಿಂಗ್’ ಶರಣ್ ಅಭಿನಯಕ್ಕೆ ತಲೆದೂಗದವರೇ ಇಲ್ಲ. ಈ ಸಿನಿಮಾ ವರ್ಷದ ಅತ್ಯುತ್ತಮ ಹಾಸ್ಯ ಚಿತ್ರವೆನಿಸಿಕೊಳ್ಳುವುದರಲ್ಲಿ ಡೌಟೇ ಇಲ್ಲ’ ಎಂದರು.
ನಿರ್ದೇಶಕ ಯೋಗಾನಂದ್, ‘ಸಿನಿಮಾ ಬಿಡುಗಡೆಗೆ ಅನುಮತಿಗಾಗಿ ಸೆನ್ಸಾರ್ ಮಂಡಳಿಗೆ ಅರ್ಜಿ ಸಲ್ಲಿಸಲಾಗಿದೆ. ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಕುತೂಹಲ ಮತ್ತು ಒತ್ತಡದಲ್ಲಿದ್ದೇನೆ. ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಅದರಲ್ಲೂ ಶರಣ್ ಅವರ ಬದ್ಧತೆ ಮತ್ತು ಹಾಸ್ಯಪ್ರಜ್ಞೆ ನಮ್ಮ ಸಿನಿಮಾ ಕೆಲಸವನ್ನು ನೀರು ಕುಡಿದಷ್ಟು ಸರಾಗಗೊಳಿಸಿತು. ಇನ್ನೂ ಪ್ರೇಕ್ಷಕರು ನಮ್ಮನ್ನು ಕೈಹಿಡಿಯಬೇಕು’ ಎಂದರು.
No Comment! Be the first one.