ಜನಪ್ರಿಯ ಹೀರೋಗಳು ಯಾವತ್ತೂ ಇಂಥಾ ಅನಾಹುತಕಾರಿ ಕೆಲಸಕ್ಕೆ ಕೈಹಾಕೋದಿಲ್ಲ. ಹೇಳಿ ಕೇಳಿ ಸುದೀಪ್ 25 ವರ್ಷ ಪೂರೈಸಿರುವ, ಕನ್ನಡದ ಹೆಮ್ಮೆಯ ನಟ. ನಮ್ಮ ಕನ್ನಡ ಚಿತ್ರರಂಗದ ಹೆಸರನ್ನು ದೇಶದ ಗಡಿ ದಾಟಿಸಿರುವ ಅಪರೂಪದ ಪ್ರತಿಭೆ. ಸೋಲು, ಗೆಲುವು, ಹೊಗಳಿಕೆ, ತೆಗಳಿಕೆಗಳನ್ನೆಲ್ಲಾ ಸಮಾನವಾಗಿ ಸ್ವೀಕರಿಸಿ, ಸ್ಥಿತಪ್ರಜ್ಞತೆಯಿಂದ ಹೆಜ್ಜೆ ಇರಿಸುವವರು ಕಿಚ್ಚ. ಇದನ್ನೆಲ್ಲಾ ಅರಿಯದೆ ಏಕಾಏಕಿ ಅವರ ಬಗ್ಗೆ ಆರೋಪಿಸುವುದು ತಪ್ಪಲ್ಲವಾ ಅಹೋರಾತ್ರ….
ಕಳೆದ ಒಂದು ವರ್ಷದಿಂದ ಆನ್ ಲೈನು, ಫೇಸ್ ಬುಕ್ ಲೈವ್ನಲ್ಲಿ ನಡೆಯುತ್ತಿದ್ದ ವಾದ ವಿವಾದವೊಂದು ಇಂದು ಅಕ್ಷರಶಃ ಬೀದಿಗೆ ಬಂದು, ಮಾರಾಮಾರಿ ಲೆವೆಲ್ಲಿಗೆ ತಲುಪಿದೆ.
ಇಂಡಿಯಾದ ಅತಿದೊಡ್ಡ ಸ್ಕಿಲ್ ಗೇಮ್ ಪ್ಲಾಟ್’ಫಾರ್ಮ್ ರಮ್ಮಿ ಸರ್ಕಲ್.ಕಾಮ್ ಗೆ ಸುದೀಪ್ ಪ್ರಚಾರ ರಾಯಭಾರಿಯಾಗಿದ್ದರಲ್ಲಾ… ಆ ಸಂದರ್ಭದಲ್ಲಿ ಈ ಆಟದಿಂದ ಮನೆ-ಮಕ್ಕಳು ಬದುಕು ಕಳೆದುಕೊಳ್ಳುತ್ತಾರೆ ಅಂತಾ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಹೋರಾತ್ರ ಎನ್ನುವ ಕಾವ್ಯನಾಮದಿಂದಲೇ ಪ್ರಸಿದ್ದರಾಗಿರುವ ನಟೇಶ್ ಪೋಲಪಳ್ಳಿಯವರು ಈ ಸ್ಕಿಲ್ ಗೇಮ್ ಮತ್ತು ಅದಕ್ಕೆ ರಾಯಭಾರಿಯಾಗಿದ್ದ ಸುದೀಪ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.
ಇತ್ತೀಚಿನ ದಿನಗಳಲ್ಲಿ ʻಅಹೋರಾತ್ರ ಫೇಸ್ ಬುಕ್ ಲೈವ್ ಮೂಲಕವೇ ಹೆಚ್ಚು ಚಾಲ್ತಿಗೆ ಬಂದಿದ್ದಾರೆ. ಬರಹಗಾರ, ಆಧ್ಯಾತ್ಮಿಕ ಚಿಂತಕರಾಗಿರುವ ಅಹೋರಾತ್ರರ ಆಯತನ, ಒಳಗನ್ನಡಿ ಸಾವಣ್ಣ ಪ್ರಕಾಶನ ಹೊರತಂದಿರುವ ಮೂರ್ಖನ ಮಾತುಗಳು, ಹತ್ತು ನಾಕು ಮೆಟ್ಟಿಲು, ತೃಣಮಾತ್ರ, ಮುಂತಾದ ಕೃತಿಗಳು ಹೊರಬಂದಿದ್ದು ಜನಪ್ರಿಯತೆ ಪಡೆದಿವೆ. ವ್ಯಕ್ತಿತ್ವ ವಿಕಸನದ ಕೃತಿಗಳನ್ನು ರಚಿಸುವುದರ ಜೊತೆಗೆ ತಮ್ಮದೇ ಆದ ಧಾಟಿಯಲ್ಲಿ ಅಧ್ಯಾತ್ಮ ವಿಚಾರಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ಅಹೋರಾತ್ರ ʻವೃಕ್ಷ ರಕ್ಷʼ ಎನ್ನುವ ಸಂಸ್ಥೆಯನ್ನೂ ಕಟ್ಟಿಕೊಂಡು ಮರಗಿಡಗಳನ್ನು ರಕ್ಷಿಸುವ ಕಾರ್ಯವನ್ನೂ ಮಾಡುತ್ತಾಬಂದಿದ್ದಾರೆ. ಅಹೋರಾತ್ರ ಫೇಸ್ ಬುಕ್ಕಿನಲ್ಲಿ ಸಾಕಷ್ಟು ಹಿಂಬಾಲಕರನ್ನೂ ಹೊಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉಪೇಂದ್ರರ ಪ್ರಜಾಕೀಯ ಪಕ್ಷದಿಂದ ಚುನಾವಣೆಗೂ ಸ್ಪರ್ಧಿಸಿದ್ದರಂತೆ!
ಸ್ಕಿಲ್ ಗೇಮ್ ವಿಚಾರ ವರ್ಷಕ್ಕೆ ಮುಂಚೆ ವಿವಾದ ಸೃಷ್ಟಿಸಿತ್ತು. ಕೊರೋನಾ ಸಂದರ್ಭದಲ್ಲಿ ಜನ ಅನ್ನ ಹುಟ್ಟಿಸಿಕೊಂಡು ತಿನ್ನೋದೇ ಕಷ್ಟ. ಇಂಥಾ ಸಂದರ್ಭದಲ್ಲಿ ಇರೋಬರೋದನ್ನೆಲ್ಲಾ ಈ ಜೂಜಾಟಕ್ಕೆ ಬಳಸಿದರೆ ಹೇಗೆ ಅನ್ನೋದು ಆಹೋರಾತ್ರ ಅವರ ವಾದವಾಗಿತ್ತು. ಸುದೀಪ್ ಅವರ ಮ್ಯಾನೇಜರ್ ಕಂ ನಿರ್ಮಾಪಕ ಜಾಕ್ ಮಂಜು ಸ್ವತಃ ಅಹೋರಾತ್ರಗೆ ಕರೆ ಮಾಡಿ ʻಸುದೀಪ್ ಅವರು ಜನಪ್ರಿಯ ಕಲಾವಿದ. ಅವರು ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ನಿಮ್ಮ ವಿರೋಧವಿರಬಹುದು. ಆದರೆ ಕಂಪನಿ ಜೊತೆ ಒಂದು ವರ್ಷಕ್ಕೆ ಒಪ್ಪಂದವಾಗಿದೆ. ನಡುವೆ ರದ್ದು ಮಾಡಲು ಸಾಧ್ಯವಿಲ್ಲ. ಒಂದು ವರ್ಷದ ನಂತರ ಜಾಹೀರಾತನ್ನು ಒಪ್ಪದೇ ಇರಲು ನಾವು ನಿರ್ಧಾರ ಮಾಡುತ್ತೇವೆ.
ನಾನು ಕೂಡಾ ನಿಮ್ಮ ಫಾಲೋವರ್… ನೀವು ಸುದೀಪ್ ಅವರ ಬಗ್ಗೆ ಪೋಸ್ಟ್ ಹಾಕುವುದು, ನಮ್ಮ ಅಭಿಮಾನಿಗಳು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತಾಡೋದು ನಡೆಯುತ್ತಿದೆ. ಲಕ್ಷಾಂತರ ಅಭಿಮಾನಿಗಳ ಪರವಾಗಿ ಸಾಷ್ಟಾಂಗವಾಗಿ ಕ್ಷಮೆ ಕೇಳುತ್ತೇನೆ. ಇಷ್ಟಾಗಿ ನಾನು ಸುದೀಪ್ ಅವರ ಅಭಿಮಾನಿಗಳ ಪರವಾಗಿ ಮಾತಾಡುತ್ತಿದ್ದೇನೆ ಅಂತಾ ತಿಳಿಯಬೇಡಿ. ಅಚಾತುರ್ಯಗಳಾಗಿವೆ. ಅದನ್ನು ಮುಂದುವರೆಸೋದು ಬೇಡ. ಇಷ್ಟಾಗಿಯೂ ನಿಮಗೆ ಬೇಸರವಿದ್ದರೆ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ನಿಮ್ಮನ್ನು ಬೆದರಿಸಿದವರ ವಿರುದ್ಧ ಕಂಪ್ಲೇಂಟು ಕೊಡಿʼ ಎಂದು ವಿನಂತಿಸಿದ್ದರು.
ಜಾಕ್ ಮಂಜುನಾಥ್ ಅವರ ಮಾತನ್ನು ರೆಕಾರ್ಡ್ ಮಾಡಿಕೊಂಡಿದ್ದ ಅಹೋರಾತ್ರ ಅದನ್ನೂ ತಮ್ಮ ಫೇಸ್ ಬುಕ್, ಯೂ ಟ್ಯೂಬುಗಳಲ್ಲಿ ಅಪ್ ಲೋಡ್ ಮಾಡಿದ್ದರು. ಅದಾದ ನಂತರವೂ ಅಹೋರಾತ್ರ ಕಿಚ್ಚ ಅಭಿಮಾನಿಗಳನ್ನು ಅಲ್ಲಲ್ಲಿ ಗಿಲ್ಲುತ್ತಲೇ ಬಂದಿದ್ದರು. ಇದರ ವಿರುದ್ಧ ಸುದೀಪ್ ಫ್ಯಾನ್ಸು ವಿರೋಧದ ಕಮೆಂಟು, ಪೋಸ್ಟುಗಳನ್ನು ಹಾಕುತ್ತಲೇ ಇದ್ದರು.
ಇಂದು ಮಧ್ಯಾಹ್ನ ಕಿಚ್ಚ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಎನ್ನಲಾಗುತ್ತಿರುವ ನವೀನ್ ಕುಮಾರ್ ಗೌಡ ಮತ್ತಿತರರು ಅಹೋರಾತ್ರ ಮನೆಗೆ ಹೋಗಿದ್ದಾರೆ. ಮೂಲಗಳ ಪ್ರಕಾರ ಕೂತು ಮಾತಾಡಿ ʻಪದೇ ಪದೆ ಕಿಚ್ಚನ ಅಭಿಮಾನಿಗಳನ್ನು ಕೆಣಕಬೇಡಿʼ ಎಂದು ಹೇಳಿಬರುವುದಷ್ಟೇ ನವೀನ್ ಗೌಡರ ಉದ್ದೇಶವಾಗಿತ್ತಂತೆ. ಆದರೆ ಆಹೋರಾತ್ರ ಮತ್ತು ಅವರ ತಂಡದ ಕೆಲವರು ಸುದೀಪ್ ಅವರನ್ನು ವೈಯಕ್ತಿಕವಾಗಿ ನಿಂದಿಸಿದ್ದರಿಂದ ತಣ್ಣಗೆ ನಡೆಯಬೇಕಿದ್ದ ಮಾತುಕತೆ ವಿಕೋಪಕ್ಕೆ ತಿರುಗಿದೆ.
ಸುದೀಪ್ ಅಭಿಮಾನಿಗಳು ಮನೆಗೆಯೊಳಗೆ ಬಂದಿದ್ದ ಸಂದರ್ಭವನ್ನು ಸ್ವತಃ ಅಹೋರಾತ್ರ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೈವ್ ಪ್ರಸಾರ ಮಾಡಿದ್ದಾರೆ. ತಮ್ಮ ಮನೆ ಬಳಿ ಬಂದಿದ್ದು ಕಿಚ್ಚನ ಅಭಿಮಾನಿಗಳೇ ಇರಬಹುದು. ಆದರೆ ಅಹೋರಾತ್ರ ಏಕಾಏಕಿ ಸುದೀಪ್ ಬಗ್ಗೆ ಮಾತಾಡಲು ಆರಂಭಿಸುತ್ತಾರೆ. ಉದ್ದನೆಯ ಜುಟ್ಟು ಬಿಟ್ಟದ್ದ ಆಹೋರಾತ್ರರ ಶಿಷ್ಯನಂತೂ ಸುದೀಪ್ ಅವರೇ ಹುಡುಗರನ್ನು ಕಳಿಸಿದ್ದಾರೆ ಎನ್ನುವಷ್ಟರ ಮಟ್ಟಿಗೆ ಅರಚುತ್ತಾನೆ. ಅನವಶ್ಯಕ ಮಾತಾಡಿ ಬಂದಿದ್ದ ಹುಡುಗರನ್ನು ರೊಚ್ಚಿಗೆಬ್ಬಿಸುತ್ತಾನೆ.
ಮತ್ತೊಬ್ಬ ಖಾರದ ಪುಡಿ ಪ್ಯಾಕೇಟು ತೋರಿಸಿ, ʻನೋಡಿ ನಮ್ಮನ್ನು ಕೊಲ್ಲಲು ಖಾರದ ಪುಡಿ ಪ್ಯಾಕೇಟು, ಚಾಕು ತಂದಿದ್ದಾರೆʼ ಅಂದುಬಿಡುತ್ತಾನೆ. ಆಹೋರಾತ್ರ ಕೂಡಾ ಕಿಚ್ಚ ಸುದೀಪ್ ಅಭಿಮಾನಿ ಸಂಘದ ಅಧ್ಯಕ್ಷ ನವೀನ್ ಗೌಡ ಕೊಲೆ ಮಾಡಲು ಮನೆಗೆ ನುಗ್ಗಿದ್ದಾನೆ. ಸುದೀಪ್ ನನ್ನನ್ನು ಕೊಲ್ಲಲು ಕಳಿಸಿದ್ದಾನೆ. ಖಾರದ ಪುಡಿ, ಚಾಕು ಇತ್ಯಾದಿಗಳನ್ನು ತಂದಿದ್ದಾರೆ. ಕಿಚ್ಚ ಸುದೀಪ ಅರೆಸ್ಟ್ ಆಗಬೇಕು, ಕಿಚ್ಚ ಸುದೀಪ ಅರೆಸ್ಟ್ ಆಗಬೇಕು… ಅಂತಾ ಒಂದೇ ಸಮನೆ ಮಾತಾಡುತ್ತಾರೆ…
ಇದೇನು ಅಹೋರಾತ್ರ…? : ಎಡ-ಬಲದ ಭೇದವಿಲ್ಲದೆ ಅಹೋರಾತ್ರರನ್ನು ಅನುಸರಿಸುವವರು ಇದ್ದಾರೆ. ಇವರ ಕೃತಿ, ಮಾತುಗಳು ನಿಜಕ್ಕೂ ಸೋತವರ ಬದುಕಿಗೆ ಬೆಳಕಾಗುವಂತಿರುತ್ತದೆ. ಅಧ್ಯಾತ್ಮದ ಬಗೆಗಿನ ಇವರ ಮಾತುಗಳು ಸೆಳೆಯುತ್ತವೆ. ಆದರೆ, ಸುದೀಪ್ ಒಬ್ಬ ಸ್ಟಾರ್ ನಟ ಅನ್ನೋದನ್ನು ಮರೆತು, ಅವರ ಅಭಿಮಾನಿಗಳ ಜೊತೆ ಕ್ಯಾತೆ ತೆಗೆದುಕೊಂಡು, ಅದಕ್ಕೆಲ್ಲಾ ʻಸುದೀಪನೇ ಕಾರಣʼ ಅನ್ನೋದು ಅಹೋರಾತ್ರರ ಘನತೆಗೆ ನಿಜಕ್ಕೂ ಒಪ್ಪುವುದಿಲ್ಲ.
ಒಂದೋ ಎರಡೋ ಸಿನಿಮಾಗಳಲ್ಲಿ ನಟಿಸಿರುವ ಪುಡಿ ಹೀರೋಗಳು ತಮ್ಮ ವಕ್ರಬುದ್ದಿಯನ್ನು ಬೊಟ್ಟುಮಾಡಿ ಬರೆದಾಗ ಎಗರಾಡುತ್ತಾರೆ, ʻವೀರಾʼವೇಶ ತೋರುತ್ತಾರೆ. ಮೀಡಿಯಾದವರು ಅನ್ನೋದನ್ನೂ ಮರೆತು, ತಾವು ಕಾಸು ಕೊಟ್ಟು ಸಾಕಿಕೊಂಡವರಿಗೆ ಪತ್ರಕರ್ತರ ನಂಬರು ಕೊಟ್ಟು, ಅವರಿಂದ ಕೆಟ್ಟಾಕೊಳಕ ಮಾತಾಡಿಸಿ, ಬೆದರಿಕೆಯೊಡ್ಡಿಸುತ್ತಾರೆ. ಇದರಲ್ಲಿ ಡೌಟೇ ಇಲ್ಲ! ಆದರೆ ಜನಪ್ರಿಯ ಹೀರೋಗಳು ಯಾವತ್ತೂ ಇಂಥಾ ಅನಾಹುತಕಾರಿ ಕೆಲಸಕ್ಕೆ ಕೈಹಾಕೋದಿಲ್ಲ!!
ಹೇಳಿ ಕೇಳಿ ಸುದೀಪ್ 25 ವರ್ಷ ಪೂರೈಸಿರುವ, ಕನ್ನಡದ ಹೆಮ್ಮೆಯ ನಟ. ನಮ್ಮ ಕನ್ನಡ ಚಿತ್ರರಂಗದ ಹೆಸರನ್ನು ದೇಶದ ಗಡಿ ದಾಟಿಸಿರುವ ಅಪರೂಪದ ಪ್ರತಿಭೆ. ಸೋಲು, ಗೆಲುವು, ಹೊಗಳಿಕೆ, ತೆಗಳಿಕೆಗಳನ್ನೆಲ್ಲಾ ಸಮಾನವಾಗಿ ಸ್ವೀಕರಿಸಿ, ಸ್ಥಿತಪ್ರಜ್ಞತೆಯಿಂದ ಹೆಜ್ಜೆ ಇರಿಸುವವರು ಕಿಚ್ಚ. ಇದನ್ನೆಲ್ಲಾ ಅರಿಯದೆ ಏಕಾಏಕಿ ಅವರ ಬಗ್ಗೆ ಆರೋಪಿಸುವುದು ತಪ್ಪು. ನಿಜಕ್ಕೂ ಕಿಚ್ಚ ಅಭಿಮಾನಿಗಳು ಅಹೋರಾತ್ರ ಅವರ ಮನೆ ಹೆಣ್ಣುಮಕ್ಕಳು, ಅವರ ಶಿಷ್ಯಪಡೆಯ ಮೇಲೆ ಹಲ್ಲೆ ಮಾಡಿದ್ದರೆ ಅದು ಖಂಡನೀಯ. ಅದಕ್ಕೆ ಕಾನೂನಿನ ರೀತಿಯಲ್ಲಿ ಶಿಕ್ಷೆಯಾಗಲಿ. ಆದರೆ ಒಬ್ಬ ದೊಡ್ಡ ನಟನನ್ನು ಸುಖಾಸುಮ್ಮನೆ ಎಳೆದುತರೋದು ಬೇಡ…
ಕಳೆದ ಒಂದು ವರ್ಷದಿಂದ ಅಹೋರಾತ್ರ ಎಷ್ಟೆಲ್ಲಾ ವಿವಾದ ಸೃಷ್ಟಿಸುತ್ತಿದ್ದಾರೆ ಗೊತ್ತಲ್ಲ? ಇವತ್ತಿನ ಪ್ರಕರಣದ ಬಗ್ಗೆ ನನಗೆ ಪೂರ್ತಿ ಮಾಹಿತಿ ಇಲ್ಲ. ಸದ್ಯ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ಹೋಗುತ್ತಿದ್ದೇನೆ..
- ಜಾಕ್ ಮಂಜು, ನಿರ್ಮಾಪಕ, ವಿತರಕ
No Comment! Be the first one.