ಯೋಗರಾಜ್ ಭಟ್ ನಿರ್ದೇಶನದ ವಾಸ್ತುಪ್ರಕಾರ ಚಿತ್ರದ ಮೂಲಕ ನಾಯಕಿಯಾಗಿ ಶೈನಪ್ ಆದವರು ಐಶಾನಿ ಶೆಟ್ಟಿ. ಆ ನಂತರ ನೀನಾಸಂ ಸತೀಶ್ ಜೊತೆ ರಾಕೆಟ್ ಚಿತ್ರದಲ್ಲಿ ನಟಿಸಿದ್ದ ಐಶಾನಿ ಮತ್ತೆ ಕಾಣಿಸಿಕೊಂಡಿದ್ದು ಅವರೇ ನಿರ್ದೇಶನ ಮಾಡಿದ್ದ ‘ಕಾಜಿ’ ಎಂಬ ಕಿರುಚಿತ್ರದಲ್ಲಿ. ಇದೇ ಹೊತ್ತಲ್ಲಿ ಜರ್ನಲಿಸಂ  ಮಾಸ್ ಕಮ್ಯೂನಿಕೇಷನ್  ಅನ್ನೂ ಮುಗಿಸಿಕೊಂಡು  ‘ನಡುವೆ ಅಂತರವಿರಲಿ’ ಚಿತ್ರದ ನಾಯಕಿಯಾಗಿ ರೀ ಎಂಟ್ರಿ ಕೊಟ್ಟಿದ್ದರು. ಈಗ ಇದೇ ಐಶಾನಿ ನಟನೆಯ ನಮ್ ಗಣಿ ಬಿಕಾಂ ಪಾಸ್ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಈ ಹೊತ್ತಿನಲ್ಲಿ ಮಾತಿಗೆ ಸಿಕ್ಕ ಐಶಾನಿ ತಮ್ಮ ಕನಸು, ಚಿತ್ರ, ಬದುಕಿನ ಬಗ್ಗೆ ಹಲವಾರು ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ…

– ನಮ್ ಗಣಿ ಬಿಕಾಂ ಪಾಸ್ ಸಿನಿಮಾವನ್ನು ನೀವು ಒಪ್ಪಿಕೊಂಡ ಸಂದರ್ಭವನ್ನು ಹೇಳಿ : ಅಭಿಷೇಕ್ ಈ ಸಿನಿಮಾದ ನಿರ್ದೇಶಕರು ಹಾಗೂ ಸಿನಿಮಾದ ನಾಯಕ ನಟ. ಈ ಹಿಂದೆಯೂ  ನಾನು ಹೊಸಬರ ಸಿನಿಮಾಗಳಲ್ಲಿ ಮಾಡಿದ್ದೇನೆ, ಆದರೆ ಅವರಿಗೆ ಎಕ್ಸ್‌ಪೀರಿಯನ್ಸ್ ಇತ್ತು. ಇವರಿಗೆ ಎಕ್ಸ್‌ಪೀರಿಯನ್ಸ್ ಇರಲಿಲ್ಲ. ನನಗೆ ಎಲ್ಲೋ ಒಂದುಕಡೆ ಈ ಸಿನಿಮಾ ಮಾಡಬಹುದಾ ಎಂಬ ಅನುಮಾನವಿತ್ತು. ಅಭಿಷೇಕ್ ಅವರು ನನಗೆ ಕಥೆ ಹೇಳಿದಾಗ ಮೊದಲಿನಿಂದ ಕೊನೆಯವರೆಗೂ ಸಿನಿಮಾ ಹೇಗಿರುತ್ತೆ ಎನ್ನುವ ಬಗ್ಗೆ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬ ಲೈವ್ಲಿಯಾಗಿ ನರೇಷನ್ ಕೊಟ್ರು. ಅದಾದ ನಂತರ ನನಗೆ ಅವರ ಡೆಡಿಕೇಷನ್ ನೋಡಿ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದೆ.

–  ನಮ್ ಗಣಿ ಬಿಕಾಂ ಪಾಸ್ ಸಿನಿಮಾವನ್ನು ಯಾವೆಲ್ಲಾ ಕಾರಣಗಳಿಗಾಲಿ ಜನ ನೋಡಲೇಬೇಕು?: ಒಬ್ಬ ಸ್ಟೂಡೆಂಟ್ ಡಿಗ್ರಿ ಮುಗಿದ ನಂತರ ಕೆಲಸಕ್ಕೆ ಸೇರುವಂತಹ ಸಂದರ್ಭ, ಕುಟುಂಬ ಅಥವಾ ಸಮಾಜದಿಂದಾಗಲೀ ಒತ್ತಡಗಳ ಕುರಿತಂತೆ ಕಾಮಿಡಿಯನ್ನು ಅಳವಡಿಸಿಕೊಂಡು ತೆಗೆದಿರುವಂತಹ ಚಿತ್ರ ಇದು. ಮಿಡ್ಲ್ ಕ್ಲಾಸ್ ಫ್ಯಾಮಿಲಿಗಳಿಗೆ ಹಾಗೂ ಯುವ ಜನತೆಗೆ ಬಹಳ ಹೊಂದುವಂತಹ ಸಿನಿಮಾ ಇದು. ಮೊದಲಿನಿಂದ ಕೊನೆಯವರೆಗೂ ಎಲ್ಲೂ ಬೇಸರ ಎನಿಸುವುದಿಲ್ಲ, ಒಳ್ಳೆಯ ಎಂಟರ್‌ಟೈನ್‌ಮೆಂಟ್ ಕೊಡುತ್ತೆ.

– ನೀವು ಚಿತ್ರರಂಗಕ್ಕೆ ಬಂದು ಐದಯ ವರ್ಷಗಳಾದವ. ಇದು ನಿಮ್ಮ ಐದನೇ ಸಿನಿಮಾ. ಇದು ಕಡಿಮೆ ಅನ್ನಿಸಲ್ವಾ?: ನನಗೇನೂ ಕಮ್ಮಿ ಅನ್ನಿಸಲ್ಲ. ವಾಸ್ತುಪ್ರಕಾರ ಚಿತ್ರದ ನಂತರ ತುಂಬಾ ಅವಕಾಶಗಳು ಬರಲಾರಂಭಿಸಿದ್ದವು. ದೊಡ್ಡ ನಿರ್ದೇಶಕ, ನಟರ ಜೊತೆ ನಟಿಸಿ, ಬ್ರೇಕ್ ಸಿಕ್ಕಿದಾಗ, ಆ ಮೂಲಕ ಅವಕಾಶಗಳು ಬರಲಾರಂಭಿಸಿದಾಗ ಯಾರೂ ಅದನ್ನ ಬಿಡಲು ಮನಸು ಮಾಡೋದಿಲ್ಲ. ಆದರೆ  ನನಗೆ ನನ್ನ ಎಜುಕೇಷನ್ ಮುಖ್ಯ ಅನ್ನಿಸ್ತು. ಡಿಗ್ರಿ ಕಂಪ್ಲೀಟ್ ಮಾಡಿ ಮಾಸ್ಟರ‍್ಸ್ ಮಾಡಬೇಕನ್ನೋ ಆಸೆ ಇತ್ತು. ಅದರಂತೆಯೇ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ಮಾಸ್ ಕಮ್ಯೂನಿಕೇಷನ್ ಜರ್ನಲಿಸಂ ಮಾಡಲಾರಂಭಿಸಿದೆ. ಸಿನಿಮಾ ಕೆರಿಯರ್ ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಅಂತ ತೀರ್ಮಾನಿಸಿ ಓದೋದರತ್ತ ಗಮನ ಹರಿಸಿದೆ. ಈಗ ಓದು ಮುಗಿಸಿಕೊಂಡು ಮತ್ತೆ ನಟನೆಯತ್ತ ಮರಳಿದ್ದೇನೆ.

– ನಿಮ್ಮ ಪೋಷಕರಿಗೆ ನೀವು ನಟಿಯಾಗೋದು ಇಷ್ಟವಿದೆಯಾ? ಅವರ ಸಹಕಾರ ಹೇಗಿದೆ? : ನಾನು ಸಿನಿಮಾ ರಂಗಕ್ಕೆ ಬರಲು ಕಾರಣ ನಮ್ಮ ತಂದೆಯವರೇ. ನನ್ನ ತಂದೆ ಸಿದ್ಧಾರ್ಥ ಶೆಟ್ಟಿ ನಾರಾಯಣ ಹೃದಯಾಲಯದಲ್ಲಿ ವರ್ಕ್ ಮಾಡ್ತಿದ್ದಾರೆ. ಅವರಿಗೆ ಸಿನಿಮಾದವರು ಪರಿಚಯ ಇದ್ದದ್ದರಿಂದ ಮೊದಲ ಸಿನಿಮಾ ಅವಕಾಶ ಸಿಕ್ಕಿತ್ತು. ನಂಗೆ ನಟನೆಯಲ್ಲಿ ಆಸಕ್ತಿ ಇದೆ ಅಂತ ಅವರಿಗೆ ಗೊತ್ತಿತ್ತು. ಆದ್ರೆ ನಾನು ಸಿನಿಮಾ ನಟಿಯಾಗಬೇಕು ಅಂತ ಕನಸು ಕಂಡಿರಲಿಲ್ಲ. ಯಾಕಂದ್ರೆ ನಮ್ಮಂಥಾ ಮಧ್ಯಮವರ್ಗದವರಿಗೆ ಅಂಥಾ ಕನಸು ಕಾಣೋದು ಕಷ್ಟವಾಗುತ್ತೆ. ನಾನು ರಂಗಭೂಮಿಯತ್ತ ಆಸಕ್ತಿ ಹೊಂದಿದ್ದೆ. ಆದರೆ, ತಂದೆಯ ಕಾರಣದಿಂದ ಮೊದಲು ಸಿನಿಮಾದಲ್ಲಿ ನಟಿಸುವಂತಾಯ್ತು. ಅದನ್ನು ನಾನು ಹವ್ಯಾಸದಂತೆ ಮಾಡಿದ್ದೆನಾದ್ರೂ ಆ ನಂತರವೇ ವಾಸ್ತುಪ್ರಕಾರ ಮತ್ತು ರಾಕೆಟ್ ಚಿತ್ರಗಳ ಅವಕಾಶವೂ ಸಿಕ್ಕಿತು. ಆ ನಂತರದಲ್ಲಿ ಸಿನಿಮಾ ನಟನೆ ಇಷ್ಟವಾಯ್ತು. ನಾನೇನೇ ಓದಿದ್ರೂ ನನಗೆ ಆಸಕ್ತಿ ಇರೋದೇ ಸಿನಿಮಾ ಬಗ್ಗೆ. ಇದು ಬಿಟ್ಟು ಕಥೆ, ನಿರ್ದೇಶನದಂಥಾ ಕ್ರಿಯೇಟಿವ್ ವಿಭಾಗದಲ್ಲೂ ಆಸಕ್ತಿ ಇದ್ದದ್ದರಿಂದ ಸಿನಿಮಾವನ್ನೇ ಆರಿಸಿಕೊಂಡೆ.

– ನೀವು ನಿರ್ದೇಶನವನ್ನೂ ಮಾಡಿದ್ದೀರಿ. ನಿಮ್ಮ ಕಾಜಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಹೇಗಿದೆ? : ಕಾಜಿ ಕಿರುಚಿತ್ರವನ್ನ ಮಾಡಿದ್ದು ಕಲಿಕೆಯ ದೃಷ್ಟಿಯಿಂದ. ಖಂಡಿತಾ ಅವಾರ್ಡಿಗಾಗಿ ಈ ಚಿತ್ರ ಮಾಡಿದ್ದಲ್ಲ. ಸ್ಕ್ರಿಪ್ಟ್ ರೆಡಿ ಮಾಡಿದಾಗ ಅದು ಚೆನ್ನಾಗಿದೆ ಅಂತ ನೀನಾಸಂ ಸತೀಶ್ ಸಪೋರ್ಟ್ ಮಾಡಿದ್ರು. ಒಂದೊಳ್ಳೆ ಟೀಮ್ ಕಟ್ಟಿ ಕೊಟ್ರು. ನಾವು ನಿರೀಕ್ಷೆಯೇ ಮಾಡಿರದಂತೆ ಇದಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ತು. ಸೈಮಾಗೂ ಆಯ್ಕೆಯಾಗಿದೆ. ಮೂರು ಅವಾರ್ಡುಗಳೂ ಸಿಕ್ಕಿವೆ. ಇದ್ರಿಂದ ತುಂಬಾ ಖುಷಿಯಾಗಿದೆ. ಇಂಥಾ ಪ್ರತಿಕ್ರಿಯೆ ಬಂದಾಗ ನನ್ನ ಬಗ್ಗೆ ನಮಗೇ ಭರವಸೆ ಮೂಡುತ್ತೆ.

– ನಟನೆ ಮತ್ತು ನಿರ್ದೇಶನದಲ್ಲಿ ಯಾವುದಕ್ಕೆ ಹೆಚ್ಚು ಆದ್ಯತೆ ಕೊಡ್ತೀರಿ? : ಖಂಡಿತಾ ನಟನೆಗೇ ಹೆಚ್ಚು ಒತ್ತು ಕೊಡ್ತೀನಿ. ಯಾಕಂದ್ರೆ ಚಿಕ್ಕ ವಯಸಿನಿಂದಲೂ ನನಗೆ ನಟನೆಯ ಬಗ್ಗೇನೆ ಜಾಸ್ತಿ ಆಸಕ್ತಿ ಇತ್ತು. ಆಕ್ಟಿಂಗ್ ಮಾಡೋ ಹೊತ್ತಲ್ಲೇ ನಂಗೆ ಫಿಲಂ ಮೇಕಿಂಗ್ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತಷ್ಟೆ. ಅದಕ್ಕೂ ಮೊದಲು ನನ್ನಿಷ್ಟದ ಆಯ್ಕೆಯಾಗಿದ್ದದ್ದು ನಟನೆಯಷ್ಟೇ. ಈಗ್ಲೂ ನಟನೆಯೇ ಮೊದಲ ಆದ್ಯತೆ ಕೊಡ್ತೀನಿ. ಸಿನಿಮಾ ಮೇಕಿಂಗ್‌ಗೆ ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಕಲಿಯೋದೂ ಸಾಕಷ್ಟಿದೆ. ಆದ್ರಿಂದ ಸದ್ಯದ ನನ್ನ ಆಯ್ಕೆ ನಟನೆಯೇ.

– ಸಿನಿಮಾಗೆ ಬರುವ ಮುಂಚೆ ನಿಮ್ಮ ಖಾಸಗಿ ಜಗತ್ತು ಹೇಗಿತ್ತು? : ಸಿನಿಮಾಗೆ ಬರೋ ಮುಂಚೆ ನಾನು ಮಾಮೂಲಿ ಕಾಲೇಜು ಸ್ಟೂಡೆಂಟ್ ಅಷ್ಟೆ. ಆ ಹಂತದಲ್ಲಿಯೇ ನಂಗೆ ಸಿಂಗಿಂಗ್ ಬಗ್ಗೆ ಆಸಕ್ತಿ ಇತ್ತು. ವೀಣೆ ನುಡಿಸೋದನ್ನ ಕಲಿತಿದ್ದೆ. ಅಮ್ಮ ಕೂಡಾ ನಾನು ಸಿಂಗರ್ ಆಗಬೇಕೆಂದೇ ಆಸೆಪಟ್ಟಿದ್ರು. ಸಂಗೀತವನ್ನೂ ಕಲಿತಿದ್ದ ನನಗೆ ಸ್ಪೋರ್ಟ್ಸ್‌ನಲ್ಲೂ ಆಸಕ್ತಿ ಇತ್ತು. ಅದಕ್ಕೂ ಮುಂಚೆ ಡಾಕ್ಟರ್ ಆಗ್ಬೇಕನ್ನೋ ಆಸೆ ಇತ್ತು. ಬಯಾಲಜಿ ನನ್ನ ಫೇವರಿಟ್ ಸಬ್ಜೆಕ್ಟ್ ಆಗಿತ್ತು. ಹಾಗ್ನೋಡಿದ್ರೆ ಚಿಕ್ಕವಳಿರುವಾಗ ನಾ ತುಂಬಾ ವಾಚಾಳಿಯಾಗಿದ್ದೆ. ಹೈಸ್ಕೂಲಿಗೆ ಬರೋ ಹೊತ್ತಿಗೆಲ್ಲ ಮಾತು ಕಡಿಮೆಯಾಗಿ ಅಂತರ್ಮುಖಿಯಾಗಿ ಬಿಟ್ಟಿದ್ದೆ. ಆ ಹಂತದಲ್ಲಿ ನಟಿಯಾಗಬೇಕು ಅಂದುಕೊಂಡಿರಲಿಲ್ಲ, ಆದೆ. ರಾಕೆಟ್ ಚಿತ್ರದಲ್ಲಿ ಒಂದು ಹಾಡು ಹಾಡೋ ಮೂಲಕ ಗಾಯಕಿಯೂ ಆಗಿ ಅಮ್ಮನ ಆಸೆಯನ್ನ ಪೂರೈಸಿದ ತೃಪ್ತಿ ಇದೆ.

– ನಿಮಗೆ ಹುಟ್ಟಿದೂರು ಇಷ್ಟವಾಗುತ್ತಾ ಅಥವಾ ಬೆಂಗಳೂರಾ? : ನಾನು ಹುಟ್ಟಿದ್ದು ಅಮ್ಮ ಸಂಧ್ಯಾ ಶೆಟ್ಟಿಯವರ ಊರಾದ ಪುತ್ತೂರಿನಲ್ಲಿ. ನಾನು ಬೆಳೆದಿದ್ದು, ಓದಿದ್ದೆಲ್ಲ ಬೆಂಗಳೂರಿನಲ್ಲೇ ಆದ್ರೂ ಪುತ್ತೂರಿನ ನಂಟು ಹಾಗೇ ಇದೆ. ಆಗೆಲ್ಲ ವರ್ಷಕ್ಕೆ ಎರಡೆರಡು ತಿಂಗಳು ಅಲ್ಲೇ ಹೋಗಿರುತ್ತಿದ್ದೆ. ಈಗಲೂ ಪ್ರತೀ ವರ್ಷ ಊರಿಗೆ ಹೋಗ್ತೀನಿ. ಅಲ್ಲಿ ನಡೆಯೋ ಭೂತಾರಾಧನೆಯನ್ನ ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳೋದಿಲ್ಲ. ಅಪ್ಪ, ಅಮ್ಮ ಮತ್ತು ತಮ್ಮ ಅಭಿರಥ್ ಜೊತೆ ಊರಿಗೆ ಹೋಗೋದಂದ್ರೆ ನಂಗಿಷ್ಟ.

– ನೀವು ತುಳುನಾಡಿನವರು. ಇದೀಗ ತುಳು ಚಿತ್ರರಂಗವೂ ಬೆಳೆಯುತ್ತಿದೆ. ಅಲ್ಲಿಂದ ಆಫರ್‌ಗಳು ಬಂದಿವೆಯಾ? : ಸಾಕಷ್ಟು ಆಫರ್‌ಗಳು ಬಂದಿವೆ. ಕಾರಣಾಂತರಗಳಿಂದ ಒಪ್ಪಿಕೊಳ್ಳಲಾಗಿಲ್ಲ. ನಾನು ತುಳುವಿನವಳಾದರೂ ಕನ್ನಡದೊಂದಿಗೇ ನಂಟು ಜಾಸ್ತಿ. ನನಗೆ ಸೂಟ್ ಆಗುವಂಥಾ ಒಳ್ಳೆ ಕಥೆ ಬಂದ್ರೆ ಖಂಡಿತಾ ತುಳು ಚಿತ್ರಗಳಲ್ಲೂ ನಟಿಸ್ತೀನಿ.

– ಈಗ ಮತ್ತೆ ನಮ್ ಗಣಿಯ ಬಗ್ಗೆ  ಮಾತಾಡೋದಾದರೆ… : ಈ ಚಿತ್ರವನ್ನು ಹೊಸಬರ ತಂಡವೇ ರೂಪಿಸಿದ್ದರೂ ಡಿಫರೆಂಟಾಗಿದೆ. ತಾಂತ್ರಿಕವಾಗಿಯೂ ರಿಚ್ ಆಗಿದೆ. ಮಾಸ್, ಆಕ್ಷನ್ ಸೂತ್ರಗಳಾಚೆಗೆ ಬದುಕಿಗೆ ಹತ್ತಿರವಾದ ಕಥೆ ಹೊಂದಿದೆ. ಆದ್ದರಿಂದಲೇ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ಭರವಸೆಯೂ ಇದೆ. ಎಲ್ಲರೂ ಈ ಸಿನಿಮಾ ನೋಡುವಂತಾಗಲಿ  ಅಂತ ಆಶಿಸ್ತೀನಿ.

 

 

CG ARUN

ಪ್ರವೀಣ್ ರೆಡ್ಡಿ ಹುಟ್ಟುಹಬ್ಬಕ್ಕೆ ಡಾ. 56 ಮೋಷನ್ ಪೋಸ್ಟರ್!

Previous article

ಮನೆ, ಮನಗಳನ್ನು ಬೆಸೆಯುವ ಆಯುಷ್ಮಾನ್‌ಭವ!

Next article

You may also like

Comments

Leave a reply

Your email address will not be published. Required fields are marked *