ವಿಶ್ವಾಸಂ ಮತ್ತು ನೇರ್ ಕೊಂಡ ಪಾರ್ವೈ ಸಿನಿಮಾಗಳ ನಂತರ ತಮಿಳು ನಟ ಅಜಿತ್ ಒಂಚೂರು ಸ್ಪೀಡಾಗಿ ಚಿತ್ರಗಳನ್ನು ಮಾಡುವ ನಿರ್ಧಾರಕ್ಕೆ ಬಂದಂತಿದೆ. ಸಾಮಾನ್ಯಕ್ಕೆ ಎರಡು ವರ್ಷಕ್ಕೊಂದು ಸಿನಿಮಾ ಮಾಡುವುದು ಅಜಿತ್ ರೂಢಿ. ಈಗ ಅದನ್ನು ಬದಲಿಸಿ ವರ್ಷಕ್ಕೊಂದಾದರೂ ಚಿತ್ರಗಳಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ. ತಮಿಳುನಾಡು ಮಾತ್ರವಲ್ಲದೆ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅಜಿತ್ ವಿಕ್ಷಿಪ್ತ ಮನಸ್ಥಿತಿಯ ವಿಚಿತ್ರ ಸ್ಟಾರ್. ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವಿದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕೋದು ಅಜಿತ್ ಶೈಲಿ.

ಯಾವ ಅಭಿಮಾನಿ ಸಂಘಗಳೂ ಬೇಡ ಅಂತಾ ಫತ್ವಾ ಹೊರಡಿಸಿದ್ದ ಅಜಿತ್ ಪಬ್ಲಿಕ್ ಫಂಕ್ಷನ್ನುಗಳಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ.
ಸದ್ಯ ಎಕೆ೬೦ ಸಿನಿಮಾದಲ್ಲಿ ಅಜಿತ್ ಕೆಲಸ ಶುರು ಮಾಡಬೇಕಿದೆ. ಅದಕ್ಕೂ ಮುಂಚೆ ದೆಹಲಿಯಲ್ಲಿ ನಡೆದ ರಾಷ್ಡ್ರಮಟ್ಟದ ಗನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಂದಿದ್ದಾರೆ ಇದಾಗುತ್ತಿದ್ದಂತೇ ಪತ್ನಿ ಶಾಲಿನಿ, ಮಕ್ಕಳಾದ ಅನೋಷ್ಕ ಮತ್ತು ಅದ್ವಿಕ್ ಜೊತೆ ಚೆನ್ನೈ ಬೀಚ್ನಲ್ಲಿ ಆಡುತ್ತಾ ಕಾಲ ಕಳೆದಿದ್ದಾರೆ. ಸ್ಟಾರ್ಗಳು ತಮ್ಮ ಕುಟುಂಬದ ಜೊತೆಗೆ ಹೊರಗೆ ಕಾಣಿಸಿಕೊಳ್ಳೋದೇ ವಿರಳ. ಆದರೆ, ಅಜಿತ್ ತಮ್ಮ ಮನೆಯವರೊಂದಿಗೆ ಸಹಜ ಜೀವನ ನಡೆಸುತ್ತಿದ್ದಾರೆ ಅನ್ನೋದಕ್ಕೆ ಇದು ಉದಹರಣೆಯಷ್ಟೇ. ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಸಣ್ಣ ಸಣ್ಣ ಖುಷಿಗಳನ್ನು ಕಳೆದುಕೊಳ್ಳಬಾರದು ಅನ್ನೋದು ಅಜಿತ್ ಫಾರ್ಮುಲಾ!

