‘ವೃತ್ರ ಎನ್ನುವ ಕನ್ನಡ ಚಿತ್ರವೊಂದು ಯಾರೆಂದರೆ ಯಾರಿಗೂ ಗೊತ್ತಾಗದಂತೆ, ಸೈಲೆಂಟಾಗಿ ರಿಲೀಸಾಗಿದೆ!
ಈ ಸಿನಿಮಾ ಶುರುವಾದ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿಯಾಗಿತ್ತು. ಅದಾದ ನಂತರ ರಶ್ಮಿಕ ಆ ಚಿತ್ರದಲ್ಲಿ ನಟಿಸಿಲ್ಲ ಅನ್ನೋ ವಿಚಾರ ಗೊತ್ತಾಗಿರೋದು ಈ ಸಿನಿಮಾ ರಿಲೀಸಾದಮೇಲೆಯೇ!
ನಿತ್ಯಶ್ರೀ, ತರುಣ್ ಸುಧೀರ್, ಪ್ರಕಾಶ್ ಬೆಳವಾಡಿ, ಸುಧಾರಾಣಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಒಂದು ಕ್ರೈಂ ಪ್ರಕರಣ, ಅದನ್ನು ಭೇದಿಸಲು ನಿಲ್ಲುವ ಇಂದಿರಾ ಎನ್ನುವ ಲೇಡಿ ಆಫೀಸರ್. ಆಕೆಯ ಹುಡುಕಾಟಕ್ಕೆ ಅಡ್ಡಿಯಾಗುವ ವಿಚಾರಗಳು… ಆತ್ಮಹತ್ಯೆಯ ತನಿಖೆ ಕೈಗೆತ್ತಿಕೊಂಡ ಅಧಿಕಾರಿಗೆ ಅದರ ಜೊತೆಗೆ ಇನ್ನೂ ಯಾವ್ಯಾವ ಪ್ರಕರಣಗಳು ತಗುಲಿಕೊಳ್ಳುತ್ತವೆ ಅನ್ನೋದು ಕಥೆಯ ಪ್ರಧಾನ ಅಂಶ. ಇದರ ಜೊತೆಗೆ ಪ್ರಕರಣಗಳ ಬೆನ್ನತ್ತಿ, ಅದರ ತಳಬುಡ ಬಗೆಯುವ ಉತ್ಸಾಹದಲ್ಲಿರುವ ಹೊಸ ಅಧಿಕಾರಿಗಳಿಗೆ, ಅವರ ಮೇಲೆ ಕುಂತವರು ಹೇಗೆ ಅಡ್ಡಗಾಲಾಗುತ್ತಾರೆ? ತಮಗಿಂತಾ ಹೆಚ್ಚು ಚುರುಕುತನ, ಚಾಕಚಕ್ಯತೆ ಹೊಂದಿರುವವರನ್ನು ತಮ್ಮ ಉಡಾಫೆತನದಿಂದ ಹೇಗೆ ಸೈಡ್ಲೈನ್ ಮಾಡುತ್ತಾರೆ? ಎಂಬ ವಿಚಾರಗಳನ್ನೆಲ್ಲ ವೃತ್ರದಲ್ಲಿ ಅನಾವರಣಗೊಳಿಸಿದ್ದಾರೆ. ಒಬ್ಬ ವ್ಯಕ್ತಿ ಆಧಾರ್ ಕಾರ್ಡನ್ನು ಎಷ್ಟು ಬೇಕಾದರೂ ಸೃಷ್ಟಿಸಿಕೊಳ್ಳಬಹುದು ಎಂಬಂತೆ ನಿರ್ದೇಶಕರು ನಿರೂಪಿಸಿದ್ದಾರೆ. ಅದು ಹೇಗೆ ಸಾಧ್ಯ ಅಂತಾ ತಿಳಿದುಕೊಳ್ಳಬೇಕಾದರೆ ನಂದನ್ ನಿಲೇಕಣಿಯವರನ್ನೇ ಸಂಪರ್ಕಿಸಬೇಕು!

ಮೇಲ್ನೋಟಕ್ಕೆ ಈ ಚಿತ್ರದ ನಿರ್ದೇಶಕರಾದ ಗೌತಮ್ ಅಯ್ಯರ್ ವಿದೇಶೀ ಸಿನಿಮಾಗಳನ್ನು ಹೆಚ್ಚೆಚ್ಚು ನೋಡಿ, ಅವುಗಳಿಂದ ಸ್ಫೂರ್ತಿಗೊಂಡವರಂತೆ ಕಣುತ್ತಾರೆ. ತೀರಾ ಗಂಭೀರವಾಗಿ ರೂಪುಗೊಳ್ಳಬೇಕಿದ್ದ ತನಿಖಾ ದೃಶ್ಯಗಳು ಪೇವಲವಾಗಿವೆ. ಏನೋ ಆಗಿಬಿಡುತ್ತದೆಂದುಕೊಳ್ಳುವಾಗಲೇ ಏನೇನೂ ಆಗದೆ ನೀರಸಗೊಳಿಸುತ್ತದೆ. ಮೊದಲಾರ್ಧ ಅಲ್ಲಲ್ಲಿ ಕತೂಹಲ ಕೆರಳಿಸಿದರೂ, ದ್ವಿತೀಯಾರ್ಧ ವ್ಯರ್ಥ ಪ್ರಯತ್ನದಂತೆ ಕಾಣುತ್ತದೆ. ಹಿನ್ನೆಲೆ ಸಂಗೀತವಂತೂ ಒಮ್ಮೊಮ್ಮೆ ಹಿಂಸಿಸುತ್ತದೆ. ಸಾಮಾನ್ಯ ಕಥೆ ಹೊಂದಿರುವ ವೃತ್ರದಲ್ಲಿ ಪ್ರಧಾನ ಪಾತ್ರದ ನಟನೆಯೇ ಮಂಕು ಮಂಕು!