ಬಹುದಿನಗಳ ನಂತರ ಸೃಜನ್ ಲೋಕೇಶ್ ನಾಯಕನಟನಾಗಿ ನಟಿಸಿರುವ ಚಿತ್ರ ‘ಎಲ್ಲಿದ್ದೆ ಇಲ್ಲಿತನಕ ಇಂದು ಬಿಡುಗಡೆಯಾಗಿದೆ. ಸ್ವತಃ ನಿರ್ಮಾಣವನ್ನೂ ಮಾಡಿ ಸೃಜನ್ ಚಿತ್ರದಲ್ಲಿ ಹೀರೋ ಆಗಿ ನಟಿಸಿರುವ ಕಾರಣಕ್ಕೆ ‘ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಬಗ್ಗೆ ವಿಶೇಷ ಕುತೂಹಲಗಳಿದ್ದವು.
ಸಾಕಷ್ಟು ವರ್ಷಗಳಿಂದ ಸೃಜನ್ ಜೊತೆಗಿದ್ದ ತೇಜಸ್ವಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಹರಿಪ್ರಿಯ ನಾಯಕಿಯಾಗಿರುವ ‘ಎಲ್ಲಿದ್ದೆ ಇಲ್ಲಿತನಕ ಚಿತ್ರದ ಹಾಡುಗಳು ಹಿಟ್ ಆಗಿದ್ದವು.
ಈ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಉದ್ಯಮಗಳನ್ನು ಹೊಂದಿರುವ ಶ್ರೀಮಂತನ ಮಗ ಸೂರ್ಯ. ಅವನಿಗೆ ಇರುವುದೆಲ್ಲವ ಬಿಟ್ಟು ಮತ್ತೊಂದರೆಡೆ ತುಡಿತ. ಇಂಡಿಯಾಗೆ ಬಂದವನು ತನ್ನ ಹಳೆ ದೋಸ್ತಿಗಳೊಂದಿಗೆ ಸೇರಿ ಎಂಜಾಯ್ ಮಾಡುತ್ತಿರುತ್ತಾನೆ. ನಾಯಕಿ ಎದುರಾಗುತ್ತಾಳೆ. ಅವಳ ಮೇಲೆ ಮೊದಲ ನೋಟದಲ್ಲೇ ಸೂರ್ಯನಿಗೆ ಲವ್ ಆಗುತ್ತದೆ. ಈ ನಡುವೆ ಸ್ನೇಹಿತನ ಜೊತೆಗೆ ಚಾಲೆಂಜ್ ಮಾಡಲು ಹೋಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ತಾನು ಪ್ರೀತಿಸಿದ ಹುಡುಗಿ ಈತನ ಸಹಪಾಠಿಯಾಗಿರುತ್ತಾಳೆ. ಅವಳನ್ನು ಒಲಿಸಿಕೊಳ್ಳಲು ಸೂರ್ಯ ನಾಲ್ಕಾರು ಸುಳ್ಳುಗಳನ್ನು ಪೋಣಿಸುತ್ತಾನೆ. ಸುಳ್ಳುಗಳನ್ನು ಸಮರ್ಥಿಸಿಕೊಳ್ಳಲು ಮತ್ತೊಂದಷ್ಟು ಸುಳ್ಳನ್ನು ಹೇಳುತ್ತಾನೆ. ಆ ಅಸತ್ಯಗಳೆಲ್ಲವೂ ಬೆಳೆದು ಹೆಮ್ಮರವಾಗುತ್ತದೆ.
ಅಂದುಕೊಂಡಿದ್ದೆಲ್ಲಾ ಸುಸೂತ್ರವಾಗಿ ನೆರವೇರುತ್ತಿದೆ, ತಾನು ಇಚ್ಛೆಪಟ್ಟ ಹುಡುಗಿ ತನ್ನ ಕೈ ಹಿಡಿಯಲಿದ್ದಾಳೆ ಎನ್ನುವ ಹಂತ ತಲುಪುತ್ತದೆ. ಅಷ್ಟರಲ್ಲಿ ಸೂರ್ಯನ ಸುಳ್ಳುಗಳು ಸರಪಳಿಯಂತೆ ಬಿಗಿದುಕೊಳ್ಳುತ್ತವೆ. ಕಡೆಗೆ ಈತನ ಪ್ರಮಾದಗಳನ್ನು ಮನ್ನಿಸಿ ನಾಯಕಿ ಈತನ ಕೈ ಹಿಡಿಯುತ್ತಾಳಾ ಅಥವಾ ಇಂತಹ ಸುಳ್ಳುಗಾರನನ್ನು ನಂಬಿ ಬದುಕುವುದು ಹೇಗೆ ಎಂದು ಹೊರನಡೆಯುತ್ತಾಳಾ ಎನ್ನುವುದು ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಅಂತಿಮ ಗುಟ್ಟು. ಸಿನಿಮಾ ಆರಂಭವಾದಾಗಿನಿಂದ ಹಿಡಿದು ಕೊನೆಯ ತನಕ ನಗುನಗುತ್ತಲೇ ಮುಂದುವರೆಯುವುದು ಚಿತ್ರಕಥೆಯ ತಾಕತ್ತು. ಕಥೆಯಲ್ಲಿ ಇನ್ನೊಂದಿಷ್ಟು ಟ್ವಿಸ್ಟುಗಳಿದ್ದಿದ್ದರೆ ‘ಎಲ್ಲಿದ್ದೆ ಇಲ್ಲಿ ತನಕ ಮತ್ತಷ್ಟು ರಂಗಾಗುತ್ತಿತ್ತು.
ಈ ಚಿತ್ರದಲ್ಲಿ ತಬಲಾ ನಾಣಿ, ಗಿರೀಶ್, ತರಂಗ ವಿಶ್ವ ಸೇರಿದಂತೆ ಸಾಕಷ್ಟು ಜನ ಕಾಮಿಡಿ ನಟರಿದ್ದಾರೆ. ಅದರಲ್ಲೂ ಈ ಮೂವರು ಸಿನಿಮಾದ ಶಕ್ತಿಯನ್ನು ಹೆಚ್ಚಿಸಿದ್ದಾರೆ. ನಟ ಯಶಸ್ ಸೂರ್ಯ ಕೂಡ ಮುಖ್ಯವಾದ್ದು ಪಾತ್ರದಲ್ಲಿ ನಟಿಸಿದ್ದಾರೆ. ಹರಿಪ್ರಿಯಾ ದಿನದಿಂದ ದಿನಕ್ಕೆ ಮಾಗುತ್ತಿರುವ ನಟಿ. ತಮ್ಮ ಪಾತ್ರವನ್ನವರು ಲೀಲಾಜಾಲವಾಗಿ ನಿಭಾಯಿಸಿದ್ದಾರೆ. ನೋಡಲು ಕೂಡಾ ಅಷ್ಟೇ ಆಕರ್ಷಕವಾಗಿ ಕಾಣುತ್ತಾರೆ. ತಾರಾ ಅವರ ಕಾಮಿಡಿ ಟೈಮಿಂಗ್ಸ್ ಅಂತೂ ಅದ್ಭುತ. ತೆರೆಮೇಲೆ ಅವರು ಕಾಣಿಸಿಕೊಳ್ಳುತ್ತಿದ್ದಂತೆ ಜನ ಗೊಳ್ಳೆಂದು ನಗುತ್ತಾರೆ. ಅಷ್ಟರಮಟ್ಟಿಗೆ ತಾರಾ ಮೇಡಮ್ಮು ಕಚಗುಳಿ ಇಟ್ಟಿದ್ದಾರೆ. ಇನ್ನು, ಸೃಜನ್ ಲೋಕೇಶ್ ತಮ್ಮ ಸಾಮರ್ಥ್ಯವನ್ನೆಲ್ಲ ಮೀರಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ. ಕ್ಯಾಮರಾ ಕೆಲಸ ಅಚ್ಚುಕಟ್ಟಾಗಿದೆ. ಒಟ್ಟಾರೆಯಾಗಿ ಇದು ಮನರಂಜನೆಯನ್ನೇ ಉದ್ದೇಶವನ್ನಾಗಿಟ್ಟುಕೊಂಡು ರೂಪಿಸಿರುವ ಸಿನಿಮಾ. ಹೀಗಾಗಿ ಇಲ್ಲಿ ಹೆಚ್ಚು ಲಾಜಿಕ್ ಹುಡುಕುವ ಪ್ರಯತ್ನ ಮಾಡಬಾರದು. ಎಲ್ಲಿದ್ದೆ ಇಲ್ಲಿ ತನಕ ಚಿತ್ರದಲ್ಲಿ ಕಾಮಿಡಿ ಮಾತ್ರವಲ್ಲದೆ ಮನಸ್ಸಿಗೆ ಹತ್ತಿರವಾಗುವ ಸೆಂಟಿಮೆಂಟ್, ಭಾವನಾತ್ಮಕ ದೃಶ್ಯಗಳು ಹೇರಳವಾಗಿವೆ. ಮನೆಮಂದಿಯಲ್ಲ ಒಮ್ಮೆ ನೋಡಿ ಎಂಜಾಯ್ ಮಾಡಬಹುದಾದ ಸಿನಿಮಾ ಎಲ್ಲಿದ್ದೆ ಇಲ್ಲಿ ತನಕ!