ವಿವಾದಗಳಿಂದಲೆ ಸುದ್ದಿಯಾಗುವ ನಟಿ ಕಂಗನಾ ರನಾವತ್ ಈಗ ಬಾಲಿವುಡ್ನ ಮತ್ತೋರ್ವ ನಟಿ ಅಲಿಯಾ ಭಟ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ’ಮಣಿಕರ್ಣಿಕಾ’ ಸಿನಿಮಾ ಯಶಸ್ಸಿನ ಬಗ್ಗೆ ಬಾಲಿವುಡ್ ತಾರೆಯರು ಮಾತನಾಡುತ್ತಿಲ್ಲ ಎನ್ನುವುದು ಕಂಗನಾ ದೂರು. ಇದಕ್ಕೆ ಸಂಬಂಧಿಸಿದಂತೆ ಅಲಿಯಾರನ್ನು ಪ್ರಸ್ತಾಪಿಸುವ ಅವರು, “ಆಕೆ ನಿರ್ದೇಶಕ ಕರಣ್ ಜೋಹರ್ ಕೈಗೊಂಬೆ. ಅಲಿಯಾ ಈ ಸುರಕ್ಷಿತ ಕಟ್ಟಡದಿಂದ ಹೊರಬಂದು ಪ್ರಬುದ್ಧಳಂತೆ ಯೋಚಿಸುವುದನ್ನು ಕಲಿಯಬೇಕಿದೆ” ಎಂದಿದ್ದಾರೆ.
ಈ ಅನಿರೀಕ್ಷಿತ ಹೇಳಿಕೆಯಿಂದ ಗೊಂದಲಕ್ಕೀಡಾಗಿರುವ ಅಲಿಯಾ, “ನಾನು ಮಾಧ್ಯಮಗಳ ಎದುರು ಇದಕ್ಕೆಲ್ಲಾ ಪ್ರತಿಕ್ರಿಯಿಸೋಲ್ಲ. ಕಂಗನಾ ಜೊತೆ ನೇರವಾಗಿ ಈ ಕುರಿತು ಮಾತನಾಡುತ್ತೇನೆ. ಅವರ ಪಾತ್ರ, ಸಿನಿಮಾಗಳ ಆಯ್ಕೆ ಬಗ್ಗೆ ನನಗೆ ಎಂದಿಗೂ ಮೆಚ್ಚುಗೆಯಿದೆ” ಎಂದಿದ್ದಾರೆ. ಅಲಿಯಾ ಪ್ರತಿಕ್ರಿಯೆ ಕಂಗನಾಗೆ ಸಮಾಧಾನ ತಂದಿಲ್ಲ. ಮತ್ತಷ್ಟು ಕೆದಕುವ ಕಂಗನಾ, “ಮಣಿಕರ್ಣಿಕಾ ವಿವಾದ ಕೇವಲ ನನಗಷ್ಟೇ ಸಂಬಂಧಿಸಿದ್ದು ಎಂದೇಕೆ ಅಲಿಯಾ ಭಾವಿಸುತ್ತಾರೆ? ದೇಶದೆಲ್ಲೆಡೆ ಸಿನಿಪ್ರೇಮಿಗಳು ಚಿತ್ರದ ಬಗ್ಗೆ ಮೆಚ್ಚುಗೆಯಿಂದ ಮಾತನಾಡುತ್ತಿದ್ದಾರೆ. ಆದರೆ ಬಾಲಿವುಡ್ನವರು ಮುಗುಮ್ಮಾಗಿದ್ದಾರೆ. ರಾಷ್ಟ್ರೀಯತೆ ಮತ್ತು ಮಹಿಳಾ ಪ್ರಧಾನವಾದ ಈ ಸಿನಿಮಾ ನೋಡಲು ಅಲಿಯಾ ಏಕೆ ಹೆದರುತ್ತಿದ್ದಾರೆ? ಆಕೆಯೀಗ ದೊಡ್ಡವಳಾಗಿದ್ದು, ಸ್ವಂತ ಬುದ್ಧಿಯಿಂದ ಮಾತನಾಡುವುದನ್ನು ಕಲಿಯಬೇಕು” ಎಂದಿದ್ದಾರೆ.
ಸದ್ಯ ’ಗಲ್ಲಿ ಬಾಯ್’ ಹಿಂದಿ ಸಿನಿಮಾ ಪ್ರೊಮೋಷನ್ನಲ್ಲಿರುವ ಅಲಿಯಾಗೆ ಏನು ಪ್ರತಿಕ್ರಿಯಿಸಬೇಕು ಎಂದು ತಿಳಿಯುತ್ತಿಲ್ಲವಂತೆ. “ಸಿನಿಮಾಗಳ ಯಶಸ್ಸಿನಿಂದ ಬೀಗಿದರಷ್ಟೇ ಸಾಲದು. ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಅಸಹಾಯಕರ ಬಗ್ಗೆ ಧ್ವನಿ ಎತ್ತದ ಹೊರತು ಯಶಸ್ಸಿಗೆ ಅರ್ಥವಿಲ್ಲ” ಎಂದು ಕುಟುಕಿದ್ದಾರೆ ಕಂಗನಾ.
#